ಉತ್ತರ ಪ್ರದೇಶದ ಬದೌನ್‌ನಲ್ಲಿ ಬಿಜೆಪಿ ಶಾಸಕ ಹರೀಶ್ ಶಾಕ್ಯಾ, ಅವರ ಸಹೋದರ ಸತೇಂದ್ರ ಶಾಕ್ಯಾ ಸೇರಿದಂತೆ 16 ಜನರ ವಿರುದ್ಧ ಸಾಮೂಹಿಕ ಅತ್ಯಾಚಾರ ಹಾಗೂ ಮತ್ತಿತರ ಆರೋಪಗಳ ಮೇಲೆ ಪ್ರಕರಣ ದಾಖಲಾಗಿದೆ.
ನ್ಯಾಯಾಲಯದ ಆದೇಶದ ಮೇರೆಗೆ ಬದೌನ್‌ನ ಸಿವಿಲ್ ಲೈನ್ಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳ ವಿರುದ್ದ ಅತ್ಯಾಚಾರದ ಜೊತೆ ಭೂಕಬಳಿಕೆ ಸೇರಿದಂತೆ ಇತರ ಆರೋಪಗಳೂ ಇವೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಬದೌನ್ ಜಿಲ್ಲೆಯ ಜಾನಿ ಕೊತ್ವಾಲಿ ಪ್ರದೇಶದ ಗ್ರಾಮದ ನಿವಾಸಿಗಳಾದ ಸಂತ್ರಸ್ತೆಯ ಕುಟುಂಬವು ಕೋಟಿ ಮೌಲ್ಯದ ಜಮೀನು ಹೊಂದಿದೆ. ಅದನ್ನು ಕಡಿಮೆ ಬೆಲೆಗೆ ಖರೀದಿಸಲು ಜಿಲ್ಲೆಯ ಬಿಲ್ಸಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಹಾಗೂ ಬಿಜೆಪಿಯ ಮಾಜಿ ಜಿಲ್ಲಾಧ್ಯಕ್ಷರಾದ ಹರೀಶ್ ಶಾಕ್ಯಾ ಮುಂದಾಗಿದ್ದರು. ಸಂತ್ರಸ್ತೆಯ ಕುಟುಂಬ ಕಡಿಮೆ ಬೆಲೆಗೆ ಜಮೀನು ಮಾರಲು ನಿರಾಕರಿಸಿದಾಗ ಬೆದರಿಕೆ ಹಾಕಿ, ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
“ಶಾಸಕ ಮತ್ತು ಅವರ ತಂಡ ನನ್ನ ಪತಿಯ ಮೇಲೆ ಸುಳ್ಳು ಅತ್ಯಾಚಾರ ಪ್ರಕರಣ ದಾಖಲಿಸಿದ್ದರು. ಅವರನ್ನು ಅಪಹರಿಸಿ ಚಿತ್ರಹಿಂಸೆ ನೀಡಿದ್ದರು. ನಂತರ ನಮ್ಮ ನಡುವಿನ ಸಮಸ್ಯೆ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳೋಣ ಎಂದು ಶಾಸಕ ಕಚೇರಿಗೆ ನನ್ನನ್ನು ಕರೆಸಿಕೊಂಡಿದ್ದರು. ಅಲ್ಲಿ ಶಾಸಕ, ಅವರ ಸಹೋದರ ಮತ್ತು ಇತರರು ನನ್ನ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಜಮೀನಿಗೆ ಸಂಬಂಧಿಸಿದ ಮೂರು ಒಪ್ಪಂದಗಳಿಗೆ ಒತ್ತಾಯಪೂರ್ವಕವಾಗಿ ಸಹಿ ಹಾಕಿಸಿದ್ದಾರೆ” ಎಂದು ಸಂತ್ರಸ್ತೆ ಆರೋಪಿಸಿದ್ದಾಗಿ ವರದಿಗಳು ವಿವರಿಸಿದೆ.
