Homeಕರ್ನಾಟಕಬೆಂಗಳೂರಿನ ನೀರಿನ ಸಮಸ್ಯೆ ನಿವಾರಣೆಗೆ ರೂ. 556 ಕೋಟಿ ಮೀಸಲು: ಡಿಸಿಎಂ ಡಿ.ಕೆ ಶಿವಕುಮಾರ್

ಬೆಂಗಳೂರಿನ ನೀರಿನ ಸಮಸ್ಯೆ ನಿವಾರಣೆಗೆ ರೂ. 556 ಕೋಟಿ ಮೀಸಲು: ಡಿಸಿಎಂ ಡಿ.ಕೆ ಶಿವಕುಮಾರ್

"ನೋಂದಣಿ ಮಾಡಿಸಿಕೊಳ್ಳದಿದ್ದರೆ ಟ್ಯಾಂಕರ್‌ಗಳು ಸೀಜ್"

- Advertisement -
- Advertisement -

ಬೆಂಗಳೂರು ನಗರದ ಎಲ್ಲಾ ನೀರಿನ ಟ್ಯಾಂಕರ್ ಮಾಲೀಕರು ಮಾ. 7ರ ವೇಳೆಗೆ ನೋಂದಣಿ ಮಾಡಿಸದಿದ್ದರೆ ವಶಕ್ಕೆ ಪಡೆಯಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.

ಕುಡಿಯುವ ನೀರಿನ ಸಮಸ್ಯೆ ವಿಚಾರವಾಗಿ ಬಿಬಿಎಂಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ 3,500 ಟ್ಯಾಂಕರ್‌ಗಳು ಇವೆ. ಈ ಪೈಕಿ ಕೇವಲ 219 ಟ್ಯಾಂಕರ್‌ಗಳು, ಅಂದರೆ ಶೇ 10ರಷ್ಟು ಮಾತ್ರ ನೋಂದಣಿ ಮಾಡಿಸಿಕೊಂಡಿವೆ. ಚಿಕ್ಕ, ದೊಡ್ಡ, ಹಾಲಿನ ಟ್ಯಾಂಕರ್‌ಗಳನ್ನು ಶೀಘ್ರ ಸರ್ಕಾರದ ವಶಕ್ಕೆ ಪಡೆಯಲಾಗುವುದು. ಬಿಡಬ್ಲ್ಯೂಎಸ್‌ಎಸ್‌ಬಿಯವರು 210 ಟ್ಯಾಂಕರ್‌ಗಳನ್ನು ಈಗಾಗಲೇ ನೀರಿನ ಪೂರೈಕೆಗೆ ಬಳಸುತ್ತಿದ್ದಾರೆ ಎಂದು ತಿಳಿಸಿದರು.

ನೀರು ಸರ್ಕಾರಕ್ಕೆ ಸೇರಿದ್ದು

ನೀರು ಸರ್ಕಾರಕ್ಕೆ ಸೇರಿದ್ದು, ಯಾವುದೇ ವ್ಯಕ್ತಿಗೆ ಸೇರಿದ್ದಲ್ಲ. ಯಾವ ನೀರನ್ನು ಬೇಕಾದರೂ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಹಕ್ಕು ಸರ್ಕಾರಕ್ಕೆ ಇದೆ. ಬೆಂಗಳೂರು ಹೊರವಲಯದಲ್ಲಿ ಅಂತರ್ಜಲ ಮಟ್ಟ ಹೆಚ್ಚಿರುವ ಕಡೆಯಿಂದಲೂ ನೀರಿನ ಪೂರೈಕೆ ಮಾಡಲು ಸಿದ್ದರಾಗಿ ಇರಬೇಕು ಎಂದು ಅಧಿಕಾರಿಗಳಿಗೆ ತಿಳಿಸಲಾಗಿದೆ. ನೀರಿನ ಸಮಸ್ಯೆ ಬಗೆಹರಿಸಲು ಚುನಾವಣಾ ನೀತಿ ಸಂಹಿತೆ ಅಡ್ಡ ಬರುವುದಿಲ್ಲ ಎಂದು ಡಿಕೆಶಿ ತಿಳಿಸಿದರು.

