Homeಪುಸ್ತಕ ವಿಮರ್ಶೆನಾವೆಲ್ಲರು ಓದಲೇಬೇಕಾದ ಪುಸ್ತಕ: 'ಎಲ್ಲರಿಗಾಗಿ ಸ್ತ್ರೀವಾದ - ಆಪ್ತತೆಯ ರಾಜಕಾರಣ'

ನಾವೆಲ್ಲರು ಓದಲೇಬೇಕಾದ ಪುಸ್ತಕ: ‘ಎಲ್ಲರಿಗಾಗಿ ಸ್ತ್ರೀವಾದ – ಆಪ್ತತೆಯ ರಾಜಕಾರಣ’

ಮಹಿಳೆಯನ್ನು ‘ಅನ್ಯ’ಳನ್ನಾಗಿಸಿ ನೋಡುವ ಪರಿಪಾಠವನ್ನು ಭಂಜನ ಮಾಡಬೇಕಿದೆ ಎನ್ನುವ ಬೆಲ್ ಹುಕ್ಸ್ ಪುರುಷವಾದಿ ಧೋರಣೆಗಳನ್ನು ಹೇಗೆಲ್ಲ ನಿರಾಕರಿಸುವ ಅಗತ್ಯವಿದೆ ಎಂಬುದನ್ನು ಇಲ್ಲಿ ಚರ್ಚಿಸಿದ್ದಾರೆ.

- Advertisement -
- Advertisement -

ಅಮೆರಿಕದ ಕಪ್ಪು ಸಮುದಾಯದ ಪ್ರಖರ ಸ್ತ್ರೀವಾದಿ ಲೇಖಕಿ, ವಿಮರ್ಶಕಿ, ಚಿಂತಕಿ, ಹಾಗೂ ಮಹಿಳಾ ಚಳವಳಿಯಲ್ಲಿ ಸಕ್ರಿಯ ಹೋರಾಟಗಾರ್ತಿಯಾಗಿರುವ ಬೆಲ್ ಹುಕ್ಸ್ ಅವರು ‘ಫೆಮಿನಿಸಂ ಇಸ್ ಫಾರ್ ಎವೆರಿಬಡಿ: ಪ್ಯಾಶನೇಟ್ ಪಾಲಿಟಿಕ್ಸ್’ (2000) ಎಂಬ ಮಹತ್ವದ ಕೃತಿಯನ್ನು ಬರೆದಿದ್ದಾರೆ. ಇದು ಸ್ತ್ರೀವಾದವನ್ನು ಮರುಪರಿಶೀಲನೆಗೆ ಒಳಪಡಿಸುತ್ತಲೇ ಅನೇಕ ಸಾಂಪ್ರದಾಯಿಕ ಧೋರಣೆಗಳನ್ನು ಬದಲಿಸಿಕೊಳ್ಳುವಂತೆ ಮಾಡುತ್ತದೆ. ಅಮೆರಿಕದ ಸ್ತ್ರೀವಾದಿ ಚಳವಳಿಗೆ ಹೊಸ ದಾರ್ಶನಿಕತೆಯನ್ನು ನೀಡಿರುವ ಈ ಕೃತಿಯನ್ನು ಕನ್ನಡದ ಮುಖ್ಯ ಸ್ತ್ರೀವಾದಿ ಚಿಂತಕಿಯಾದ ಡಾ. ಎಚ್. ಎಸ್. ಶ್ರೀಮತಿಯವರು ಅತ್ಯಂತ ಲವಲವಿಕೆಯಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ.

