ಡ್ರಗ್ ಮಾಫಿಯಾಗೆ ಸಂಬಂಧಿಸಿದಂತೆ ಬಾಲಿವುಡ್ ಚಿತ್ರ ಉದ್ಯಮದ ಮೇಲೆ ಮಾಡುತ್ತಿರುವ ದಾಳಿ ಮತ್ತು ಆರೋಪಗಳು ನಿಜವಾಗಿಯೂ ನೋವನ್ನುಂಟುಮಾಡುತ್ತಿವೆ ಎಂದು ಬಿಜೆಪಿ ಸಂಸದೆ ಮತ್ತು ಹಿರಿಯ ಬಾಲಿವುಡ್ ನಟಿ ಹೇಮಾ ಮಾಲಿನಿ ವಿಷಾದ ವ್ಯಕ್ತಪಡಿಸಿದರು. “ನನಗೆ ಈ ಉದ್ಯಮದಿಂದ ಹೆಸರು, ಖ್ಯಾತಿ, ಗೌರವ ಎಲ್ಲವೂ ಸಿಕ್ಕಿದೆ. ಬಾಲಿವುಡ್ ಯಾವಾಗಲೂ ಉನ್ನತ ಸ್ಥಾನದಲ್ಲಿಯೇ ಉಳಿಯಲಿದೆ. ಡ್ರಗ್ಸ್ ಮತ್ತು ಸ್ವಜನ ಪಕ್ಷಪಾತದಂತಹ ಆರೋಪಗಳಿಂದ ಅದರ ಗೌರವವನ್ನು ಕೆಳಗಿಳಿಸಲು ಸಾಧ್ಯವಿಲ್ಲ” ಎಂದು ಹೇಳಿದರು.
ಸುಶಾಂತ್ ಸಿಂಗ್ ರಜಪೂತ್ ಸಾವಿನ ತನಿಖೆ ಮತ್ತು ಮಾದಕವಸ್ತು ಸೇವನೆಗೆ ಸಂಬಂಧಿಸಿದಂತೆ ಬಾಲಿವುಡ್ ಚಲನಚಿತ್ರೋದ್ಯಮವನ್ನು ಕೆಣಕುವ ಪ್ರಯತ್ನವನ್ನು ಮಾಡುತ್ತಿದ್ದಾರೆ ಎಂದು ಜಯಾ ಬಚ್ಚನ್ ಸಂಸತ್ತಿನಲ್ಲಿ ಹೇಳಿದ ಒಂದು ದಿನದ ನಂತರ ಹೇಮಾ ಮಾಲಿನಿ ಎನ್‌ಡಿಟಿವಿಯೊಂದಿಗಿನ ಸಂದರ್ಶನದಲ್ಲಿ ಈ ಮಾತನ್ನು ಹೇಳಿದರು.
“ಸಿನಿಮಾ ಕ್ಷೇತ್ರದಲ್ಲಿ ಮಾದಕವಸ್ತು ವ್ಯಸನದ ಸಮಸ್ಯೆ ಇದೆ” ಎಂದು ಬಿಜೆಪಿ ಸಂಸದ ಮತ್ತು ನಟ ರವಿ ಕಿಶನ್ ಆರೋಪಿಸಿದ್ದರು. ಇತ್ತೀಚೆಗೆ ಬಾಲಿವುಡ್ ಅನ್ನು ‘ಚರಂಡಿ’ಗೆ ಹೋಲಿಸಿ ಕಂಗನಾ ರಣಾವತ್ ಟೀಕಿಸಿದ್ದರು.
ಇದನ್ನೂ ಓದಿ: ಡ್ರಗ್ಸ್ ಕೇಸ್: ನಟ ದಿಗಂತ್, ನಟಿ ಐಂದ್ರಿತಾಗೆ ಸಿಸಿಬಿ ನೋಟಿಸ್
ಇದಕ್ಕೆ ಪ್ರತಿಕ್ರಿಯೆಯಾಗಿ ಜಯಾ ಬಚ್ಚನ್, “ಇದೇ ಕ್ಷೇತ್ರದಲ್ಲಿ ಇದ್ದು, ಹೆಸರು ಮಾಡಿರುವವರೂ ಸಹ ಈಗ ಈ ಕ್ಷೇತ್ರವನ್ನು ಚರಂಡಿ ಎನ್ನುತ್ತಿದ್ದಾರೆ. ಇನ್ನು, ಸಿನಿಮಾ ಕ್ಷೇತ್ರದಿಂದ ಬಂದು ಈಗ ಸಂಸದರಾಗಿರುವವರೊಬ್ಬರು ಇದರ ಬಗ್ಗೆ ಮಾತನಾಡಿದ್ದಾರೆ” ಎಂದು ಯಾರ ಹೆಸರನ್ನೂ ಹೇಳದೇ ತಿರುಗೇಟು ನೀಡಿದ್ದರು.
“ಸಿನಿಮಾ ಕ್ಷೇತ್ರವು ನಿತ್ಯ 5 ಲಕ್ಷ ಜನರಿಗೆ ನೇರ ಉದ್ಯೋಗ ನೀಡುತ್ತಿದೆ. ಪರೋಕ್ಷವಾಗಿ ಸುಮಾರು 50 ಲಕ್ಷ ಜನರಿಗೆ ಉದ್ಯೋಗವನ್ನು ನೀಡಿದೆ. ಈ ಸಾಂಕ್ರಾಮಿಕ ಪಿಡುಗಿನ ಕಾರಣದಿಂದಾಗಿ ಆರ್ಥಿಕ ಸಂಕಷ್ಟ ಎದುರಾಗಿದೆ. ಈ ಸಂದರ್ಭದಲ್ಲಿ ಜನರ ದಿಕ್ಕುತಪ್ಪಿಸಲು ಸಾಮಾಜಿಕ ಜಾಲತಾಣಗಳಲ್ಲಿ ಸಿನಿಮಾ ಕ್ಷೇತ್ರವನ್ನು ಟೀಕಿಸಲಾಗುತ್ತಿದೆ. ನಮಗೆ ಸರ್ಕಾರದ ಬೆಂಬಲವೂ ಸಿಗುತ್ತಿಲ್ಲ” ಎಂದು ಹೇಳಿದ್ದರು.
