Homeಮುಖಪುಟಲಕ್ನೋ: ಲುಲು ಮಾಲ್‌ನಲ್ಲಿ ನಮಾಜ್‌ ಮಾಡಿದವರ ವಿರುದ್ಧ ಎಫ್‌ಐಆರ್‌

ಲಕ್ನೋ: ಲುಲು ಮಾಲ್‌ನಲ್ಲಿ ನಮಾಜ್‌ ಮಾಡಿದವರ ವಿರುದ್ಧ ಎಫ್‌ಐಆರ್‌

“ರಾಜ್ಯದ ಅಭಿವೃದ್ಧಿಗೆ ಮಾರಕವಾಗುತ್ತಿರುವ ಹಿಂದುತ್ವವಾದಿಗಳಿಗೆ ತಡೆ ನೀಡುವರೇ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌?”

- Advertisement -
- Advertisement -

ಲಕ್ನೋದಲ್ಲಿ ಹೊಸದಾಗಿ ತೆರೆಯಲಾದ ಲುಲು ಮಾಲ್‌ನಲ್ಲಿ ಕೆಲವು ಮುಸ್ಲಿಮರು ನಮಾಜ್ ಮಾಡುತ್ತಿರುವ ವಿಡಿಯೊ ವೈರಲ್ ಆದ ಕುರಿತು ಹಿಂದುತ್ವ ಸಂಘಟನೆಯಾದ ಅಖಿಲ ಭಾರತೀಯ ಹಿಂದೂ ಮಹಾಸಭಾ ಪ್ರತಿಭಟನೆ ನಡೆಸಿದ ಬಳಿಕ, ಉತ್ತರ ಪ್ರದೇಶ ಪೊಲೀಸರು ನಮಾಜ್‌ ಮಾಡಿದ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ. ‘ಧಾರ್ಮಿಕ ಗುಂಪುಗಳ ನಡುವಿನ ದ್ವೇಷ ಬೆಳೆಸುವ ಯತ್ನ’ ಆರೋಪವನ್ನು  ಹೊರಿಸಲಾಗಿದೆ.

ಮಾಲ್‌ನ ಅಂಗಳದಲ್ಲಿ ನಮಾಜ್ ಮಾಡಲು ಅವಕಾಶ ನೀಡಲಾಗಿದೆ ಎಂದು ಲುಲು ಗ್ರೂಪ್ ಮತ್ತು ಅದರ ಮಾಲೀಕ ಯೂಸುಫಲಿ ಎಂ.ಎ. ವಿರುದ್ಧ ಹಿಂದೂ ಮಹಾಸಭಾ ಲಕ್ನೋದಲ್ಲಿ ಪ್ರತಿಭಟನೆ ಆರಂಭಿಸಿದೆ. ಮಾಲ್‌ನ ಆಡಳಿತ ಮಂಡಳಿ ಹಾಗೂ ವಿಡಿಯೊದಲ್ಲಿ ಸೆರೆಯಾಗಿರುವ ಜನರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮಹಾಸಭಾ ಕಾರ್ಯಕರ್ತರು ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಇದಾಗ ಬಳಿಕ ಮಾಲ್‌ನ ಅಧಿಕಾರಿಗಳು ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ವಿವಾದದಿಂದ ಅಂತರ ಕಾಯ್ದುಕೊಳ್ಳುವುದಾಗಿ ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮಾಲ್ ಆಡಳಿತವು ಸುಶಾಂತ್ ಗಾಲ್ಫ್ ಸಿಟಿ ಪೊಲೀಸರಿಗೆ ಪತ್ರವನ್ನೂ ಕಳುಹಿಸಿದೆ. “ನಮಾಜ್ ಮಾಡಿರುವವರು ಮಾಲ್‌ನ ಉದ್ಯೋಗಿಗಳಲ್ಲ. ಮಾಲ್‌ಗೆ ಭೇಟಿ ನೀಡಿದವರು ನಮಾಜ್‌ ಮಾಡಿದ್ದಾರೆ” ಎಂದು ಆಡಳಿತ ವಿಭಾಗ ಸ್ಪಷ್ಟಪಡಿಸಿದೆ. “ಅಂತಹ ಯಾವುದೇ ಘಟನೆ ಮರುಕಳಿಸದಂತೆ ನೋಡಿಕೊಳ್ಳಲಾಗುತ್ತದೆ. ಮಾಲ್‌ನಲ್ಲಿ ಯಾವುದೇ ಧಾರ್ಮಿಕ ಪ್ರಾರ್ಥನೆಗೆ ಅವಕಾಶ ನೀಡುವುದಿಲ್ಲ” ಎಂದು ಆಡಳಿತ ಮಂಡಳಿ ಪ್ರತಿಕ್ರಿಯೆ ನೀಡಿದೆ.

