Homeಮುಖಪುಟಚುನಾವಣಾ ಬಾಂಡ್‌ ಮಾಹಿತಿ ಒದಗಿಸಲು ಗಡುವು ವಿಸ್ತರಿಸಿ: ಸುಪ್ರೀಂ ಕೋರ್ಟ್‌ಗೆ ಎಸ್‌ಬಿಐ ಮನವಿ

ಚುನಾವಣಾ ಬಾಂಡ್‌ ಮಾಹಿತಿ ಒದಗಿಸಲು ಗಡುವು ವಿಸ್ತರಿಸಿ: ಸುಪ್ರೀಂ ಕೋರ್ಟ್‌ಗೆ ಎಸ್‌ಬಿಐ ಮನವಿ

ಚುನಾವಣೆಗೂ ಮುನ್ನ ಮೋದಿಯ ನಿಜಮುಖ ಮರೆ ಮಾಚಲು ಕೊನೆಯ ಪ್ರಯತ್ನ ಎಂದ ರಾಹುಲ್ ಗಾಂಧಿ

- Advertisement -
- Advertisement -

ಚುನಾವಣಾ ಆಯೋಗಕ್ಕೆ ಚುನಾವಣಾ ಬಾಂಡ್‌ಗಳ ಬಗ್ಗೆ ಮಾಹಿತಿ ನೀಡಲು ಜೂನ್ 30ರವರೆಗೆ ಗಡುವನ್ನು ವಿಸ್ತರಿಸುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ.

ಕಳೆದ ತಿಂಗಳು ಐತಿಹಾಸಿಕ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಚುನಾವಣಾ ಬಾಂಡ್‌ ಯೋಜನೆಯನ್ನು ರದ್ದುಗೊಳಿಸಿತ್ತು ಮತ್ತು ಮಾರ್ಚ್ 6 ರೊಳಗೆ ಚುನಾವಣಾ ಆಯೋಗಕ್ಕೆ (ಇಸಿ) ಬಾಂಡ್‌ಗಳ ಕುರಿತು ಮಾಹಿತಿ ನೀಡುವಂತೆ ಎಸ್‌ಬಿಐಗೆ ಸೂಚಿಸಿತ್ತು.

ಚುನಾವಣಾ ಬಾಂಡ್ ಅಸಂವಿಧಾನಿಕ. ಅನಾಮಧೇಯ ಬಾಂಡ್‌ಗಳು ಸಂವಿಧಾನದ 19(1)(ಎ) ವಿಧಿಯ ಅಡಿಯಲ್ಲಿ ಮಾಹಿತಿಯ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿತ್ತು. ರಾಜಕೀಯ ಪಕ್ಷಗಳಿಗೆ ಆರ್ಥಿಕ ಬೆಂಬಲ ನೀಡುವುದು ಖ್ವಿಡ್‌ ಪ್ರೊ ಪ್ರೊಗೆ (ಅಂದರೆ ಒಂದು ಸಹಾಯ ಮಾಡಿದ್ದಕ್ಕಾಗಿ ಇನ್ನೊಂದು ಪ್ರಯೋಜನ ಪಡೆಯುವುದು) ಕಾರಣವಾಗಬಹುದೆಂದೂ ಸುಪ್ರೀಂ ಕೋರ್ಟ್‌ ಹೇಳಿತ್ತು.

ತೀರ್ಪು ಪ್ರಕಟಿಸುವ ವೇಳೆ, ಚುನಾವಣಾ ಬಾಂಡ್‌ ನೀಡುವುದನ್ನು ನಿಲ್ಲಿಸುವಂತೆ ಮತ್ತು ಈ ರೀತಿಯಲ್ಲಿ ನೀಡಿದ ದೇಣಿಗೆಗಳ ವಿವರಗಳನ್ನು ಮಾರ್ಚ್‌ 6ರೊಳಗೆ ಚುನಾವಣಾ ಆಯೋಗಕ್ಕೆ ನೀಡುವಂತೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಎಸ್‌ಬಿಐ ನೀಡಿದ ಮಾಹಿತಿಗಳನ್ನು ಮಾರ್ಚ್ 13 ರೊಳಗೆ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಲು ಚುನಾವಣಾ ಆಯೋಗಕ್ಕೆ ಕೋರ್ಟ್‌ ಸೂಚಿಸಿತ್ತು.

