‘ಒಂದು ರಾಷ್ಟ್ರ, ಒಂದು ಚುನಾವಣೆ’ ನೀತಿ ಜಾರಿಗಾಗಿ ಬಿಜೆಪಿ ತಯಾರಿ ನಡೆಸುತ್ತಿರುವಾಗಲೆ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. “ಇದು ಭಾರತದ ಪ್ರಜಾಪ್ರಭುತ್ವ ಮತ್ತು ವೈವಿಧ್ಯತೆಗೆ ಬೆದರಿಕೆ ಹಾಕುವ ಒಕ್ಕೂಟ ವಿರೋಧಿ ಕ್ರಮ” ಎಂದು ವಾಗ್ದಾಳಿ ನಡೆಸಿದ್ದಾರೆ.
ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಚುನಾವಣಾ ಸುಧಾರಣೆಯ ನೆಪದಲ್ಲಿ ಬಿಜೆಪಿ ಏಕೀಕೃತ ಆಡಳಿತವನ್ನು ಹೇರಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
“ಭಾರತವು ಒಕ್ಕೂಟ ವಿರೋಧಿ ಹಾಗೂ ಅಪ್ರಾಯೋಗಿಕ ‘ಒಂದು ರಾಷ್ಟ್ರ, ಒಂದು ಚುನಾವಣೆ’ಯನ್ನು ವಿರೋಧಿಸುತ್ತದೆ. ಏಕೆಂದರೆ, ಅದು ದೇಶವನ್ನು ಏಕೀಕೃತ ಆಡಳಿತದ ಅಪಾಯಗಳಿಗೆ ತಳ್ಳುತ್ತದೆ. ಈ ಪ್ರಕ್ರಿಯೆಯಲ್ಲಿ ಅದರ ವೈವಿಧ್ಯತೆ ಮತ್ತು ಪ್ರಜಾಪ್ರಭುತ್ವವನ್ನು ಕೊಲ್ಲುತ್ತದೆ” ಎಂದು ಸ್ಟಾಲಿನ್ ಹೇಳಿದ್ದಾರೆ.
ಬಿಜೆಪಿಯ ಅಂತಿಮ ಗುರಿ ರಾಷ್ಟ್ರಪತಿ ಆಡಳಿತವನ್ನು ತರುವುದಾಗಿದೆ ಎಂದು ಮುಖ್ಯಮಂತ್ರಿ ಆರೋಪಿಸಿದರು. “ಇದು ಭಾರತೀಯ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ. ಪ್ರಸ್ತಾವನೆಯು ಅಂಗೀಕಾರವಾದರೆ, ರಾಜ್ಯ ಚುನಾವಣೆಗಳ ವ್ಯವಸ್ಥೆಯನ್ನು ತೆಗೆದುಹಾಕುತ್ತದೆ. ಇದರಿಂದಾಗಿ ಪ್ರಾದೇಶಿಕ ಭಾವನೆಗಳನ್ನು ದುರ್ಬಲಗೊಳಿಸುತ್ತದೆ ಮತ್ತು ಭಾರತದ ವೈವಿಧ್ಯತೆಯನ್ನು ನಾಶಪಡಿಸುತ್ತದೆ” ಎಂದು ಸ್ಟಾಲಿನ್ ವಾದಿಸಿದರು.
‘ಪ್ರಜಾಸತ್ತಾತ್ಮಕ ಪ್ರಕ್ರಿಯೆಯಲ್ಲಿ ನಿರ್ದಿಷ್ಟ ಚುನಾವಣೆಗಳು, ನಿರ್ಣಾಯಕ ತಪಾಸಣೆ ಮತ್ತು ಸಮತೋಲನಗಳಾಗಿ ಕಾರ್ಯನಿರ್ವಹಿಸುತ್ತವೆ. ಉದ್ದೇಶಿತ ಮಸೂದೆಯು ಅಂಗೀಕರಿಸಿ ಜಾರಿಗೆ ಬಂದರೆ, ದೇಶವು ಅರಾಜಕತೆ ಮತ್ತು ನಿರಂಕುಶಾಧಿಕಾರಕ್ಕೆ ಜಾರಿಬೀಳುವುದನ್ನು ತಡೆಯಲು ಜಾರಿಯಲ್ಲಿರುವ ಕಾನೂನು ತಪಾಸಣೆ ಮತ್ತು ಸಮತೋಲನಗಳನ್ನು ತೆಗೆದುಹಾಕುತ್ತದೆ” ಎಂದು ಅವರು ಎಚ್ಚರಿಸಿದ್ದಾರೆ.
