‘ಕಾಂಗ್ರೆಸ್ ಎಸ್‌ಸಿ, ಎಸ್‌ಟಿ ಮೀಸಲಾತಿಯನ್ನು ಕಿತ್ತು ಮುಸ್ಲಿಮರಿಗೆ ನೀಡಲಿದೆ’ ಎಂಬ ತಪ್ಪು ಸಂದೇಶ ಸಾರುವ ಆ್ಯನಿಮೇಟೆಡ್ ವಿಡಿಯೋ ಪೋಸ್ಟ್ ಮಾಡಿರುವುದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಪ್ರಶಾಂತ್ ಮಾಕನೂರು ಅನ್ನು ಗುರುವಾರ (ಮೇ 9) ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಮೇ 4ರಂದು ಕರ್ನಾಟಕ ಬಿಜೆಪಿಯ ಅಧಿಕೃತ ಎಕ್ಸ್ ಖಾತೆಯಲ್ಲಿ ಕಾಂಗ್ರೆಸ್ ಮತ್ತು ಮುಸ್ಲಿಮರನ್ನು ಗುರಿಯಾಗಿಸಿ ಆ್ಯನಿಮೇಟೆಡ್ ವಿಡಿಯೋ ಹಂಚಿಕೊಳ್ಳಲಾಗಿತ್ತು. ಇದರ ವಿರುದ್ದ ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ದೂರು ಆಧರಿಸಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ರಾಜ್ಯ ಘಟಕದ ಅಧ್ಯಕ್ಷ ಬಿ.ವೈ ವಿಜಯೇಂದ್ರ ಮತ್ತು ಬಿಜೆಪಿ ಐಟಿ ಸೆಲ್ ಕೇಂದ್ರ ಘಟಕದ ಮುಖ್ಯಸ್ಥ ಅಮಿತ್ ಮಾಳವೀಯ ವಿರುದ್ದ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಈ ಮೂವರಿಗೆ ನೋಟಿಸ್ ಜಾರಿಗೊಳಿಸಿರುವ ಪೊಲೀಸರು 7 ದಿನಗಳೊಳಗೆ ಉತ್ತರಿಸುವಂತೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಶಾಂತ್ ಮಾಕನೂರು ಅವರನ್ನು ಪೊಲೀಸರು ವಿಚಾರಣೆಗೆ ಕರೆದಿದ್ದರು. ಪ್ರಶಾಂತ್ ನ್ಯಾಯಾಲದಿಂದ ನಿರೀಕ್ಷಣಾ ಜಾಮೀನು ಪಡೆದುಕೊಂಡಿರುವ ಹಿನ್ನೆಲೆ, ವಶಕ್ಕೆ ಪಡೆಯದೆ ವಿಚಾರಣೆ ನಡೆಸಿ ಬಿಟ್ಟಿದ್ದಾರೆ ಎಂಬ ಮಾಹಿತಿ ದೊರೆತಿದೆ.
ಎಚ್ಚರ..ಎಚ್ಚರ..ಎಚ್ಚರ.. ಎಂಬ ತಲೆ ಬರಹದೊಂದಿಗೆ ರಾಜ್ಯ ಬಿಜೆಪಿಯ ಎಕ್ಸ್ ಖಾತೆಯಲ್ಲಿ ಆ್ಯನಿಮೇಟೆಡ್ ವಿಡಿಯೋ ಹಂಚಿಕೊಳ್ಳಲಾಗಿತ್ತು. ಅದರಲ್ಲಿ ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ಅವರ ಕಾರ್ಟೂನ್‌ಗಳಿತ್ತು. ಈ ಇಬ್ಬರು ಎಸ್‌ಸಿ ಎಸ್‌ಟಿ, ಒಬಿಸಿ ಎಂದು ಬರೆದ ಮೊಟ್ಟೆ ಬಳಿ ಮುಸ್ಲಿಂ ಎಂದು ಬರೆದ ದೊಡ್ಡ ಮೊಟ್ಟೆಯನ್ನು ತಂದು ಇಡುತ್ತಾರೆ. ಆ ಮೊಟ್ಟೆಯಿಂದ ಹೊರಬಂದ ಮುಸ್ಲಿಂ ಎಂದು ಬರೆದ ಹಕ್ಕಿಗೆ ರಾಹುಲ್ ಗಾಂಧಿ ಆಹಾರವನ್ನು ತಂದು ಸುರಿಯುವುದು, ಬಳಿಕ ಎಸ್,ಎಸ್‌ಟಿ, ಒಬಿಸಿ ಎಂದು ಬರೆದ ಹಕ್ಕಿಯನ್ನು ಮುಸ್ಲಿಂ ಎಂದು ಬರೆದ ಹಕ್ಕಿ ಹೊರದಬ್ಬುವ ದ್ವೇಷ ಪೂರಿತ ಅಂಶಗಳು ಆ್ಯನಿಮೇಟೆಡ್ ವಿಡಿಯೋದಲ್ಲಿತ್ತು.
ಇದನ್ನೂ ಓದಿ : ಸಂದೇಶ್‌ಖಾಲಿ ಘಟನೆಗಳ ಬಗ್ಗೆ ಬಿಜೆಪಿ ಸುಳ್ಳು ಸುದ್ದಿ ಹರಡುತ್ತಿದೆ: ಟಿಎಂಸಿ