ಈ ಕುರಿತು ವಿಸ್ತೃತವಾಗಿ ವರದಿ ಮಾಡಿರುವ ‘ದಿ ವೈರ್‌’ ಜಾಲತಾಣ, “ವೈರಲ್‌ ವೀಡಿಯೊದ ಸತ್ಯಾಸತ್ಯತೆಯನ್ನು ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಾಗಿಲ್ಲ. ಮಾಲ್‌ನಲ್ಲಿ ನಮಾಜ್ ಮಾಡಿದವರನ್ನು ಗುರುತಿಸಲು ಸಾಧ್ಯವಾಗಿಲ್ಲ” ಎಂದಿದೆ.

ಇದನ್ನೂ ಓದಿರಿ: ಮುಸ್ಲಿಂ ಮಹಿಳೆಯರನ್ನು ರೇಪ್‌ ಮಾಡಲು ಕರೆ ನೀಡಿದ್ದ ‘ಬಜರಂಗಮುನಿ’ಯನ್ನು ‘ಗೌರವಾನ್ವಿತ’ ಎಂದ ಸರ್ಕಾರ!

ಮಾಲ್ ಮ್ಯಾನೇಜ್‌ಮೆಂಟ್‌ ಸ್ಪಷ್ಟೀಕರಣ ನೀಡಿದರೂ ಹಿಂದುತ್ವ ಗ್ರೂಪ್‌ಗಳು ಸಮಾಧಾನವಾಗಿಲ್ಲ. ಲುಲು ಗ್ರೂಪ್‌ ಮಾಲೀಕ ಯೂಸುಫಲಿ ಮುಸ್ಲಿಂ ಆಗಿರುವ ಕಾರಣ ನೇರವಾಗಿ ಮಾಲೀಕನನ್ನೇ ಈ ಹಿಂದುತ್ವ ಗ್ರೂಪ್‌ಗಳು ಟಾರ್ಗೆಟ್ ಮಾಡಿವೆ.

‘ಲುಲು ಮಾಲ್ ಮಾಲೀಕ ಕೇವಲ ಮುಸ್ಲಿಮರನ್ನು ನೇಮಿಸಿಕೊಂಡಿದ್ದಾರೆ. ಭಾರತದಲ್ಲಿ ಗಳಿಸಿದ ಲಾಭವನ್ನು ದುಬೈಗೆ ಕಳುಹಿಸುತ್ತಿದ್ದಾರೆ’ ಎಂದು ಹಿಂದೂ ಮಹಾಸಭಾ ಆರೋಪಿಸಿದೆ.

ಜುಲೈ 14 ರ ಗುರುವಾರ ತಡರಾತ್ರಿ ಪೊಲೀಸರು, ನಮಾಜ್ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಹಿಂದುತ್ವ ಸಂಘಟನೆಯು ಹೊಸದಾಗಿ ತೆರೆಯಲಾದ ಮಾಲ್ ವಿರುದ್ಧ ಪ್ರತಿಭಟಿಸುವುದಾಗಿ ಬೆದರಿಕೆ ಹಾಕಿದೆ. ಆದರೆ ಪೊಲೀಸರು ಮಾಲ್‌ನ ಆಡಳಿತ ವರ್ಗ ನೀಡಿದ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಿದ್ದಾರೆ.

