Homeಮುಖಪುಟಸಿಎಎ ಮೂಲಕ ಸಂವಿಧಾನದ ಸಮಾನತೆಯ ಕಲ್ಪನೆಯನ್ನು ನುಚ್ಚುನೂರು ಮಾಡಲಾಗಿದೆ: ಪಿಣರಾಯಿ ವಿಜಯನ್

ಸಿಎಎ ಮೂಲಕ ಸಂವಿಧಾನದ ಸಮಾನತೆಯ ಕಲ್ಪನೆಯನ್ನು ನುಚ್ಚುನೂರು ಮಾಡಲಾಗಿದೆ: ಪಿಣರಾಯಿ ವಿಜಯನ್

- Advertisement -
- Advertisement -

ವಿವಾದಿತ ಪೌರತ್ವ ಕಾಯ್ದೆಯ ಅನುಷ್ಠಾನದ ಬಗ್ಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಶನಿವಾರ ಬಿಜೆಪಿ ನೇತೃತ್ವದ ಕೇಂದ್ರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂವಿಧಾನದಲ್ಲಿ ಪ್ರತಿಪಾದಿಸಿರುವ ಸಮಾನತೆಯ ಕಲ್ಪನೆಯನ್ನು ಸಿಎಎ ಮೂಲಕ ಚೂರುಚೂರು ಮಾಡಲಾಗಿದೆ ಎಂದು ವಾಗ್ಧಾಳಿಯನ್ನು ನಡೆಸಿದ್ದಾರೆ.

ಕಾಸರಗೋಡಿನಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಆಯೋಜಿಸಿದ್ದ ಬೃಹತ್ ಸಿಎಎ ವಿರೋಧಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಕೇರಳ ಸಿಎಂ ಪಿಣರಾಯ್‌ ವಿಜಯನ್, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಿದ್ಧಾಂತವನ್ನು ಅಡಾಲ್ಫ್ ಹಿಟ್ಲರ್ ಮತ್ತು ಬೆನಿಟೊ ಮುಸೊಲಿನಿಯ ಫ್ಯಾಸಿಸಂನಿಂದ ಅಳವಡಿಸಿಕೊಳ್ಳಲಾಗಿದೆ. ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರವನ್ನು ನಿಯಂತ್ರಿಸುತ್ತಿರುವ ಆರೆಸ್ಸೆಸ್‌ ಜಾತ್ಯತೀತತೆಯನ್ನು ಬೆಂಬಲಿಸುವುದಿಲ್ಲ. ನಮ್ಮ ದೇಶ ಜಾತ್ಯತೀತವಾಗಿದೆ ಆದರೆ ಆರೆಸ್ಸೆಸ್‌ ಎಂದಿಗೂ ಜಾತ್ಯತೀತತೆಯನ್ನು ಸ್ವೀಕರಿಸಲಿಲ್ಲ. ಅದು ಭಾರತವನ್ನು ಧರ್ಮಾಧಿಕಾರವನ್ನಾಗಿ ಮಾಡಲು ಮತ್ತು ಜಾತ್ಯತೀತತೆಯನ್ನು ತೊಡೆದುಹಾಕಲು ಬಯಸಿದೆ. ಅದು ನಮ್ಮಲ್ಲಿ ಕೆಲವರನ್ನು ಶತ್ರುಗಳೆಂದು ಪರಿಗಣಿಸುತ್ತದೆ. ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ಕಮ್ಯುನಿಸ್ಟರನ್ನು ಆಂತರಿಕ ಶತ್ರುಗಳೆಂದು ಆರೆಸ್ಸೆಸ್‌ ಹೇಳುತ್ತದೆ ಎಂದು ವಿಜಯನ್ ಹೇಳಿದ್ದಾರೆ.

