2022ರ ಜುಲೈ 7ರಂದು ಬೋರಿಸ್ ಜಾನ್ಸನ್ ತಮ್ಮ ಪಕ್ಷದ ನಾಯಕನ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದರು. ತಮ್ಮ ಕ್ಯಾಬಿನೆಟ್ ಸದಸ್ಯರು ಸಾಮೂಹಿಕವಾಗಿ ರಾಜೀನಾಮೆ ನೀಡಿದ ನಂತರ ಜಾನ್ಸನ್ ಅವರಿಗೆ ಬೇರೆ ದಾರಿಯಿರಲಿಲ್ಲ. ಮುಂದಿನ ಉತ್ತರಾಧಿಕಾರಿ ಆಯ್ಕೆ ಆಗುವತನಕ ಜಾನ್ಸನ್ ಪ್ರಧಾನಿಯಾಗಿ ಮುಂದುವರೆಯಲಿದ್ದಾನೆ. ಕ್ಯಾಬಿನೆಟ್ ಸದಸ್ಯರ ಸಾಮೂಹಿಕ ರಾಜೀನಾಮೆಗೆ ಕಾರಣ: ಜಾನ್ಸನ್ ಕ್ಯಾಬಿನೆಟ್‌ನ ಹಿರಿಯ ಸದಸ್ಯನಾಗಿದ್ದ ಕ್ರಿಸ್ ಪಿಂಚರ್‌ನ ಲೈಂಗಿಕ ದೌರ್ಜನ್ಯದ ಹಗರಣ ಹೊರಬಂದಿದ್ದು; ಪಿಂಚರ್ ಮೇಲೆ ಲೈಂಗಿಕ ದುರ್ವತನೆಯ ಹಲವಾರು ಆರೋಪಗಳು ಬಂದಿದ್ದವು. ಬೋರಿಸ್ ಜಾನ್ಸನ್‌ಗೆ ಈ ಆರೋಪಗಳ ಬಗ್ಗೆ ಮೊದಲೇ ತಿಳಿದಿದ್ದರೂ ಕ್ರಿಸ್ ವಿರುದ್ಧ ಕ್ರಮ ತೆಗೆದುಕೊಳ್ಳಲು ಅವರು ಏನೂ ಮಾಡಲಿಲ್ಲ ಎಂಬ ಕಟುಸತ್ಯ ಬಹಿರಂಗವಾಯಿತು. ಈ ಸಾಮೂಹಿಕ ರಾಜೀನಾಮೆಯಿಂದ ಜಾನ್ಸನ್ ಬಹುಮತವನ್ನು ಕಳೆದುಕೊಂಡು, ತಮ್ಮ ಸ್ಥಾನದಿಂದ ಕೆಳಗಿಳಿಯುವಂತಾಯಿತು.
ಒಂದೇ ದಿನದಲ್ಲಿ ಕೆಳಗಿಳಿದದ್ದು
ಕ್ರಿಸ್ ಪಿಂಚರ್ 2017ರಿಂದಲೇ ಲೈಂಗಿಕ ದೌರ್ಜನ್ಯಗಳ ಹಗರಣಗಳಲ್ಲಿ ಭಾಗಿಯಾಗಿದ್ದಾನೆ. 2022ರ ಜೂನ್ ತಿಂಗಳಲ್ಲಿ ಪಿಂಚರ್ ಪಾನಮತ್ತನಾಗಿ ಇಬ್ಬರು ವಯಸ್ಕ ಪುರುಷರನ್ನು ಅನುಚಿತವಾಗಿ, (ಲೈಂಗಿಕವಾಗಿ) ಬಲವಂತವಾಗಿ ಹಿಡಿದುಕೊಂಡಿದ್ದ. ಪಿಂಚರ್‌ನ ಈ ವರ್ತನೆಯ ಬಗೆಗಿನ ದೂರುಗಳನ್ನು ಬೋರಿಸ್ ಜಾನ್ಸನ್ ನಿರ್ಲಕ್ಷಿಸಿದ್ದರು ಎಂಬ ಆರೋಪಗಳು ಹೊರಬಂದ ನಂತರ ಇನ್ನಷ್ಟು ಹೊಸ ಆರೋಪಗಳು ಹೊರಬಿದ್ದವು.
