ಮಾಜಿ ಬಿಜೆಪಿ ಶಾಸಕ ಕುಲದೀಪ್ ಸೆಂಗಾರ್ ಉನ್ನಾವ್‌ನ ಅಪ್ತಾಪ್ತ ವಯಸ್ಸಿನ ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದಲ್ಲದೇ ಆಕೆಯ ತಂದೆಯನ್ನು ಕೊಂದ ಆರೋಪದ ಮೇಲೆ ಶಿಕ್ಷೆಗೆ ಒಳಗಾಗಿದ್ದಾನೆ.
ಬಿಜೆಪಿಯ ಮಾಜಿ ಶಾಸಕ ಕುಲದೀಪ್ ಸೆಂಗಾರ್ ಮತ್ತು ಆತನ ಸಹೋದರ ಎರಡು ವರ್ಷಗಳ ಹಿಂದೆ 15 ವರ್ಷ ವಯಸ್ಸಿನ ಉನ್ನಾವೊ ಮೂಲದ ಯುವತಿಯ ಮೇಲೆ ಅತ್ಯಾಚಾರ ಎಸಗಿದ ಆರೋಪಕ್ಕೆ ಈಗಾಗಲೇ ಶಿಕ್ಷೆಗೊಳಗಾಗಿದ್ದಾನೆ. ಅಲ್ಲದೇ ಆ ಸಂತ್ರಸ್ತೆಯ ತಂದೆಯ ಮೇಲೆ ಹಲ್ಲೆ ನಡೆಸಿ, ಕೊಲೆಗೈದ ಆರೋಪದಲ್ಲಿಯೂ ಸಹ ಈಗ ಶಿಕ್ಷೆ ಘೋಷಣೆಯಾಗಿದೆ.
ಈ ಅತ್ಯಾಚಾರ ಪ್ರಕರಣವು ಆರೋಪಿ ಬಲಾಢ್ಯನಾದ (ಬಿಜೆಪಿ ಶಾಸಕ) ಕಾರಣಕ್ಕೆ ಮುಚ್ಚಿಹೋಗುವ ಹಂತದಲ್ಲಿತ್ತು. ಆದರೆ ಸಂತ್ರಸ್ತೆ ನ್ಯಾಯಕ್ಕಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮನೆಯ ಹೊರಗೆ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದಾಗ ದೊಡ್ಡ ಸುದ್ದಿಯಾಯಿತು.
ನಂತರ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದರು. ಆದರೆ ಅದೇ ಸಮಯದಲ್ಲಿ ಕೇಸನ್ನು ವಾಪಸ್ ಪಡೆಯುವಂತೆ ಆರೋಪಿ ಒತ್ತಾಯ ಹಾಕುತ್ತಲೇ ಬಂದಿದ್ದ. ಪೊಲೀಸರನ್ನು ಬಳಿಸಿಕೊಂಡು ಆಕೆಯ ತಂದೆಯ ಮೇಲೆ ಶಸ್ತ್ರಾಸ್ತ್ರ ಕಾಯ್ದೆ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಆಗ ಆತನ ಮೇಲೆ ತೀವ್ರತರವಾಗಿ ಹಲ್ಲೆ ನಡೆದುದರಿಂದ ಬಂಧನದಲ್ಲಿರುವಾಗಲೇ ಸ್ಥಳೀಯ ಆಸ್ಪತ್ರೆಯಲ್ಲಿ ಆಕೆಯ ತಂದೆ ನಿಧನರಾದರು.
