ಬಾಗಲಕೋಟೆಯ ಮಹಾಲಿಂಗಪುರ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ವೇಳೆ ತೇರದಾಳದ ಬಿಜೆಪಿ ಶಾಸಕ ಸಿದ್ದು ಸವದಿ ಅಧ್ಯಕ್ಷೆ ಸ್ಥಾನದ ಆಕಾಂಕ್ಷಿಯಾದ ಸವಿತಾ ಹುರಕಡ್ಲಿ ಅವರನ್ನು ಪೊಲೀಸರ ಸಮ್ಮುಖದಲ್ಲೇ ಎಳೆದಾಡಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಶಾಸಕ ಸಿದ್ದು ಸವದಿ ಸೇರಿ 31 ಜನರ ವಿರುದ್ಧ ಬಾಗಲಕೋಟೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ ವರ್ಷ 2020 ರ ನವೆಂಬರ್ 09 ರಂದು ಈ ಘಟನೆ ನಡೆದಿತ್ತು. ಅಂದು ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯುತ್ತಿತ್ತು. ಈ ವೇಳೆ ಮತ ಹಾಕಲು ಬಂದ ಪುರಸಭೆ ಸದಸ್ಯೆ ಚಾಂದಿನಿ ನಾಯಕ್, ಸವಿತಾ ಹುರಕಡ್ಲಿ, ಗೋದಾವರಿ ಬಾಟ್ ಅವರನ್ನು ಎಳೆದಾಡಲಾಗಿತ್ತು. ಪುರಸಭೆಯ ಒಳಗೆ ಬಾರದಂತೆ ತಡೆಯಲು ಗಲಾಟೆ ನಡೆದಿತ್ತು. ಘಟನೆ ಬಳಿಕ ಚಾಂದಿನಿ ನಾಯಕ್ ಅವರು ದೂರು ದಾಖಲಿಸಿದ್ದರು. ಇಷ್ಟೇ ಅಲ್ಲದೇ, ತಳ್ಳಾಟದ ಬಳಿಕ ಮೂರು ತಿಂಗಳ ಗರ್ಭಿಣಿ ಚಾಂದಿನಿ ನಾಯಕ್ಗೆ ಗರ್ಭಪಾತವಾಗಿದೆ ಎಂಬ ಆರೋಪವೂ ಸಹ ಕೇಳಿ ಬಂದಿದೆ.
ಇದನ್ನೂ ಓದಿ: ಪುರಸಭಾ ಸದಸ್ಯೆಯನ್ನು ಎಳೆದಾಡಿದ ಬಿಜೆಪಿ ಶಾಸಕ ಸಿದ್ದು ಸವದಿ
ಸವಿತಾ ಹುರಕಡ್ಲಿ ಅವರನ್ನು ಎಳೆದಾಡುತ್ತಿರುವ ವೀಡಿಯೊ ನೋಡಲು ಇಲ್ಲಿ ಕ್ಲಿಕ್ ಮಾಡಿ.
ಇದಕ್ಕೆ ಸಂಬಂಧಿಸಿದಂತೆ ಶಾಸಕ ಸಿದ್ದು ಸವದಿ, ಬೆಂಬಲಿಗರಾದ ರವಿ ಜವಳಗಿ, ಪ್ರಹ್ಲಾದ್ ಸಣ್ಣಕ್ಕಿ, ರಾಜು ಚಮಕೇರ, ಸ್ನೇಹಲ್ ಅಂಗಡಿ ಸೇರಿದಂತೆ 31 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಗೌರವಕ್ಕೆ ಧಕ್ಕೆ, ಅಪಹರಣ, ಜೀವ ಬೆದರಿಕೆ, ಜಾತಿ ನಿಂದನೆ ಕೇಸ್ ದಾಖಲಿಸಲಾಗಿದೆ. ಐಪಿಸಿ ಸೆಕ್ಷನ್ 120/a, 141, 143, 147, 148, 319, 321, 323 ಸೇರಿದಂತೆ 19 ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಜೆಡಿಎಸ್-ಕಾಂಗ್ರೆಸ್ ಶಾಸಕರ ರಾಜಿನಾಮೆ ಕೊಡಿಸಿದ್ದು ಅಮಿತ್ ಶಾರಲ್ಲವೇ?: ಯಡಿಯೂರಪ್ಪ ಹೀಗೆ ಹೇಳಿದ್ದೇಕೆ ಗೊತ್ತಾ?
ಕೋರ್ಟ್ ನಿರ್ದೇಶನದ ಮೇರೆಗೆ ಮಹಾಲಿಂಗಪುರ ಠಾಣೆಯಲ್ಲಿ ಡಿಸೆಂಬರ್ 31 ರಂದು ಎಫ್‌ಐಆರ್ ದಾಖಲಾಗಿದೆ. ಜಮಖಂಡಿ ಪೊಲೀಸ್ ಉಪವಿಭಾಗದಿಂದ ಚಾಂದಿನಿ ನಾಯಕ್ಗೆ ನೊಟೀಸ್ ನೀಡಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಮಹಜರು ಮಾಡಲು ಸ್ಥಳಕ್ಕೆ ಬಂದ ಸಿಬ್ಬಂದಿಗೆ ಸಹಕರಿಸುವಂತೆ ಕೋರಲಾಗಿದೆ.
ಘಟನೆಯಲ್ಲಿ ತಮ್ಮ ವಿರುದ್ದ ಮಾಡುತ್ತಿರುವ ಆರೋಪವನ್ನು ಸಿದ್ದು ಸವದಿ ತಳ್ಳಿಹಾಕಿದ್ದು, “ನಮ್ಮ ಪಕ್ಷದ ಸದಸ್ಯೆ ಸವಿತಾ ಹುರಕಡ್ಲಿ ಅವರನ್ನು ಕಾಂಗ್ರೆಸ್ನವರು ಅಪಹರಿಸಿದ್ದರು. ನಾನು ಅವರ ರಕ್ಷಣೆ ಮಾಡಲು ಪ್ರಯತ್ನಿಸಿದ್ದೆ. ಕಾಂಗ್ರೆಸ್‌ನವರೇ ಅವರೊಂದಿಗೆ ಅನುಚಿತವಾಗಿ ವರ್ತಿಸಿದ್ದರು” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸದನದ ರಸಿಕ ಸವದಿಗೆ ಸುಗ್ಗಿ: ಮೂವರು ಡಿಸಿಎಂ, ಸಿಎಂಗೆ ಮೂರುನಾಮ!