ಪಕ್ಷದ ಡೆಪ್ಯೂಟಿ ವಿಪ್ ಆಗಿ ಪಿಂಚರ್‌ನನ್ನು ನೇಮಕ ಮಾಡಿದ್ದು ತಪ್ಪು ಎಂದು ಜಾನ್ಸನ್ ಒಪ್ಪಿಕೊಂಡ ನಂತರ 2022ರ ಜುಲೈ 5ರಿಂದ ಆರೋಗ್ಯ ಕಾರ್ಯದರ್ಶಿ ಸಾಜಿದ್ ಜಾವಿದ್ ಮತ್ತು ಚಾನ್ಸಲರ್ ಆದ ರಿಷಿ ಸುನಕ್ ರಾಜೀನಾಮೆ ನೀಡಿದರು. ತದನಂತರ ಮುಂದಿನ 24 ಗಂಟೆಗಳಲ್ಲಿ 32 ಬ್ರಿಟಿಷ್ ಎಂಪಿಗಳು ರಾಜೀನಾಮೆ ನೀಡಿದರು. 1932ರ ನಂತರ 24 ಗಂಟೆಗಳೊಳಗೆ ಇಷ್ಟು ದೊಡ್ಡ ಸಂಖ್ಯೆಯಲ್ಲಿ ರಾಜೀನಾಮೆ ನೀಡಿದ್ದು ಇದೇ ಮೊದಲು. ಮರುದಿನ ಇನ್ನಷ್ಟು ಸದಸ್ಯರು ರಾಜೀನಾಮೆ ನೀಡಿ, ಒಟ್ಟಾರೆ ಸಂಖ್ಯೆಯನ್ನು 50 ಮೀರಿಸಿದರು.

ಬ್ರಿಟಿಷ್‌ನ ಸಂಸತ್ತು ಈಗಾಗಲೇ ಹಲವಾರು ಮುಜುಗರಗಳನ್ನು ಅನುಭವಿಸಿದೆ; ಅದರ ಉದ್ದದ ಪಟ್ಟಿಯೇ ಇದೆ, ಪಿಂಚರ್‌ಗೆ ಜಾನ್ಸನ್ ನೀಡಿದ್ದ ಬೆಂಬಲವು ಈ ಪಟ್ಟಿಯಲ್ಲಿ ಕೊನೆಯದು ಎನ್ನಬಹುದಾಗಿದೆ. ಈ ಎಂಪಿಗಳು ಕನ್ಸರ್ವೆಟಿವ್ ಪಾರ್ಟಿಯವರಾಗಿದ್ದು, ಪ್ರಭುತ್ವದ ವಿನಾಶಕಾರಿ ಜನಾಂಗೀಯವಾದ ಮತ್ತು ಬಡಜನವಿರೋಧಿ ರಾಜಕೀಯದಿಂದ ಅವರು ಅಲುಗಾಡುವುದಿಲ್ಲ ಅಥವಾ ಅವರಿಗೆ ಅದೆಲ್ಲ ಗಟ್ಟಿಯಾಗಿ ತಟ್ಟುವುದಿಲ್ಲ. ಆದರೆ ಬೋರಿಸ್ ಜಾನ್ಸನ್‌ರ ಇಂತಹ ಅತಿ ಒರಟಾದ ಮತ್ತು ದಪ್ಪ ಚರ್ಮದ ವ್ಯಕ್ತಿತ್ವವು ಎಷ್ಟು ಕಿರಿಕಿರಿ ಮಾಡಿದೆಯೆಂದರೆ, ಈ ಪಿಂಚರ್ ಹಗರಣವನ್ನು ಸಹಿಸಿಕೊಳ್ಳಲು ಅವರದ್ದೇ ಪಕ್ಷದವರು ತಯ್ಯಾರಿಲ್ಲ. ಜಾನ್ಸನ್ ಉನ್ನತ ಚಾರಿತ್ರ್ಯಕ್ಕೇನೂ ಹೆಸರಾದವರಲ್ಲ ಹಾಗೂ ಒಬ್ಬ ಒರಟ ಭಂಡನಾಗಿಯೇ ತಮ್ಮ ರಾಜಕೀಯ
ವೃತ್ತಿಜೀವನವನ್ನು ಬೆಳೆಸಿಕೊಂಡವರಾಗಿ ತೋರುತ್ತದೆ.
