ಅಡಿಕೆ ಆರೋಗ್ಯಕ್ಕೆ ಹಾನಿಕಾರಕವಾ? ಕ್ಯಾನ್ಸರ್‍ಕಾರಕವಾ? ಕೇಂದ್ರ ಬಿಜೆಪಿ ಸರ್ಕಾರದ ಆರೋಗ್ಯ ಇಲಾಖೆಯ ಸಹಾಯಕ ಮಂತ್ರಿ ಅಶ್ವಿನಿಕುಮಾರ್ ಚೌಬೆ ಲೋಕಸಭೆಯಲ್ಲೇ ಇಂತದ್ದೊಂದು ಹೇಳಿಕೆ ನೀಡಿ ಅಡಿಕೆ ಬೆಳೆಗಾರರ ಮೇಲೆಯೇ ದಾಳಿ ಮಾಡಿದೆ. ಅಡಿಕೆಯ ಮಾನಾಪಮಾನ ಸುದ್ದಿಯಾಗುತ್ತಿದ್ದಂತೆಯೇ ಅಮಾಯಕ ಅಡಿಕೆ ಬೆಳೆಗಾರರು ಬೆಚ್ಚಿಬಿದ್ದಿದ್ದಾರೆ.
ಇದೇ ತಿಂಗಳ 12ರಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಅಡಿಕೆ ಕಾರ್ಸಿನೋಜೆನಿಕ್ (ಕ್ಯಾನ್ಸರ್‍ಕಾರಕ) ಎಂದು ಲೋಕಸಭೆಯಲ್ಲಿ ತಿಳಿಸಿದೆ! ಈ ಸಂಗತಿ ತಿಳಿಯುತ್ತಿದ್ದಂತೆಯೇ ಅಡಿಕೆ ಬೆಳೆಗಾರರು ಕಂಗಾಲಾಗಿದ್ದಾರೆ. ಕೇಂದ್ರ ಬಜೆಟ್ ನಂತರ ಅಡಿಕೆ ಧಾರಣೆ ಏರಿಕೆಯಾಗಿ ಮಾರುಕಟ್ಟೆ ಸ್ಥಿರತೆಯತ್ತ ಸಾಗಬಹುದೆಂದು ನಿರೀಕ್ಷಿಸಿದ್ದ ರೈತರು ಅಸ್ಥಿರತೆ ಭಯದಿಂದ ಹೌಹಾರಿದ್ದಾರೆ. ತಾನೆಂಥ ದ್ರೋಹಿಗಳನ್ನು ಸಂಸದರಾಗಿ ಮತ್ತೆ-ಮತ್ತೆ ಗೆಲ್ಲಿಸಿ ಕಳಿಸುತ್ತಿದ್ದೇವೆಂದು ಹಣೆಹಣೆ ಚಚ್ಚಿಕೊಳ್ಳುತ್ತಿದ್ದಾರೆ!!
ಗುಜರಾತ್ (ಗುಟ್ಕಾ ಮಾಫಿಯಾ ಇರುವುದೇ ಇಲ್ಲಿ)ನ ಖೇಡಾ ಕ್ಷೇತ್ರದ ಸಂಸದ ದೇವುಸಿಂಗ್ ಚೌಹಾಣ್-ಅಡಿಕೆ ಸೇವನೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆಂಬ ವರದಿಗಳು ಇರುವುದು ನಿಜವಾ? ಎಂಬ ಪ್ರಶ್ನೆ ಆರೋಗ್ಯ ಮಂತ್ರಿಗೆ ಕೇಳಿದ್ದರು. ಈ ಪ್ರಶ್ನೆಗೆ ಪಾರ್ಲಿಮೆಂಟ್‍ನಲ್ಲಿ ಉತ್ತರಿಸಿರುವ ಆರೋಗ್ಯ ಇಲಾಖೆಯ ಸಹಾಯಕ ಮಂತ್ರಿ ಅಶ್ವಿನಿಕುಮಾರ್ ಚೌಬೆ-ಅಡಿಕೆ ದೇಹದ ವಿವಿಧ ಅಂಗಗಳ ಮೇಲೆ ದುಷ್ಪರಿಣಾಮ ಬೀರುತ್ತದೆ. ಬಾಯಿ, ಅನ್ನನಾಳ, ಗಂಟಲು ಮತ್ತಿತರ ಅಂಗಗಳಿಗೆ ಕ್ಯಾನ್ಸರ್ ತಗಲುವಂತೆ ಅಡಿಕೆ ಮಾಡುತ್ತದೆಂದು ಕೆಲವು ಅಧ್ಯಯನದಿಂದ ತಿಳಿದುಬಂದಿದೆಯೆಂದು ಹೇಳಿದ್ದಾರೆ. ಮಂತ್ರಿಗಳ ಈ ಮಾತಿಂದ ಅಡಿಕೆ ಮಾರುಕಟ್ಟೆಯಲ್ಲಿ ಸಣ್ಣ ತಲ್ಲಣ ಶುರುವಾಗಿದೆ.
