“ಪ್ರಜಾಪ್ರಭುತ್ವದ ಮಾರ್ಗ ತೋರಿದ ಬಸವಣ್ಣನವರ ವಿಚಾರಗಳ ಮೇಲೆ ಬಿಜೆಪಿ ದಾಳಿ ಮಾಡುತ್ತಿದೆ” ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾಲ್ಕಿಯಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ಜನ ಕ್ರಾಂತಿ ಸಮಾವೇಶದಲ್ಲಿ ಮಾತನಾಡಿರುವ ಅವರು, “ಆರ್‌ಎಸ್‌ಎಸ್ ಮತ್ತು ಬಿಜೆಪಿ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ದಾಳಿ ಮಾಡುತ್ತಿವೆ. ಬೀದರ್ ಬಸವಣ್ಣನ ಕರ್ಮಭೂಮಿಯಾಗಿದೆ. ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ತತ್ವಗಳನ್ನು ಬೋಧಿಸಿ ದೇಶಕ್ಕೆ ಪ್ರಜಾಪ್ರಭುತ್ವದ ಮಾರ್ಗ ತೋರಿದ ಬಸವಣ್ಣನವರ ವಿಚಾರಗಳ ಮೇಲೆ ಬಿಜೆಪಿ ದಾಳಿ ನಡೆಸುತ್ತಿದೆ” ಎಂದು ತಿಳಿಸಿದ್ದಾರೆ.
“ದೇಶದಲ್ಲಿ ಹಿಂಸೆ ಹಾಗೂ ದ್ವೇಷ ಹರಡಲಾಗುತ್ತಿದೆ. ಬಡವರು ಹಾಗೂ ಶೋಷಿತರಿಂದ ಹಣ ಕಿತ್ತುಕೊಂಡು ಇಬ್ಬರು, ಮೂವರು ಶ್ರೀಮಂತರಿಗೆ ಕೊಡುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಬಿಜೆಪಿಯಂತೆ ಕಾಂಗ್ರೆಸ್‌ನವರು ಸುಳ್ಳು ಭರವಸೆ ಕೊಡಬಾರದೆಂದು ಸೂಚಿಸಿದ್ದೇನೆ” ಎಂದಿದ್ದಾರೆ.
“ನರೇಂದ್ರ ಮೋದಿ ಅವರು ವಿದೇಶದಲ್ಲಿರುವ ಕಪ್ಪು ಹಣ ತಂದು ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ ₹15 ಲಕ್ಷ ಜಮಾ ಮಾಡುವ ಭರವಸೆ ನೀಡಿದ್ದರು. ಆದರೆ, ಏನೂ ಮಾಡಲಿಲ್ಲ. ಅಂತಹ ಭರವಸೆಗಳನ್ನು ಕಾಂಗ್ರೆಸ್‌ನವರು ಕೊಡಬಾರದು ಎಂದು ಮುಖಂಡರಿಗೆ ಮನವಿ ಮಾಡಿದ್ದೇನೆ” ಎಂದು ಹೇಳಿದ್ದಾರೆ.
‘ಬಿಜೆಪಿ ಸರ್ಕಾರ 40% ಭ್ರಷ್ಟಾಚಾರ ಮಾಡಿರುವುದನ್ನು ಕರ್ನಾಟಕದ ಜನತೆಯೇ ಹೇಳಿದೆ. ರಾಜ್ಯದ ಗುತ್ತಿಗೆದಾರರ ಸಂಘದ ಅಧ್ಯಕ್ಷರೇ ನೇರವಾಗಿ ಪ್ರಧಾನಮಂತ್ರಿಗೆ ಪತ್ರ ಬರೆದಿದ್ದರು. ಆದರೆ, ಮೋದಿಯವರು ಪ್ರತಿಕ್ರಿಯೆ ನೀಡಲಿಲ್ಲ. ಪಿಎಸ್‌ಐ, ಜ್ಯೂನಿಯರ್ ಎಂಜಿನಿಯರ್, ಉಪನ್ಯಾಸಕರ ಹುದ್ದೆಗಳ ನೇಮಕಾತಿಯಲ್ಲಿ ಭಾರಿ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆದಿರುವುದು ರಾಜ್ಯದ ಜನತೆಗೆ ಗೊತ್ತಿದೆ” ಎಂದು ಗುಡುಗಿದ್ದಾರೆ.
ಇದನ್ನೂ ಓದಿರಿ: ಪುಲ್ವಾಮಾ ದಾಳಿ ಕುರಿತ ಸತ್ಯಪಾಲ್ ಹೇಳಿಕೆಗೆ ಪಾಕಿಸ್ತಾನ ಪ್ರತಿಕ್ರಿಯೆ
“ಚುನಾವಣೆಯಲ್ಲಿ ನೀಡಿದ ಆಶ್ವಾಸನೆಯನ್ನು ಕಾಂಗ್ರೆಸ್ ಆಡಳಿತಕ್ಕೆ ಬಂದ ಮೊದಲ ದಿನವೇ ನಾಲ್ಕು ನಿರ್ಧಾರಗಳನ್ನು ತೆಗೆದುಕೊಳ್ಳಲಿದೆ. ಈ ಆಶ್ವಾಸನೆ ಕೋಟ್ಯಧಿಪತಿಗಳಿಲ್ಲ. ಬಡ ಕುಟುಂಬದವರಿಗೆ ನೀಡಲಾಗಿದೆ” ಎಂದು ತಿಳಿಸಿದ್ದಾರೆ.
“ಅಧಿಕಾರಕ್ಕೆ ಬರುವ ಸರ್ಕಾರವನ್ನು ಉರುಳಿಸಲು ಬಿಜೆಪಿ ಶೇ. 40ರಷ್ಟು ಲಂಚವನ್ನು ಬಳಸಲಿದೆ. ಅದಕ್ಕೆ ಅವಕಾಶ ನೀಡಬಾರದು. ರಾಜ್ಯದ ಜನತೆ ಕನಿಷ್ಠ 150 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು. ಪೂರ್ಣ ಬಹುಮತವನ್ನು ಕಾಂಗ್ರೆಸ್ ಪಕ್ಷಕ್ಕೆ ನೀಡಬೇಕು” ಎಂದು ಮನವಿ ಮಾಡಿದ್ದಾರೆ.
“ಸಂಸತ್ತಿನಲ್ಲಿ ಭ್ರಷ್ಟಾಚಾರ ವಿರುದ್ಧ ಧ್ವನಿ ಎತ್ತಿರುವೆ. ಅದಾನಿ ಅವರ ₹20 ಸಾವಿರ ಕೋಟಿ ಎಲ್ಲಿಂದ ಬಂತು ಎಂದು ಕೇಳಿದೆ. ಆದರೆ, ಉತ್ತರ ದೊರೆಯಲಿಲ್ಲ. ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ್ದಕ್ಕೆ ನನ್ನನ್ನು ಲೋಕಸಭೆಯಿಂದಲೇ ಹೊರಗೆ ಹಾಕಲಾಗಿದೆ” ಎಂದು ದೂರಿದ್ದಾರೆ.


