ಸುಪ್ರೀಂಕೋರ್ಟ್ ತೀರ್ಪಿಗಾಗಿ ಕಾಯುತ್ತಿರುವ ಅನರ್ಹ ಶಾಸಕರಿಗೂ, ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎಂದು ಡಿಸಿಎಂ ಲಕ್ಷ್ಮಣ್ ಸವದಿ ಹೊಸ ಬಾಂಬ್ ಸಿಡಿಸಿದ್ದಾರೆ. ಇನ್ನೇನು ಉಪಚುನಾವಣೆ ದಿನಗಳು ಹತ್ತಿರವಾಗುತ್ತಿವೆ. ಈಗಾಗಲೇ ಬಿಜೆಪಿಯಲ್ಲಿ ಒಳಬೇಗುದಿ, ಅಸಮಾಧಾನ, ಟಿಕೆಟ್‌ಗಾಗಿ ಕಚ್ಚಾಟ ಶುರುವಾಗಿದೆ. ಅಲ್ಲದೇ ಅನರ್ಹ ಶಾಸಕರಿಗೆ ಟಿಕೆಟ್ ನೀಡುತ್ತಿರುವ ಬಗ್ಗೆ ಮೂಲ ಬಿಜೆಪಿಗರು, ಸ್ಥಳೀಯ ಮುಖಂಡರು ಸಿಟ್ಟಾಗಿದ್ದಾರೆ. ಇದರ ಮಧ್ಯೆ ತಮ್ಮ ಭವಿಷ್ಯ ಏನಾಗುತ್ತದೆಯೋ ಎಂಬ ಚಿಂತೆ ಅನರ್ಹ ಶಾಸಕರನ್ನು ಆವರಿಸಿದೆ. ಈಗ ಬಿಜೆಪಿಗೂ, ಅನರ್ಹ ಶಾಸಕರಿಗೂ ಸಂಬಂಧವೇ ಇಲ್ಲ ಎಂದು ಲಕ್ಷ್ಮಣ್ ಸವದಿ ಹೇಳುತ್ತಿದ್ದಾರೆ.
ಸುಪ್ರೀಂಕೋರ್ಟ್‌ನಲ್ಲಿ ಅನರ್ಹ ಶಾಸಕರ ಅರ್ಜಿ ವಿಚಾರಣೆ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಡಿಸಿಎಂ ಸವದಿ ಹೊಸ ಬಾಂಬ್ ಹಾಕಿದ್ದಾರೆ. ಅನರ್ಹ ಶಾಸಕರ ಬಗ್ಗೆ ಚಿಂತೆ ಮಾಡುವ ಅಗತ್ಯತೆ ನಮಗಿಲ್ಲ. ಅವರ ಬಗ್ಗೆ ನಾವೇಕೆ ಚಿಂತನೆ ಮಾಡಬೇಕು. ಅನರ್ಹ ಶಾಸಕರ ಬಗ್ಗೆ ಆಲೋಚನೆ ಮಾಡುವ ಅವಶ್ಯಕತೆಯಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ಅನರ್ಹ ಶಾಸಕರು ಬಿಜೆಪಿಗೆ ಸೇರುತ್ತೇವೆ ಎಂದು ಎಲ್ಲೂ ಹೇಳಿಕೆ ನೀಡಿಲ್ಲ. ಸ್ಪೀಕರ್ ಅವರನ್ನು ಅನರ್ಹಗೊಳಿಸಿದ್ದಕ್ಕೆ ಸುಪ್ರೀಂಕೋರ್ಟ್‌ಗೆ ನ್ಯಾಯಕ್ಕಾಗಿ ಮೊರೆ ಹೋಗಿದ್ದಾರೆ. ಇತ್ತ ಕಾಂಗ್ರೆಸ್ ಕೂಡ ನ್ಯಾಯ ಬೇಕೆಂದು ಕೇಳುತ್ತಿದೆ. ಇದು ಅನರ್ಹ ಶಾಸಕರು ಮತ್ತು ಕಾಂಗ್ರೆಸ್ ನಡುವಿನ ತಿಕ್ಕಾಟ ಮತ್ತು ವ್ಯಾಜ್ಯ. ಇದಕ್ಕೂ ನಮಗೂ ಸಂಬಂಧವಿಲ್ಲ. ಇದಕ್ಕೆ ನಾವ್ಯಾಕೆ ಉತ್ತರಿಸಬೇಕು ಎಂದು ಪ್ರಶ್ನಿಸಿದ್ದಾರೆ.
ಇಲ್ಲಿಯವರೆಗೂ ಬಿಜೆಪಿಗೂ ಮತ್ತು ಅನರ್ಹ ಶಾಸಕರಿಗೂ ಸಂಬಂಧವಿಲ್ಲ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಹೇಳಿದ್ದು, ಎಲ್ಲರ ಗಮನ ಸೆಳೆದಿದೆ. ಅಧಿಕಾರಕ್ಕಾಗಿ ನಡೆದ ಹಗ್ಗಜಗ್ಗಾಟದಲ್ಲಿ ಅನರ್ಹ ಶಾಸಕರ ಸ್ಥಿತಿ ಅತಂತ್ರವಾಗಿದ್ದು, ಈಗ ಡಿಸಿಎಂ ಸವದಿ ಹೇಳಿಕೆ ಅನರ್ಹ ಶಾಸಕರಿಗೆ ಶಾಕ್ ನೀಡಿದೆ.



Hariyana peopal change the gov
ನಿಮಗೆ ಬಂದಿರುವ ಅಧಿಕಾರ ಅನರ್ಹ ಶಾಸಕರ ಆಶಿರ್ವಾದ ಹೊರತು ಬಿಜೆಪಿ ಪಕ್ಷದ
ಯೋಗ್ಯತೆಯಲ್ಲ,,ಸ್ವಲ್ಪ ದಿನ ಕಾಯಿರಿ ಅವರ ನಿಮ್ಮ ಸಂಬಂಧ ಎನು ಎನ್ನುವುದು ಬಯಲಾಗುತ್ತದೆ….