Homeಮುಖಪುಟಜಾತಿ ತಾರತಮ್ಯ ಆರೋಪ: ದೆಹಲಿ ವಿವಿ ಮುಂದೆ ಪಕೋಡ ಅಂಗಡಿ ತೆರೆದು ಪ್ರತಿಭಟಿಸುತ್ತಿರುವ ಪ್ರಾಧ್ಯಾಪಕಿ

ಜಾತಿ ತಾರತಮ್ಯ ಆರೋಪ: ದೆಹಲಿ ವಿವಿ ಮುಂದೆ ಪಕೋಡ ಅಂಗಡಿ ತೆರೆದು ಪ್ರತಿಭಟಿಸುತ್ತಿರುವ ಪ್ರಾಧ್ಯಾಪಕಿ

- Advertisement -
- Advertisement -

ದೆಹಲಿ ವಿಶ್ವ ವಿದ್ಯಾನಿಲಯದ ವಿರುದ್ಧ ಜಾತಿ ಆಧಾರಿತ ತಾರತಮ್ಯ ಮತ್ತು ಕಿರುಕುಳ ಆರೋಪ ಹೊರಿಸಿ ಪ್ರತಿಭಟನೆ ನಡೆಸುತ್ತಿರುವ ಡಾ. ರೀತು ಸಿಂಗ್ ವಿವಿ ಕ್ಯಾಂಪಸ್ ಬಳಿ ‘ಪಿಹೆಚ್‌ಡಿ ಪಕೋಡ ವಾಲಿ’ ಎಂಬ ಹೆಸರಿನ ಪಕೋಡಾ ಅಂಗಡಿ ತೆರೆದಿದ್ದಾರೆ.

ದೆಹಲಿ ವಿಶ್ವವಿದ್ಯಾನಿಲಯದ ದೌಲತ್ ರಾಮ್ ಕಾಲೇಜಿನಲ್ಲಿ ಈ ಹಿಂದೆ ತಾತ್ಕಾಲಿಕ ಸಹಾಯಕ ಪ್ರಾಧ್ಯಾಪಕಿಯಾಗಿದ್ದ ಡಾ. ರೀತು ಸಿಂಗ್ ಅವರು, ಜಾತಿ ಕಾರಣಕ್ಕೆ ತನಗೆ ಕಿರುಕುಳ ನೀಡಿ 2020ರಲ್ಲಿ ಪ್ರಾಧ್ಯಾಪಕಿ ಹುದ್ದೆಯಿಂದ ವಜಾ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ವಿವಿ ವಿರುದ್ಧ ಅವರು ಪ್ರತಿಭಟನೆ ನಡೆಸುತ್ತಿದ್ದ ಸ್ಥಳವನ್ನು ಇತ್ತೀಚೆಗೆ ನೆಲಸಮಗೊಳಿಸಿದ ಬಳಿಕ, ಅವರು ಕ್ಯಾಂಪಸ್ ಮುಂದೆ ಪಕೋಡ ಅಂಗಡಿ ತೆರೆದು ತನ್ನ ಹೋರಾಟ ಮುಂದುವರೆಸಿದ್ದಾರೆ.

ದಲಿತ, ಅಂಬೇಡ್ಕರ್‌ವಾದಿ ಹೋರಾಟಗಾರ್ತಿಯಾಗಿರುವ ರೀತು ಸಿಂಗ್ ಅವರು, ಶಿಕ್ಷಣ ಸಂಸ್ಥೆಗಳೊಳಗಿನ ಜಾತಿ ತಾರತಮ್ಯದ ವಿರುದ್ಧ ಧ್ವನಿಯೆತ್ತಿದ್ದ ಕಾರಣಕ್ಕೆ 2020ರಲ್ಲಿ ಪ್ರಾಧ್ಯಾಪಕಿ ಹುದ್ದೆಯಿಂದ ವಜಾಗೊಳಿಸಲಾಗಿದೆ ಎಂದು ಆರೋಪಿಸಿದ್ದಾರೆ. ಕೆಲಸದಿಂದ ವಜಾಗೊಂಡ ಬಳಿಕ, ದೌಲತ್ ರಾಮ್ ಕಾಲೇಜಿನ ಪ್ರಾಂಶುಪಾಲೆ ಡಾ. ಸವಿತಾ ರಾಯ್ ವಿರುದ್ಧ ರೀತು ಸಿಂಗ್ ಸರಣಿ ಪ್ರತಿಭಟನೆಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಪ್ರಸ್ತುತ ಅವರ ಹೋರಾಟ ಪಕೋಡ ಅಂಗಡಿಯವರೆಗೆ ಬಂದು ನಿಂತಿದೆ.

