“ತನ್ನ ಜಮೀನಿನ ಪಹಣಿಯಲ್ಲಿ ವಕ್ಫ್ ಬೋರ್ಡ್ ಹೆಸರು ನಮೂದು ಆಗಿದ್ದಕ್ಕೆ ಮನನೊಂದು ಹಾವೇರಿಯ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ” ಎಂದು ಸುಳ್ಳು ಸುದ್ದಿ ಪ್ರಕಟಿಸಿದ ಮಾಧ್ಯಮಗಳು ಮತ್ತು ಅದೇ ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿರುದ್ದ ಎಫ್‌ಐಆರ್ ದಾಖಲಾಗಿದೆ.
ಸುಳ್ಳು ಸುದ್ದಿ ಹಂಚಿಕೆ ಸಂಬಂಧ ಸಂಸದ ತೇಜಸ್ವಿ ಸೂರ್ಯ, ಕನ್ನಡ ದುನಿಯಾ ಈ-ಪೇಪರ್ ಮತ್ತು ಕನ್ನಡ ನ್ಯೂಸ್ ಈ-ಪೇಪರ್ ಸುದ್ದಿ ತಾಣಗಳ ಸಂಪಾದಕರ ವಿರುದ್ದ ಹಾವೇರಿಯ ಸೈಬರ್, ಆರ್ಥಿಕ ಹಾಗೂ ಮಾದಕ ದ್ರವ್ಯ ನಿಯಂತ್ರಣ (ಸಿಇಎನ್) ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 353 (2) (ವಿವಿಧ ಗುಂಪುಗಳ ನಡುವೆ ದ್ವೇಷ ಬಿತ್ತುವ ಹಾಗೂ ದ್ವೇಷ ಉಂಟು ಮಾಡಲು ಪ್ರಚೋದಿಸುವ ಸುಳ್ಳು ಸುದ್ದಿ) ಅಡಿ ಪ್ರಕರಣ ದಾಖಲಾಗಿದೆ.
ಕನ್ನಡ ಸುದ್ದಿ ವೆಬ್‌ಸೈಟ್‌ಗಳಾದ ‘ಕನ್ನಡ ನ್ಯೂಸ್ ನೌ, ಕನ್ನಡ ದುನಿಯಾ, ಪಬ್ಲಿಕ್ ಟಿವಿ‘ ಸೇರಿದಂತೆ ಕೆಲ ಮಾಧ್ಯಮಗಳು ‘ಜಮೀನಿನ ಪಹಣಿಯಲ್ಲಿ ‘ವಕ್ಫ್’ ಹೆಸರು ನಮೂದು, ಹಾವೇರಿಯಲ್ಲಿ ಮನನೊಂದು ರೈತ ಆತ್ಮಹತ್ಯೆ’ ಎಂಬ ಶೀರ್ಷಿಕೆಗಳಲ್ಲಿ ಸುಳ್ಳು ಸುದ್ದಿ ಪ್ರಕಟಿಸಿತ್ತು.
‘ತನ್ನ 4 ಎಕರೆ ಜಮೀನಿನ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದು ಆಗಿದ್ದಕ್ಕೆ ಮನನೊಂದು ಹಾವೇರಿ ಜಿಲ್ಲೆಯ ಹರನಗಿ ಗ್ರಾಮದ ರೈತ ರುದ್ರಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಕ್ಫ್ ನೋಟಿಸ್ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಹುಬ್ಬಳ್ಳಿಗೆ ಆಗಮಿಸಿದ ವಕ್ಫ್ ಕಾಯ್ದೆ ತಿದ್ದುಪಡಿ ಮಸೂದೆ ಪರಿಶೀಲನೆಯ ಜಂಟಿ ಸಂಸದೀಯ ಸಮಿತಿ ಅಧ್ಯಕ್ಷ ಜಗದಂಬಿಕಾ ಪಾಲ್ ಅವರಿಗೂ ರೈತರು ಈ ಕುರಿತು ದೂರು ನೀಡಿದ್ದಾರೆ’ ಎಂದು ವರದಿಗಳಲ್ಲಿ ಹೇಳಿತ್ತು.
ಇದೇ ಸುದ್ದಿಯನ್ನು ಸಂಸದ ತೇಜಸ್ವಿ ಸೂರ್ಯ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಎಕ್ಸ್‌ನಲ್ಲಿ ಹಂಚಿಕೊಂಡು, ಬಳಿಕ ಡಿಲಿಟ್ ಮಾಡಿದ್ದರು. ಆದರೆ, ರೈತ ರುದ್ರಪ್ಪ ಐಸಿಐಸಿಐ ಬ್ಯಾಂಕ್ ಹಾವೇರಿ ಶಾಖೆಯಲ್ಲಿ 3 ಲಕ್ಷ ಹಾಗೂ ಖಾಸಗಿಯಾಗಿ 4 ಲಕ್ಷ ರೂಪಾಯಿ ಕೈಸಾಲ ಮಾಡಿಕೊಂಡಿದ್ದು, ಅತೀ ಹೆಚ್ಚು ಮಳೆಯಾಗಿ ಬೆಳೆ ಹಾನಿಯಾಗಿದ್ದರಿಂದ ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಅವರ ಆತ್ಮಹತ್ಯೆಗೂ ವಕ್ಫ್ ವಿಷಯಕ್ಕೂ ಸಂಬಂಧವಿಲ್ಲ ಎಂದು ಹಾವೇರಿ ಪೊಲೀಸರು ಮಾಧ್ಯಮ ಪ್ರಕಟಣೆ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ಸುಳ್ಳು ಸುದ್ದಿ ಹರಡಿದ್ದರ ವಿರುದ್ದ ಸುನಿಲ್ ಹುಚ್ಚಣ್ಣನವರ ಎಂಬವರು ದೂರು ನೀಡಿದ್ದಾರೆ. ದೂರು ಪರಿಗಣಿಸಿದ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಇದನ್ನೂ ಓದಿ : ರೈತನ ಆತ್ಮಹತ್ಯೆಗೆ ವಕ್ಫ್ ಕಥೆ ಕಟ್ಟಿದ ಮಾಧ್ಯಮಗಳು : ಸುಳ್ಳು ಸುದ್ದಿ ಹಂಚಿಕೊಂಡ ಸಂಸದ ತೇಜಸ್ವಿ ಸೂರ್ಯ


