ಬಿಜೆಪಿ ಪಕ್ಷವನ್ನು ಭಾರತದ ನೆರೆಯ ರಾಷ್ಟ್ರಗಳಾದ ನೇಪಾಳ ಮತ್ತು ಶ್ರೀಲಂಕಾದಲ್ಲಿಯೂ ಸಂಘಟಿಸುವ ಯೋಜನೆಯಿದೆ ಎಂದು ತ್ರಿಪುರಾದ ಬಿಜೆಪಿ ಮುಖ್ಯಮಂತ್ರಿ ಬಿಪ್ಲವ್ ಕುಮಾರ್ ದೇವ್ ಹೇಳಿದ್ದಾರೆ.
ಅಗರ್ತಲಾದಲ್ಲಿ ನಡೆದ ಬಿಜೆಪಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಪಕ್ಷವನ್ನು ದೇಶಾದ್ಯಂತ ಮಾತ್ರವಲ್ಲದೆ, ನೆರೆಯ ರಾಷ್ಟ್ರಗಳಲ್ಲೂ ವಿಸ್ತರಿಸುವ ಯೋಜನೆ ಇದೆ. ಗೃಹ ಸಚಿವ ಅಮಿತ್ ಶಾ ಅವರು ನೇಪಾಳ ಮತ್ತು ಶ್ರೀಲಂಕಾದಲ್ಲಿ ಬಿಜೆಪಿ ಸರ್ಕಾರ ಸ್ಥಾಪಿಸುವ ಯೋಜನೆ ಹೊಂದಿದ್ದಾರೆ ಎಂದು ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ.
ಇದನ್ನೂ ಓದಿ: ದೇಶ ಭಕ್ತರು ಯಾರು? ದೇಶ ದ್ರೋಹಿಗಳು ಯಾರು? – ನಟ ಚೇತನ್ ಹೇಳುತ್ತಾರೆ ಕೇಳಿ
“2018ರಲ್ಲಿ ತ್ರಿಪುರಾ ವಿಧಾನಸಭೆ ಚುನಾವಣೆಗೆ ಸಿದ್ಧತೆ ನಡೆಸುತ್ತಿದ್ದ ಸಂದರ್ಭದಲ್ಲಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಅಮಿತ್ ಶಾ ಅವರು, ಭಾರತದ ಎಲ್ಲಾ ರಾಜ್ಯಗಳಲ್ಲಿ ಬಿಜೆಪಿ ಗೆದ್ದು ಬಂದ ಬಳಿಕ ವಿದೇಶಗಳಲ್ಲೂ ಪಕ್ಷವನ್ನು ವಿಸ್ತರಿಸುವ ಬಗ್ಗೆ ನಮ್ಮೊಂದಿಗೆ ಮಾತನಾಡಿದ್ದರು” ಎಂದು ಬಿಪ್ಲವ್ ದೇವ್ ಹೇಳಿದ್ದಾರೆ.
ಜಾಗತಿಕ ಪಕ್ಷ ಎಂದು ಹೇಳಿಕೊಳ್ಳುವ ಕಮ್ಯುನಿಸ್ಟರ ದಾಖಲೆಗಳನ್ನು ಮುರಿಯುವುದರ ಮೂಲಕ ಬಿಜೆಪಿಯು ವಿಶ್ವದ ಅತಿದೊಡ್ಡ ಪಕ್ಷವಾಗಿದೆ ಎಂದು ಹೇಳಿದ ಬಿಪ್ಲವ್ ದೇವ್, ಅಮಿತ್ ಶಾ ಅವರ ಕಾರ್ಯವೈಖರಿಯನ್ನು ಶ್ಲಾಘಿಸಿದ್ದಾರೆ ಎಂದು ದಿ ಪ್ರಿಂಟ್ ವರದಿ ಮಾಡಿದೆ.
ಮುಂಬರುವ ಕೇರಳ, ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನ ವಿಧಾನಸಭಾ ಚುನಾವಣೆಯಲ್ಲಿಯೂ ಕಮಲ ಅರಳುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ರೈತರ ಮೊಮ್ಮಗಳನ್ನು ಬಂಧಿಸಿದರೆ ಹೋರಾಟ ದುರ್ಬಲಗೊಳ್ಳುವುದಿಲ್ಲ: ದಿಶಾ ರವಿಗೆ ಜಾಗತಿಕ ಬೆಂಬಲ
ನೇಪಾಳ ಮತ್ತು ಶ್ರೀಲಂಕಾದಲ್ಲಿಯೂ ಬಿಜೆಪಿಯನ್ನು ಸಂಘಟಿಸಬೇಕು ಎನ್ನುವ ಹೇಳಿಕೆಯ ವಿರುದ್ಧ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, “ಮುಖ್ಯಮಂತ್ರಿಗೆ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಬಗ್ಗೆ ಯಾವುದೇ ತಿಳುವಳಿಕೆ ಇಲ್ಲ” ಎಂದು ಸಿಪಿಐ(ಎಂ) ಮುಖಂಡ ಮತ್ತು ಮಾಜಿ ಸಂಸದ ಜಿತೇಂದ್ರ ಚೌಧರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತ್ರಿಪುರಾ ಕಾಂಗ್ರೆಸ್ ಘಟಕದ ಉಪಾಧ್ಯಕ್ಷ ತಪಸ್ ಡೇ, “ಅಮಿತ್ ಷಾ ಅವರ ಹೇಳಿಕೆಗಳು ಸಾಮ್ರಾಜ್ಯಶಾಹಿಯಾಗಿದೆ. ಇದರ ವಿರುದ್ಧ ಭಾರತವು ಹಲವು ವರ್ಷಗಳಿಂದ ಹೋರಾಡಿಕೊಂಡು ಬಂದಿದೆ. ನೇಪಾಳ ಮತ್ತು ಶ್ರೀಲಂಕಾದ ಸಾರ್ವಭೌಮ ವ್ಯವಹಾರಗಳಲ್ಲಿ ಭಾರತ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ’ದೆಹಲಿ ಗಡಿಗಳಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯಾಟವನ್ನೂ ಸೆರೆಹಿಡಿಯಿರಿ’-ಮೋದಿಗೆ ನೆಟ್ಟಿಗರ ತರಾಟೆ