ಕರ್ನಾಟಕದಲ್ಲಿ ಪ್ರತಿ ವರ್ಷ ನಾಲ್ಕು ಲಕ್ಷ ಟನ್ ಅಡಿಕೆ ಬೆಳೆಯಲಾಗುತ್ತಿದೆ. ಇದು ದೇಶದಲ್ಲಿ ಉತ್ಪಾದನೆಯಾಗುವ ಒಟ್ಟೂ ಅಡಿಕೆಯಲ್ಲಿ ಶೇಕಡಾ ಅರ್ಧದಷ್ಟು! ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ ಜಿಲ್ಲೆಯಲ್ಲಿ ಅಡಿಕೆ ಜೀವನಾಧಾರ ವಾಣಿಜ್ಯ ಬೆಳೆ. ಮಲೆನಾಡಿನ ತೋಟಿಗರು ಬದುಕು ಕಟ್ಟಿಕೊಂಡಿರುವುದೇ ಅಡಿಕೆ ವಹಿವಾಟಿನ ಮೇಲೆ. ಹೀಗಾಗಿ ತೋಟಿಗರು ಕೇಂದ್ರ ಸರ್ಕಾರದ ನಡೆಯಿಂದ ಸಹಜವಾಗಿಯೇ ಆತಂಕಗೊಂಡಿದ್ದಾರೆ. ಅಡಿಕೆ ಬಗ್ಗೆ ಹಲವು ಸಲ ವಿವಾದ ಎದ್ದಿದೆ. ಹಾಗಂತ ಆಗೆಲ್ಲ ಅಡಿಕೆ ಧಾರಣೆ ಮೇಲೆ ಕೆಟ್ಟ ಪರಿಣಾಮವಾಗಿ ಮಾರುಕಟ್ಟೆಯೇನೂ ಕುಸಿದಿಲ್ಲ. ಆದರೆ ದಲ್ಲಾಳಿಗಳು-ಮಧ್ಯವರ್ತಿಗಳು ಈ ಗೊಂದಲದ ಲಾಭ ಎತ್ತಿದ್ದಾರೆ. ಇದರಲ್ಲಿ ರಾಜಕಾರಣಿಗಳೂ ಹಿಂದೆ ಬಿದ್ದವರಲ್ಲ!