‘ಪಿಹೆಚ್‌ಡಿ ಪಕೋಡ ವಾಲಿ’ ಕೇವಲ ಒಂದು ಆಹಾರದ ಅಂಗಡಿಯಲ್ಲ. ಇದು ಜಾತಿ ತಾರತಮ್ಯದ ವಿರುದ್ಧದ ಪ್ರತಿಭಟನೆ ಮತ್ತು ದೃಢತೆಯ ಸಂಕೇತವಾಗಿದೆ. ದೆಹಲಿ ವಿಶ್ವವಿದ್ಯಾನಿಲಯದ ಹೊರಗೆ ಅಂಗಡಿ ಹಾಕುವ ಮೂಲಕ ರಿತು ಸಿಂಗ್ ಅವರು ದಲಿತ ಶಿಕ್ಷಣ ತಜ್ಞರ ದುರವಸ್ಥೆ ಮತ್ತು ಅವರು ಎದುರಿಸುತ್ತಿರುವ ವ್ಯವಸ್ಥಿತ ಅಡೆತಡೆಗಳ ಬಗ್ಗೆ ಗಮನ ಸೆಳೆಯುವ ಗುರಿಯನ್ನು ಹೊಂದಿದ್ದಾರೆ. ಡಾ. ಸಿಂಗ್ ಅವರ ಹೋರಾಟವು ವಿದ್ಯಾರ್ಥಿಗಳು, ಹೋರಾಟಗಾರರು ಸೇರಿದಂತೆ ಬಹು ದೊಡ್ಡ ಸಮುದಾಯದಿಂದ ಬೆಂಬಲ ಗಳಿಸಿದೆ. ಪಿಹೆಚ್‌ಡಿ ಪಕೋಡ ವಾಲಿಯನ್ನು ಒಗ್ಗಟ್ಟಿನ ಮತ್ತು ಜಾಗೃತಿಯ ತಾಣವಾಗಿ ಪರಿವರ್ತಿಸಿದೆ ಎಂದು ಈ ಕುರಿತು ವರದಿ ಮಾಡಿದ bnnbreaking.com ಎಂಬ ಸುದ್ದಿ ವೆಬ್‌ಸೈಟ್ ಬಣ್ಣಿಸಿದೆ.

ಡಾ.ಸಿಂಗ್ ಅವರು ಪ್ರಾಧ್ಯಾಪಕಿ ವೃತ್ತಿ ಬಿಟ್ಟು ಬೀದಿ ಬದಿ ಪಕೋಡ ಮಾರಲು ಹೊರಟಿರುವುದು ಶಿಕ್ಷಣ ಸಂಸ್ಥೆಗಳಲ್ಲಿನ ಜಾತಿ ತಾರತಮ್ಯದ ವಿರುದ್ಧ ದೊಡ್ಡ ಹೋರಾಟವಾಗಿದೆ. ಅವರು ದಲಿತ ಶಿಕ್ಷಣ ತಜ್ಞರು ಎದುರಿಸುತ್ತಿರುವ ಸಮಸ್ಯೆಗಳ ವಿರುದ್ಧದ ಪ್ರತಿರೋಧಕ್ಕೆ ಜೀವಂತ ಉದಾಹರಣೆಯಾಗಿದ್ದಾರೆ. ರಿತು ಸಿಂಗ್ ಅವರ ಹೋರಾಟ ಜಾತೀಯತೆ, ನಿರುದ್ಯೋಗ ಮತ್ತು ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ವ್ಯವಸ್ಥಿತ ಬದಲಾವಣೆಯ ಅಗತ್ಯತೆಯ ಬಗ್ಗೆ ಚರ್ಚೆಗಳನ್ನು ಹುಟ್ಟು ಹಾಕಿದೆ. ಪಿಹೆಚ್‌ಡಿ ಪಕೋಡ ವಾಲಿ ಪ್ರಸ್ತುತ ಒಂದು ಅಂಗಡಿಯಾಗಿ ಉಳಿದಿಲ್ಲ. ಅದು ಸಾರ್ವಜನಿಕರಿಗೆ ಶಿಕ್ಷಣ, ನ್ಯಾಯ ಮತ್ತು ಸಮಾನತೆಯ ಹೋರಾಟಕ್ಕೆ ಪ್ರರೇಪಿಸುವ ಕೇಂದ್ರವಾಗಿ ಮಾರ್ಪಟ್ಟಿದೆ ಎಂದು ವೆಬ್‌ಸೈಟ್‌ ಹೇಳಿದೆ.