ಕ್ರಿಶ್ಚಿಯನ್ನರು, ಮುಸ್ಲಿಮರು ಮತ್ತು ಕಮ್ಯುನಿಸ್ಟರು ದೇಶದ ಆಂತರಿಕ ಶತ್ರುಗಳು ಎಂದು ತಮ್ಮ ಪುಸ್ತಕವೊಂದರಲ್ಲಿ ಎಂಎಸ್ ಗೋಲ್ವಾಲ್ಕರ್ ಉಲ್ಲೇಖಿಸಿದ್ದಾರೆ. ಈ ಸಿದ್ಧಾಂತವು ಯಾವುದೇ ಪುರಾತನ ಗ್ರಂಥಗಳು ಅಥವಾ ಪುರಾಣಗಳು ಅಥವಾ ವೇದಗಳಿಂದ ಅಥವಾ ಮನುಸ್ಮೃತಿಯಿಂದ ಅಲ್ಲ, ಇದು ಹಿಟ್ಲರ್‌ನಿಂದ ತೆಗೆದುಕೊಳ್ಳಲಾಗಿದೆ. ಹಿಟ್ಲರ್ ಆಳ್ವಿಕೆಯಲ್ಲಿ ನಡೆದ ನರಮೇಧವನ್ನು ನಾವು ನೋಡಿದ್ದೇವೆ, ಇದು ಇಡೀ ಮನುಕುಲವನ್ನು ಬೆಚ್ಚಿಬೀಳಿಸಿದೆ. ಆದರೆ ಹಿಟ್ಲರ್‌ನ ಕಾರ್ಯಗಳನ್ನು ಭಾರತದಲ್ಲಿ ಆರೆಸ್ಸೆಸ್‌ ಪ್ರಶಂಸಿದೆ. ಹಿಟ್ಲರನ ಜರ್ಮನಿಯ ಉದಾಹರಣೆಯನ್ನು ತೆಗೆದುಕೊಂಡು ದೇಶದ ಆಂತರಿಕ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಅವರು ಘೋಷಿಸಿದ್ದಾರೆ ಎಂದು ಪಿಣರಾಯ್‌ ವಿಜಯನ್‌ ಹೇಳಿದ್ದಾರೆ.

ಆರೆಸ್ಸೆಸ್‌ ನಾಯಕರು ಮುಸೊಲಿನಿಯನ್ನು ಭೇಟಿ ನೀಡಿ ಫ್ಯಾಸಿಸ್ಟ್ ಸಾಂಸ್ಥಿಕ ರಚನೆಯನ್ನು ಅಳವಡಿಸಿಕೊಂಡಿದ್ದಾರೆ. ಭಾರತದ ಶಕ್ತಿ ಯಾವಾಗಲೂ ವಿವಿಧತೆಯಲ್ಲಿ ಏಕತೆಯಲ್ಲಿ ಅಡಗಿದೆ. ನಮ್ಮೆಲ್ಲರ ನಂಬಿಕೆಗಳು, ಭಾಷೆಗಳು, ಸಂಸ್ಕೃತಿಗಳು, ಆಹಾರ ಮತ್ತು ಉಡುಗೆ ತೊಡುಗೆಗಳಲ್ಲಿ ಭಿನ್ನವಾಗಿರುತ್ತವೆ. ನಾವು ಅನೇಕ ಕ್ಷೇತ್ರಗಳಲ್ಲಿ ವೈವಿಧ್ಯತೆಯನ್ನು ಹೊಂದಿದ್ದೇವೆ ಮತ್ತು ಅದಕ್ಕಾಗಿಯೇ ನಾವು ನಮ್ಮ ವೈವಿಧ್ಯತೆಯನ್ನು ತುಂಬಾ ಪ್ರೀತಿಯಿಂದ ಹಿಡಿದಿಟ್ಟುಕೊಳ್ಳುತ್ತೇವೆ. ಕೋಟ್ಯಂತರ ಜನರು ಸಿಎಎ ಬಗ್ಗೆ ಚಿಂತಿತರಾಗಿದ್ದಾರೆ, ಇದು ದೇಶದ ಮುಸ್ಲಿಮರನ್ನು ಗುರಿಯಾಗಿಸುತ್ತದೆ. ಇದು ನಮ್ಮ ಸಂವಿಧಾನದಲ್ಲಿ ಅಡಕವಾಗಿರುವ ಸಮಾನತೆಯ ಕಲ್ಪನೆಯನ್ನು ಚೂರುಚೂರು ಮಾಡುತ್ತಿದೆ ಎಂದು ಹೇಳಿದ್ದಾರೆ.

