“ನಾಮಪತ್ರ ಹಿಂಪಡೆಯುವಂತೆ ಒತ್ತಾಯಿಸಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯನ್ನು ಬಿಜೆಪಿ ಗೂಂಡಾಗಳು ಹಾಗೂ ಪೊಲೀಸರು ಎಳೆದೊಯ್ದಿದ್ದಾರೆ” ಎಂದು ಆರೋಪಿಸಿರುವ ಎಎಪಿ ವಿಡಿಯೊ ಬಿಡುಗಡೆ ಮಾಡಿದೆ.
ಈ ಕುರಿತು ವಿಡಿಯೊ ತುಣುಕು ಟ್ವೀಟ್ ಮಾಡಿರುವ ಎಎಪಿ ನಾಯಕ ರಾಘವ್ ಚಡ್ಡ, “ಪೊಲೀಸರು ಮತ್ತು ಬಿಜೆಪಿ ಗೂಂಡಾಗಳು ಹೇಗೆ ಒಟ್ಟಾಗಿ ನಮ್ಮ ಸೂರತ್ ಪೂರ್ವ ಅಭ್ಯರ್ಥಿ ಕಾಂಚನ್ ಜರಿವಾಲಾ ಅವರನ್ನು ತಮ್ಮ ನಾಮಪತ್ರ ಹಿಂಪಡೆಯುವಂತೆ ಒತ್ತಾಯಿಸಿ ಆರ್‌ಒ ಕಚೇರಿಗೆ ಎಳೆದೊಯ್ದಿದ್ದಾರೆ ಎಂಬುದನ್ನು ನೋಡಿರಿ. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ಎಂಬ ಪದವೇ ಜೋಕ್ ಆಗಿಬಿಟ್ಟಿದೆ” ಎಂದು ಆಕ್ರೋಶ ಹೊರಹಾಕಿದ್ದಾರೆ.
Watch how police and BJP goons together – dragged our Surat East candidate Kanchan Jariwala to the RO office, forcing him to withdraw his nomination
The term ‘free and fair election’ has become a joke! pic.twitter.com/CY32TrUZx8
— Raghav Chadha (@raghav_chadha) November 16, 2022
ಗುಜರಾತ್‌ನಲ್ಲಿ ತನ್ನ ಅಭ್ಯರ್ಥಿಯೊಬ್ಬರನ್ನು ಅಪಹರಣ ಮಾಡಲಾಗಿದೆ ಮತ್ತು ಮುಂದಿನ ತಿಂಗಳ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಒತ್ತಾಯಿಸಿ ನಾಮಪತ್ರವನ್ನು ಹಿಂಪಡೆಯಲು ಯತ್ನಿಸಲಾಗಿದೆ ಎಂದು ಎಎಪಿ ದೂರಲು ಆರಂಭಿಸಿತು.
ಸೂರತ್ (ಪೂರ್ವ) ಕ್ಷೇತ್ರದ ಅಭ್ಯರ್ಥಿ ಕಾಂಚನ್ ಜರಿವಾಲಾ ನಿನ್ನೆಯಿಂದ ಕಾಣೆಯಾಗಿದ್ದಾರೆ ಎಂದು ಎಎಪಿ ಟ್ವೀಟ್ ಮಾಡುವ ಮೂಲಕ ಆರೋಪಿಸಲಾರಂಭಿಸಿತು. ಎಎಪಿ ಅಭ್ಯರ್ಥಿ ಕಾಂಚನ್ ಜರಿವಾಲಾ ಅವರನ್ನು ಬಿಜೆಪಿ ಅಪಹರಿಸಿದೆ ಎಂದು ಮನೀಶ್ ಸಿಸೋಡಿಯಾ ಹೇಳಿಕೆ ನೀಡಿದರು.
ಸ್ವಲ್ಪ ಸಮಯದ ನಂತರ ಸಿಸೋಡಿಯಾ ಟ್ವೀಟ್ ಮಾಡಿ, “ಜರಿವಾಲಾ ಪತ್ತೆಯಾಗಿದ್ದಾರೆ. 500 ಪೊಲೀಸರು ಸುತ್ತುವರೆದಿದ್ದು, ಗುಜರಾತ್ ಚುನಾವಣಾ ರಿಟರ್ನಿಂಗ್ ಕಚೇರಿಗೆ ಕರೆತರಲಾಗಿದೆ” ಎಂದು ಮಾಹಿತಿ ನೀಡಿದ್ದಾರೆ.