ಸಮಸ್ಯೆ ಬಗೆಹರಿಸಲು ₹556 ಕೋಟಿ ಮೀಸಲು

ಬೆಂಗಳೂರು ನಗರದ ಎಲ್ಲಾ ಶಾಸಕರಿಗೆ ನೀರಿನ ಸಮಸ್ಯೆ ಬಗೆಹರಿಸಲು ₹10 ಕೋಟಿ ಅನುದಾನ ನೀಡಲಾಗಿದೆ. ಬಿಬಿಎಂಪಿಗೆ ₹148 ಕೋಟಿ, ಬಿಡಬ್ಲ್ಯೂ ಎಸ್‌ಎಸ್‌ಬಿಯಿಂದ ₹128 ಕೋಟಿ ಸೇರಿ ಒಟ್ಟು 556 ಕೋಟಿ ಹಣವನ್ನು ಕುಡಿಯುವ ನೀರಿನ ಪೂರೈಕೆಗೆ ಮೀಸಲಿಡಲಾಗಿದೆ ಎಂದು ಮಾಹಿತಿ ನೀಡಿದರು.

ನೀರಿನ ಸಮಸ್ಯೆ ಬಗೆಹರಿಸಲು ಬಿಬಿಎಂಪಿ ಸಹಾಯವಾಣಿ ಮತ್ತು ವಾರ್ಡ್ ವಾರು ದೂರು ಕೇಂದ್ರಗಳನ್ನು ತೆರೆಯಲಾಗುವುದು. ಸಮಸ್ಯೆ ಆಲಿಸಲು ವಾರ್ ರೂಂಗಳು ಕೆಲಸ ನಿರ್ವಹಿಸಲಿವೆ. ಹಿರಿಯ ಅಧಿಕಾರಿಗಳು ಸೇರಿದಂತೆ ನಾನು ಸಹ ಪದೇ,‌ ಪದೇ ಪರಿಶೀಲನೆ ನಡೆಸುತ್ತೇನೆ ಎಂದರು.

ಕುಡಿಯುವ ನೀರನ್ನು ಪೂರೈಕೆ ಮಾಡುವುದು ಸರ್ಕಾರದ ಜವಾಬ್ದಾರಿ. ಬೆಂಗಳೂರಿನ ಜನತೆ ಗಾಬರಿಯಾಗುವುದು ಬೇಡ. ಪ್ರತಿಯೊಬ್ಬರಿಗೂ ನೀರು ನೀಡುವುದು ನಮ್ಮ ಕರ್ತವ್ಯ ಎಂದು ಹೇಳಿದರು.

ನಗರದಲ್ಲಿವೆ 15 ಸಾವಿರ ಕೊಳವೆ ಬಾವಿಗಳು

ಪ್ರಸ್ತುತ ನಗರದಲ್ಲಿ 15 ಸಾವಿರ ಕೊಳವೆ ಬಾವಿಗಳಿವೆ. ದಾಖಲೆಗಳ ಪ್ರಕಾರ 16,781 ಕೊಳವೆ ಬಾವಿಗಳಿವೆ. ಇದರಲ್ಲಿ 6,997 ಕೊಳವೆ ಬಾವಿಗಳು ಬತ್ತಿ ಹೋಗಿದ್ದು, 7,784 ಕೊಳವೆ ಬಾವಿಗಳು ಚಾಲ್ತಿಯಲ್ಲಿವೆ. ಹೊಸ ಕೊಳವೆ ಬಾವಿ ಕೊರೆಸಲು ಸ್ಥಳೀಯ ಗುತ್ತಿಗೆದಾರರು ಮತ್ತು ತಮಿಳುನಾಡಿನ ಕೊಳವೆಬಾವಿ ಕೊರೆಯುವವರ ನಡುವೆ ದರದ ವಿಚಾರವಾಗಿ ಒಂದಷ್ಟು ಗೊಂದಲಗಳಿದ್ದು, ಇದನ್ನು ಶೀಘ್ರ ಬಗೆಹರಿಸಲಾಗುವುದು ಎಂದರು.