ಇದನ್ನೂ ಓದಿ: ಸುಶಾಂತ್ ಸಿಂಗ್ ಪ್ರಕರಣ: ಕೇಂದ್ರಕ್ಕೆ ಬಾಂಬೆ ಹೈಕೋರ್ಟ್ ನೋಟಿಸ್
ಹೇಮಾ ಮಾಲಿನಿ, ರಾಜಕೀಯದಲ್ಲಿ ಜಯ ಬಚ್ಚನ್ ಅವರ ಪ್ರತಿಸ್ಪರ್ಧಿಯಾಗಿದ್ದರೂ, ಅವರ ಹೇಳಿಕೆಯನ್ನು ಬೆಂಬಲಿಸಿ, “ಬಾಲಿವುಡ್ ಒಂದು ಸುಂದರವಾದ ಸ್ಥಳ. ಸೃಜನಶೀಲ ಜಗತ್ತು. ಇದು ಕಲೆ ಮತ್ತು ಸಂಸ್ಕೃತಿಯ ಉದ್ಯಮ. ಜನರು ಇದರ ಬಗ್ಗೆ ಕೆಟ್ಟದಾಗಿ ಮಾತನಾಡುವುದನ್ನು, ಡ್ರಗ್ಸ್ ಬಗೆಗಿನ ವಿಷಯಗಳ ಬಗ್ಗೆ ಕೇಳಿದಾಗ ವೈಯಕ್ತಿಕವಾಗಿ ತುಂಬಾ ನೋವುಂಟಾಗುತ್ತದೆ. ಡ್ರಗ್ಸ್ ಜಾಲ ಇಲ್ಲಿ ಬಿಟ್ಟು ಬೇರೆಲ್ಲಿಯೂ ಸಂಭವಿಸುದಿಲ್ಲವೇ? ಕಪ್ಪು ಕಲೆಯಿದ್ದರೆ, ಅದನ್ನು ತೊಳೆಯಿರಿ. ಅದು ಇಲ್ಲವಾಗುತ್ತದೆ. ಬಾಲಿವುಡ್‌ಗೆ ಅಂಟಿರುವ ಡ್ರಗ್ಸ್ ಕಲೆ ಕೂಡಾ ಹಾಗೆಯೇ, ತೊಳೆದರೆ ಹೋಗುತ್ತದೆ” ಎಂದು ಹೇಳಿದರು.
ಮುಂದುವರರಿದು, “ಅನೇಕ ಕಲಾವಿದರು ಉದ್ಯಮವನ್ನು ಕಟ್ಟಲು ತುಂಬಾ ಶ್ರಮಿಸಿದ್ದಾರೆ. ಎಷ್ಟೋ ಕಲಾವಿದರನ್ನು ದೇವರಂತೆ ಆರಾಧಿಸುತ್ತಿದ್ದರು. ರಾಜ್ ಕಪೂರ್, ಧರ್ಮೇಂದ್ರ (ಹೇಮಾ ಮಾಲಿನಿ ಅವರ ಪತಿ), ಅಮಿತ್ ಜೀ ಮುಂತಾದವರುಗಳಿಂದ ಉದ್ಯಮವನ್ನು ಶ್ರೇಷ್ಠ ಮಟ್ಟಕ್ಕೆ ಕೊಂಡೊಯ್ದಿದ್ದರು. ಆದರೆ ಈ ಸಂದರ್ಭದಲ್ಲಿ ಹೀಗೆ ಉದ್ಯಮವನ್ನು ಅಪಹಾಸ್ಯ ಮಾಡುವುದನ್ನು ನಾವು ಸ್ವೀಕರಿಸಲು ಸಾಧ್ಯವಿಲ್ಲ. ಒಂದೆರಡು ಪ್ರಕರಣಗಳನ್ನು ಉಲ್ಲೇಖಿಸಿ ಇಡೀ ಉದ್ಯಮವನ್ನು ದೂಷಿಸುವುದು ಸರಿಯಲ್ಲ. ಇದನ್ನು ಒಪ್ಪಲೂ ಸಾಧ್ಯವಿಲ್ಲ” ಎಂದು ತಮ್ಮ ಅಭಿಪ್ರಾಯ ತಿಳಿಸಿದರು.
ನಟಿ ಮತ್ತು ಸಂಸದೆ ಜಯಾ ಬಚ್ಚನ್ ಅವರನ್ನು ಬೆಂಬಲಿಸಿ ಅಥವಾ ಅವರ ಪರ ನಿಂತು ಹೇಳಿಕೆ ನೀಡುತ್ತಿರುವವರ ಸಾಲಿನಲ್ಲಿ ಈಗ ಹೇಮಾ ಮಾಲಿನಿ ಕೂಡ ಒಬ್ಬರಾಗಿದ್ದಾರೆ.
ಇದನ್ನೂ ಓದಿ: ಬಾಲಿವುಡ್ ಡ್ರಗ್ ಮಾಫಿಯಾ: ಜಯಾ ಬಚ್ಚನ್ ವಿರುದ್ಧ ನೆಟ್ಟಿಗರ ಆಕ್ರೋಶ!