ಮಹಾಸಭಾದ ಸದಸ್ಯರು ಕೂಡ ಲಕ್ನೋದ ಗಾಲ್ಫ್ ಸಿಟಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಮಾಲ್‌ನಲ್ಲಿ ಸುಂದರ್ ಕಾಂಡವನ್ನು ಪಠಿಸಲು ಅನುಮತಿ ನೀಡಬೇಕು ಎಂದಿರುವ ಅವರು, ‘ಲವ್ ಜಿಹಾದ್’ಅನ್ನು ಪ್ರಚಾರ ಮಾಡಲು ಲುಲು ಮಾಲ್ ಬಳಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಹೊಸದಾಗಿ ಉದ್ಘಾಟನೆಗೊಂಡ ಮಾಲ್‌ನಲ್ಲಿ ಕೆಲಸ ಮಾಡುತ್ತಿರುವ ಶೇ. 70ರಷ್ಟು ಪುರುಷರು ಮುಸ್ಲಿಮರಾಗಿದ್ದಾರೆ. ಶೇ. 30ರಷ್ಟು ಹಿಂದೂ ಮಹಿಳಾ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ ಎಂದು ಮಹಾಸಭಾ ಸ್ಥಳೀಯ ಪೊಲೀಸರಿಗೆ ನೀಡಿದ ದೂರಿನಲ್ಲಿ ಒತ್ತಿ ಹೇಳಿದೆ.

ಹಿಂದೂ ಮೂಲಭೂತವಾದಿ ಸಂಘಟನೆಯು ಮಾಲ್‌ನ ಹೊರಗೆ ಪ್ರತಿಭಟನೆಯನ್ನು ನಡೆಸುವ ಘೋಷಣೆ ಮಾಡಿದೆ. ಮಾಲ್ ಅನ್ನು ಬಹಿಷ್ಕರಿಸುವಂತೆ ಹಿಂದೂ ಸಮುದಾಯಕ್ಕೆ ಮನವಿ ಮಾಡಿದೆ.

ಇದನ್ನೂ ಓದಿರಿ: ಮುಸ್ಲಿಂ ಪ್ರಧಾನ ಕಥೆ ಹೊಂದಿದೆ ಎಂದು ನಾಟಕಕ್ಕೆ ಅಡ್ಡಿಪಡಿಸಿದ RSS-ಬಜರಂಗದಳದ ದುಷ್ಕರ್ಮಿಗಳು

‘ದಿ ವೈರ್‌’ನೊಂದಿಗೆ ಮಾತನಾಡಿರುವ ಮಹಾಸಭಾದ ವಕ್ತಾರ ಶಿಶಿರ್ ಚತುರ್ವೇದಿ, “ಲುಲು ಗ್ರೂಪ್ ಭಾರತದಿಂದ ಲಾಭದಾಯಕ ಲಾಭ ಗಳಿಸುತ್ತದೆ ಮತ್ತು ದುಬೈಗೆ ಹಣವನ್ನು ಕಳುಹಿಸುತ್ತದೆ. ಲಕ್ನೋ ಅಭಿವೃದ್ಧಿ ಪ್ರಾಧಿಕಾರದ ನಿಯಮಗಳ ಪ್ರಕಾರ ಮಾಲ್ ನಿರ್ಮಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಮುಖ್ಯಮಂತ್ರಿ ಪರಿಶೀಲಿಸಿದ್ದಾರೆಯೇ? ಮಾಲ್ ಅನ್ನು ನಿಯಮಗಳ ಪ್ರಕಾರ ನಿರ್ಮಿಸದಿದ್ದರೆ, ಬಾಬಾ (ಯೋಗಿ) ಬುಲ್ಡೋಜರ್‌ಗಳು ಎಲ್ಲಿವೆ?” ಎಂದು ಪ್ರಶ್ನಿಸಿದ್ದಾರೆ.

ಚತುರ್ವೇದಿ ಪ್ರಕಾರ, ಮಾಲ್ “ಲವ್ ಜಿಹಾದ್” ಅನ್ನು ಪ್ರಚಾರ ಮಾಡುತ್ತಿದೆ. ಏಕೆಂದರೆ ಪುರುಷ ಮುಸ್ಲಿಂ ಸಿಬ್ಬಂದಿಗಳ ಸಂಖ್ಯೆಯು ಮಹಿಳಾ ಹಿಂದೂ ಉದ್ಯೋಗಿಗಳಿಗಿಂತ ಹೆಚ್ಚಿದೆ. “ಲುಲು ಗ್ರೂಪ್‌ ತನ್ನ ಲಾಭವನ್ನು ಹಿಂದೂಗಳ ಶಿರಚ್ಛೇದ ಮಾಡುವ ಉಗ್ರಗಾಮಿ ಇಸ್ಲಾಮಿಕ್ ಗುಂಪುಗಳಿಗೆ ದಾನ ಮಾಡಿದೆ” ಎಂದು ಅವರು ಆರೋಪಿಸಿದ್ದಾರೆ.