ಜಾನ್ಸನ್‌ನ ಒಂದು ಹಿನ್ನೋಟ
ಜಾನ್ಸನ್ ಒಂದು ಉಚ್ಚ ವರ್ಗದಲ್ಲಿ ಬೆಳೆದು ಬಂದಿದ್ದರೂ, ಒಬ್ಬ ರಾಜಕಾರಣಿಯಾಗಿ ಈ ವಿಭಜನಕಾರಿ ಸಾಮಾಜಿಕ ಮಾಧ್ಯಮದ ಯುಗದಲ್ಲಿ ಪಾಪ್ಯುಲಿಸ್ಟ್ ರಾಜಕೀಯವನ್ನೇ ಬಳಸಿ ಬೆಳೆದು ನಿಂತರು.

ಜಾನ್ಸನ್ ಲಂಡನ್‌ನ ಮೇಯರ್ ಆಗಿ ಹೆಸರುವಾಸಿಯಾಗಿದ್ದರು. ತಮ್ಮ ನೀತಿಗಳ ಹೊರತಾಗಿಯೂ ಅವನು ಜನಪ್ರಿಯನಾದರು. ಬಹಳಷ್ಟು ಮತದಾರರು ಜಾನ್ಸನ್‌ಅನ್ನು ಹಗುರ ಮತ್ತು ಮನೋರಂಜನಕಾರಿಯಾದ ರಾಜಕಾರಣಿ ಎಂದು ನೋಡಿದರು. ಅವರ ಜನಾಂಗೀಯವಾದ ಮತ್ತು ಮಹಿಳಾವಿರೋಧಿ ಧೋರಣೆಯನ್ನು ತಮಾಷೆಯೆಂಬಂತೆ ನೋಡಿದರು.
ಜಾನ್ಸನ್ ಮಾಧ್ಯಮಗಳನ್ನು ಎದುರಿಸುವ ತಮ್ಮ ಆಕರ್ಷಕವಾದ ಮತ್ತು ಅದರಿಂದ ನುಸುಳಿಕೊಳ್ಳುವ ಶೈಲಿಯ ಕಾರಣಕ್ಕೂ ಪ್ರಸಿದ್ಧರಾದರು. ಸತತವಾಗಿ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳುವುದು ಮತ್ತು ಸಂದರ್ಶನಗಳನ್ನು ಬೇರೆ ಕಡೆ ತಿರುಗಿಸುವುದನ್ನು ಅವರು ನಿರಂತರವಾಗಿ ಮಾಡುತ್ತಿದ್ದರು. ಜಾನ್ಸನ್‌ರ ನಡೆಯು ಒಬ್ಬ ಕ್ಲಾಸಿಕ್ ಜಾಣ ರಾಜಕಾರಣಿಯ ಶೈಲಿಗೆ ವಿರುದ್ಧವಾಗಿತ್ತು, ಒಬ್ಬ ಜಾಣ ರಾಜಕಾರಣಿ ಮುಜುಗರ ತರುವ ತಪ್ಪುಗಳ ಬಗ್ಗೆ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೆ ಜಾನ್ಸನ್, ಮಾಧ್ಯಮಗಳ ಎದುರು ಎಷ್ಟೊಂದು ಮುಜುಗರ ತರುವ ತಪ್ಪುಗಳನ್ನು ಮಾಡುತ್ತಿದ್ದರೆಂದರೆ, ಅವರ ಮೇಲಿರುವ ಟೀಕೆಯ ವಸ್ತು, ನಗೆಬುಗ್ಗೆಗಳ ಸಾಗರದಲ್ಲಿ ಕಳೆದುಹೋಗುತ್ತಿತ್ತು.
ಶೈಲಿಯೋ ತಂತ್ರವೋ?
