Homeಮುಖಪುಟ5 ವರ್ಷದಲ್ಲಿ 22 ಸಾವಿರ ಚುನಾವಣಾ ಬಾಂಡ್ ಬಿಡುಗಡೆ : ಎಸ್‌ಬಿಐ

5 ವರ್ಷದಲ್ಲಿ 22 ಸಾವಿರ ಚುನಾವಣಾ ಬಾಂಡ್ ಬಿಡುಗಡೆ : ಎಸ್‌ಬಿಐ

- Advertisement -
- Advertisement -

ಭಾರತೀಯ ಚುನಾವಣಾ ಆಯೋಗಕ್ಕೆ ಚುನಾವಣಾ ಬಾಂಡ್‌ಗಳ ಬಗ್ಗೆ ಮಾಹಿತಿಯನ್ನು ಒದಗಿಸಲು ಜೂನ್ 30, 2024ರವರೆಗೆ ಸಮಯವನ್ನು ವಿಸ್ತರಿಸುವಂತೆ ಕೋರಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್‌ಬಿಐ) ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

ಫೆಬ್ರವರಿ 15ರಂದು ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠ ನೀಡಿದ್ದ ತೀರ್ಪಿನ ಪ್ರಕಾರ, ಮಾರ್ಚ್ 6ರೊಳಗೆ ಎಸ್‌ಬಿಐ ಬಾಂಡ್‌ಗಳ ಕುರಿತ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ಒದಗಿಸಬೇಕಾಗಿದೆ.

ಸಮಯ ವಿಸ್ತರಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಎಸ್‌ಬಿಐ ಸಲ್ಲಿಸಿರುವ ಅರ್ಜಿಯಲ್ಲಿ, ಏಪ್ರಿಲ್ 12,2019 ರಿಂದ ಫೆಬ್ರವರಿ 15,2024ರ ನಡುವೆ ವಿವಿಧ ಪಕ್ಷಗಳಿಗೆ ದೇಣಿಗೆ ನೀಡಲು 22,217 ಚುನಾವಣಾ ಬಾಂಡ್‌ಗಳನ್ನು ನೀಡಲಾಗಿದೆ ಎಂದು ಹೇಳಿದೆ. ಬಿಡುಗಡೆ ಮಾಡಲಾದ ಚುನಾವಣಾ ಬಾಂಡ್‌ಗಳನ್ನು ಅನುಮತಿ ನೀಡಲಾದ ಶಾಖೆಗಳು ಮುಂಬೈ ಪ್ರಧಾನ ಶಾಖೆಗೆ ಪ್ರತಿ ಹಂತದ ಕೊನೆಯಲ್ಲಿ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿವೆ. ಎರಡು ಭಿನ್ನ ಮಾಹಿತಿ ಭಾಗಗಳು ಇರುವುದರಿಂದ ಒಟ್ಟು 44,434 ಮಾಹಿತಿ ಸೆಟ್‌ಗಳನ್ನು ಡಿಕೋಡ್ ಮಾಡಿ, ಕ್ರೋಢೀಕರಿಸಿ, ತುಲನೆ ಮಾಡಬೇಕಾಗುತ್ತದೆ ಎಂದು ಎಸ್‌ಬಿಐ ವಿವರಿಸಿದೆ.

ಸಂಪೂರ್ಣ ಪ್ರಕ್ರಿಯೆ ಪೂರ್ಣಗೊಳ್ಳಲು ಸುಪ್ರೀಂ ಕೋರ್ಟ್ ನಿಗದಿಪಡಿಸಿದ ಮೂರು ವಾರಗಳ ಕಾಲಾವಧಿಯು ಸಾಕಾಗುವುದಿಲ್ಲ ಎಂದು ಎಸ್‌ಬಿಐ ಹೇಳಿದೆ. ಚುನಾವಣಾ ಬಾಂಡ್‌ ಯೋಜನೆಯನ್ನು ‘ಅಸಂವಿಧಾನಿಕ’ ಎಂದು ರದ್ದು ಮಾಡುವಾಗ, ಸುಪ್ರೀಂ ಕೋರ್ಟ್ ಈ ಕೆಳಗಿನ ನಿರ್ದೇಶನಗಳನ್ನು ನೀಡಿತ್ತು:

  • ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಚುನಾವಣಾ ಬಾಂಡ್‌ಗಳ ವಿತರಣೆ ತಕ್ಷಣ ನಿಲ್ಲಿಸಬೇಕು
  • ಎಸ್‌ಬಿಐ ಏಪ್ರಿಲ್ 12,2019ರ ನ್ಯಾಯಾಲಯದ ಮಧ್ಯಂತರ ಆದೇಶದಿಂದ ಇಲ್ಲಿಯವರೆಗೆ ಖರೀದಿಸಿದ ಚುನಾವಣಾ ಬಾಂಡ್‌ಗಳ ವಿವರಗಳನ್ನು ಭಾರತೀಯ ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕು. ಪ್ರತಿ ಚುನಾವಣಾ ಬಾಂಡ್‌ನ ಖರೀದಿಯ ದಿನಾಂಕ, ಬಾಂಡ್‌ ಖರೀದಿದಾರರ ಹೆಸರು ಮತ್ತು ಖರೀದಿಸಿದ ಬಾಂಡ್‌ನ ಮುಖಬೆಲೆಯ ವಿವರ ಅದರಲ್ಲಿ ಒಳಗೊಂಡಿರಬೇಕು.
  • ಎಸ್‌ಬಿಐ ಏಪ್ರಿಲ್ 12,2019ರ ಮಧ್ಯಂತರ ಆದೇಶದಿಂದ ಇಲ್ಲಿಯವರೆಗೆ ಚುನಾವಣಾ ಬಾಂಡ್‌ಗಳ ಮೂಲಕ ಕೊಡುಗೆಗಳನ್ನು ಪಡೆದ ರಾಜಕೀಯ ಪಕ್ಷಗಳ ವಿವರಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕು. ಎಸ್‌ಬಿಐ ರಾಜಕೀಯ ಪಕ್ಷಗಳು ಎನ್‌ಕ್ಯಾಶ್ ಮಾಡಿದ ಪ್ರತಿಯೊಂದು ಚುನಾವಣಾ ಬಾಂಡ್‌ನ ವಿವರಗಳನ್ನು ಬಹಿರಂಗಪಡಿಸಬೇಕು. ಇದು ಎನ್‌ಕ್ಯಾಶ್‌ಮೆಂಟ್ ದಿನಾಂಕ ಮತ್ತು ಚುನಾವಣಾ ಬಾಂಡ್‌ನ ಮುಖಬೆಲೆಯನ್ನು ಒಳಗೊಂಡಿರಬೇಕು.
  • ಎಸ್‌ಬಿಐ ಮೇಲಿನ ಮಾಹಿತಿಗಳನ್ನು ಮೂರು ವಾರಗಳಲ್ಲಿ, ಅಂದರೆ ಮಾರ್ಚ್ 6 ರೊಳಗೆ ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕು. ಮಾರ್ಚ್ 13,2024 ರೊಳಗೆ ಎಸ್‌ಬಿಐನಿಂದ ಪಡೆದ ಮಾಹಿತಿಗಳನ್ನು ಚುನಾವಣಾ ಆಯೋಗ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು.
  • 15 ದಿನಗಳ ಸಿಂಧುತ್ವದ ಅವಧಿಯೊಳಗೆ ಇರುವ, ಆದರೆ ರಾಜಕೀಯ ಪಕ್ಷಗಳು ಇನ್ನೂ ಎನ್‌ಕ್ಯಾಶ್ ಮಾಡಿರದ ಚುನಾವಣಾ ಬಾಂಡ್‌ಗಳನ್ನು ರಾಜಕೀಯ ಪಕ್ಷವು ಖರೀದಿದಾರರಿಗೆ ಹಿಂತಿರುಗಿಸಬೇಕು. ಎಸ್‌ಬಿಐ ಖರೀದಿದಾರರ ಖಾತೆಗೆ ಅದರ ಮೊತ್ತವನ್ನು ಮರುಪಾವತಿ ಮಾಡಬೇಕು.
  • ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿಆರ್ ಗವಾಯಿ, ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಐವರು ನ್ಯಾಯಾಧೀಶರ ಪೀಠ, ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕಿಸ್ಟ್‌ ) ಮತ್ತು ಡಾ ಜಯ ಠಾಕೂರ್ ಸಲ್ಲಿಸಿದ್ದ ರಿಟ್ ಅರ್ಜಿಗಳನ್ನು ವಿಚಾರಣೆ ನಡೆಸಿ ಐತಿಹಾಸಿಕ ತೀರ್ಪು ಪ್ರಕಟಿಸಿತ್ತು.

ಇದನ್ನೂ ಓದಿ : ಚುನಾವಣಾ ಬಾಂಡ್‌ ಮಾಹಿತಿ ಒದಗಿಸಲು ಗಡುವು ವಿಸ್ತರಿಸಿ: ಸುಪ್ರೀಂ ಕೋರ್ಟ್‌ಗೆ ಎಸ್‌ಬಿಐ ಮನವಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...