ಆಂಗ್ಲ ವೆಬ್ ನ್ಯೂಸ್ ತಾಣ ದಿ ನ್ಯೂಸ್ ಮಿನಿಟ್ (ಟಿಎನ್‍ಎಂ) ಮಾಡಿರುವ ವರದಿಯ ಪ್ರಕಾರ ಚುನಾವಣೆಯ ನಂತರ ಯಡಿಯೂರಪ್ಪನವರು ಬಿಜೆಪಿಯ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲಿದ್ದಾರೆ. ಸಮ್ಮಿಶ್ರ ಸರ್ಕಾರವನ್ನು ಬೀಳಿಸಲು ಹಲವು ವಿಫಲ ಪ್ರಯತ್ನಗಳನ್ನು ನಡೆಸಿದ ಬಿ.ಎಸ್.ಯಡಿಯೂರಪ್ಪನವರ ಬಗ್ಗೆ ಹೈಕಮ್ಯಾಂಡ್ ಅಸಮಾಧಾನ ಹೊಂದಿದೆ ಎಂದು ಹೇಳಲಾಗುತ್ತಿದೆ.
ಒಂದು ವಾರದ ಕೆಳಗೆ ಪತ್ರಕರ್ತರೊಂದಿಗೆ ಮಾತನಾಡುತ್ತಾ ‘ಅಧ್ಯಕ್ಷತೆ ಹೋದರೂ ವಿರೋಧ ಪಕ್ಷದ ನಾಯಕನಾಗಿ ಇದ್ದೇ ಇರುತ್ತೇನೆ. ಪಕ್ಷದ ವರಿಷ್ಠರು ಹೇಳಿದರೆ, ಅಧ್ಯಕ್ಷ ಪದವಿ ಬಿಟ್ಟುಕೊಡುತ್ತೇನೆ’ ಎಂದು ಯಡ್ಡಿ ಹೇಳಿದ್ದರು! ಇದರ ಬೆನ್ನಲ್ಲೇ ಮಾಜಿ ಸಚಿವ ಆರ್.ಅಶೋಕ್ ಅವರಿಂದಲೂ ಒಂದು ಹೇಳಿಕೆ ಹೊರಬಿದ್ದಿತು. ತಾನು ರಾಜ್ಯ ನಾಯಕ, ತನ್ನನ್ನು ಕೇವಲ ಬೆಂಗಳೂರಿಗೆ ಸೀಮಿತಗೊಳಿಸಲಾಗಿದೆ ಎಂಬುದು ಅವರ ಮಾತಿನ ತಾತ್ಪರ್ಯವಾಗಿತ್ತು. ಆ ಮೂಲಕ ತಾನು ರಾಜ್ಯಾಧ್ಯಕ್ಷ ಹುದ್ದೆಯ ರೇಸ್‍ನಲ್ಲಿ ಇದ್ದೇನೆ ಎಂದು ಅವರು ಸೂಚಿಸಿದಂತೆ ಇದೆ.
ಆದರೆ ಪಕ್ಷದಲ್ಲಿ ದಿನೇ ದಿನೇ ಹಿಡಿತ ಹೆಚ್ಚಿಸಿಕೊಳ್ಳುತ್ತಿರುವ ಆರೆಸ್ಸೆಸ್‍ನ ಬಿ.ಎಲ್.ಸಂತೋಷ್, ಈ ಸ್ಥಾನಕ್ಕೆ ಸಿ.ಟಿ.ರವಿಯನ್ನು ತರಲು ಉದ್ದೇಶಿಸಿದ್ದಾರೆಂದು ಹೇಳಲಾಗಿದೆ. ಚುನಾವಣೋತ್ತರ ಸಂದರ್ಭವನ್ನು ನೋಡಿಕೊಂಡು ನಳಿನ್ ಕುಮಾರ್ ಕಟೀಲ್ ಅಥವಾ ಸುನಿಲ್ ಕುಮಾರ್‍ರೂ ಆಗಬಹುದು ಎಂಬ ಆಲೋಚನೆ ಅವರದ್ದೆಂದು ಹೇಳಲಾಗುತ್ತಿದೆ.
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರೂ ರಾಜ್ಯಾಧ್ಯಕ್ಷರಾಗುವ ಇರಾದೆಯನ್ನು ಹೊಂದಿದ್ದಾರೆ. ಯಡಿಯೂರಪ್ಪನವರನ್ನು ತೆಗೆದು ಬೇರೆಯವರಿಗೆ ಕೊಟ್ಟರೆ, ಲಿಂಗಾಯಿತ ಸಮಾಜಕ್ಕೆ ತಪ್ಪು ಸಂದೇಶ ಹೋಗುತ್ತದೆ ಎಂಬುದು ಅದರ ಹಿಂದಿನ ತರ್ಕ. ಆದರೆ ತಾವು ಸ್ಥಾನದಿಂದ ಇಳಿಯಬೇಕಾಗಿ ಬಂದರೆ, ಯಡಿಯೂರಪ್ಪನವರು ಉಮೇಶ್ ಕತ್ತಿಯವರ ಸೋದರ ರಮೇಶ್ ಕತ್ತಿಯವರ ಹೆಸರನ್ನು ಸೂಚಿಸಲಿದ್ದಾರೆ ಎನ್ನಲಾಗಿದೆ.