ಅಡಿಕೆ ತೋಟಿಗರಲ್ಲಿ ಅಲ್ಲೋಲಕಲ್ಲೋಲ ಮಾಡಿದ್ದು 2011ರಲ್ಲಿ. ಆಗ ಕೇಂದ್ರದಲ್ಲಿ ಯುಪಿಎ-2 ಅಧಿಕಾರದಲ್ಲಿತ್ತು. ಆರೋಗ್ಯಕ್ಕೆ ಹಾನಿಕರವಾದ ಅಂಶಗಳು ಅಡಿಕೆಯಲ್ಲಿದೆಯೆಂದು ಅಂದು ಕೇಂದ್ರ ಸರ್ಕಾರ ಸುಪ್ರೀಮ್ ಕೋರ್ಟ್‍ಗೆ ಅಫಿಡವಿಟ್ ಸಲ್ಲಿಸಿತ್ತು. ಇದನ್ನು ಬಿಜೆಪಿಗರು ರಾಜಕೀಯಕ್ಕೆ ಬಳಸಿಕೊಂಡು ಕಾಂಗ್ರೆಸ್ ಅಡಿಕೆ ಬೆಳಗಾರರ ಶತ್ರುವೆಂದು ಬಿಂಬಿಸಿತು. ಅಡಿಕೆ ನಿಷೇಧಕ್ಕೆ ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂದು ಪುಕಾರು ಹಬ್ಬಿಸಿ ವ್ಯವಸ್ಥಿತವಾಗಿ ಅಡಿಕೆ ಬೆಳೆಗಾರರು ಕಾಂಗ್ರೆಸ್ ವಿರುದ್ದ ತಿರುಗಿಬೀಳುವಂತೆ ಮಾಡಲಾಯಿತು.
ಅಡಿಕೆ ನಿಷೇಧಿಸುವ ಯೋಚನೆಯಿಲ್ಲ ಎಂದು ಯುಪಿಎ ಸರ್ಕಾರ ಸ್ಪಷ್ಟಪಡಿಸಿತಾದರು ಬಿಜೆಪಿ ಅಪಪ್ರಚಾರದ ಮುಂದೆ ಅದು ಬೆಳೆಗಾರರನ್ನು ಇಂಪ್ರೆಸ್ ಮಾಡಲೇ ಇಲ್ಲ. ಅತ್ತ ಕಾಂಗ್ರೆಸ್ ಆಡಳಿತಗಾರರಿಂದ ರೈತರ ಮನಸ್ಸು ಗೆಲ್ಲುವ ಕೆಲಸವೂ ಆಗಲಿಲ್ಲ. ಅಂದರೆ ಸುಪ್ರೀಂ ಕೋರ್ಟ್‍ಗೆ- “ಅಡಿಕೆ ಆರೋಗ್ಯಕ್ಕೆ ಹಾನಿಕರ” ಎಂದು ಸರ್ಕಾರ ಸಲ್ಲಿಸಿದ್ದ ಅಫಿಡವಿಟ್ ಹಿಂಪಡೆವ ಪ್ರಕ್ರಿಯೆ ಶುರುವಾಗಲೇ ಇಲ್ಲ. ಇದು ಬಿಜೆಪಿಗೆ 2014ರ ಪಾರ್ಲಿಮೆಂಟ್ ಇಲೆಕ್ಷನ್‍ನಲ್ಲಿ ವರವಾಗಿ ಪರಿಣಮಿಸಿತು, ಅಡಿಕೆ ಕೃಷಿ ಪ್ರದೇಶದಲ್ಲಿ!!
ಉತ್ತರ ಕನ್ನಡದ ಅನಂತ್ ಕುಮಾರ್ ಹೆಗಡೆ, ಶಿವಮೊಗ್ಗೆಯ ರಾಘು, ಉಡುಪಿ-ಚಿಕ್ಕಮಗಳೂರಿನ ಬೇಬಿಯಕ್ಕ ಯಾನೆ ಶೋಭಾ ಕರಂದ್ಲಾಜೆ, ದಾವಣಗೆರೆಯ ಸಿದ್ದೇಶ್ವರ್, ಮಂಗಳೂರಿನ ನಳಿನ್ ಕಟೀಲು ಅಡಿಕೆ ಬೆಳೆಗಾರರ ಬಚಾಯಿಸುವ ಭರವಸೆ ಕೊಟ್ಟೇ ಗೆದ್ದು ಸಂಸದರಾದರು.