ಐವರು ನ್ಯಾಯಾಧೀಶರ ಸಂವಿಧಾನ ಪೀಠ, ಕಾಳಧನ ನಿಯಂತ್ರಣಕ್ಕೆ ಚುನಾವಣಾ ಬಾಂಡ್‌ ಯೋಜನೆ ಒಂದೇ ಆಯ್ಕೆಯಲ್ಲ ಎಂದಿತ್ತು. ಕಾಳಧನ ನಿಯಂತ್ರಣವೆಂದು ಹೇಳಿಕೊಂಡು ಆರ್‌ಟಿಐ ಉಲ್ಲಂಘನೆಯಾಗಬಾರದು. ಕಾಳಧನ ನಿಯಂತ್ರಣಕ್ಕೆ ಇತರ ಪರ್ಯಾಯಗಳಿವೆ ಎಂದು ಹೇಳಿತ್ತು.

ಮೋದಿಯ ನಿಜಮುಖ ಮರೆ ಮಾಚಲು ಕೊನೆಯ ಪ್ರಯತ್ನ: ರಾಹುಲ್ ಗಾಂಧಿ

ಎಸ್‌ಬಿಐಯ ಅರ್ಜಿ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ “ನರೇಂದ್ರ ಮೋದಿಯವರು ದೇಣಿಗೆ ವ್ಯವಹಾರವನ್ನು ಮರೆಮಾಚಲು ತಮ್ಮ ಕೈಲಾದಷ್ಟು ಪ್ರಯತ್ನ ನಡೆಸುತ್ತಿದ್ದಾರೆ” ಎಂದು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

“ಚುನಾವಣಾ ಬಾಂಡ್‌ಗಳ ಬಗ್ಗೆ ಸತ್ಯವನ್ನು ತಿಳಿದುಕೊಳ್ಳುವುದು ದೇಶವಾಸಿಗಳ ಹಕ್ಕು ಎಂದು ಸುಪ್ರೀಂ ಕೋರ್ಟ್ ಹೇಳಿರುವಾಗ, ಎಸ್‌ಬಿಐ ಈ ಮಾಹಿತಿಯನ್ನು ಚುನಾವಣೆಯ ಮೊದಲು ಸಾರ್ವಜನಿಕಗೊಳಿಸಬಾರದು ಎಂದು ಏಕೆ ಬಯಸುತ್ತಿದೆ?” ಎಂದು ರಾಹುಲ್ ಪ್ರಶ್ನಿಸಿದ್ದಾರೆ.

“ಒಂದೇ ಕ್ಲಿಕ್‌ನಲ್ಲಿ ಪಡೆಯಬಹುದಾದ ಮಾಹಿತಿಯನ್ನು ನೀಡಲು ಜೂನ್ 30ರವರೆಗೆ ಸಮಯ ಕೇಳುವುದು, ಅದರ ಹಿಂದಿನ ಉದ್ದೇಶವನ್ನು ತೋರಿಸುತ್ತದೆ. ದೇಶದ ಪ್ರತಿಯೊಂದು ಸ್ವತಂತ್ರ ಸಂಸ್ಥೆಗಳು ತಮ್ಮ ಭ್ರಷ್ಟಾಚಾರವನ್ನು ಮುಚ್ಚಿ ಹಾಕಲು ‘ಮೋದಾನಿ’ ಕುಟುಂಬದ ಭಾಗವಾಗುತ್ತಿದೆ. ಚುನಾವಣೆಗೂ ಮುನ್ನ ಮೋದಿಯ ನಿಜಮುಖವನ್ನು ಮರೆ ಮಾಚಲು ಇದು ಕೊನೆಯ ಪ್ರಯತ್ನ” ಎಂದಿದ್ದಾರೆ.

ಏನಿದು ಚುನಾವಣಾ ಬಾಂಡ್ ?

