“ಬಿಜೆಪಿ ಸರ್ಕಾರವು, ನಾಯಕರು ಮತ್ತು ಜನರನ್ನು ಹೆದರಿಸುತ್ತಿದ್ದ ಬ್ರಿಟಿಷ್ ಆಡಳಿತದಂತೆ ಮಾರ್ಪಟ್ಟಿದೆ” ಎಂದು ದೆಹಲಿ ಕ್ಯಾಬಿನೆಟ್ ಸಚಿವ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಸೌರಭ್ ಭಾರದ್ವಾಜ್ ನರೇಂದ್ರ ಮೋದಿ ಆಡಳಿತದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಭಾರತೀಯ ಜನತಾ ಪಾರ್ಟಿ (ಬಿಜೆಪಿ) ನೇತೃತ್ವದ ಕೇಂದ್ರದ ಆಡಳಿತವನ್ನು ಅವರು ಬ್ರಿಟಿಷ್ ರಾಜ್‌ಗೆ ಹೋಲಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಭಾರದ್ವಾಜ್, “ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ಮಹಾರ‍್ಯಾಲಿಯಲ್ಲಿ ಪ್ರತಿಪಕ್ಷದ ಹಿರಿಯ ನಾಯಕರು ಜಮಾಯಿಸುವುದನ್ನು ಮತ್ತು ಜಾರಿ ನಿರ್ದೇಶನಾಲಯದಿಂದ (ಇಡಿ) ಅಕ್ರಮವಾಗಿ ಬಂಧಿಸಲ್ಪಟ್ಟ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಬೆಂಬಲಿಸುವುದನ್ನು ನೋಡಿ ಬಿಜೆಪಿ ಭಯಗೊಂಡಿತು” ಎಂದು ಹೇಳಿದರು.
“ಮಾರ್ಚ್ 31 ರಂದು ರಾಮಲೀಲಾ ಮೈದಾನದಲ್ಲಿ ಕಂಡುಬಂದದ್ದು ಬಿಜೆಪಿಯನ್ನು ಬೆಚ್ಚಿಬೀಳಿಸಿದೆ. ಇಂಡಿಯಾ ವಿರೋಧ ಪಕ್ಷಗಳ ದೊಡ್ಡ ನಾಯಕರು ಆ ವೇದಿಕೆಯಲ್ಲಿ ಜಮಾಯಿಸಿದರು… ನಮ್ಮ ಪಕ್ಷದ ಎಲ್ಲಾ ಹಿರಿಯ ನಾಯಕರು ಜೈಲಿನಲ್ಲಿದ್ದಾರೆ; ಅತಿಶಿ, ದುರ್ಗೇಶ್ ಪಾಠಕ್, ಸಂದೀಪ್ ಪಾಠಕ್ ಮತ್ತು ನಾನು ಚಿಕ್ಕವನು ಎಂದು ನಾವು ಈ ನಾಯಕರನ್ನು ವೇದಿಕೆಗೆ ಬರಲು ವಿನಂತಿಸಿದ್ದೆವು. ಖಂಡಿತವಾಗಿಯೂ ನಾವು ನಿಮ್ಮೊಂದಿಗೆ ಇರುತ್ತೇವೆ ಎಂದು ಎಲ್ಲಾ ನಾಯಕರು ಹೇಳಿದರು” ಎಂದು ಸಚಿವರು ಹೇಳಿದರು.
