ಇದನ್ನು ಬಿಜೆಪಿ ಬಹುದೊಡ್ಡ ಸಾಧನೆಯೆಂದೇ ಹೇಳಬೇಕು. ಉಪಚುನಾವಣೆಯ 15 ಕ್ಷೇತ್ರಗಳಲ್ಲಿ 13 ಕಡೆ ಅದು ತನ್ನ ಪಾರಮ್ಯ ಮೆರೆದಿದೆ. ಅದರಲ್ಲಿ ವಿಶೇಷವಾದ ಕ್ಷೇತ್ರಗಳೆಂದರೆ ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ಮತ್ತು ಚಿಕ್ಕಬಳ್ಳಾಪುರಗಳಾಗಿವೆ.
ಏಕೆಂದರೆ ಈ ಎರಡೂ ಜಿಲ್ಲೆಗಳಲ್ಲಿ ಇದುವರೆಗೂ ಬಿಜೆಪಿ ಒಂದು ವಿಧಾನಸಭಾವನ್ನು ಗೆಲ್ಲಲ್ಲು ಸಾಧ್ಯವಾಗಿರಲಿಲ್ಲ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರವನ್ನು ಬಿಜೆಪಿ ಗೆದ್ದುಕೊಂಡರೂ, ವಿಧಾನ ಸಭಾ ಕ್ಷೇತ್ರಗಳಲ್ಲಿ ಗೆಲುವು ಮಾತ್ರವಲ್ಲ ಠೇವಣಿ ಸಹ ಪಡೆಯಲಾಗುತ್ತಿರಲಿಲ್ಲ. ಆದರೆ ಈ ಉಪಚುನಾವಣೆ ಆ ಸಾಧ್ಯತೆಯನ್ನು ಬಿಜೆಪಿ ತೆರೆದಿಟ್ಟಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿಯೇ ಇದಕ್ಕೆ ಅಡಿಪಾಯವನ್ನು ಬಿಜೆಪಿ ಹಾಕಿಕೊಂಡಿತ್ತು. ಮಂಡ್ಯದಲ್ಲಿ ಬಿಜೆಪಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್‌ರಿಗೆ ಬೆಂಬಲಿ ನೀಡುವ ಮೂಲಕ ತನ್ನ ಬೇಸ್ ಗಟ್ಟಿಗೊಳಿಸಲು ಮುಂದಾಗಿತ್ತು.
ಅಷ್ಟು ಮಾತ್ರವಲ್ಲದೇ ಇದು ಮುಖ್ಯಮಂತ್ರಿ ಯಡಿಯೂರಪ್ಪನವರ ಸ್ವಗ್ರಾಮ ಇರುವ ಕ್ಷೇತ್ರವಾಗಿದೆ. ಹಾಗಾಗಿ ಅವರು ಇದನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಲ್ಲದೇ ತುಂಬಾ ಭಾವನಾತ್ಮಕವಾಗಿ ಮಾತನಾಡಿ ನನ್ನ ಕ್ಷೇತ್ರದಲ್ಲಿ ನಾನು ಒಂದನ್ನು ಗೆಲ್ಲಲ್ಲು ಸಾಧ್ಯವಾಗಿಲ್ಲ ಎಂದು ಮಾತನ್ನಾಡಿದ್ದರು.
ಕೇವಲ ಮಾತು ಅಷ್ಟು ಮಾತ್ರವಲ್ಲದೇ ಒಕ್ಕಲಿಗ ಮತ ಪ್ರಾಬಲ್ಯವಿರುವ ಇಲ್ಲಿ ಯಡಿಯೂರಪ್ಪ ತನ್ನ ಮಗ ಬಿ.ವೈ ವಿಜಯೇಂದ್ರನ ಜೊತೆಗೆ ಒಕ್ಕಲಿಗರಾದ ಆರ್ ಅಶೋಕ್, ಡಿಸಿಎಂ ಅಶ್ವಥ್ ನಾರಾಯಣ್‌ಗೌಡ ಮತ್ತು ಶಾಸಕ ಪ್ರೀತಂ ಗೌಡ ಕ್ಷೇತ್ರದಲ್ಲುಳಿದು ಪ್ರಚಾರ ನಡೆಸಿದ್ದರು.
ಸುಮಲತಾ ಅಂಬರೀಶ್ ಬೆಂಬಲಿಗರು ಕೂಡ ಬಿಜೆಪಿಗೆ ಬೆಂಬಲ ನೀಡಿದ್ದರು ಎನ್ನಲಾಗುತ್ತಿತ್ತು. ಜೊತೆಗೆ ಇಲ್ಲಿ ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ತ್ರಿಕೋನ ಪೈಪೋಟಿ ಇತ್ತು. ಹಾಗಾಗಿ ಇಲ್ಲಿ ಮೂರು ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಬಿಜೆಪಿ ಗೆಲುವು ತನ್ನದಾಗಿಸಿಕೊಂಡಿದೆ.
ಇನ್ನು ಚಿಕ್ಕಬಳ್ಳಾಪುರದಲ್ಲಿ ಬಚ್ಚೇಗೌಡರನ್ನು ಎಂಪಿಯಾಗಿ ಗೆಲ್ಲಿಸಿದ್ದ ಬಿಜೆಪಿ ಈಗ ಮೊದಲ ಶಾಸಕರನ್ನು ಸಹ ಗೆಲ್ಲಿಸಿಕೊಂಡಿದೆ.
ಡಾ.ಕೆ ಸುಧಾಕರ್ ಕಾಂಗ್ರೆಸ್‌ನಿಂದ ಹಾರಿಬಂದು ಬಿಜೆಪಿ ಸೇರಿದ್ದರು. ಅದೇ ಸಂದರ್ಭದಲ್ಲಿ ಕನಕಪುರಕ್ಕೆ ನಿಯೋಜನೆಗೊಂಡಿದ್ದ ಮೆಡಿಕಲ್ ಕಾಲೇಜನ್ನು ಚಿಕ್ಕಬಳ್ಳಾಪುರಕ್ಕೆ ತಿರುಗಿಸಿದ್ದು, ಜಿಲ್ಲೆಯಲ್ಲಿ ಹೊಸ ತಾಲ್ಲೂಕುಗಳ ಘೋಷಣೆಗಳ ಭರ್ಜರಿ ಭರವಸೆಯನ್ನು ನೀಡಲಾಗಿತ್ತು. ಅವುಗಳ ಹಿನ್ನೆಲೆಯಲ್ಲಿ ಬಿಜೆಪಿ ಸರಾಗವಾಗಿ ಗೆಲುವು ಸಾಧಿಸಿದೆ.
ಒಟ್ಟಿನಲ್ಲಿ ಬಿಜೆಪಿ ತನ್ನ ಪ್ರಾಬಲ್ಯವನ್ನು ಮತ್ತಷ್ಟು ಹೆಚ್ಚಿಸಿಕೊಂಡಿರುವುದನ್ನು ಈ ಉಪಚುನಾವಣೆ ತೋರಿಸಿಕೊಟ್ಟಿದೆ.


