ಮಾವೋವಾದಿಗಳ ಜೊತೆ ನಂಟು ಆರೋಪದಲ್ಲಿ ಜೈಲು ಪಾಲಾಗಿದ್ದ ದೆಹಲಿ ವಿಶ್ವವಿದ್ಯಾಲಯದ ಮಾಜಿ ಪ್ರಾಧ್ಯಾಪಕ ಜಿಎನ್ ಸಾಯಿಬಾಬಾ ಅವರನ್ನು ಬಾಂಬೆ ಹೈಕೋರ್ಟ್ ಖುಲಾಸೆಗೊಳಿಸಿದೆ. ಸಾಯಿಬಾಬಾ ಮತ್ತು ಇತರ ಐವರನ್ನು 2017ರಲ್ಲಿ ಸೆಷನ್ಸ್ ನ್ಯಾಯಾಲಯವು ದೋಷಿಗಳೆಂದು ಘೋಷಿಸಿತ್ತು.
ಅಕ್ಟೋಬರ್ 14,2022ರಂದು ಅಂಗವೈಕಲ್ಯ ಹೊಂದಿರುವ ಸಾಯಿಬಾಬಾ ಅವರನ್ನು ಬಾಂಬೆ ಹೈಕೋರ್ಟ್ ಖುಲಾಸೆಗೊಳಿಸಿತ್ತು. ಆದರೆ, ಸುಪ್ರೀಂ ಕೋರ್ಟ್ ಅದನ್ನು ರದ್ದುಗೊಳಿಸಿ, ಪ್ರಕರಣದ ಹೊಸ ವಿಚಾರಣೆಗಾಗಿ ಹೈಕೋರ್ಟ್‌ಗೆ ಹಿಂತಿರುಗಿಸಿತ್ತು. ವೀಲ್‌ಚೇರ್‌ನಲ್ಲಿರುವ ಓಡಾಡುತ್ತಿರುವ ಸಾಯಿಬಾಬಾ ಅವರು ಪ್ರಸ್ತುತ ನಾಗ್ಪುರ ಕೇಂದ್ರ ಕಾರಾಗೃಹದಲ್ಲಿದ್ದಾರೆ.
The court has ACQUITTED GN Saibaba and others in the alleged Maoist links case
— Live Law (@LiveLawIndia) March 5, 2024
2017ರಲ್ಲಿ, ಗಡ್ಚಿರೋಲಿಯ ಸೆಷನ್ಸ್ ನ್ಯಾಯಾಲಯವು ಸಾಯಿಬಾಬಾ ಮತ್ತು ಇತರರನ್ನು ಮಾವೋವಾದಿಗಳ ಜೊತೆ ನಂಟು ಮತ್ತು ದೇಶದ ವಿರುದ್ಧ ಯುದ್ಧ ಸಾರುವ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂಬ ಪ್ರಕರಣದಲ್ಲಿ ದೋಷಿಗಳು ಎಂದು ತೀರ್ಪು ನೀಡಿತ್ತು. ಸಾಯಿಬಾಬಾ ಅವರು ಗಡ್ಚಿರೋಲಿ ಮತ್ತು ಇತರ ಪ್ರದೇಶಗಳಲ್ಲಿ ಮಾವೋವಾದಿಗಳಿಗೆ ಹಿಂಸಾಚಾರವನ್ನು ಪ್ರಚೋದಿಸುವ ಪುಸ್ತಕಗಳನ್ನು ನೀಡಲು ಉದ್ದೇಶಿಸಿದ್ದರು ಎಂದು ನ್ಯಾಯಾಲಯ ಹೇಳಿತ್ತು.
ಸೆಷನ್ಸ್ ಕೋರ್ಟ್ ತೀರ್ಪನ್ನು ಸಾಯಿಬಾಬಾ ಅವರು ಬಾಂಬೆ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಹೈಕೋರ್ಟ್ ನ್ಯಾಯಮೂರ್ತಿಗಳಾದ ವಿನಯ್ ಜೋಶಿ ಮತ್ತು ವಾಲ್ಮೀಕಿ ಎಸ್‌ಎ ಮೆನೇಜಸ್ ಅವರ ವಿಭಾಗೀಯ ಪೀಠವು, ಪ್ರಾಸಿಕ್ಯೂಷನ್ ಸಾಯಿಬಾಬಾ ಅವರ ವಿರುದ್ಧದ ಆರೋಪವನ್ನು ಸಾಬೀತುಪಡಿಸುವಲ್ಲಿ ವಿಫಲವಾಗಿದೆ ಎಂದು ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿದೆ. ಕಠಿಣ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ (ಯುಎಪಿಎ) ನಿಬಂಧನೆಗಳ ಅಡಿಯಲ್ಲಿ ಆರೋಪಿಗಳ ವಿರುದ್ಧ ಆರೋಪ ಹೊರಿಸಲು ಪ್ರಾಸಿಕ್ಯೂಷನ್ ನೀಡಿದ ಅನುಮತಿಯನ್ನೂ ಹೈಕೋರ್ಟ್ ರದ್ದುಗೊಳಿಸಿದೆ.
ಇದನ್ನೂ ಓದಿ : ಜಾತಿ ತಾರತಮ್ಯ ಆರೋಪ: ದೆಹಲಿ ವಿವಿ ಮುಂದೆ ಪಕೋಡ ಅಂಗಡಿ ತೆರೆದು ಪ್ರತಿಭಟಿಸುತ್ತಿರುವ ಪ್ರಾಧ್ಯಾಪಕಿ