ಗೆಲ್ಲುತ್ತಿದ್ದಂತೆಯೇ ಈ ಪಂಚ ಪ್ರಚಂಡರಿಗೆ ಅಡಿಕೆ ಬೆಳೆಗಾರರು ಮರೆತೇ ಹೋದದ್ದು ದುರಂತ! ತಮ್ಮದೇ ಎನ್‍ಡಿಎ ಸರ್ಕಾರ ಅಧಿಕಾರದಲ್ಲಿದ್ದರು ಅಡಿಕೆ ಮಾರಕ ಎಂದು ಸುಪ್ರೀಮ್‍ಗೆ ಸಲ್ಲಿಕೆಯಾಗಿದ್ದ ಅಫಿಡವಿಟ್ ವಾಪಸ್ ಪಡೆಯುವ ಪ್ರಯತ್ನವನ್ನೇ ಇವರ್ಯಾರು ಮಾಡಲಿಲ್ಲ. ಸಂಸತ್‍ನಲ್ಲಿ ಅಡಿಕೆ ಬೆಳೆ ಏರಿಯಾದ ಯಾವ ಸಂಸದನೂ ತೋಟಗಾರಿಕೆ ಬಗ್ಗೆ ಉಸಿರೆತ್ತಲಿಲ್ಲ. ಕಾನೂನಿಗೆ ತಿದ್ದುಪಡಿ ತಂದು ಅಡಿಕೆಯನ್ನು ತಂಬಾಕು ಪಟ್ಟಿಯಿಂದ ಹೊರತರುವ ಹೊಣೆ ತಮ್ಮದೆಂದು ಆಶ್ವಾಸನೆ ಕೊಟ್ಟು ಗೆದ್ದಿದ್ದ ಕೃತಜ್ಞೆಯೂ ಇವರಿಗಿಲ್ಲವಾಯಿತು. ಅಡಿಕೆ ಬೆಳೆಗಾರರ ಯಾಮಾರಿಸಿ ಸಂಸದರಾಗಿದ್ದವರ ಉದಾಸೀನದ ಒಟ್ಟೂ ಪರಿಣಾಮವೆಂಬಂತೆ 2017ರ ಡಿಸೆಂಬರ್‍ನಲ್ಲಿ ಅಂದಿನ ಆರೋಗ್ಯಮಂತ್ರಿಣಿ ಅನುಪ್ರಿಯಾ ಪಟೇಲ್ ಅಡಿಕೆಯು ಬಾಯಿಕ್ಯಾನ್ಸರ್ ತರುತ್ತದೆಂದು ಲೋಕಸಭೆಯಲ್ಲೇ ಯಾವ ಮುಲಾಜಿಲ್ಲದೆ ಹೇಳಿಬಿಟ್ಟರು.
ಆಗಲೂ ಅನಂತ್ಮಾಣಿ, ಶೋಭಕ್ಕ, ಕಟೀಲು, ಬಸ್‍ಸ್ಟ್ಯಾಂಡ್ ರಾಘು, ಸುಫಾರಿ ಸರದಾರ ಸಿದ್ದೇಶ್ವರ್ ತಲೆ ಕೆಡಿಸಿಕೊಳ್ಳಲೇ ಇಲ್ಲ. 2019ರ ಚುನಾವಣೆ ವೇಳೆಗೆ ಧರ್ಮ ಮತು ಪಾಕಿಸ್ತಾನ್ ದುಷ್ಮನಿಯನ್ನು ಮುಂದೆ ಮಾಡಿದ್ದರಿಂದ ಯಾಮಾರಿದ ಜನ ಈ ಪಂಚರನ್ನೇ ಮತ್ತೆ ಸಂಸತ್ತಿಗೆ ಕಳಿಸಿದ್ದಾರೆ. ಈ ಬಾರಿಯಾದರೂ ತಮ್ಮ ನೋವಿಗೆ ಸ್ಪಂದಿಸಬಹುದೆಂದು ಭಾವಿಸಿದ್ದ ತೋಟಿಗರಿಗೆ ಮತ್ತದೇ ಆಘಾತ ಆಗಿದೆ!!