ಯಾವುದೇ ಪ್ಲಾನ್ ಇಲ್ಲದ ವ್ಯಕ್ತಿಯ ಸಾರ್ವಜನಿಕ ಇಮೇಜ್ ಜಾನ್ಸನ್‌ರದ್ದಾಗಿದ್ದ ಕಾರಣಕ್ಕಾಗಿಯೇ ದುರದೃಷ್ಟವಶಾತ್ ಅವರಿಗೆ ಯಾವುದೇ ಒಂದು ಪ್ಲಾನ್ ಹೊಂದಲು ಸಾಧ್ಯವಾಗಲೇ ಇಲ್ಲ. ಒಬ್ಬ ಹಾಸ್ಯಾಸ್ಪದ ವ್ಯಕ್ತಿಯಾಗಿರುವುದೇ ಅವರು ರಾಜಕೀಯವಾಗಿ ಅಸ್ತಿತ್ವದಲ್ಲಿರಲು ಅನಿವಾರ್ಯವಾಗಿತ್ತು. ಅವರ ರಾಜಕೀಯ ಕರಿಯರ್ ಉದ್ದಕ್ಕೂ ಕಾಣಿಸಿಕೊಂಡ ಈ ಶೈಲಿಯು ಅವರ ಪತನದ ಪ್ರತಿಯೊಂದು ಹೆಜ್ಜೆಯಲ್ಲೂ ಕಾಣಿಸಿಕೊಂಡಿತು.
ವಿಫಲತೆಯಲ್ಲಿಯೂ ಗೆದ್ದಿದ್ದು
ಮೇಯರ್ ಸ್ಥಾನದಿಂದ ಕೆಳಗಿಳಿದ ಮೇಲೆ, ಜಾನ್ಸನ್ ವಿದೇಶಿ ಕಾರ್ಯದರ್ಶಿಯಾಗಿ ಇಂಗ್ಲೆಂಡಿನ ಸಂಸತ್ತಿಗೆ ಮರಳಿದರು. ಯುರೋಪಿಯನ್ ಯೂನಿಯನ್ ಅನ್ನು ರೋಮನ್ ಸಾಮ್ರಾಜ್ಯಕ್ಕೆ ಹೋಲಿಸಿ, ಯುರೋಪಿಯನ್ ಯೂನಿಯನ್‌ನಿಂದ ಯುಕೆ ಹೊರಬರಬೇಕು ಎಂದು ಕಟ್ಟಿಕೊಂಡಿದ್ದ ವೇದಿಕೆಯ ಅಡಿಯಲ್ಲಿ ಪ್ರಚಾರ ಮಾಡಿದರು.

ಅನೇಕರು ಅಂದುಕೊಂಡಿದ್ದೇನೆಂದರೆ, ಅವರ ಪಕ್ಷದ ನಾಯಕಿಯಾದ ತರೇಸಾ ಮೇ ಪಕ್ಷದೊಳಗಡೆಯ ಆಂತರಿಕ ಸಂಘರ್ಷ ತಪ್ಪಿಸಲು ಜಾನ್ಸನ್‌ರಿಗೆ ವಿದೇಶಾಂಗ ಸಚಿವಾಲಯವನ್ನು ಕೊಟ್ಟರು ಎಂದು. ಜಾನ್ಸನ್ ಈ ಮುಂಚೆ ತರೇಸಾರ ಜನಪ್ರಿಯ ಪ್ರತಿಸ್ಪರ್ಧಿಗೆ ಬೆಂಬಲ ನೀಡಿದ್ದರು. ಎರಡು ವರ್ಷ ವಿದೇಶಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ ನಂತರ ಹಾಗೂ ತರೇಸಾ ಮೇ ರಾಜೀನಾಮೆ ನೀಡಿದಾಗ ಜಾನ್ಸನ್ ಪಕ್ಷದ ನಾಯಕನ ಹುದ್ದೆಗೆ ಸ್ಪರ್ಧಿಸಿದರು.