ನೀರು ಪೂರೈಕೆಗೆ ಹಾಲಿನ ಟ್ಯಾಂಕರ್‌ಗಳು

ನಿರುಪಯುಕ್ತ ಹಾಲಿನ ಟ್ಯಾಂಕರ್‌ಗಳನ್ನು ನೀರು ಸರಬರಾಜಿಗೆ ಬಳಕೆ ಮಾಡಲು ಸೂಚಿಸಲಾಗಿದೆ. ಕೆಎಂಎಫ್ ವ್ಯಾಪ್ತಿಯ ಎಲ್ಲಾ ಘಟಕಗಳಿಂದ ಟ್ಯಾಂಕರ್‌ಗಳನ್ನು ತರಿಸಿ ಸ್ವಚ್ಚಗೊಳಿಸಿ ಬಳಸಬೇಕು ಎಂದು ಹೇಳಲಾಗಿದೆ. ಈ ಟ್ಯಾಂಕರ್‌ಗಳನ್ನು ನೀರಿನ ಸಮಸ್ಯೆ ಬಗೆಹರಿಯುವ ತನಕ ಬಳಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಟ್ಯಾಂಕರ್ ನೀರು ಪೂರೈಕೆಗೆ ರೂ.500 ರಿಂದ 2 ಸಾವಿರದ ವರೆಗೂ ವಸೂಲಿ ಮಾಡುತ್ತಿದ್ದಾರೆ. ಈ ಗೊಂದಲದ ಕುರಿತು ಅಸೋಸಿಯೇಷನ್ ಬಳಿ ಮಾತನಾಡಿ, ನೀರಿನ ದರವನ್ನು ಕಿ.ಮೀಗೆ ಇಂತಿಷ್ಟು ಎಂದು ನಿಗದಿ ಮಾಡಲಾಗುವುದು. 110 ಹಳ್ಳಿಗಳಿಗೆ ಮೇ ಅಂತ್ಯದ ವೇಳೆಗೆ ಕಾವೇರಿ ನೀರು ಪೂರೈಕೆ ಮಾಡಲಾಗುವುಸು. 775 ಎಂಎಲ್‌ಡಿ ನೀರು ಆದಷ್ಟು ಬೇಗ ಜನರಿಗೆ ಪೂರೈಸಲಾಗುವುದು ಎಂದು ಡಿಕೆಶಿ ಭರವಸೆ ನೀಡಿದರು.

ನಿಷ್ಕ್ರಿಯವಾಗಿರುವ ಎಲ್ಲಾ ಶುದ್ದ ಕುಡಿಯುವ ನೀರಿನ ಘಟಕಗಳು ಚಾಲನೆಯಾಗಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ಸಮಸ್ಯೆ ನಿವಾರಣೆಗೆ ಜವಾಬ್ದಾರಿಯುತ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಸಂಬಂಧಪಟ್ಟ ಎಲ್ಲಾ ಇಲಾಖೆಯವರಿಗೆ, ಮುಖ್ಯವಾಗಿ ಬೆಸ್ಕಾಂ ಅವರಿಗೆ ನಗರದಲ್ಲಿ ಚಾಲನೆಯಲ್ಲಿ ಇರುವ ಕೃಷಿ, ವಾಣಿಜ್ಯ ಬಳಕೆಯ ಕೊಳವೆ ಬಾವಿಗಳನ್ನು ದಾಖಲಿಸಬೇಕು ಎಂದು ಸೂಚನೆ ನೀಡಲಾಗಿದೆ. ನಾಗರಿಕರು ಕೂಡ ಅನಗತ್ಯವಾಗಿ ನೀರನ್ನು ಬಳಕೆ ಮಾಡಬಾರದು. ಉದ್ಯಾನಗಳಿಗೆ, ಇತರೇ ಬಳಕೆಗೆ ಸಂಸ್ಕರಿಸಿದ ನೀರನ್ನು ಪೂರೈಸಲಾಗುವುದು. ಭೀಕರ ಬರಗಾಲದಲ್ಲಿ ನೀರಿನ ಮಿತ ಬಳಕೆ ಮಾಡಬೇಕು ಎಂದು ಮನವಿ ಮಾಡಿದರು.

ಇದನ್ನೂ ಓದಿ : ಪಾಕಿಸ್ತಾನ ಪರ ಘೋಷಣೆ ಆರೋಪ: ಮೂವರ ಬಂಧನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅರವಿಂದ್ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ನೀಡುವ ಬಗ್ಗೆಯೂ ಯೋಚಿಸಬಹುದು: ಸುಪ್ರೀಂ ಕೋರ್ಟ್‌

0
ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅರವಿಂದ್ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ನೀಡುವ ಬಗ್ಗೆ ಕೂಡ ನಾವು ಯೋಚಿಸಬಹುದು ಎಂದು ಸುಪ್ರೀಂ ಕೋರ್ಟ್ ನಿನ್ನೆ ಹೇಳಿದೆ. ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ತನ್ನ...