ಅಮೆರಿಕಾದಲ್ಲಿ ಟ್ರಂಪ್ ಸೋತು ಅಧಿಕಾರ ಬದಲಾವಣೆಯಾದಂತೆ ಬಿಹಾರದಲ್ಲಿಯೂ ಸಹ ಅದು ಮರುಕಳಿಸಲಿದ್ದು ಬಿಜೆಪಿ ಸೋಲಲಿದೆ ಎಂದು ಶಿವಸೇನೆ ಭವಿಷ್ಯ ನುಡಿದಿದೆ. ತನ್ನ ಮುಖವಾಣಿ ಸಾಮ್ನಾದಲ್ಲಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಶಿವಸೇನೆ, ಕೊರೊನಾ ಸಾಂಕ್ರಾಮಿಕದ ನಡುವೆಯೂ ಕೋಟ್ಯಂತರ ಹಣ ಖರ್ಚು ಮಾಡಿ ‘ನಮಸ್ತೆ ಟ್ರಂಪ್’ ಕಾರ್ಯಕ್ರಮ ಆಯೋಜಿಸಿ ಡೊನಾಲ್ಡ್ ಟ್ರಂಪ್ ಕರೆಸಿದ್ದನ್ನು ತೀವ್ರವಾಗಿ ಟೀಕಿಸಿದೆ.
“ನಮ್ಮನ್ನು ಹೊರತುಪಡಿಸಿ ದೇಶ ಮತ್ತು ರಾಜ್ಯದಲ್ಲಿ ಬೇರೆ ಪರ್ಯಾಯಗಳಿಲ್ಲ ಎಂಬ ಭ್ರಮೆಯನ್ನು ಜನರು ಕೆಲವೊಮ್ಮೆ ತೆಗೆದುಹಾಕಬೇಕಾಗುತ್ತದೆ. ಈ ಬಾರಿ ಬಿಹಾರದಲ್ಲಿ ಎನ್‌ಡಿಎ ಸ್ಪಷ್ಟವಾಗಿ ಸೋಲಲಿದೆ” ಎಂದು ಸಾಮ್ನಾ ಹೇಳಿದೆ.
ಅಮೆರಿಕಾದಲ್ಲಿ ರಾಜಕೀಯಾಧಿಕಾರ ಬದಲಾಗಿದೆ. ಎಷ್ಟು ಬಾರಿ ಟ್ರಂಪ್ ಟ್ರಂಪ್ ಎಂದು ಕೂಗಾಡಿದರು ಅಲ್ಲಿ ಜೋ ಬೈಡನ್ ಗೆದ್ದಿದ್ದಾರೆ. ಅಮೆರಿಕದ ಜನರು ಒಮ್ಮೆ ಮಾಡಿದ ತಪ್ಪನ್ನು ತಿದ್ದಿಕೊಂಡಿದ್ದಾರೆ. ಅದೇ ರೀತಿಯಲ್ಲಿ ನಿತೀಶ್ ಕುಮಾರ್ ನೇತೃತ್ವದ ಎನ್‌ಡಿಎ ಬಿಹಾರದಲ್ಲಿ ಸ್ಪಷ್ಟವಾಗಿ ಸೋಲಲಿದೆ. ನಾವು ಭಾರತದಲ್ಲಿ ನಮಸ್ತೆ ಟ್ರಂಪ್ ಎಂದರೆ ಅಮೆರಿಕನ್ನರು ವಿದಾಯಗಳು ಟ್ರಂಪ್ ಎಂದರು ಎಂದು ಶಿವಸೇನೆ ಹೇಳಿದೆ.
ಕೊರೊನಾ ಸಾಂಕ್ರಾಮಿಕದ ಮಧ್ಯೆ ಡೊನಾಲ್ಡ್ ಟ್ರಂಪ್‌ರನ್ನು ಕರೆಸಿ ನಮಸ್ತೆ ಟ್ರಂಪ್ ಕಾರ್ಯಕ್ರಮ ಮಾಡಿದ್ದನ್ನು, ಅದರಿಂದ ಕೊರೊನಾ ಸೋಂಕು ಹರಡಿದ್ದನ್ನು ಯಾರು ಅಲ್ಲಗೆಲೆಯಲು ಸಾಧ್ಯವಿಲ್ಲ. ಈಗ ಅಮೆರಿಕದ ಜನತೆ ಟ್ರಂಪ್ ಎಂಬ ವೈರಸ್ ಅನ್ನು ಎದೆಂದಿಗೂ ತೊಡೆದುಹಾಕಿದೆ ಎಂದು ಸಾಮ್ನಾದಲ್ಲಿ ಉಲ್ಲೇಖಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ನಿತೀಶ್ ಕುಮಾರ್ ಸೇರಿದಂತೆ ಹಲವು ಎನ್‌ಡಿಎ ನಾಯಕರಿಗೆ ಯುವನಾಯಕ ತೇಜಶ್ವಿ ಯಾದವ್ ಮುಂದೆ ನಿಲ್ಲಲು ಸಾಧ್ಯವಿಲ್ಲ. ಬಿಹಾರದ ಜನರು ಮೋದಿ ಮತ್ತು ನಿತೀಶ್ ಕುಮಾರ್ ಮುಂದೆ ಮಂಡಿಯೂರದೆ, ಚುನಾವಣೆಯನ್ನು ತಮ್ಮ ಕೈಗೆ ತೆಗೆದುಕೊಂಡಿದ್ದಾರೆ ಎಂದು ಶಿವಸೇನೆ ಹೇಳಿದೆ.
ಬಿಹಾರದ ಜಂಗಲ್ ರಾಜ್ ಕುರಿತ ಪ್ರಶ್ನೆಗೆ ಉತ್ತರಿಸಿರುವ ಶಿವಸೇನೆ, ‘ಬಿಹಾರದ ಜನರು ಮೊದಲು ನೀವು ಹೋಗಿ, ಜಂಗಲ್ ರಾಜ್ ಬಂದರೂ ಅದನ್ನು ನಾವು ನಿಭಾಯಿಸುತ್ತೇವೆ’ ಎನ್ನುತ್ತಿದ್ದಾರೆ ಎಂದಿದೆ.
ನಾಳೆ ಮಂಗಳವಾರ ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬೀಳಲಿದ್ದು, ಎಲ್ಲಾ ಚುನಾವಣಾತ್ತೋರ ಸಮೀಕ್ಷೆಗಳು ತೇಜಸ್ವಿ ಯಾದವ್ ನೇತೃತ್ವದ ಮಹಾಘಟಬಂಧನ್ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿವೆ.
ಇದನ್ನೂ ಓದಿ: ಬಿಹಾರ ExitPoll: ಮಹಾಘಟಬಂಧನ್‌ಗೆ ಬಹುಮತ ಸಾಧ್ಯತೆ ಎಂದ ಎಲ್ಲಾ ಸಮೀಕ್ಷೆಗಳು!