ಏನಿದು ಪ್ರಕರಣ, ರೀತು ಸಿಂಗ್ ಯಾರು?

ದೆಹಲಿ ವಿಶ್ವವಿದ್ಯಾನಿಲಯದಿಂದ ಮನೋವಿಜ್ಞಾನದಲ್ಲಿ ಡಾಕ್ಟರೇಟ್ ಪದವಿ ಪಡೆದಿರುವ ಡಾ.ರೀತು ಸಿಂಗ್ ಅವರು ವಿವಿ ಅಧೀನದ ದೌಲತ್ ರಾಮ್ ಕಾಲೇಜಿನಲ್ಲಿ ತಾತ್ಕಾಲಿಕ ಪ್ರಧ್ಯಾಪಕಿಯಾಗಿದ್ದರು.

ಆಗಸ್ಟ್ 2019ರಲ್ಲಿ, ರೀತು ಸಿಂಗ್ ಅವರು ದೌಲತ್ ರಾಮ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ನೇಮಕಗೊಂಡಿದ್ದರು. ಪರಿಶಿಷ್ಟ ಜಾತಿ ವರ್ಗಕ್ಕೆ ಮೀಸಲಾದ ತಾತ್ಕಾಲಿಕ ಖಾಲಿ ಹುದ್ದೆಯ ಕಾರ್ಯವಿಧಾನದ ಮೂಲಕ ರೀತು ಸಿಂಗ್ ಆ ಹುದ್ದೆಗೆ ಆಯ್ಕೆಯಾಗಿದ್ದರು. ಒಂದು ವರ್ಷದ ನಂತರ (ಆಗಸ್ಟ್ 2020 ರಲ್ಲಿ) ಅವರನ್ನು ಏಕಾಏಕಿ ಹುದ್ದೆಯಿಂದ ವಜಾಗೊಳಿಸಲಾಗಿತ್ತು.

“ನಾನು ದಲಿತ ಸಮುದಾಯದವಳು ಎಂಬ ಕಾರಣಕ್ಕೆ ಕಾಲೇಜು ಪ್ರಾಂಶುಪಾಲೆ ಸವಿತಾ ರಾಯ್ ಜಾತಿ ತಾರತಮ್ಯವೆಸಗಿ ಕೆಲಸದಿಂದ ವಜಾಗೊಳಿಸಿದ್ದಾರೆ. ಕಾಲೇಜಿನಲ್ಲಿ ಜಾತಿ ಮುಂದಿಟ್ಟುಕೊಂಡು  ಪ್ರಾಂಶುಪಾಲೆ ನನಗೆ ಕಿರುಕುಳ ನೀಡಿದ್ದರು” ಎಂದು ರೀತು ಸಿಂಗ್ ಆರೋಪಿಸಿದ್ದರು.

2020ರಲ್ಲಿ ಕೆಲಸದಿಂದ ವಜಾಗೊಂಡ ಬಳಿಕ ರೀತು ಸಿಂಗ್ ಸತತ 10 ದಿನಗಳ ಕಾಲ ಕಾಲೇಜಿನ ಮುಂದೆ ಪ್ರತಿಭಟನೆ ನಡೆಸಿದ್ದರು. ಆದರೆ, ಕೋವಿಡ್ ಆವರಿಸಿಕೊಂಡ ಅವರು ತನ್ನ ಹೋರಾಟವನ್ನು ಕೊನೆಗೊಳಿಸಬೇಕಾಯಿತು. ನಂತರ ಅವರು 2023ರ ಸೆಪ್ಟೆಂಬರ್‌ನಿಂದ ಹೋರಾಟ ಮುಂದುವರೆಸಿದ್ದಾರೆ. ಈ ನಡುವೆ ಅವರು ಕಾನೂನು ಹೋರಾಟ ಕೂಡ ನಡೆಸುತ್ತಿದ್ದು, ಪ್ರಸ್ತುತ ಪ್ರಕರಣ ದೆಹಲಿ ಹೈಕೋರ್ಟ್‌ನಲ್ಲಿದೆ.

ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯ ಕಾಲೇಜು ಪ್ರಾಂಶುಪಾಲೆ ಸವಿತಾ ರಾಯ್‌ ಅವರಿಂದ ರೀತು ಸಿಂಗ್ ವಜಾದ ಕುರಿತು ಪ್ರತಿಕ್ರಿಯೆ ಕೇಳಿತ್ತು. ನ್ಯಾಯಾಲಯಕ್ಕೆ ಉತ್ತರ ಕೊಟ್ಟಿದ್ದ ಪ್ರಾಂಶುಪಾಲೆ ಸವಿತಾ ರಾಯ್, ರೀತು ಸಿಂಗ್ ಅವರ ಪಾಠದಿಂದ ವಿದ್ಯಾರ್ಥಿಗಳು ಅತೃಪ್ತರಾಗಿದ್ದರು ಎಂದು ತಿಳಿಸಿದ್ದಾರೆ. ಅಲ್ಲದೆ, ಪ್ರಾಂಶುಪಾಲರು ನ್ಯಾಯಾಲಯಕ್ಕೆ ಸಲ್ಲಿಸಿರುವ ಪತ್ರಕ್ಕೆ 35 ವಿದ್ಯಾರ್ಥಿಗಳು ಸಹಿ ಹಾಕಿದ್ದಾರೆ ಎಂದು ವರದಿಯಾಗಿದೆ.

ಪ್ರಾಂಶುಪಾಲೆಯ ಆರೋಪವನ್ನು ಹಾಕಿರುವ ರೀತು ಸಿಂಗ್, ಪ್ರಾಂಶುಪಾಲರ ಪತ್ರದಲ್ಲಿ ಸಹಿ ಹಾಕಿರುವ 35 ವಿದ್ಯಾರ್ಥಿಗಳಿಗೆ ನಾನು ಪಾಠವೇ ಮಾಡಿಲ್ಲ ಎಂದಿದ್ದಾರೆ. ಪ್ರಸ್ತುತ ಪ್ರಕರಣ ದೆಹಲಿ ಹೈಕೋರ್ಟ್‌ ಮತ್ತು ಪರಿಶಿಷ್ಟ ಜಾತಿ ಆಯೋಗದ ವಿಚಾರಣೆಯಲ್ಲಿದೆ.

ರೀತು ಸಿಂಗ್ ಅವರ ದೂರಿನ ಮೇರೆಗೆ ಪ್ರಾಂಶುಪಾಲೆ ಸವಿತಾ ರಾಯ್ ವಿರುದ್ಧ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಸೇರಿದಂತೆ ಹಲವು ಕಾಯ್ದೆ ಸೆಕ್ಷನ್‌ಗಳಡಿ ಪ್ರಕರಣ ದಾಖಲಾಗಿದೆ. ಆದರೆ, ಸವಿತಾ ರಾಯ್ ವಿರುದ್ಧ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಬದಲಾಗಿ ಅವರನ್ನು ಪ್ರಾಂಶುಪಾಲರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಬಡ್ತಿ ನೀಡಿ ನೇಮಿಸಲಾಗಿದೆ. ಆಕೆ ಪ್ರಾಂಶುಪಾಲೆಯಾಗಿಯೂ ಮುಂದುವರೆದಿದ್ದಾರೆ.

ಇದನ್ನೂ ಓದಿ : ಚುನಾವಣಾ ಬಾಂಡ್‌ ಮಾಹಿತಿ ಒದಗಿಸಲು ಗಡುವು ವಿಸ್ತರಿಸಿ: ಸುಪ್ರೀಂ ಕೋರ್ಟ್‌ಗೆ ಎಸ್‌ಬಿಐ ಮನವಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read