“ಆದಿತ್ಯನಾಥ್ ನೇತೃತ್ವದ ಯುಪಿ ಸರ್ಕಾರವು ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ಅಥವಾ ಇತರ ಧಾರ್ಮಿಕ ಚಟುವಟಿಕೆಗಳನ್ನು ನಿಷೇಧಿಸಿದೆ. ಇದರ ಹೊರತಾಗಿಯೂ, ಜನರು ಮಾಲ್‌ನಲ್ಲಿ ನಮಾಜ್ ಮಾಡಿದ್ದಾರೆ. ಆದ್ದರಿಂದ ಸಾರ್ವಜನಿಕ ಸ್ಥಳಗಳಲ್ಲಿ ಧಾರ್ಮಿಕ ಚಟುವಟಿಕೆಗಳನ್ನು ನಿಲ್ಲಿಸಲು ಆಡಳಿತವು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.

“ಲುಲು ಗ್ರೂಪ್ ಎಲ್ಲಾ ಧರ್ಮಗಳನ್ನು ಗೌರವಿಸುತ್ತದೆ. ಮಾಲ್ ಅಂಗಳದಲ್ಲಿ ಯಾವುದೇ ಧಾರ್ಮಿಕ ಚಟುವಟಿಕೆಗಳಿಗೆ ಅವಕಾಶ ನೀಡುವುದಿಲ್ಲ. ಇಂತಹ ಚಟುವಟಿಕೆಗಳ ಮೇಲೆ ನಿಗಾ ಇಡುವಂತೆ ನಿರ್ದೇಶನ ನೀಡಲಾಗಿದೆ” ಎಂದು ಲುಲು ಮಾಲ್ ಜನರಲ್‌ ಮ್ಯಾನೇಜರ್‌‌ ಸಮೀರ್ ವರ್ಮಾ ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದಾರೆ.

“ಲಕ್ನೋದ ಲುಲು ಮಾಲ್ಅನ್ನು ಅಂತರಾಷ್ಟ್ರೀಯ ಶಾಪಿಂಗ್ ತಾಣವನ್ನಾಗಿ ಮಾಡುವುದು ನಮ್ಮ ಗುರಿ” ಎಂದಿದ್ದಾರೆ.

‘ದಿ ವೈರ್’ ಜೊತೆ ಮಾತನಾಡಿರುವ ಸ್ಥಳೀಯ ಪೊಲೀಸರು, “ಮಹಾಸಭಾದಿಂದ ದೂರು ಬಂದಿದೆ” ಎಂದಿದ್ದಾರೆ. ಗಾಲ್ಫ್ ಸಿಟಿಯ ಇನ್ಸ್‌ಪೆಕ್ಟರ್ ಅಜಯ್ ಪ್ರತಾಪ್ ಸಿಂಗ್ ಅವರ ಪ್ರಕಾರ, “ಪ್ರಕರಣದ ತನಿಖೆ ನಡೆಯುತ್ತಿದೆ. ಸತ್ಯವನ್ನು ಖಚಿತಪಡಿಸಿಕೊಳ್ಳಲು, ಪೊಲೀಸರು ಮಾಲ್‌ನಲ್ಲಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಾರೆ” ಎಂದಿದ್ದಾರೆ.

“ತನಿಖೆಯ ಸಮಯದಲ್ಲಿ ನಾವು ಮಾಲ್‌ನ ಆಡಳಿತವನ್ನು ಸಹ ಸಂಪರ್ಕಿಸುತ್ತೇವೆ” ಎಂದಿದ್ದಾರೆ.

ಪೊಲೀಸರ ಪ್ರಕಾರ, ಅಪರಿಚಿತ ವ್ಯಕ್ತಿಗಳ ವಿರುದ್ಧ ಸೆಕ್ಷನ್ 153 ಎ (ಧರ್ಮದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), 295 ಎ (ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು, ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶ), 341 (ತಪ್ಪು ಸಂಯಮಕ್ಕೆ ಶಿಕ್ಷೆ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಹೂಡಿಕೆದಾರರ ಮೇಲೆ ನಕಾರಾತ್ಮಕ ಪರಿಣಾಮ

“ಈ ಘಟನೆಯು ಹೂಡಿಕೆದಾರರಿಗೆ ತಪ್ಪು ಸಂದೇಶವನ್ನು ರವಾನಿಸಿದೆ” ಎಂಬುದು ಹಲವರ ಅಭಿಪ್ರಾಯ.

