‘ಇಂಡಿಯಾ ಟುಡೇ ವಿಡಿಯೋ’ ಪತ್ರಕರ್ತರೊಬ್ಬರನ್ನು ನಿಂದಿಸಿದ್ದಾರೆ ಎಂದು ಆರೋಪಿಸಿ ವಿಡಿಯೋ ಅಪ್ಲೋಡ್ ಮಾಡಿದ್ದಕ್ಕೆ ಪತ್ರಕರ್ತ ರಾಜ್‌ದೀಪ್ ಸರ್ದೇಸಾಯಿ ವಿರುದ್ದ ಬಿಜೆಪಿ ನಾಯಕಿ ಶಾಝಿಯಾ ಇಲ್ಮಿ ದೆಹಲಿ ಹೈಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ಅರ್ಜಿ ಕೈಗೆತ್ತಿಕೊಂಡ ನ್ಯಾಯಮೂರ್ತಿ ಮನ್ಮೀತ್ ಪ್ರೀತಮ್ ಸಿಂಗ್ ಅರೋರಾ ಅವರು ಸೋಮವಾರದೊಳಗೆ ಸಂಪೂರ್ಣ, ಎಡಿಟ್ ಮಾಡದ ವಿಡಿಯೊವನ್ನು ಒದಗಿಸುವಂತೆ ರಾಜ್‌ದೀಪ್ ಸರ್ದೇಸಾಯಿ ಮತ್ತು ಇಂಡಿಯಾ ಟುಡೇಗೆ ನಿರ್ದೇಶಿಸಿದ್ದು, ಮುಂದಿನ ಮಂಗಳವಾರಕ್ಕೆ ಪ್ರಕರಣದ ವಿಚಾರಣೆಯನ್ನು ಪಟ್ಟಿ ಮಾಡಿದ್ದಾರೆ.
“ನಮಗೆ ಪ್ರಕರಣ ಪ್ರತಿಯನ್ನು ನೀಡಿಲ್ಲ” ಎಂದು ಸರ್ದೇಸಾಯಿ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದು, ನ್ಯಾಯಮೂರ್ತಿ ಅರೋರಾ ಅವರು ಸರ್ದೇಸಾಯಿ ಮತ್ತು ಇಂಡಿಯಾ ಟುಡೇ ಇಬ್ಬರಿಗೂ ಪ್ರತಿಯನ್ನು ನೀಡಲು ಇಲ್ಮಿ ಪರ ವಕೀಲರಿಗೆ ಸೂಚಿಸಿದ್ದಾರೆ.
“ಆನ್‌ಲೈನ್‌ನಲ್ಲಿ ಈಗಲೂ ಸರ್ದೇಸಾಯಿ ಪೋಸ್ಟ್ ಮಾಡಿರುವ ವಿಡಿಯೋ ಹರಿದಾಡುತಿದ್ದು, ಜನರು ಕೆಟ್ಟದಾಗಿ ಕಾಮೆಂಟ್ ಮಾಡುತ್ತಿದ್ದಾರೆ” ಎಂದು ಇಲ್ಮಿ ಪರ ವಕೀಲೆ ನತಾಶಾ ಗಾರ್ಗ್ ನ್ಯಾಯಾಲಯಕ್ಕೆ ತಿಳಿಸಿದ್ದು, ನ್ಯಾಯಾಲಯವು ಈ ವಿಷಯವನ್ನು ಆಲಿಸುವವರೆಗೆ ಸರ್ದೇಸಾಯಿ ಅವರ ಟ್ವೀಟ್‌ಗಳನ್ನು ಖಾಸಗಿಯಾಗಿಸಬೇಕು ಎಂದು ವಿನಂತಿಸಿದ್ದಾರೆ. ಆದರೆ, ಈ ಸಂಬಂಧ ಆದೇಶ ನೀಡಲು ನಿರಾಕರಿಸಿದ ನ್ಯಾಯಾಲಯ ಮಂಗಳವಾರಕ್ಕೆ ವಿಷಯವನ್ನು ಪಟ್ಟಿ ಮಾಡಿದೆ.