#INDIA will resist the anti-federal & impractical “One nation one election” as it will push the country into the perils of unitary form of governance, killing its diversity and democracy in the process.
The Union BJP government seeks to push it with an ulterior motive of… pic.twitter.com/PslpjWoRwM
— M.K.Stalin (@mkstalin) December 16, 2024
ಇಂತಹ ನಿರ್ಣಾಯಕ ಕಾನೂನನ್ನು ಅಂಗೀಕರಿಸಲು ಅಗತ್ಯವಾದ ಸಂಸದೀಯ ಬಹುಮತದ ಕೊರತೆಯ ಹೊರತಾಗಿಯೂ ಬಿಜೆಪಿಯು ಈ ಪ್ರಸ್ತಾಪವನ್ನು ಮುಂದುವರೆಸಿದೆ ಎಂದು ಸ್ಟಾಲಿನ್ ಆರೋಪಿಸಿದರು.
ರಾಜಕೀಯ ಅಂಕಗಳನ್ನು ಇತ್ಯರ್ಥಪಡಿಸುವ, ಭಾರತದ ಪ್ರಗತಿಗೆ ಅಡ್ಡಿಯಾಗುವ ಪ್ರಮುಖ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸರ್ಕಾರದ ವೈಫಲ್ಯಗಳಿಂದ ಗಮನವನ್ನು ಬೇರೆಡೆಗೆ ತಿರುಗಿಸುವ ಪ್ರಯತ್ನ ಎಂದು ಅವರು ಈ ಬಿಜೆಪಿ ಕ್ರಮವನ್ನು ವಿರೋಧಿಸಿದರು.
ಪ್ರಸ್ತಾಪದ ವಿರುದ್ಧ ಐಕ್ಯರಂಗಕ್ಕೆ ಕರೆ ನೀಡಿದ ಸ್ಟಾಲಿನ್, ನೀತಿಯನ್ನು ವಿರೋಧಿಸಲು ಮತ್ತು ಭಾರತದ ಸಂವಿಧಾನವನ್ನು ರಕ್ಷಿಸಲು ಪ್ರಜಾಸತ್ತಾತ್ಮಕ ಶಕ್ತಿಗಳನ್ನು ಒತ್ತಾಯಿಸಿದರು. “ಭಾರತ, ಅದರ ವೈವಿಧ್ಯತೆ ಮತ್ತು ಸಂವಿಧಾನವನ್ನು ಉಳಿಸಲು ಎಲ್ಲ ಪ್ರಜಾಸತ್ತಾತ್ಮಕ ಶಕ್ತಿಗಳು ಒಂದಾಗಬೇಕು. ಚುನಾವಣಾ ಸುಧಾರಣೆಯ ಉಡುಪಿನಲ್ಲಿ ಹೇರಲಾದ ಈ ಅಸಹ್ಯಕರ ನೀತಿ ವಿರುದ್ಧ ಹಲ್ಲು ಮತ್ತು ಉಗುರುಗಳೊಂದಿಗೆ ಹೋರಾಡಬೇಕು” ಎಂದು ಅವರು ಹೇಳಿದರು.
ಸ್ಟಾಲಿನ್ ಹೇಳಿಕೆಗಳು ‘ಒಂದು ರಾಷ್ಟ್ರ, ಒಂದು ಚುನಾವಣೆ’ ಪ್ರಸ್ತಾಪದ ಬಗ್ಗೆ ಹೆಚ್ಚುತ್ತಿರುವ ಟೀಕೆಗಳನ್ನು ತೀವ್ರಗೊಳಿಸುತ್ತದೆ. ಈ ನಿರ್ಧಾರವು ಫೆಡರಲಿಸಂ ಅನ್ನು ದುರ್ಬಲಗೊಳಿಸಿ, ರಾಜ್ಯ ಚುನಾವಣೆಗಳ ಪ್ರಾಮುಖ್ಯತೆಯನ್ನು ಕಡಿಮೆ ಮಾಡುತ್ತದೆ ಎಂದು ವಿರೋಧ ಪಕ್ಷಗಳು ವಾದಿಸುತ್ತಿವೆ.