ಜನ ಸಾಮಾನ್ಯರು, ಕಾರ್ಪೊರೇಟ್ ಸಂಸ್ಥೆಗಳು ರಾಜಕೀಯ ಪಕ್ಷಗಳಿಗೆ ನೀಡುವ ಒಂದು ವಿಧದ ದೇಣಿಗೆ ಕ್ರಮವಾಗಿದೆ ಚುನಾವಣಾ ಬಾಂಡ್. ಜನರು 1,000 ರೂ, 10,000 ರೂ, 1 ಲಕ್ಷ ರೂ, 10 ಲಕ್ಷ ರೂ, 1 ಕೋಟಿ ರೂ ಇತ್ಯಾದಿ ಮುಖಬೆಲೆಗಳಲ್ಲಿ ಬಾಂಡ್​ಗಳನ್ನು ಖರೀದಿಸಬಹುದಿತ್ತು. ಈ ಬಾಂಡ್​ಗಳು ಅನಾಮಧೇಯವಾಗಿತ್ತು. ಅಂದರೆ, ಇದನ್ನು ಖರೀದಿಸಿದ ವ್ಯಕ್ತಿ ಅಥವಾ ಸಂಸ್ಥೆಯ ಹೆಸರು ಬಹಿರಂಗಗೊಳ್ಳುತ್ತಿರಲಿಲ್ಲ. ಯಾವ ರಾಜಕೀಯ ಪಕ್ಷಕ್ಕೆ ದೇಣಿಗೆ ಕೊಡಲಾಗಿದೆ ಆ ಪಕ್ಷ ಹೆಸರೂ ಬಹಿರಂಗವಾಗುತ್ತಿರಲಿಲ್ಲ.

ಜನವರಿ 2,2018ರಂದು ಅಂದಿನ ಮೋದಿ ಸರ್ಕಾರ ಚುನಾವಣಾ ಬಾಂಡ್ ಯೋಜನೆಗೆ ಅಧಿಸೂಚನೆ ಹೊರಡಿಸಿತ್ತು. ಚುನಾವಣಾ ಬಾಂಡ್​ಗಳನ್ನು ಹಣಕಾಸು ಕಾಯ್ದೆ 2017ರ ತಿದ್ದುಪಡಿ ಮೂಲಕ ಜಾರಿಗೆ ತರಲಾಗಿತ್ತು. ಈ ಬಾಂಡ್​ಗಳನ್ನು ವರ್ಷಕ್ಕೆ ನಾಲ್ಕು ಬಾರಿ, ಅಂದರೆ ಜನವರಿ, ಏಪ್ರಿಲ್, ಜುಲೈ ಹಾಗೂ ಅಕ್ಟೋಬರ್​ನಲ್ಲಿ ನೀಡಲಾಗುತ್ತಿತ್ತು. ಜನರು ಬ್ಯಾಂಕ್ ಶಾಖೆಗೆ ಭೇಟಿ ನೀಡುವ ಮೂಲಕ ಅಥವಾ ವೆಬ್​ಸೈಟ್​ನಲ್ಲಿ ಆನ್​ಲೈನ್​ನಲ್ಲಿ ಇದನ್ನು ಖರೀದಿಸಬಹುದಿತ್ತು.

ಇದನ್ನೂ ಓದಿ: ಸಂಸದ, ಶಾಸಕರ ಭ್ರಷ್ಟಾಚಾರ ಸಂಸದೀಯ ಪ್ರಜಾಪ್ರಭುತ್ವದ ಅಡಿಪಾಯವನ್ನೇ ನಾಶಪಡಿಸುತ್ತದೆ: ಸುಪ್ರೀಂ ಕೋರ್ಟ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಬಿಜೆಪಿಗೆ ಮತ ಹಾಕುವಂತೆ...

0
ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಹಾಗೂ ಹಿರಿಯ ರಾಜಕಾರಣಿ ಅಧೀರ್ ರಂಜನ್ ಚೌಧರಿ ಅವರಿ ಬಿಜೆಪಿ ಪರ ಮಾತನಾಡಿದ್ದಾರೆ ಎನ್ನಲಾದ ವಿಡಿಯೋವೊಂದು ವೈರಲ್ ಆಗಿದೆ. ವಿಡಿಯೋದಲ್ಲಿ " ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಪಕ್ಷಕ್ಕೆ ಮತ...