ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಬಿಜೆಪಿ ಆಡಳಿತದ ಕೇಂದ್ರ ಸರ್ಕಾರದ ವಿರುದ್ಧ ತಮ್ಮ ವಾಗ್ದಾಳಿ ನಡೆಸಿದ್ದಾರೆ. ಪೌರತ್ವ ಕಾಯ್ದೆ ಮತ್ತು ಹೊಸ ವಕ್ಫ್ ಕಾಯ್ದೆಯಂತಹ ಅದರ ವಿವಿಧ ಕಾನೂನುಗಳು ಮತ್ತು ನೀತಿಗಳು ಮುಸ್ಲಿಮರನ್ನು ಎರಡನೇ ದರ್ಜೆಯ ನಾಗರಿಕರಂತೆ ಪರಿಗಣಿಸುತ್ತವೆ. ಸಮುದಾಯವನ್ನು ಮುಖ್ಯವಾಹಿನಿಯಿಂದ ಬೇರ್ಪಡಿಸುತ್ತವೆ ಎಂದು ಆರೋಪಿಸಿದ್ದಾರೆ.
ಜನವರಿ 1 ರಂದು ಕಾಸರಗೋಡಿನಲ್ಲಿ ಪ್ರಾರಂಭವಾಗಿ ರಾಜ್ಯಾದ್ಯಂತ ಸಂಚರಿಸಿ ತಿರುವನಂತಪುರಂನಲ್ಲಿ ಮುಕ್ತಾಯಗೊಂಡ ಕೇರಳ ಮುಸ್ಲಿಂ ಜಮಾತ್ ಆಯೋಜಿಸಿದ್ದ ‘ಕೇರಳ ಯಾತ್ರೆ’ಯ ಸಮಾರೋಪ ಅಧಿವೇಶನದಲ್ಲಿ ಮಾತನಾಡಿದ ವಿಜಯನ್, ಬಿಜೆಪಿ ಆಡಳಿತದ ವಿರುದ್ಧ ಈ ಆರೋಪಗಳನ್ನು ಮಾಡಿದ್ದಾರೆ.
“ಯಾವುದೇ ರೀತಿಯ ಕೋಮುವಾದದ ಬಗ್ಗೆ ಮೃದು ನಿಲುವು ಹೊಂದಿರುವುದು ಅಥವಾ ಸಮಾಧಾನ ತಂತ್ರ ಅಳವಡಿಸಿಕೊಳ್ಳುವುದು ಅಪಾಯಕಾರಿ. ಕೇರಳವು ಹಿಂದೆ ರಾಜ್ಯದಲ್ಲಿ ಹಲವಾರು ಕ್ರೂರ ಕೋಮು ಸಂಘರ್ಷಗಳು ಮತ್ತು ಗಲಭೆಗಳನ್ನು ಕಂಡಿದೆ. ಆದರೆ, ಯಾವುದೇ ರೀತಿಯ ಕೋಮುವಾದದ ವಿರುದ್ಧ ಎಲ್‌ಡಿಎಫ್ ಅಳವಡಿಸಿಕೊಂಡ ಬಲವಾದ, ರಾಜಿಯಾಗದ ನಿಲುವಿನಿಂದಾಗಿ ಇದೆಲ್ಲವೂ ಕೊನೆಗೊಂಡಿದೆ” ಎಂದು ಅವರು ಹೇಳಿದರು.
ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರಂತಹ ಅಲ್ಪಸಂಖ್ಯಾತ ಸಮುದಾಯಗಳು, ಅವರ ಪೂಜಾ ಸ್ಥಳಗಳ ಮೇಲೆ ದೇಶಾದ್ಯಂತ ದಾಳಿ ನಡೆಯುತ್ತಿರುವುದರಿಂದ ದೇಶದಲ್ಲಿ ಜಾತ್ಯತೀತತೆ, ಪ್ರಜಾಪ್ರಭುತ್ವ ಮತ್ತು ಸಾಂವಿಧಾನಿಕ ಮೌಲ್ಯಗಳು ಅಪಾಯದಲ್ಲಿವೆ ಎಂದು ಹೇಳಿದರು.
ಅಂತಹ ಪರಿಸ್ಥಿತಿಯಲ್ಲಿ, ಬಹುಸಂಖ್ಯಾತ ಕೋಮುವಾದವನ್ನು ಅಲ್ಪಸಂಖ್ಯಾತ ಕೋಮುವಾದದೊಂದಿಗೆ ಹೋರಾಡಲು ಸಾಧ್ಯವಿಲ್ಲ. ಏಕೆಂದರೆ, ಎರಡೂ ಶಕ್ತಿಗಳು ಪರಸ್ಪರ ಪೂರಕವಾಗಿರುತ್ತವೆ ಬದಲಾಗಿ, ಜಾತ್ಯತೀತತೆಯನ್ನು ಬಲಪಡಿಸುವ ಮೂಲಕ ಅವುಗಳನ್ನು ಎದುರಿಸಬೇಕಾಗಿದೆ” ಎಂದು ಅವರು ವಾದಿಸಿದರು.
ಧರ್ಮ, ಜನಾಂಗ, ಜಾತಿ ಅಥವಾ ಭಾಷೆಯ ಮೂಲಕ ಜನರನ್ನು ವಿಭಜಿಸಲು ಪ್ರಯತ್ನಿಸುತ್ತಿರುವ ಶಕ್ತಿಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಅವರು ಕರೆ ನೀಡಿದರು. ಕಾಂತಪುರಂ ಎ ಪಿ ಅಬೂಬಕರ್ ಮುಸ್ಲಿಯಾರ್ ನೇತೃತ್ವದ ‘ಕೇರಳ ಯಾತ್ರೆ’ಯನ್ನು ಶ್ಲಾಘಿಸಿದರು, ಇದು ಸರಿಯಾದ ದಿಕ್ಕಿನಲ್ಲಿ ಇಟ್ಟ ಹೆಜ್ಜೆ ಎಂದು ಹೇಳಿದರು.
“ಧರ್ಮ ಅಥವಾ ಜನಾಂಗದ ಹೆಸರಿನಲ್ಲಿ ಜನರನ್ನು ಬೇರ್ಪಡಿಸಲು ಪ್ರಜ್ಞಾಪೂರ್ವಕ ಪ್ರಯತ್ನಗಳು ನಡೆಯುತ್ತಿರುವ ಈ ಯುಗದಲ್ಲಿ, ಅಂತಹ ನಡೆಗಳು ಅದರ ವಿರುದ್ಧ ಉತ್ತಮ ರಕ್ಷಣೆಯಾಗಿದೆ” ಎಂದು ಮುಖ್ಯಮಂತ್ರಿ ಹೇಳಿದರು.