ಕೇಸರಿ ಪಾಳಯವು ತನ್ನ ಎಲ್ಲಾ ಹಿರಿಯ ನಾಯಕರನ್ನು ಜೈಲಿಗೆ ಹಾಕುವ ಮೂಲಕ ಎಎಪಿಯನ್ನು ಹತ್ತಿಕ್ಕಲು ತನ್ನ ಅತ್ಯುತ್ತಮ ಪ್ರಯತ್ನ ಮಾಡಿದೆ. ಜನರು ತಮ್ಮ ವಿರುದ್ಧ ಮತ ಚಲಾಯಿಸಲು ಹೆದರುವುದಿಲ್ಲ ಎಂದು ಬಿಜೆಪಿಗೆ ತಿಳಿದಿರುವುದರಿಂದ ಅವರು ಮತದರರನ್ನು ಹೆದರಿಸಲು ಪ್ರಾರಂಭಿಸಿದರು, ಇದು ದೇಶದ ತೀವ್ರ ಕಳವಳದ ವಿಷಯವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
“ಬಿಜೆಪಿಯವರು ನಮಗೆ ಏನು ಮಾಡಬೇಕೋ ಅದೆಲ್ಲವನ್ನೂ ಮಾಡಿದರು ಎಂದು ಹೇಳುತ್ತಾರೆ. ಅವರು ತಮ್ಮ ಯೋಜನೆಯನ್ನು ಕಾರ್ಯಗತಗೊಳಿಸಿದರು ಮತ್ತು ನಮ್ಮ ದೊಡ್ಡ ನಾಯಕರೆಲ್ಲರನ್ನು ಬಂಧಿಸಿದರು. ಆದರೆ, ಪಕ್ಷವು ಇನ್ನೂ ಧೃಡವಾಗಿ ನಿಂತಿದೆ… ಜನರು ಮತ ಹಾಕಲು ಹೆದರುವುದಿಲ್ಲ ಎಂದು ಬಿಜೆಪಿಗೆ ತಿಳಿದಿದೆ. ಇಂದು ದೇಶದ ಜನರು ಭಯಭೀತರಾಗಿದ್ದಾರೆ ಮತ್ತು ಇದು ದೇಶಕ್ಕೆ ತೀವ್ರ ಕಳವಳಕಾರಿಯಾಗಿದೆ. ಬ್ರಿಟಿಷರ ಆಳ್ವಿಕೆಯಲ್ಲಿ ಜನರು ಹೆದರುತ್ತಿದ್ದರು… ಜೈಲಿನ ಬೆದರಿಕೆಯಿಂದ ಹೆದರಿಸಿ ಬ್ರಿಟಿಷರು ನಮ್ಮನ್ನು ಆಳಿದರು. ಇಂದು ಬಿಜೆಪಿ ನೇತರತ್ವದ ಕೇಂದ್ರ ಸರ್ಕಾರವು ಬಹುತೇಕ ಹಾಗೆ ಮಾರ್ಪಟ್ಟಿದೆ” ಎಂದು ಅವರು ಹೇಳಿದರು.
ಕೇಜ್ರಿವಾಲ್ ಅವರನ್ನು ಬಂಧಿಸಿದ ನಂತರ ಇದೀಗ ತನಿಖಾ ಸಂಸ್ಥೆಯು ಸೌರಭ್ ಭಾರದ್ವಾಜ್, ದುರ್ಗೇಶ್ ಪಾಠಕ್ ಮತ್ತು ರಾಘವ್ ಚಡ್ಡಾ ಅವರನ್ನು ಬಂಧಿಸಲಿದೆ ಎಂದು ಅವರ ಸಹೋದ್ಯೋಗಿ ಅತಿಶಿ ದೊಡ್ಡ ಹೇಳಿಕೆ ನೀಡಿದ ನಂತರ ಅವರ ಹೇಳಿಕೆಗಳು ಹೊರಬಿದ್ದಿವೆ.
“ಶೀಘ್ರದಲ್ಲೇ ನಮ್ಮ ನಿವಾಸದ ಮೇಲೆ ಇಡಿ ದಾಳಿ ನಡೆಯಲಿದೆ ಮತ್ತು ನಂತರ ನಮ್ಮನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗುವುದು ಎಂದು ನನಗೆ ತಿಳಿಸಲಾಗಿದೆ. ಬಿಜೆಪಿ ಈಗ ಆಮ್ ಆದ್ಮಿ ಪಕ್ಷದ ಮುಂದಿನ ಸಾಲಿನ ನಾಯಕರನ್ನು ಗುರಿಯಾಗಿಸಿಕೊಂಡಿದೆ” ಎಂದು ಅತಿಶಿ ಹೇಳಿದ್ದಾರೆ.
ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರನ್ನು ಮಾರ್ಚ್ 21 ರಂದು ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿತ್ತು. ಅವರನ್ನು ಏಪ್ರಿಲ್ 1 ರಿಂದ ಏಪ್ರಿಲ್ 15 ರವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಇದೀಗ ಅವರು ತಿಹಾರ್ ಜೈಲಿನಲ್ಲಿದ್ದಾರೆ.
ಇದನ್ನೂ ಓದಿ; ಬಿಜೆಪಿ ಸೇರ್ಪಡೆಗೊಳ್ಳಿ ಅಥವಾ ಬಂಧನಕ್ಕೆ ಸಿದ್ಧರಾಗಿ: ದೆಹಲಿ ಸಚಿವೆ ಅತಿಶಿಗೆ ಬೆದರಿಕೆ!