“ರಾಜ್ಯದ ಪ್ರಗತಿಗೆ ಅಡೆತಡೆಗಳನ್ನು ಸೃಷ್ಟಿಸುತ್ತಿರುವ ಹಿಂದುತ್ವವಾದಿ ಸಂಘಟನೆಗಳ ವಿರುದ್ಧ ಯೋಗಿ-ಸರ್ಕಾರ ಕ್ರಮಕೈಗೊಳ್ಳಬೇಕು” ಎಂದು ಹಿರಿಯ ಪತ್ರಕರ್ತ ಅತುಲ್ ಚಂದ್ರ ಒತ್ತಾಯಿಸಿದ್ದಾರೆ.

“ಮತಾಂಧ ಗುಂಪುಗಳು ಜನರ ಪ್ರಗತಿ ಮತ್ತು ಅಭಿವೃದ್ಧಿಯನ್ನು ಉಸಿರುಗಟ್ಟಿಸುತ್ತವೆ. ಇಂತಹ ಘಟನೆಗಳಿಂದಾಗಿ ಹೂಡಿಕೆದಾರರು ರಾಜ್ಯದಲ್ಲಿ ಹೂಡಿಕೆ ಮಾಡುವ ಮೊದಲು ಅನೇಕ ಬಾರಿ ಯೋಚಿಸುತ್ತಾರೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

“ಕಾಲಕಾಲಕ್ಕೆ ಉದ್ಯಮಿಗಳನ್ನು ಹೂಡಿಕೆಗಾಗಿ ರಾಜ್ಯಕ್ಕೆ ಆಹ್ವಾನಿಸುವ ಸಿಎಂ ಯೋಗಿಯವರ ಯೋಜನೆಗಳನ್ನು ಈ ಹಿಂದುತ್ವ ಗುಂಪುಗಳು ನಾಶಪಡಿಸುತ್ತಿವೆ. ಇಲ್ಲಿನ ಲುಲು  ಮಾಲ್ 5,000 ನೇರ ಉದ್ಯೋಗಿಗಳನ್ನು 10,000 ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸುತ್ತಿದೆ ಎಂದು ಅಂದಾಜಿಸಲಾಗಿದೆ” ಎಂಬುದು ಅವರ ಅಭಿಪ್ರಾಯ.

ಮತ್ತೊಬ್ಬ ರಾಜಕೀಯ ವೀಕ್ಷಕ ರಾಮ್ ದತ್ ತ್ರಿಪಾಠಿ, “ಇಂತಹ ದ್ವೇಷದ ವಾತಾವರಣವು ರಾಜ್ಯದಿಂದ ಹೂಡಿಕೆದಾರರ ಆಕರ್ಷಣೆಯನ್ನು ಕಳೆದುಕೊಳ್ಳುತ್ತದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.

“ಹೂಡಿಕೆಗಳನ್ನು ಹುಡುಕುವ ಬಗ್ಗೆ ಸರ್ಕಾರವು ನಿಜವಾಗಿಯೂ ಗಂಭೀರವಾಗಿದ್ದರೆ, ಅದು ಈ ಮತಾಂಧ ಗುಂಪುಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು. ಹೂಡಿಕೆದಾರರು ಯಾವಾಗಲೂ ಲಾಭವನ್ನು ನೋಡುತ್ತಾರೆ. ಶಾಂತಿಯುತ ಸಮಾಜದಲ್ಲಿ ಮಾತ್ರ ಲಾಭದಾಯಕ ಚಟುವಟಿಕೆಗಳು ನಡೆಯುತ್ತವೆ” ಎಂದು ತ್ರಿಪಾಠಿ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿರಿ: ಯುಪಿ: ವೃದ್ಧ ಮುಸ್ಲಿಂ ಬೀದಿಬದಿ ವ್ಯಾಪಾರಿಯನ್ನು ವ್ಯಾಪಾರ ಮಾಡದಂತೆ ತಡೆದ ದುಷ್ಕರ್ಮಿ