ಪ್ರಧಾನ ಮಂತ್ರಿ
2019ರಲ್ಲಿ ಪ್ರಧಾನ ಮಂತ್ರಿಯಾದ ನಂತರ, ಜಾನ್ಸನ್ ಯುರೋಪಿಯನ್ ಯೂನಿಯನ್‌ನಿಂದ ಯುಕೆ ಹೊರಬರುವ ಆಂದೋಲನದ ಮುಂದಾಳತ್ವ ವಹಿಸಿ ಯಶಸ್ವಿಯಾದರು. ಇಯು ತಮ್ಮ ಸಾರ್ವಭೌಮತ್ವಕ್ಕೆ ಅಪಾಯಕಾರಿ ಎಂದು ಅಂದುಕೊಂಡ ಬ್ರಟಿಷ್ ಮತದಾರರಿಗೆ ಇದು ಸರಿ ಅನಿಸಿತು. ಜಾನ್ಸನ್‌ನ ವಿಧಾನವು ಯಾವುದೇ ಯೋಜನೆಯಿಲ್ಲದ ನಡೆಯಾಗಿತ್ತು ಹಾಗೂ ಬ್ರಿಟಿಷ್ ಆರ್ಥಿಕತೆಗೆ ಅತ್ಯಂತ ಕೆಟ್ಟ ಪರಿಣಾಮಗಳನ್ನು ಉಂಟು ಮಾಡುವಂತಿತ್ತು.
ಈ ನಿರ್ಧಾರದಿಂದ ಸ್ಕಾಟ್‌ಲೆಂಡ್ ಮೇಲೆಯೂ ಪರಿಣಾಮ ಬೀರಿತು. ಸ್ಕಾಟ್‌ಲೆಂಡಿನ ಹೆಚ್ಚಿನ ಜನರಿಗೆ ಈ ನಿರ್ಣಯ ತಮ್ಮನ್ನು ನೇರವಾಗಿ ನಿಯಂತ್ರಣ ಮಾಡುವ ಬ್ರಿಟಿಷರ ಯೋಜನೆಯ ಭಾಗ ಎಂದೆನಿಸಿತು. ಯುರೋಪಿಯನ್ ಯೂನಿಯನ್‌ನಿಂದ ಆದ ಹಠಾತ್ ನಿರ್ಗಮನವು ಸ್ಕಾಟಿಶ್ ಸ್ವಾತಂತ್ರ ಚಳವಳಿಗೆ ಇನ್ನಷ್ಟು ಪ್ರಚೋದನೆ ನೀಡಿತು. ಸ್ಕಾಟ್‌ಲೆಂಡಿನಲ್ಲಿ ನಡೆದ ಜನಾಭಿಪ್ರಾಯ ಸಂಗ್ರಹಣೆಯ ನಂತರ ಬೋರಿಸ್ ಜಾನ್ಸನ್ ಪ್ರಧಾನಿಯಾದರು. ಆ ಜನಾಭಿಪ್ರಾಯ ಸಂಗ್ರಹಣೆಯಲ್ಲಿ 54% ಮತಗಳು ಸ್ಕಾಟ್‌ಲೆಂಡ್ ಯುಕೆಯ ಭಾಗವಾಗಿರಬೇಕು ಎಂದಿದ್ದು, ತುಂಬಾ ಪುಟ್ಟ ಅಂತರದಲ್ಲಿ 45% ಸ್ವಾತಂತ್ರಕ್ಕೆ ಮತ ಹಾಕಿದವರಿಗಿಂತ ಮುನ್ನಡೆ ಸಾಧಿಸಿದರು. ಯುರೋಪಿಯನ್ ಯೂನಿಯನ್‌ನಿಂದ ನಿರ್ಗಮನವಾಗಿದ್ದು ಸ್ಲಾಟ್‌ಲೆಂಡ್ ಮೇಲೆ ಲಂಡನ್‌ನ ಹೆಚ್ಚಿನ ನಿಯಂತ್ರಣ ಸಾಧಿಸಲಿದೆ ಎಂಬ ಸೂಚನೆ ನೀಡಿತು, ಅದರಿಂದ ಸ್ಕಾಟ್‌ಲೆಂಡಿನ ಸ್ವಾತಂತ್ರದ ಬೇಡಿಕೆ ಇನ್ನಷ್ಟು ಜನಪ್ರಿಯವಾಯಿತು.
