“ಹೆದರಿಸುವ ಸಲುವಾಗಿ ನನಗೆ ನೋಟಿಸ್ ನೀಡಲಾಗಿದೆ ಅಷ್ಟೆ, ಫೆಬ್ರವರಿ 21 ರ ನಂತರ ನೋಟಿಸ್ ಅನ್ನು ಹಿಂಪಡೆಯುತ್ತಾರೆ ಎಂದು ಸಚಿವರೊಬ್ಬರು ಹೇಳಿದ್ದಾರೆ” ಎಂದು ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಹೇಳಿದ್ದಾರೆ.
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯಪುರದ ಶಾಸಕ ಯತ್ನಾಳ್, “ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಬಿಜೆಪಿ ಮುಖಂಡರು ನನಗೆ ನೋಟಿಸ್ ಕೊಟ್ಟಿರುವುದಾಗಿ ಹೇಳುತ್ತಿದ್ದಾರೆ. ಆದರೆ ಈವರೆಗೂ ನನಗೆ ನೋಟಿಸ್ ಬಂದಿಲ್ಲ. ನನಗೆ ನೋಟಿಸ್ ಬಂದಿರುವುದು ಪಕ್ಷದ ಉಪಾಧ್ಯಕ್ಷ ವಿಜಯೇಂದ್ರ ಅವರಿಗೆ ಹೇಗೆ ಗೊತ್ತಾಯಿತು. ಯಾರ ಬಳಿಯೂ ನೋಟಿಸ್ ಪತ್ರ ಇಲ್ಲ. ನೋಟಿಸ್ ನೀಡಿರುವುದಾಗಿ ಹೇಳಿಕೆ ನೀಡಿ ಮೂರು ದಿನವಾಗಿದೆ. ಎಲ್ಲಿಯೂ ನೋಟಿಸ್ ಕಾಣಿಸುತ್ತಿಲ್ಲ” ಎಂದು ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ: ಹಣ ಎಲ್ಲಿಂದ ಬರುತ್ತದೆ? ಗುಜರಾತಿನ ವ್ಯಾಪಾರಿಗಳಿಂದ ಬರುತ್ತದೆ: ರಾಹುಲ್ ಗಾಂಧಿ ಹೀಗೆ ಹೇಳಿದ್ದೇಕೆ?
“ನಾನು ಯಾರ ಬೆದರಿಕೆಗೂ ಅಂಜುವುದಿಲ್ಲ. ‘ಹೆದರಿಸುವ ಸಲುವಾಗಿ ನೋಟಿಸ್ ಕೊಡಲಾಗಿದೆ. ಅದಕ್ಕೆ ತಲೆಕೆಡಿಸಿಕೊಳ್ಳಬೇಡಿ’ ಎಂದು ಸಚಿವರೊಬ್ಬರು ದೂರವಾಣಿ ಕರೆಮಾಡಿ ನನಗೆ ಹೇಳಿದ್ದಾರೆ. ಫೆ. 21ರ ನಂತರ ಕೇಂದ್ರ ನಾಯಕರು ನೋಟಿಸ್ ವಾಪಸ್ ಪಡೆಯುವುದಾಗಿ ಅವರು ತಿಳಿಸಿದ್ದಾರೆ” ಎಂದು ಹೇಳಿದರು.
“ವೀರಶೈವ ಲಿಂಗಾಯತ ಸ್ವಾಮೀಜಿಗಳು ಬೆಂಗಳೂರಿನಲ್ಲಿ ಸಭೆ ನಡೆಸಿ ಐತಿಹಾಸಿಕ ನಿರ್ಣಯ ಕೈಗೊಂಡಿದ್ದಾರೆ. ಯಾರೋ ಒಬ್ಬರು ವೀರಶೈವ ಲಿಂಗಾಯತ ಸಮುದಾಯವನ್ನು ಹೈಜಾಕ್ ಮಾಡುತ್ತಿರುವ ಉದ್ದೇಶವನ್ನು ಹೊಂದಿದ್ದಾರೆ ಎಂಬುದನ್ನು ಸ್ವಾಮೀಜಿಗಳು ಮನಗಂಡಿದ್ದಾರೆ. ಸಮುದಾಯವನ್ನು ತಮ್ಮ ಮಗನ ರಾಜಕೀಯ ಬೆಳವಣಿಗೆಗಾಗಿ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ” ಎಂದು ಯಡಿಯೂರಪ್ಪನವರ ಹೆಸರು ಹೇಳದೇ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಸಿಎಎ ಜಾರಿ ಮಾಡುವುದಿಲ್ಲ: ಅಮಿತ್ ಶಾಗೆ ಸ್ಪಷ್ಟ ಉತ್ತರ ನೀಡಿದ ಕೇರಳ ಮುಖ್ಯಮಂತ್ರಿ
ಸಚಿವ ಮುರುಗೇಶ ನಿರಾಣಿ, ವಿಜಯೇಂದ್ರ ಸೇರಿ ಪಂಚಮಸಾಲಿ ಸಮುದಾಯವನ್ನು ಒಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಫೆಬ್ರವರಿ 21 ರಂದು ಬೆಂಗಳೂರಿನಲ್ಲಿ ನಡೆಯುವ ಸಮಾವೇಶ ಹಾಳುಮಾಡಿ, ವಿಫಲಗೊಳಿಸುವ ಷಡ್ಯಂತ್ರ ನಡೆದಿದೆ. ಆದರೆ ಈ ಕುತಂತ್ರ ನಡೆಯುವುದಿಲ್ಲ ಎಂದು ಹೇಳಿದರು.
ರಾಜ್ಯ ಸರ್ಕಾರದ ವಿರುದ್ಧ ಪದೇ ಪದೇ ವಾಗ್ದಾಳಿ ಮಾಡುತ್ತಿದ್ದ ಬಸನಗೌಡ ಯತ್ನಾಳ್ ಅವರಿಗೆ ಹೈಕಮಾಂಡ್ ನೋಟಿಸ್ ನೀಡಿದೆ ಎಂದು ಹೇಳಲಾಗುತ್ತಿತ್ತು. ಇದನ್ನು ಕೆಲವರು ಕಣ್ಣೊರೆಸುವ ತಂತ್ರ ಎಂದೂ ಹೇಳಿದ್ದರು. ಆದರೆ ಈಗ ಅದು ಯತ್ನಾಳ್ ಅವರಿಂದಲೇ ಸಾಬೀತಾಗಿದೆ.
ಇದನ್ನೂ ಓದಿ: ಬಿಜೆಪಿಗೆ ಅನುಕೂಲ ಮಾಡಿಕೊಡುವುದಿಲ್ಲ, ಮೂರೂ ಕ್ಷೇತ್ರದ ಉಪಚುನಾವಣೆಯಲ್ಲೂ ಸ್ಪರ್ಧೆ: ನಿರ್ಧಾರ ಬದಲಿಸಿದ HDK