ಜುಲೈ 10ರಂದು ರಾಜ್ಯದ ರಾಜಧಾನಿ ಲಕ್ನೋದಲ್ಲಿ ಲುಲು ಗ್ರೂಪ್ ಅಧ್ಯಕ್ಷ ಯೂಸುಫಲಿ ಎಂಎ ಅವರು ಆಯೋಜಿಸಿದ್ದ ಬೃಹತ್‌ ಸಮಾರಂಭದಲ್ಲಿ ಮುಖ್ಯಮಂತ್ರಿ ಆದಿತ್ಯನಾಥ್ ಅವರೂ ಪಾಲ್ಗೊಂಡು, ಲುಲು ಮಾಲ್ ಉದ್ಘಾಟಿಸಿದರು. ಮುಖ್ಯಮಂತ್ರಿಯವರ ಚಿತ್ರಗಳನ್ನು ಹೊಂದಿರುವ ಪೂರ್ಣ ಪುಟದ ಜಾಹೀರಾತನ್ನು ಲುಲು ಗ್ರೂಪ್‌ ರಾಜ್ಯದ ಎಲ್ಲ ಪ್ರಮುಖ ಪತ್ರಿಕೆಗಳಿಗೆ ನೀಡಿತ್ತು. ಉದ್ಘಾಟನಾ ಸಮಾರಂಭದಲ್ಲಿ ಯುಪಿ ಅಸೆಂಬ್ಲಿಯ ಸ್ಪೀಕರ್ ಸತೀಶ್ ಮಹಾನಾ ಮತ್ತು ಮಾಜಿ ಉಪಮುಖ್ಯಮಂತ್ರಿ ಡಾ. ದಿನೇಶ್ ಶರ್ಮಾ ಹಾಜರಿದ್ದರು.

ಸಮಾರಂಭದಲ್ಲಿ ಮಾತನಾಡಿದ್ದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, “ಪ್ರಯಾಗರಾಜ್, ವಾರಣಾಸಿ, ಗೋರಖ್‌ಪುರ ಮತ್ತು ಕಾನ್ಪುರ ಸೇರಿದಂತೆ ರಾಜ್ಯದ ಇತರ ಪಟ್ಟಣಗಳಲ್ಲಿ ಲುಲು ಗ್ರೂಪ್‌ ಹೂಡಿಕೆ ಮಾಡಲು ಮುಂದಾಗಿರುವುದು ಸಂತಸ ತಂದಿದೆ”  ಎಂದಿದ್ದರು.

ಹೂಡಿಕೆದಾರರನ್ನು ಪ್ರೋತ್ಸಾಹಿಸುವುದಾಗಿ ಹೇಳುತ್ತಿರುವ ಯೋಗಿ ಆದಿತ್ಯನಾಥ್ ಅವರು, ಹೂಡಿಕೆದಾರರಿಗೆ ಕಂಟಕವಾಗುತ್ತಿರುವ ಹಿಂದೂ ಮೂಲಭೂತವಾಗಿ ಗುಂಪುಗಳ ವಿರುದ್ಧ ಕ್ರಮ ಜರುಗಿಸುತ್ತಾರೆಯೇ? ಎಂಬುದು ಸದ್ಯದ ಪ್ರಶ್ನೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ತಾವು ಉದ್ದಾರ ಆಗಲ್ಲ ಬೇರೆಯವರಿಗೆ ಉದ್ದಾರ ಆಗೋಕೂ ಬಿಡಲ್ಲ 😡😡

LEAVE A REPLY

Please enter your comment!
Please enter your name here

- Advertisment -

Must Read

2ಜಿ ತರಂಗಾಂತರ ತೀರ್ಪಿನ ಸ್ಪಷ್ಟನೆ ಕೋರಿದ್ದ ಕೇಂದ್ರದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ ರಿಜಿಸ್ಟ್ರಿ

0
2ಜಿ ತರಂಗಾಂತರ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 2012ರಲ್ಲಿ ನೀಡಿರುವ ತೀರ್ಪಿನ ಸ್ಪಷ್ಟನೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ನಿರಾಕರಿಸಿದ್ದಾರೆ. ಕೆಲ ಸಂದರ್ಭಗಳಲ್ಲಿ ಸಾರ್ವಜನಿಕ ಹರಾಜು ಹೊರತುಪಡಿಸಿ...