ಲೋಕಸಭೆಯಲ್ಲಿ ಕೇಂದ್ರ ಸರ್ಕಾರ ಆ ಮಾತು ಹೇಳುತ್ತಿದ್ದಂತೆಯೇ ಅಡಿಕೆ ಬೆಳೆ ಪ್ರದೇಶದ ಮಂದಿ ತಮ್ಮ ಸಂಸದರಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಗಡಿಬಿಡಿಗೆ ಬಿದ್ದಿರುವ ಶೋಭಕ್ಕ, ಕಟೀಲು, ಸಿದ್ದೇಶ್ವರ ತಂಡ ಕೇಂದ್ರ ಆರೋಗ್ಯ ಮಂತ್ರಿ ಹರ್ಷವರ್ಧನ್ ಭೇಟಿ ಮಾಡಿದ ಫೋಟೋ ಹೊರಹಾಕಿ ಮುಖ ಉಳಿಸಿಕೊಳ್ಳಲು ತಿಪ್ಪರಲಾಗ ಹಾಕುತ್ತಿದೆ.
ಸುಪ್ರೀಮ್ ಕೋರ್ಟ್‍ಗೆ ಅಡಿಕೆ ಆರೋಗ್ಯಕ್ಕೆ ಹಾನಿಕಾರಕ ಎಂದು ಸಲ್ಲಿಸಲಾಗಿರುವ ಅಫಿಡವಿಟ್ ಹಿಂಪಡೆಯುವ ಭರವಸೆ ಆರೋಗ್ಯ ಮಂತ್ರಿಗಳು ಕೊಟ್ಟಿದ್ದಾರೆಂದು ನಳಿನ್-ಶೋಭಾ ಗ್ಯಾಂಗು ಹೇಳುತ್ತಿದೆ. ಸ್ವತಃ ವೈದ್ಯರಾಗಿರುವ ಹರ್ಷವರ್ಧನ್ ಅಷ್ಟು ಸುಲಭಕ್ಕೆ ನಳಿನ್-ಶೋಭಾ ವಗೈರೆಗಳ ಮಾತಿಗೆ ಸೊಪ್ಪು ಹಾಕುವ ಪೈಕಿ ಅಲ್ಲ. ಎನ್‍ಡಿಎ-1 ಸರ್ಕಾರದಲ್ಲಿ ಆರೋಗ್ಯ ಮಂತ್ರಿಯಾಗಿದ್ದಾಗ ಸಿಗರೇಟು ಲಾಬಿ ಎದುರು ಹಾಕಿಕೊಂಡಿದ್ದಕ್ಕೆ ಹರ್ಷವರ್ಧನ್ ಆ ಖಾತೆಯೇ ಬಿಡಬೇಕಾಗಿ ಬಂದಿತ್ತು. ಮನವಿಕೊಟ್ಟು ಕೈತೊಳೆದುಕೊಂಡಿರುವ ನಳಿನ್-ಶೋಭಾ ಗ್ಯಾಂಗು ಅಡಿಕೆ ಬೆಳೆಗಾರರಿಗೆ ನೆಮ್ಮದಿ ಸಿಗುವ ತನಕ ಹೋರಾಡುತ್ತಾರೆಂಬ ನಂಬಿಕೆ ಯಾರಿಗೂ ಇಲ್ಲ. ವಿಜಯಾ ಬ್ಯಾಂಕ್‍ನ್ನು ಸುಖಾಸುಮ್ಮನೆ ಗುಜರಾತಿ ಮಾರ್ವಾಡಿಗಳ ಬ್ಯಾಂಕ್ ಆಫ್ ಬರೋಡಾದಲ್ಲಿ ವಿಲೀನ ಮಾಡುವುದು ತಡೆಯಲಾಗದ ನಳಿನ್‍ನಷ್ಟೇ “ಕೆಚ್ಚು” ಇರುವ ಶೋಭಾ, ಮಾಣಿ, ರಾಘು, ಸಿದ್ದೇಶ್ವರ್‍ಗಳಿಗೆ ಗುಟ್ಕಾ ಮಾಫಿಯಾಕ್ಕೆ ತಿರುಗಿನಿಲ್ಲುವ ತಾಕತ್ತು ಅದೆಲ್ಲಿಂದ ಬಂದೀತು? ಹಾಗಂತ ಅಡಿಕೆ ವಲಯ ಮಾತಾಡಿಕೊಳ್ಳುತ್ತಿದೆ!!


