ಚುನಾವಣಾ ಪ್ರಚಾರದಲ್ಲಿ ದ್ವೇಷದ ಭಾಷಣ ಮಾಡಿರುವ ಹಿನ್ನೆಲೆ ಮಾದರಿ ನೀತಿ ಸಂಹಿತೆ (ಎಂಸಿಸಿ) ಉಲ್ಲಂಘಿಸಿದ ಆರೋಪದಲ್ಲಿ ಸೈಬರಾಬಾದ್ ಪೊಲೀಸರು ಬಿಜೆಪಿ ನಾಯಕಿ ನವನಿತ್ ರಾಣಾ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಶಾದ್‌ನಗರ ಪ್ರದೇಶದಲ್ಲಿ ನಡೆದ ಸಭೆಯೊಂದರಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನವನಿತ್ ರಾಣಾ, ‘ಕಾಂಗ್ರೆಸ್‌ಗೆ ಮತ ಹಾಕುವುದು ಎಂದರೆ ಪಾಕಿಸ್ತಾನಕ್ಕೆ ಮತ ಹಾಕುವುದು’ ಎಂದು ಪ್ರಚೋದನಾಕಾರಿಯಾಗಿ ಹೇಳಿಕೆ ನೀಡಿದ್ದಾರೆ.
ಶಾದ್‌ನಗರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಫ್ಲೈಯಿಂಗ್ ಸರ್ವೆಲೆನ್ಸ್ ಟೀಮ್ (ಎಫ್‌ಎಸ್‌ಟಿ) ಅಧಿಕಾರಿಯೊಬ್ಬರು ದೂರು ದಾಖಲಿಸಿದ್ದು, ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿರುವ ಬಗ್ಗೆ ನವನೀತ್ ರಾಣಾ ವಿರುದ್ಧ ಭಾರತೀಯ ದಂಡ ಸಂಹಿತೆಯ IPC ಸೆಕ್ಷನ್ 171-ಸಿ (ಸುಳ್ಳು ಹೇಳಿಕೆಗಳು), 171-ಜಿ (ಚುನಾವಣೆಗಳ ಮೇಲೆ ಪ್ರಭಾವ ಬೀರುವುದು) ಮತ್ತು 188ರಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮೇ.9ರಂದು ಸರೂರ್‌ನಗರದಲ್ಲಿ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ರೇವಂತ್ ರೆಡ್ಡಿ, ಇತ್ತೀಚೆಗೆ ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಉದ್ರೇಕಕಾರಿ ಹೇಳಿಕೆಗಳನ್ನು ನೀಡಿದ ನವನಿತ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಚುನಾವಣಾ ಆಯೋಗವನ್ನು (ಇಸಿಐ) ಒತ್ತಾಯಿಸಿದ್ದರು. ಇದು ಗಂಭೀರ ಅಪರಾಧ, ದೇಶದ ಕೋಟ್ಯಂತರ ಜನರನ್ನು ಗುರಿಯಾಗಿಸಿಕೊಂಡು ಹೇಳಿಕೆ ನೀಡಿದ್ದಕ್ಕೆ ಪ್ರಧಾನಿ ಮೋದಿ ಮತ್ತು ಕೇಂದ್ರ ಸಚಿವ ಅಮಿತ್ ಶಾ ಅವರು ನವನಿತ್ ರಾಣಾ ವಿರುದ್ಧ ಕ್ರಮವನ್ನು ಕೈಗೊಳ್ಳುತ್ತಾರಾ ಎಂದು ಪ್ರಶ್ನಿಸಿದ್ದರು.
ಇದಲ್ಲದೆ ಮೇ.8ರಂದು ಹೈದರಾಬಾದ್ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ಪರ ಪ್ರಚಾರ ಮಾಡುವಾಗ ನವನಿತ್ ರಾಣಾ ಪ್ರಚೋದನಾಕಾರಿ ಹೇಳಿಕೆಯನ್ನು ನೀಡಿದ್ದರು. ‘ಹಿಂದೂಗಳ ಶಕ್ತಿಯನ್ನು ಪ್ರದರ್ಶಿಸಲು ಕೇವಲ ಹದಿನೈದು ಸೆಕೆಂಡುಗಳು ಸಾಕು’ ಎಂದು ನವನಿತ್ ರಾಣಾ ಎಐಎಂಐಎಂ ನಾಯಕ ಅಕ್ಬರುದ್ದೀನ್ ಓವೈಸಿ ವಿರುದ್ಧ ಟೀಕಿಸುವಾಗ ಹೇಳಿದ್ದರು. ಹೈದರಾಬಾದ್‌ನ್ನು ಪಾಕಿಸ್ತಾನವಾಗುವುದನ್ನು ತಡೆಯಲು ಮತದಾನ ನಡೆಯಬೇಕು ಎಂದು ಬಿಜೆಪಿಗೆ ಮತ ಹಾಕುವಂತೆ ಅವರು ಹೇಳಿದ್ದರು.
ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಈ ಬಗ್ಗೆ ಪ್ರತಿಕ್ರಿಯಿಸಿ, ಬಿಜೆಪಿಯವರು ಧರ್ಮದ ಹೆಸರಿನಲ್ಲಿ ಮತ ಭಿಕ್ಷೆ ಬೇಡುತ್ತಿರುವುದು ಮತ್ತು ಹಿಂದೂ-ಮುಸ್ಲಿಂಮರ ನಡುವೆ ಕೋಮುಗಲಭೆ ಸೃಷ್ಟಿಸುತ್ತಿರುವುದು ಖಂಡನೀಯ. ಬಿಜೆಪಿಯ ಬಲೆಗೆ ಬೀಳಬೇಡಿ ಎಂದು ನನ್ನ ಹಿಂದೂ ಮತ್ತು ಮುಸ್ಲಿಂ ಸಹೋದರರಲ್ಲಿ ನಾನು ಮನವಿ ಮಾಡುತ್ತೇನೆ ಎಂದು ಹೇಳಿದ್ದರು.
ಇದನ್ನು ಓದಿ: ಲೈಂಗಿಕ ದೌರ್ಜನ್ಯ ಪ್ರಕರಣ: ಬಿಜೆಪಿ ಮುಖಂಡ ಜಿ ದೇವರಾಜೇಗೌಡ ಬಂಧನ