ಲಾಕ್‌ಡೌನ್‌ನಿಂದ ಪಾರ್ಟಿಗೇಟ್‌ವರೆಗೆ
ಕೋವಿಡ್ ಸಾಂಕ್ರಾಮಿಕವನ್ನು ಅತ್ಯಂತ ಕೆಟ್ಟದಾಗಿ ನಿರ್ವಹಣೆ ಮಾಡಿದರೆಂದು ಬೋರಿಸ್
ಜಾನ್ಸನ್ ಕುಖ್ಯಾತಿ ಪಡೆದರು. ಜಾನ್ಸನ್ ಸಾಂಕ್ರಾಮಿಕಕ್ಕೆ ಲಿಸ್ಸೆ ಫೇರ್ ಅಂದರೆ ಆಡಳಿತದಿಂದ ಯಾವುದೇ ಹಸ್ತಕ್ಷೇಪ ಮಾಡದೇ, ತನ್ನಿಂತಾನೇ ಎಲ್ಲವೂ ಸರಿಹೋಗುತ್ತೆ ಎಂಬ ವಿಧಾನವನ್ನು ಅಳವಡಿಸಿಕೊಂಡ.ರು ಅದರಿಂದ ಸಾಂಕ್ರಾಮಿಕದ ಮೊದಲ ಅಲೆ ಅತ್ಯಂತ ಮಾರಕವಾಗಿ ಪರಿಣಮಿಸಿತು. ಸಾಂಕ್ರಾಮಿಕವನ್ನು ನಿರ್ವಹಿಸಲು ಜಾನ್ಸನ್ ಹರ್ಡ್ ಇಮ್ಯೂನಿಟಿ ಅಂದರೆ ಹಿಂಡಿನ ಪ್ರತಿರೋಧಕ ಶಕ್ತಿಯ ಸಿದ್ಧಾಂತವನ್ನು ಜನಪ್ರಿಯಗೊಳಿಸಿದರು. ಜಾನ್ಸನ್ ಪ್ರಕಾರ, ಕೋವಿಡ್ ಎಲ್ಲಿಡೆ ಹರಡಿದರೆ, ಅದರಿಂದ
ಚೇತರಿಸಿಕೊಂಡ ಜನಸಮೂಹವು ಸ್ವಾಭಾವಿಕವಾದ ಪ್ರತಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳುತ್ತಾರೆ, ಹಾಗಾಗಿ ಅದರಿಂದ ಸಾಂಕ್ರಾಮಿಕ ಕೊನೆಯಾಗುವುದೆಂದಿತ್ತು. ಲಸಿಕೆ ಯೋಜನೆಯ ಬರಹಗಳ ಹಲವಾರು ಪರಿಕಲ್ಪನೆಗಳನ್ನು ಇದನ್ನು ಎರವಲು ಪಡೆದಿದ್ದರೂ ಇದಕ್ಕೆ ವೈಜ್ಞಾನಿಕ ಆಧಾರಗಳು ಇರಲಿಲ್ಲ. ಹಾಗಾಗಿ ಸಾಂಕ್ರಾಮಿಕಕ್ಕೆ ಕಟ್ಟಕಡೆಯದಾಗಿ ಪ್ರತಿಸ್ಪಂದಿಸಿದ ದೇಶಗಳಲ್ಲಿ ಯುಕೆ ಕೂಡ ಒಂದಾಗಿತ್ತು ಹಾಗೂ ಮೊದಲ ವರ್ಷದಲ್ಲಿಯೇ ಸುಮಾರು ಒಂದು ಲಕ್ಷ ಜನರು ಪ್ರಾಣ ಕಳೆದುಕೊಂಡರು. ಯುಕೆಯ ಜನಸಂಖ್ಯೆ ಕರ್ನಾಟಕದ ಜನಸಂಖ್ಯೆಯಷ್ಟೆ ಇದೆ ಎನ್ನಬಹುದು, ಆದರೆ ಕರ್ನಾಟಕದಲ್ಲಿ ಸರ್ಕಾರದ ಅಧಿಕೃತ ಮಾಹಿತಿಗಳ ಪ್ರಕಾರ ಇಲ್ಲಿಯವರೆಗೆ 40 ಸಾವಿರ ಜನರು ಸಾಂಕ್ರಾಮಿಕದಿಂದ ತೀರಿಕೊಂಡಿದ್ದಾರೆ.