ಸಂತ್ರಸ್ತೆ ಶಾಸಕನ ವಿರುದ್ದ ದೂರು ನೀಡಲು ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ತೆರಳಿದ್ದರು. ನ್ಯಾಯಾಲಯವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಪೊಲೀಸರಿಗೆ ಸೂಚಿಸಿದೆ. ಪೊಲೀಸರು ಶಾಸಕ ಮತ್ತು ಇತರ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
“ಆರೋಪಿಗಳು ಜಮೀನು ಮಾರಾಟಕ್ಕೆ ವಿಷಯಕ್ಕೆ ಸಂಬಂಧಿಸಿದಂತೆ ತನ್ನ ಸೋದರ ಸಂಬಂಧಿ ರೋಹಿತ್‌ನನ್ನು ಅಪಹರಿಸಿ, ಥಳಿಸಿದ್ದರು. ಇದಾದ ಬಳಿಕ ಆಸಗ್ಟ್ 2022ರಲ್ಲಿ ರೋಹಿತ್ ಆತ್ಮಹತ್ಯೆ ಮಾಡಿಕೊಂಡರು. ಈ ಬಗ್ಗೆ ನ್ಯಾಯಕೋರಿ ನಾವು ಪೊಲೀಸರ ಬಳಿ ಹೋಗಿದ್ದೆವು. ಆದರೆ, ಪೊಲೀಸರು ನಮ್ಮ ದೂರನ್ನು ಗಂಭೀರವಾಗಿ ಪರಿಗಣಿಸಿಲ್ಲ” ಎಂದು ಸಂತ್ರಸ್ತೆ ತನ್ನ ದೂರಿನಲ್ಲಿ ತಿಳಿಸಿದ್ದಾರೆ.
ಆರೋಪಿಗಳು ನಮ್ಮ ಬೆಳೆಯನ್ನು ನಾಶ ಮಾಡಿದ್ದಾರೆ. ಕಡಿಮೆ ಬೆಲೆಗೆ ಜಮೀನು ಮಾರುವಂತೆ ಒತ್ತಾಯಿಸಿ ಭಾರೀ ಕಿರುಕುಳ ನೀಡುತ್ತಿದ್ದಾರೆ ಎಂದು ಸಂತ್ರಸ್ತೆ ಹೇಳಿದ್ದಾರೆ.
ಶಾಸಕ ಏನಂದ್ರು?
ಶಾಸಕ ಹರೀಶ್ ಶಾಕ್ಯ ಅವರು ತನ್ನ ಮೇಲಿನ ಆರೋಪಗಳನ್ನು ತಳ್ಳಿಹಾಕಿದ್ದು, ಆಧಾರ ರಹಿತ ಎಂದು ಹೇಳಿದ್ದಾರೆ. ಇದು ತನ್ನ ಹೆಸರಿಗೆ ಕಳಂಕ ತರುವ ಸಂಚು. ಪೊಲೀಸ್ ಮತ್ತು ನ್ಯಾಯಾಂಗದ ಮೇಲೆ ನನಗೆ ಸಂಪೂರ್ಣ ನಂಬಿಕೆಯಿದೆ” ಎಂದಿದ್ದಾರೆ.
ನ್ಯಾಯಾಲಯದ ಆದೇಶದ ಬಳಿಕ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಆರೋಪಿಗಳ ಪಾಲಿಗ್ರಾಫ್ ಮತ್ತು ನಾರ್ಕೋ ಪರೀಕ್ಷೆ ಸೇರಿದಂತೆ ಸಮಗ್ರ ತನಿಖೆ ನಡೆಸುವಂತೆ ಸಂತ್ರಸ್ತೆಯ ಕುಟುಂಬ ಆಗ್ರಹಿಸಿದೆ.
ಇದನ್ನೂ ಓದಿ : ಮೃತದೇಹದೊಂದಿಗೆ ಸಂಭೋಗ ಅತ್ಯಾಚಾರವಲ್ಲ: ಛತ್ತೀಸ್‌ಗಢ ಹೈಕೋರ್ಟ್