ಅಮೆರಿಕದ ಒಂದು ಸಾಂಪ್ರದಾಯಿಕ ಮೂಲಭೂತವಾದಿ ಕುಟುಂಬದಲ್ಲಿ ಹುಟ್ಟಿದ ಬೆಲ್ ಹುಕ್ಸ್ ಬಾಲ್ಯದಿಂದಲೇ ವರ್ಗ, ಜನಾಂಗೀಯ ಹಾಗೂ ಲಿಂಗ-ಈ ಮೂರು ನೆಲೆಯಿಂದಲೂ ತಾರತಮ್ಯತೆಯನ್ನು ಸ್ವತಃ ಅನುಭವಿಸಿದರು. ತಾವು ಓದುವ ಕಾಲೇಜಿನಲ್ಲಿಯೂ ಒಬ್ಬಳೇ ಕಪ್ಪು ಮಹಿಳೆಯಾಗಿ ಅಪಮಾನಗಳನ್ನು ಎದುರಿಸಿದರು. ಅಸಮಾನತೆಯ ವ್ಯವಸ್ಥೆಯಲ್ಲಿಯೇ ಬೆಲ್ ಹುಕ್ಸ್ ತಮ್ಮ ಗಟ್ಟಿಯಾದ ಸ್ತ್ರೀವಾದಿ ನಿಲುವುಗಳನ್ನು ರೂಪಿಸಿಕೊಂಡರು. ಈ ಕೃತಿಯಲ್ಲಿ ಬೆಲ್ ಹುಕ್ಸ್‌ರವರ ಆತ್ಮಕಥಾನಕದ ಕೆಲವು ಎಳೆಗಳು ಸೇರಿಕೊಂಡಿದ್ದರೂ ಅವರೆಲ್ಲೂ ಭಾವುಕರಾಗುವುದಿಲ್ಲ. ಅವರು ಎದುರುಗೊಂಡ ಅವಮಾನಗಳನ್ನು ವೈಯಕ್ತಿಕವಾಗಿಯಷ್ಟೇ ಪರಿಭಾವಿಸಿಕೊಳ್ಳದೆ ಒಟ್ಟಾರೆ ಸ್ತ್ರೀವಾದಿ ಚಳವಳಿಯ ಹಾಸಿನಲ್ಲಿಟ್ಟು ನೋಡುವ ವ್ಯವಧಾನವನ್ನು ಪಡೆದುಕೊಂಡಿದ್ದಾರೆ. ಅವರ ಬದುಕು ಹೆಚ್ಚು ಸ್ತ್ರೀವಾದಿ ಚಳವಳಿಯೊಂದಿಗೆ ತಳುಕು ಹಾಕಿಕೊಂಡು ಸಾರ್ವಜನಿಕ ಆಯಾಮವನ್ನು ಪಡೆದುಕೊಂಡಿದೆ. ಈ ಕೃತಿಯು ಅಮೆರಿಕದಂತಹ ಅತ್ಯಾಧುನಿಕ ದೇಶದಲ್ಲಿ ಸಾಮಾಜಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಕಪ್ಪು ಮಹಿಳೆಯರ ಅಸ್ಮಿತೆಯನ್ನು ನಿರ್ಲಿಪ್ತವಾಗಿ ಶೋಧಿಸುತ್ತದೆ. ಅವರು ಎಲ್ಲಿಯೂ ಕೂಡ ಪುರುಷರ ಬಗ್ಗೆ ದ್ವೇಷವನ್ನು ಕಾರುವುದಿಲ್ಲ. ಪುರುಷ ಪ್ರಧಾನತೆಯ ಅಧಿಕಾರದಿಂದ ನಡೆಯುವ ಹಿಂಸೆ, ದಬ್ಬಾಳಿಕೆ ಹಾಗೂ ದೌರ್ಜನ್ಯಗಳನ್ನು ತಡೆಗಟ್ಟುವ ಸಲುವಾಗಿ ಪರ್ಯಾಯ ಚಿಂತನಧಾರೆಗಳನ್ನು ಈ ಕೃತಿಯುದ್ದಕ್ಕೂ ಮಂಡಿಸುತ್ತ ಹೋಗಿದ್ದಾರೆ.