ಈ ಪ್ರಕರಣವು, ಕಾರ್ಗಿಲ್ ವಿಜಯ್ ದಿವಸ್ ರಾಜಕೀಯ, ಅಗ್ನಿವೀರ್ ಮತ್ತು ರಕ್ಷಣಾ ಪಡೆಗಳ ರಾಜಕೀಯೀಕರಣ ಕುರಿತು ಇಂಡಿಯಾ ಟುಡೆಯಲ್ಲಿ ಸರ್ದೇಸಾಯಿ ಅವರು ಜುಲೈ 26ರಂದು ನಡೆಸಿದ್ದ ಚರ್ಚೆಗೆ ಸಂಬಂಧಿಸಿದೆ.
ಚರ್ಚೆಯಲ್ಲಿ ಮೇಜರ್ ಜನರಲ್ (ನಿವೃತ್ತ) ಯಶ್ ಮೋರ್ ಅವರು ಅಗ್ನಿವೀರ್ ಯೋಜನೆಯಲ್ಲಿನ ನ್ಯೂನತೆಗಳನ್ನು ಎತ್ತಿ ತೋರಿಸುತ್ತಿದ್ದರು. ಈ ವೇಳೆ ಬಿಜೆಪಿ ವಕ್ತಾರೆ ಇಲ್ಮಿ ಮಧ್ಯ ಪ್ರವೇಶಿಸಿದ್ದರು. ಆಗ ಇಲ್ಮಿ ಮತ್ತು ಸರ್ದೇಸಾಯಿ ನಡುವೆ ವಾಗ್ವಾದ ನಡೆದಿತ್ತು. ಮಾಜಿ ಜನರಲ್ “ಕಠಿಣ ಸಂಗತಿಗಳನ್ನು ಮುಂದಿಡುತ್ತಿದ್ದಾರೆ” ಎಂದು ಸರ್ದೇಸಾಯಿ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಇಲ್ಮಿ, “ನಮಗೆ ಉಪದೇಶ ಕೊಡಬೇಡಿ” ಎಂದಿದ್ದರು.
ಸರ್ದೇಸಾಯಿ ಮತ್ತು ಇಲ್ಮಿ ನಡುವೆ ವಾಗ್ವಾದ ತಾರಕಕ್ಕೇರಿ, ಇಲ್ಮಿ ಕಾರ್ಯಕ್ರಮದಿಂದ ಹೊರ ನಡೆದಿದ್ದರು. ಅದೇ ದಿನ ರಾತ್ರಿ ಎಕ್ಸ್‌ನಲ್ಲಿ ಪೋಸ್ಟ್ ಹಾಕಿದ್ದ ಇಲ್ಮಿ “ಸರ್ದೇಸಾಯಿ ಶೋನಲ್ಲಿ ನನ್ನ ಧ್ವನಿ ಅಡಗಿಸಿದ್ದಾರೆ” ಎಂದು ಆರೋಪಿಸಿದ್ದರು.
ಇದಕ್ಕೆ ತಿರುಗೇಟು ಕೊಟ್ಟಿದ್ದ ಸರ್ದೇಸಾಯಿ ಮರುದಿನ ಬೆಳಿಗ್ಗೆ ಎಕ್ಸ್‌ನಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿ ಇಲ್ಮಿ ಅವರು ತಮ್ಮ ಮನೆಯಲ್ಲಿ ಇಂಡಿಯಾ ಟುಡೇಯ ವಿಡಿಯೋ ಪತ್ರಕರ್ತನನ್ನು ನಿಂದಿಸಿದ್ದಾರೆ ಎಂದು ಆರೋಪಿಸಿದ್ದರು.
ಸರ್ದೇಸಾಯಿ ಅವರ ಪೋಸ್ಟ್‌ಗೆ ಸಂಬಂಧಿಸಿದಂತೆ ಎಕ್ಸ್‌ನಲ್ಲೇ ಪ್ರತಿಕ್ರಿಯೆ ನೀಡಿದ್ದ ಇಲ್ಮಿ, ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದ್ದರು.
ಇದನ್ನೂ ಓದಿ : ದೆಹಲಿ ಅಬಕಾರಿ ನೀತಿ ಪ್ರಕರಣ : ಮನೀಶ್ ಸಿಸೋಡಿಯಾಗೆ ಸುಪ್ರೀಂ ಕೋರ್ಟ್‌ನಿಂದ ಜಾಮೀನು