ಇದಾದನಂತರ ಜಾನ್ಸನ್ ಲಾಕ್‌ಡೌನ್ ವಿಧಿಸಲು ಪ್ರಾರಂಭಿಸಿದರು. 2021ರ ಕೊನೆಯ ಭಾಗದಲ್ಲಿ ಲಂಡನ್‌ನಲ್ಲಿ ಲಾಕ್‌ಡೌನ್ ವಿಧಿಸಲಾಗಿ, ಜನರು ತಮ್ಮ ಮನೆಯಲ್ಲಿಯೇ ಒಂದು ಸಮಯಕ್ಕೆ ಒಬ್ಬರಿಗಿಂತ ಹೆಚ್ಚು ಜನರನ್ನು ಭೇಟಿಯಾಗುವಂತಿರಲಿಲ್ಲ. ಅದೇ ಸಮಯದಲ್ಲಿ ಜಾನ್ಸನ್ ತನ್ನ ಮನೆಯಲ್ಲಿ ಯುಕೆಯ ಉಚ್ಚ ವರ್ಗದವರನ್ನು ಮತ್ತು ತನ್ನ ಸಿಬ್ಬಂದಿಯನ್ನು ಆಹ್ವಾನಿಸಿ ದೊಡ್ಡ ದೊಡ್ಡ ಪಾರ್ಟಿಗಳನ್ನು ಕೊಡುತ್ತಿದ್ದರು. ಇದು ಬಹಿರಂಗಗೊಂಡಿದ್ದು ಒಂದು ಹಗರಣವಾಯಿತು. ಈ ಹಗರಣವನ್ನು ಈಗ ಪಾರ್ಟಿಗೇಟ್ ಎಂದು ಕರೆಯಲಾಗುತ್ತಿದೆ. ಇದು ಬೋರಿಸ್ ಜಾನ್ಸನ್‌ಗಿರುವ ವಿಶೇಷ ಸವಲತ್ತುಗಳು ಮತ್ತು ಅವರ ಉದಾಸೀನತೆಯ ವಿರುದ್ಧ ಸಾರ್ವಜನಿಕರ ಭಾರಿ ಆಕ್ರೋಶಕ್ಕೆ ಕಾರಣವಾಯಿತು.
ಬೋರಿಸ್ ಜಾನ್ಸನ್‌ನ ಜನಪ್ರಿಯತೆಯಲ್ಲಿ ಪಾರ್ಟಿಗೇಟ್ ಹಗರಣ ಕೊನೆಯ ಹೊಡೆತವನ್ನು ನೀಡಿತು. ಸಾಂಕ್ರಾಮಿಕದ ಕೆಟ್ಟ ನಿರ್ವಹಣೆ ಮತ್ತು ಕುಸಿಯುತ್ತಿರುವ ಆರ್ಥಿಕತೆಯ ಕಾರಣದಿಂದ ಜನರ ಹತಾಶೆ ಮತ್ತು ಅತಂತ್ರ ಭವಿಶ್ಯದ ಕಾರಣದಿಂದ ಜಾನ್ಸನ್‌ನ ಜನಪ್ರಿಯತೆ ಮೊದಲೇ ಕುಸಿಯುತ್ತಿತ್ತು. ಸಾರ್ವಜನಿಕರಲ್ಲಿ ಉಳಿದಿದ್ದ ಒಂದಿಷ್ಟು ಒಳ್ಳೆಯ ಅಭಿಪ್ರಾಯವೂ ಪಾರ್ಟಿಗೇಟ್ ಮೂಲಕ ತೋರಿದ ನಿರ್ಲಕ್ಷ್ಯದಿಂದ ಕೊನೆಗೊಂಡಿತು.
ನಿಜ ಬೋರಿಸ್ ಜಾನ್ಸನ್ ಯಾರು?