ಈ ಮಸೂದೆಯನ್ನು ಟೀಕಿಸಿದವರಲ್ಲಿ ಸ್ಟಾಲಿನ್ ಮೊದಲಿಗರು, “ಈ ಅಪ್ರಾಯೋಗಿಕ ಮತ್ತು ಪ್ರಜಾಪ್ರಭುತ್ವ ವಿರೋಧಿ ಕ್ರಮವು ಪ್ರಾದೇಶಿಕ ಧ್ವನಿಗಳನ್ನು ಅಳಿಸಿಹಾಕುತ್ತದೆ, ಫೆಡರಲಿಸಂ ಅನ್ನು ನಾಶಪಡಿಸುತ್ತದೆ ಮತ್ತು ಆಡಳಿತವನ್ನು ಅಡ್ಡಿಪಡಿಸುತ್ತದೆ. ಎದ್ದೇಳಿ ಭಾರತ! ಭಾರತೀಯ ಪ್ರಜಾಪ್ರಭುತ್ವದ ಮೇಲಿನ ಈ ದಾಳಿಯನ್ನು ನಮ್ಮೆಲ್ಲ ಶಕ್ತಿಯಿಂದ ವಿರೋಧಿಸೋಣ” ಎಂದು ಸ್ಟಾಲಿನ್ ಹೇಳಿದರು.
“ಒಂದು ರಾಷ್ಟ್ರ, ಒಂದು ಚುನಾವಣೆ” ನೀತಿ ಎಂದರೇನು?
ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳು ಸೇರಿದಂತೆ ಎಲ್ಲ ಚುನಾವಣೆಗಳು ಏಕಕಾಲದಲ್ಲಿ ನಡೆಯುವ ಏಕೀಕೃತ ಚುನಾವಣಾ ಪ್ರಕ್ರಿಯೆಯನ್ನು ನೀತಿಯು ಪ್ರಸ್ತಾಪಿಸುತ್ತದೆ. ಪ್ರಸ್ತುತ, ಭಾರತವು ವಿವಿಧ ರಾಜ್ಯಗಳು ಮತ್ತು ಕೇಂದ್ರ ಸರ್ಕಾರಗಳಿಗೆ ವಿವಿಧ ಸಮಯಗಳಲ್ಲಿ ಚುನಾವಣೆಗಳನ್ನು ನಡೆಸುವ ವ್ಯವಸ್ಥೆಯನ್ನು ಅನುಸರಿಸುತ್ತದೆ.
ಈ ಪ್ರಸ್ತಾಪದ ಅಡಿಯಲ್ಲಿ, ಮತದಾರರು ಒಂದೇ ದಿನದಲ್ಲಿ ಸರ್ಕಾರದ ಎರಡೂ ಹಂತಗಳಿಗೆ ತಮ್ಮ ಮತಗಳನ್ನು ಚಲಾಯಿಸುತ್ತಾರೆ. ಚುನಾವಣೆಗಳ ಒತ್ತಡವನ್ನು ಕಡಿಮೆ ಮಾಡುವ, ಆಡಳಿತ ಪ್ರಕ್ರಿಯೆಗೆ ದಕ್ಷತೆ ಮತ್ತು ಸ್ಥಿರತೆಯನ್ನು ತರುವ ಗುರಿಯನ್ನು ಹೊಂದಿದೆ ಎಂದು ಬಿಜೆಪಿ ಹೇಳಿಕೊಂಡಿದೆ.
ಭಾನುವಾರ ಹೊರಡಿಸಿದ ಕಲಾಪದ ಪರಿಷ್ಕೃತ ಪಟ್ಟಿಯಂತೆ ಲೋಕಸಭೆಯಲ್ಲಿ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಮಸೂದೆಯನ್ನು ಪರಿಚಯಿಸುವುದನ್ನು ಸರ್ಕಾರ ಮುಂದೂಡಿದೆ.
ಇದನ್ನೂ ಓದಿ; ‘ಭಾರತೀಯರು ಮಾಡಲು ಸಾಕಷ್ಟಿದೆ..’; ವಾರಕ್ಕೆ 70 ಗಂಟೆಗಳ ಕೆಲಸದ ಹೇಳಿಕೆ ಸಮರ್ಥಿಸಿಕೊಂಡ ನಾರಾಯಣ ಮೂರ್ತಿ


