ಬಿಜೆಪಿ ಮತ್ತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಕಾಂಗ್ರೆಸ್ ನಾಯಕ ಗೌರವ್ ಗೊಗೊಯ್ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದು, ವ್ಯಕ್ತಿತ್ವ ಹರಣದಲ್ಲಿ ತೊಡಗಿದ್ದಾರೆ ಎಂದು ಕಾಂಗ್ರೆಸ್ ಭಾನುವಾರ ಆರೋಪಿಸಿದೆ. “ಈ ವಿಷಯದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ” ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಹೇಳಿದೆ.
ಗೊಗೊಯ್ ಜೋರ್ಹತ್ ಲೋಕಸಭಾ ಸ್ಥಾನವನ್ನು ಗೆದ್ದು, ಅಸ್ಸಾಂ ಮುಖ್ಯಮಂತ್ರಿಯ ಭ್ರಷ್ಟಾಚಾರವನ್ನು ಬಹಿರಂಗಪಡಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಹೇಳಿದ್ದಾರೆ.
“ಅಸ್ಸಾಂ ಸಿಎಂ ಮತ್ತು ಬಿಜೆಪಿಯು, ನನ್ನ ಸಹೋದ್ಯೋಗಿ ಗೌರವ್ ಗೊಗೊಯ್ ಅವರನ್ನು ಗುರಿಯಾಗಿಸಿಕೊಂಡು ಭೀಕರ ಅಪಪ್ರಚಾರವನ್ನು ಪ್ರಾರಂಭಿಸಿದೆ. ಇದು ಅತ್ಯಂತ ಕೆಟ್ಟ ರೀತಿಯ ವ್ಯಕ್ತಿತ್ವ ವಿನಾಶ. ಕಾನೂನು ಕ್ರಮವನ್ನು ತಕ್ಷಣವೇ ಪ್ರಾರಂಭಿಸಲಾಗುತ್ತಿದೆ” ಎಂದು ರಮೇಶ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
“ಗೌರವ್ ಗೊಗೊಯ್ ಜೂನ್ 2024 ರಲ್ಲಿ ಜೋರ್ಹತ್ ಲೋಕಸಭಾ ಸ್ಥಾನವನ್ನು ಗೆದ್ದರು. ಆದರೆ, ಅಸ್ಸಾಂ ಸಿಎಂ ಮತ್ತು ಇತರ ಸಚಿವರು ಜೋರ್ಹತ್‌ನಲ್ಲಿ ಬೀಡುಬಿಟ್ಟು ಅವರ ವಿರುದ್ಧ ಪ್ರಚಾರ ಮಾಡುತ್ತಿದ್ದರು. ಜೋರ್ಹತ್ ಸಂಸದರು ಮುಂಚೂಣಿಯಲ್ಲಿದ್ದಾರೆ, ಅಸ್ಸಾಂ ಸಿಎಂ ಅವರ ಸ್ಪಷ್ಟ ಭ್ರಷ್ಟಾಚಾರ ಮತ್ತು ಕರಾಳ ಕೃತ್ಯಗಳನ್ನು ಬಹಿರಂಗಪಡಿಸುತ್ತಿದ್ದಾರೆ” ಎಂದು ಅವರು ಹೇಳಿದರು.
“ಅಸ್ಸಾಂ ಸಿಎಂ ನವದೆಹಲಿಯಲ್ಲಿರುವ ತಮ್ಮ ಸರ್ವೋಚ್ಚ ನಾಯಕನಂತೆ ಮಾನನಷ್ಟ, ವಿರೂಪ ಮತ್ತು ದಿಕ್ಕು ತಪ್ಪಿಸುವಲ್ಲಿ ನಿಪುಣರು” ಎಂದು ರಮೇಶ್ ಹೇಳಿದರು.
“ಇನ್ನು 12 ತಿಂಗಳಲ್ಲಿ, ಅಸ್ಸಾಂನ ಜನರು ಅವರನ್ನು ಮಾಜಿ ಮುಖ್ಯಮಂತ್ರಿಯನ್ನಾಗಿ ಮಾಡುತ್ತಾರೆ, ಅವರ ಪಕ್ಷವನ್ನು ವಿರೋಧ ಪಕ್ಷದಲ್ಲಿ ಕೂರಿಸುತ್ತಾರೆ” ಎಂದು ರಮೇಶ್ ಸಿಎಂ ಶರ್ಮಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಗೊಗೊಯ್ ಮೇಲಿನ ದಾಳಿಯನ್ನು ತೀವ್ರಗೊಳಿಸಿರುವ ಶರ್ಮಾ, ಶನಿವಾರ, ವಿರೋಧ ಪಕ್ಷದ ನಾಯಕನ ಬ್ರಿಟಿಷ್ ಪತ್ನಿ ಎಲಿಜಬೆತ್ ಕೋಲ್ಬರ್ನ್ ಅವರ ಪಾಕಿಸ್ತಾನ ಸಂಪರ್ಕದ ಆರೋಪಗಳ ಬಗ್ಗೆ ಪೊಲೀಸ್ ಪ್ರಕರಣ ದಾಖಲಿಸುವ ಸಾಧ್ಯತೆಯಿದೆ. ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು ರಚಿಸಲಾಗುವುದು ಎಂದು ಹೇಳಿದ್ದಾರೆ.
ಗೊಗೊಯ್ ಅವರ ತಂದೆ ದಿವಂಗತ ತರುಣ್ ಗೊಗೊಯ್ ಅವರು ರಾಜ್ಯದ ಮುಖ್ಯಸ್ಥರಾಗಿದ್ದಾಗ ಐಎಸ್‌ಐ ಸಿಎಂಒ ಒಳಗೆ ನುಸುಳಲು ಪ್ರಯತ್ನಿಸಿದೆಯೇ ಎಂಬ ಬಗ್ಗೆ ಅನುಮಾನಗಳು ವ್ಯಕ್ತವಾಗುತ್ತಿರುವುದರಿಂದ, “ಇಡೀ ಪರಿಸರ ವ್ಯವಸ್ಥೆ ಮತ್ತು ಸಹಾನುಭೂತಿ ಹೊಂದಿರುವವರನ್ನು” ಒಳಗೊಂಡ ವಿವರವಾದ ತನಿಖೆ ನಡೆಸಲಾಗುವುದು ಎಂದು ಶರ್ಮಾ ಹೇಳಿದರು.
ಗೊಗೊಯ್ ಅವರು ತಮ್ಮ ಮತ್ತು ಅವರ ಕುಟುಂಬವನ್ನು ದೂಷಿಸಲು ತೀವ್ರ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು. ಈ ವಿಷಯದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಪ್ರತಿಪಾದಿಸಿದರು, ಜೊತೆಗೆ ತಮ್ಮ ಪತ್ನಿಗೆ ಅಸ್ಸಾಮಿ ಭಾಷೆಯಲ್ಲಿ ಪತ್ರ ಬರೆದು ಅದನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದು, ‘ಸತ್ಯ ಗೆಲ್ಲುತ್ತದೆ’ ಎಂದು ಭರವಸೆ ನೀಡಿದರು.
ಇದನ್ನೂ ಓದಿ; ಗುಜರಾತ್| ದೇವಾಲಯ ಉತ್ಸವದಿಂದ ದಲಿತರನ್ನು ಹೊರಗಿಟ್ಟ ಪ್ರಕರಣ; ವಿವರಣೆ ಕೇಳಿದ ಎಸ್‌ಸಿ-ಎಸ್‌ಟಿ ರಾಷ್ಟ್ರೀಯ ಆಯೋಗ