“ಜರಿವಾಲ ಅವರ ಮೇಲೆ ನಾಮಪತ್ರ ಹಿಂಪಡೆಯುವ ಒತ್ತಡ ಹೇರಲಾಗಿದೆ. ಅವರನ್ನು ಚುನಾವಣಾ ಕಚೇರಿಯಲ್ಲಿ ಕುಳಿತುಕೊಳ್ಳುವಂತೆ ಒತ್ತಾಯಿಸಲಾಗಿದೆ. ಪೊಲೀಸರಿಂದ ಒತ್ತಡ ತರಲಾಗುತ್ತಿದೆ. ಇದು ಪ್ರಜಾಪ್ರಭುತ್ವಕ್ಕೆ ಒಡ್ಡಿದ ಬಹಿರಂಗ ಬೆದರಿಕೆಯಾಗಿದೆ ಎಂದು ನಾನು ಚುನಾವಣಾ ಆಯೋಗಕ್ಕೆ ಹೇಳಲು ಬಯಸುತ್ತೇನೆ” ಎಂದು ಸಿಸೋಡಿಯಾ ಪ್ರತಿಕ್ರಿಯಿಸಿದ್ದಾರೆ.
ಗುಜರಾತ್ ಚುನಾವಣೆಯಲ್ಲಿ ಸೋಲುವ ಭಯದಲ್ಲಿ ಬಿಜೆಪಿ ಇದೆ. ಆದ್ದರಿಂದ ಎಎಪಿ ಅಭ್ಯರ್ಥಿಯನ್ನು ಅಪಹರಿಸಲು ಮುಂದಾಗಿದೆ ಎಂದು ಸಿಸೋಡಿಯಾ ದೂರಿದ್ದಾರೆ.
ಕಾಂಚನ್ ಜರಿವಾಲಾ ಮತ್ತು ಅವರ ಕುಟುಂಬ ಸದಸ್ಯರು ನಿನ್ನೆ ನಾಮಪತ್ರ ಪರಿಶೀಲನೆಗೆ ಹೋದಾಗ ನಾಪತ್ತೆಯಾಗಿದ್ದರು. ಅವರು ತಮ್ಮ ನಾಮಪತ್ರ ಪರಿಶೀಲನೆಯ ನಂತರ ಕಚೇರಿಯಿಂದ ಹೊರಬಂದ ಕ್ಷಣ, ಬಿಜೆಪಿಯ ಗೂಂಡಾಗಳು ಜರಿವಾಲ ಅವರನ್ನು ಎಳೆದೋಯ್ದರು ಎಂದು ಸಿಸೋಡಿಯಾ ಮಾಹಿತಿ ನೀಡಿದ್ದಾರೆ.
“ಇದು ಅಪಾಯಕಾರಿ. ಇದು ಕೇವಲ ಅಭ್ಯರ್ಥಿಯ ಅಪಹರಣವಲ್ಲ, ಪ್ರಜಾಪ್ರಭುತ್ವದ ಅಪಹರಣವಾಗಿದೆ” ಎಂದು ಟೀಕಾಪ್ರಹಾರ ನಡೆಸಿದ್ದಾರೆ.
ಎಎಪಿ ಆರೋಪಗಳಿಗೆ ಬಿಜೆಪಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಗುಜರಾತ್‌ನಲ್ಲಿ 27 ವರ್ಷಗಳಿಂದ ಅಧಿಕಾರದಲ್ಲಿರುವ ಆಡಳಿತರೂಢ ಬಿಜೆಪಿಯು ಈ ಬಾರಿ ಎಎಪಿಯಿಂದ ಆಕ್ರಮಣಕಾರಿ ಸವಾಲನ್ನು ಎದುರಿಸುತ್ತಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡುತ್ತಿದೆ. ರಾಜ್ಯದಲ್ಲಿ ಸಾಂಪ್ರದಾಯಿಕವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಪೈಪೋಟಿ ಇರುತ್ತಿತ್ತು. ಈ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ ಎಂದು ವಿಶ್ಲೇಷಣೆಗಳು ಬರುತ್ತಿವೆ.
ಡಿಸೆಂಬರ್ 1 ಮತ್ತು 5 ರಂದು ಗುಜರಾತ್‌ನಲ್ಲಿ ಹೊಸ ಸರ್ಕಾರ ರಚನೆಗಾಗಿ ಚುನಾವಣೆ ನಡೆಯಲಿದೆ. ಡಿಸೆಂಬರ್ 8 ರಂದು ಫಲಿತಾಂಶ ಪ್ರಕಟವಾಗಲಿದೆ.