ಭಾರತದಲ್ಲಿ ಸಿಎಎ ಘೋಷಿಸಿದಾಗ ಜಗತ್ತಿನಾದ್ಯಂತ ಪ್ರತಿಭಟನೆಗಳು ಭುಗಿಲೆದ್ದವು ಮತ್ತು ವಿಶ್ವ ನಾಯಕರು ಈ ಕ್ರಮವನ್ನು ಟೀಕಿಸಿದ್ದಾರೆ. ಏಕೆಂದರೆ ಜಗತ್ತಿನ ಯಾವುದೇ ಸುಸಂಸ್ಕೃತ ಸಮಾಜ ಧರ್ಮದ ಆಧಾರದ ಮೇಲೆ ಪೌರತ್ವವನ್ನು ನೀಡುವುದಕ್ಕೆ ಸಾಧ್ಯವಿಲ್ಲ. ಇಡೀ ವಿಶ್ವವೇ ಈ ಕ್ರಮಗಳನ್ನು ವಿರೋಧಿಸಿದಾಗಲೂ ಹಿಟ್ಲರ್ ತಲೆ ಕೆಡಿಸಿಕೊಳ್ಳದೆ ಉಳಿದಿದ್ದರು. ಆರೆಸ್ಸೆಸ್‌ ಅವರ ಹಾದಿಯನ್ನೇ ಅನುಸರಿಸುತ್ತಿದೆ ಎಂದು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಪಿಣರಾಯ್‌ ವಿಜಯನ್‌ ಹೇಳಿದ್ದಾರೆ.

ಎಡ ಪಕ್ಷವು ರಾಜ್ಯದ ಐದು ಸ್ಥಳಗಳಲ್ಲಿ ಬೃಹತ್ ಸಿಎಎ ವಿರೋಧಿ ರ್ಯಾಲಿಗಳನ್ನು ಆಯೋಜಿಸುತ್ತಿದೆ. ಮೊದಲ ರ್ಯಾಲಿ ಶುಕ್ರವಾರ ಕೋಝಿಕ್ಕೋಡ್‌ನಲ್ಲಿ ನಡೆಯಿತು. ಮುಂದಿನ ದಿನಗಳಲ್ಲಿ ಕಣ್ಣೂರು, ಮಲಪ್ಪುರಂ ಮತ್ತು ಕೊಲ್ಲಂನಲ್ಲಿ ಮೂರು ರ್ಯಾಲಿಗಳು ನಡೆಯಲಿವೆ.

ಮೋದಿ ಸರ್ಕಾರವು ಅಂಗೀಕರಿಸಿದ್ದ ಪೌರತ್ವ ತಿದ್ದುಪಡಿ ಕಾಯ್ದೆ ಅಥವಾ ಸಿಎಎ ಕಾಯ್ದೆಯು ಡಿಸೆಂಬರ್ 31, 2014ರೊಳಗೆ ಭಾರತಕ್ಕೆ ಆಗಮಿಸಿದ ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಹಿಂದೂಗಳು, ಸಿಖ್ಖರು, ಜೈನರು, ಬೌದ್ಧರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರು ಸೇರಿದಂತೆ ಮುಸ್ಲಿಮೇತರ ವಲಸಿಗರಿಗೆ ಭಾರತೀಯ ಪೌರತ್ವವನ್ನು ನೀಡುತ್ತದೆ. CAA ಡಿಸೆಂಬರ್ 2019ರಲ್ಲಿ ಸಂಸತ್ತಿನಲ್ಲಿ ಅಂಗೀಕರಿಸಲ್ಪಟ್ಟಿದ್ದು, ಆ ಬಳಿಕ  ರಾಷ್ಟ್ರಪತಿಗಳ ಒಪ್ಪಿಗೆಯನ್ನು ಪಡೆದಿದೆ. ಧರ್ಮದ ಆಧಾರದಲ್ಲಿ ಪೌರತ್ವ ನೀಡುವುದಕ್ಕೆ ಭಾರತದ ಸಂವಿಧಾನದಲ್ಲಿ ಅವಕಾಶ ಇಲ್ಲ, ಆದ್ದರಿಂದ ಈ ಅಸಂವಿಧಾನಿಕ ಕಾಯ್ದೆ ದೇಶದ ವಿವಿಧ ಭಾಗಗಳಲ್ಲಿ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿತ್ತು. ಆದರೆ ಮಾ.11ರಂದು ಕೇಂದ್ರ ಸರಕಾರ ಸಿಎಎ ಕುರಿತ ಅಧಿಸೂಚನೆಯನ್ನು ಹೊರಡಿಸಿತ್ತು.

ಇದನ್ನು ಓದಿ: ಜಾತಿ ಗಣತಿ ವೆಬ್‌ಸೈಟ್ ಎರಡು ತಿಂಗಳಿನಿಂದ ಸ್ಥಗಿತ: ವರದಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...