ಮಹಿಳಾ ಮೀಸಲಾತಿ ಮಸೂದೆ ಜಾರಿ ಕುರಿತು ಸಂಸತ್ತಿನಲ್ಲಿ ನಡೆಯುತ್ತಿರುವ ಚರ್ಚೆಯ ನಡುವೆಯೇ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಮಸೂದೆಯನ್ನು ಜಾರಿಗೆ ತರುವುದಿಲ್ಲ ಮತ್ತು ಅವರು ಚುನಾವಣೆಯಲ್ಲಿ ರಾಜಕೀಯ ಲಾಭ ಪಡೆಯಲು ಮಾತ್ರ ಅದನ್ನು ಮುನ್ನೆಲೆಗೆ ತಂದಿದ್ದಾರೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಬುಧವಾರ ಹೇಳಿದ್ದಾರೆ.
ಅವರು ಮಸೂದೆಯನ್ನು ಜಾರಿಗೆ ತರುವುದಿಲ್ಲ. ಅವರು ಮಸೂದೆ ಜಾರಿಗೆ ಬಯಸಿದ್ದರೆ ಅದನ್ನು ಮೊದಲೇ ಮಾಡುತ್ತಿದ್ದರು ಎಂದು ನಿತೀಶ್ ಕುಮಾರ್ ಅವರು ಹೇಳಿದ್ದಾರೆ.
ಮಹಿಳಾ ಮೀಸಲಾತಿ ಅಗತ್ಯವಾಗಿದ್ದು, ನಾವು ಮೊದಲಿನಿಂದಲೂ ಅದನ್ನು ಒತ್ತಾಯಿಸುತ್ತಿದ್ದೇವೆ. ಅವರು ಅದನ್ನು ಜಾರಿಗೆ ತರುವುದಿಲ್ಲ. ನಾವು ಜಾತಿ ಆಧಾರಿತ ಜನಗಣತಿ ಮಾಡುವಂತೆ ಹೇಳಿದ್ದೇವೆ, ನಾವು ಇದನ್ನು ಒತ್ತಾಯಿಸಿದ್ದೇವೆ ಎಂದು ಬಿಹಾರ ಸಿಎಂ ಪಾಟ್ನಾದಲ್ಲಿ ಹೇಳಿದರು.
ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಲೋಕಸಭೆಯಲ್ಲಿ ಮಸೂದೆಯನ್ನು ಮಂಡಿಸಿದ್ದು, ಸೆಪ್ಟೆಂಬರ್ 21 ರಂದು ರಾಜ್ಯಸಭೆಯಲ್ಲಿ ಮಸೂದೆಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಮಹಿಳಾ ಮೀಸಲಾತಿ ಮಸೂದೆ ಬಗ್ಗೆ ಮಾತನಾಡಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮಸೂದೆಗೆ ಸಂಪೂರ್ಣವಾಗಿ ಬೆಂಬಲ ನೀಡುವುದಾಗಿ ಹೇಳಿದ್ದಾರೆ. ಸೋನಿಯಾ ಗಾಂಧಿಯವರು ಮಹಿಳಾ ಮೀಸಲಾತಿ ಮಸೂದೆ ಬಗ್ಗೆ ಸದನದಲ್ಲಿ ಮಾತನಾಡುತ್ತಾ, ತಮ್ಮ ಪಕ್ಷವು ಮಸೂದೆಯನ್ನು ಬೆಂಬಲಿಸುತ್ತದೆ. ಆದರೆ ಮಹಿಳೆಯರಿಗೆ 33% ಕೋಟಾದೊಳಗೆ ಇತರ ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ನೀಡಬೇಕೆಂದು ಆಗ್ರಹಿಸಿದ್ದಾರೆ.
ತಮ್ಮ ಪತಿ ರಾಜೀವ್ ಗಾಂಧಿ ಅವರು ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಿದ ಮೊದಲ ವ್ಯಕ್ತಿಯಾಗಿರುವುದರಿಂದ ಮಸೂದೆಯ ಕುರಿತು ಮಾತನಾಡುವುದು ನನಗೆ ಭಾವನಾತ್ಮಕ ಕ್ಷಣವಾಗಿದೆ ಎಂದು ಅವರು ಹೇಳಿದ್ದರು.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಪರವಾಗಿ ನಾನು ‘ನಾರಿ ಶಕ್ತಿ ವಂದನಾ ಅಧಿನಿಯಮವನ್ನು’ ಬೆಂಬಲಿಸುತ್ತೇನೆ. ಹೊಗೆ ತುಂಬಿದ ಅಡುಗೆ ಮನೆಯಿಂದ ಫ್ಲಡ್ ಲೈಟ್ ಸ್ಟೇಡಿಯಂವರೆಗೆ ಭಾರತದ ಮಹಿಳೆಯ ಪಯಣ ಬಹಳ ಸುದೀರ್ಘವಾದುದು, ಆದರೆ ಅವಳು ಕೊನೆಗೆ ಅದನ್ನು ತಲುಪಿದ್ದಾಳೆ ಎಂದು ಸೋನಿಯಾ ಗಾಂಧಿ ಹೇಳಿದ್ದರು.
ಇದನ್ನು ಓದಿ: ಮಹಿಳಾ ಮೀಸಲಾತಿ ಬಿಲ್: ಒಬಿಸಿಗಳನ್ನು ಸೇರ್ಪಡೆಗೆ ಸಂಸತ್ತಿನಲ್ಲಿ ಸೋನಿಯಾ ಗಾಂಧಿ ಆಗ್ರಹ