ಜಾನ್ಸನ್‌ರ ಕೋಡಂಗಿತನದ ವರ್ತನೆ, ಅವರ ನಿಜವಾದ ರಾಜಕೀಯ ನಿಲುವುಗಳೇನು ಎಂಬುದನ್ನು ನಿಗೂಢವಾಗಿಸುತ್ತದೆ. ಅವರು ನಿರಂತರವಾಗಿ ಎರಡು ತದ್ವಿರುದ್ಧ ನಿಲುವುಗಳನ್ನು ತೆಗೆದುಕೊಳ್ಳಬಲ್ಲವರಾಗಿದ್ದರು. ಅವರು ಒಂದೇ ಸಮಯದಲ್ಲಿ ಒಬ್ಬ ಸೆಂಟ್ರಿಸ್ಟ್, ಪ್ರತಿಗಾಮಿ, ಉದಾರವಾದಿ, ನಿರಂಕುಶವಾದಿ, ರಾಷ್ಟ್ರೀಯವಾದಿ, ಬಂಡುಕೋರ ಹಾಗೂ ಸಂಪ್ರದಾಯವಾದಿಯಾಗಿದ್ದ ಎಂದು ಆರೋಪಿಸಬಹುದು. ಅವರು ರಾಜಕಾರಣಿ ಎಷ್ಟಾಗಿದ್ದಾರೋ ಅಷ್ಟೇ ಮನರಂಜಕ ವ್ಯಕ್ತಿಯಾಗಿಯೂ ಇರುವುದು ವಾಸ್ತವ.

ಅವರ ಉಚ್ಛ್ರಾಯದಂತೇ, ಪತನವೂ ಮಾಧ್ಯಮದ ಹಗರಣ ಮತ್ತು ಸಾರ್ವಜನಿಕ ಮುಜುಗರದ ಕಾರಣದಿಂದಲೇ ಆಯಿತು. ಅಪರಾಧ, ವಲಸೆ, ಆರೋಗ್ಯ ಸೇವೆ ಮತ್ತು ತೆರಿಗೆಯ ಬಗ್ಗೆ ಅವರ ನೀತಿಗಳ ಕಾರಣದಿಂದ ಅವರು ತಮ್ಮ ಸ್ಥಾನ ಕಳೆದುಕೊಳ್ಳಬೇಕಾಗಿ ಬರುವುದಕ್ಕಿಂತಲೂ, ಅವರ ಅಮಾನವೀಯತೆಯನ್ನು ಎತ್ತಿತೋರಿಸುವ ಸೆನ್ಸೇಷನಲ್ ಮಾಧ್ಯಮ ಮತ್ತು ಹಗರಣಗಳ ಕಾರಣದಿಂದ ಸ್ಥಾನ ಕಳೆದುಕೊಳ್ಳಬೇಕಾಗಿ ಬಂತು. ತನಗೆ ನೀಡಿರುವ ಬೆಂಬಲಕ್ಕೆ ಧಕ್ಕೆಯೇನಿಲ್ಲ ಎಂದು ನೆಚ್ಚಿಕೊಂಡಿದ್ದ ತನ್ನ ಪಾರ್ಟಿಯೂ ಈ ಪಿಂಚರ್ ಹಗರಣದಿಂದ ಅವರ ಕೈಬಿಡಲು ಕಾರಣವಾಯಿತು.
ಕಿಶೋರ್ ಗೋವಿಂದ
ಬೆಂಗಳೂರಿನಲ್ಲಿ ನೆಲೆಸಿರುವ ಕಿಶೋರ್ ಅವರು ಗಣಿತಶಾಸ್ತ್ರಜ್ಞರು. ಜಾಗತಿಕ ರಾಜಕೀಯ ಆಗುಹೋಗುಗಳನ್ನು ನಿಕಟವಾಗಿ ಗಮನಿಸುವ ಅವರು ಪತ್ರಿಕೆಗಳಿಗೆ ಲೇಖನಗಳನ್ನು ಬರೆದಿದ್ದಾರೆ.
(ಕನ್ನಡಕ್ಕೆ): ರಾಜಶೇಖರ ಅಕ್ಕಿ