ಸಾಯುವ ಕೆಲವೇ ಗಂಟೆಗಳ ಮೊದಲು, ವ್ಯಕ್ತಿಯನ್ನು ಹೊಟ್ಟೆ ನೋವಿನ ದೂರುಗಳೊಂದಿಗೆ ಆಸ್ಪತ್ರೆಗೆ ದಾಖಲಿಸಲಾಯಿತು. ಆ ಸಮಯದಲ್ಲಿ, ಅವನ ಮುಖವು ಅನೇಕ ಮೂಗೇಟುಗಳಿಗೆ ಒಳಗಾಗಿತ್ತು. ಕರುಳಿನಲ್ಲಾದ ರಂಧ್ರದ ರಕ್ತದ ವಿಷದಿಂದಾಗಿ ಈ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಮರಣೋತ್ತರ ವರದಿ ತಿಳಿಸಿದೆ. ಇದು ಅವನ ದೇಹದಾದ್ಯಂತ 14 ಮೂಗೇಟುಗಳನ್ನು ಸಹ ಪಟ್ಟಿಮಾಡಿದೆ.
ತದನಂತರ ಹೋರಾಟ ತೀವ್ರವಾಯಿತು. ಅತ್ಯಾಚಾರ ಸಂತ್ರಸ್ತೆ ಕೋರ್ಟಿಗೆ ಕಾರಿನಲ್ಲಿ ಹೋಗುತ್ತಿದ್ದಾಗ ಲಾರಿಯೊಂದು ಡಿಕ್ಕಿಹೊಡೆದಿತ್ತು. ಅದರಲ್ಲಿ ಆಕೆ ತನ್ನ ಚಿಕ್ಕಮ್ಮನನ್ನು ಕಳೆದುಕೊಳ್ಳಬೇಕಾಯಿತು. ಸಂತ್ರಸ್ತೆ ಮತ್ತು ಆಕೆಯ ವಕೀಲರು ತೀವ್ರ ಗಾಯಗಳಿಗೆ ಒಳಗಾಗಿದ್ದರು. ಇದು ಸಹ ಕೊಲೆ ಆರೋಪವೆಂದು ಆಕೆ ದೂರಿದ್ದಳು. ನಂತರವಷ್ಟೇ ಬಿಜೆಪಿ ಪಕ್ಷವು ಆರೋಪಿ ಕುಲದೀಪ್ ಸೆಂಗಾರ್‌ನನ್ನು ಪಕ್ಷದಿಂದ ಉಚ್ಛಾಟಿಸಿತ್ತು.
“ಶಾಸಕರ ಸಹೋದರ ಅತುಲ್ ಸಿಂಗ್ ನನ್ನನ್ನು ಥಳಿಸಿದರು. ಅವರು ನನ್ನನ್ನು ಹೊಡೆಯುತ್ತಲೇ ಇದ್ದರು. ಯಾರೂ ನನ್ನನ್ನು ಉಳಿಸಲು ಪ್ರಯತ್ನಿಸಲಿಲ್ಲ” ಎಂದು ಆಕೆಯ ತಂದೆ ವೀಡಿಯೊದಲ್ಲಿ ಹೇಳುವುದನ್ನು ಕೇಳಲಾಯಿತು. ಪೊಲೀಸರು ಸುಮ್ಮನೆ ನಿಂತಿದ್ದರು ಎಂದು ಆತ ದೂರಿದ್ದ.
ಉನ್ನಾವ್ ಅತ್ಯಾಚಾರ ಪ್ರಕರಣದಲ್ಲಿನ ಸಂತ್ರಸ್ತೆಯ ತಂದೆಯ ಕೊಲೆಯು “ಅವರನ್ನು ತಡೆಯಲು, ಮೌನಗೊಳಿಸಲು ಮತ್ತು ದೂರನ್ನು ಮುಂದುವರಿಸದಂತೆ ತಡೆಯುವ ದೊಡ್ಡ ಪಿತೂರಿಯ ಭಾಗವಾಗಿದೆ” ಎಂದು ನ್ಯಾಯಾಲಯ ಹೇಳಿದೆ. ಈ ಪ್ರಕರಣಕ್ಕೆ ಸಂಬಂಧಿಸಿರುವ ಮೂವರು ಪೊಲೀಸರ ಮೇಲೂ ಕೊಲೆ ಆರೋಪವಿದೆ.