ಪಿತೃಪ್ರಧಾನತೆಯನ್ನು ಹೊಂದಿರುವ ಸಮಾಜದಲ್ಲಿ ಜಗತ್ತಿನ ಯಾವ ಮೂಲೆಯಲ್ಲಾದರು ಮಹಿಳೆಯರು ಬಲಿಪಶುಗಳಾಗಿರುತ್ತಾರೆ. ಆದ್ದರಿಂದಲೇ ಮಹಿಳೆಯರ ಸಮಾನತೆಯ ಹಕ್ಕುಗಳಿಗಾಗಿ ಸ್ತ್ರೀವಾದಿ ಚಳವಳಿಗಳು ಹುಟ್ಟಿಕೊಂಡವು. ಅದರಲ್ಲಿಯೂ ಮುಖ್ಯವಾಗಿ ಅಮೆರಿಕದ ಬಿಳಿಯ ಮಹಿಳೆಯರು ಶುರುವಿನಲ್ಲಿ ನಡೆಸಿದ ಸ್ತ್ರೀವಾದಿ ಹೋರಾಟಗಳು ಜನಾಂಗ, ವರ್ಗ ಹಾಗೂ ಲಿಂಗ ತಾರತಮ್ಯತೆಯ ವಿರುದ್ಧವಾಗಿ ಸೆಣಸುವ ಉದಾರವಾದಿ ಆಶಯಗಳನ್ನು ಹೊಂದಿದ್ದರು. ಆದರೆ ಆಳದಲ್ಲಿ ಅವರು ಪೂರ್ವಗ್ರಹಪೀಡಿತ ಮನಸ್ಥಿತಿಯವರಾಗಿದ್ದರು. ಯಾಕೆಂದರೆ ಅವರ ಚಿಂತನೆಗಳು ಸ್ವಹಿತಾಸಕ್ತಿಯಿಂದ ಮುಕ್ತವಾಗಿರಲಿಲ್ಲ. ಇಂತಹ ಹಲವು ಸಂಗತಿಗಳನ್ನು ಚರ್ಚೆಗೆ ಎತ್ತಿಕೊಳ್ಳುವ ಬೆಲ್ ಹುಕ್ಸ್‌ರವರು ಅಮೆರಿಕದ ಸ್ತ್ರೀವಾದಿ ಚಳವಳಿಯ ಸಂಕುಚಿತ ಮನೋಧರ್ಮವನ್ನು ನಿಷ್ಠುರವಾದ ವಿಮರ್ಶಾತ್ಮಕ ಧಾಟಿಯಲ್ಲಿ ಬಯಲಿಗೆಳೆದರು. ಅನುಕಂಪದ ‘ಸೋದರಿತ್ವ’ ತತ್ವದಡಿಯಲ್ಲಿ ಬಿಳಿಯ ಮಹಿಳೆಯರು ಕಪ್ಪು ಮಹಿಳೆಯರ ಪರವಾಗಿ ಸಮಾನತೆಯ ಮಾತುಗಳನ್ನಾಡುತ್ತಲೇ ಅವರನ್ನು ತಮ್ಮ ಅಧೀನತೆಗೆ ಪಳಗಿಸಿಕೊಂಡಿದ್ದ ರಾಜಕಾರಣವನ್ನು ನಿರ್ಭೀತಿಯಿಂದ ಬರೆದರು. ಒಂದು ಕಡೆಯಲ್ಲಿ ಅವರು ಪುರುಷ ಪ್ರಧಾನತೆಯ ದಬ್ಬಾಳಿಕೆಯನ್ನು ವಿರೋಧಿಸುತ್ತಿದ್ದರು ಹಾಗೂ ಮತ್ತೊಂದೆಡೆಯಲ್ಲಿ ಜನಾಂಗಿಯ ಭೇದಭಾವವನ್ನು ಪೋಷಿಸುತ್ತಿದ್ದ ವೈರುಧ್ಯವನ್ನು ದಿಟ್ಟವಾಗಿ ತಮ್ಮ ಕೃತಿಯಲ್ಲಿ ತೆರೆದಿಟ್ಟರು. ಕಪ್ಪು ಮಹಿಳೆಯ ದೃಷ್ಟಿಕೋನದಿಂದ ಸ್ತ್ರೀವಾದ ಚಳವಳಿಗೆ ವಿಸ್ಕೃತವಾದ ಆಯಾಮಗಳನ್ನು ಜೋಡಿಸಿದರು.

ಭಾರತದ ಸಂದರ್ಭದಲ್ಲಿ ಜಾತಿವ್ಯವಸ್ಥೆಯು ಎಲ್ಲ ಶೋಷಣೆಗಳ ಮೂಲವಾಗಿರುತ್ತದೆ. ನಮ್ಮಲ್ಲಿ ಎಲ್ಲ ವರ್ಗದ ಹೆಂಗಸರು ದಮನಿತರೇ ಆಗಿದ್ದಾರೆ. ಆದರೆ ದಲಿತ ಮಹಿಳೆಯರು ಜಾತಿ, ವರ್ಗ ಹಾಗೂ ಲಿಂಗದ ನೆಲೆಯಿಂದ ದಿನದಿತ್ಯವೂ ಪುರುಷ ದಬ್ಬಾಳಿಕೆಯನ್ನು ಅನುಭವಿಸುತ್ತಿರುತ್ತಾರೆ. ಇದನ್ನೆಲ್ಲ ಗಮನಿಸಿದರೆ ನಮ್ಮಲ್ಲಿ ಸ್ತ್ರೀವಾದಿ ಚಳವಳಿಯು ಇನ್ನೂ ಪ್ರಾಥಮಿಕ ಹಂತದಲ್ಲಿಯೇ ಉಳಿದುಕೊಂಡಿದೆ. ಸ್ತ್ರೀವಾದದ ಚರ್ಚೆಯೆಂದರೆ ಅದು ಕೇವಲ ಸಾಹಿತ್ಯ ಕೃತಿಗಳಿಗೆ ಹಾಗೂ ಅಕಾಡೆಮಿಕ್ ವಲಯಕ್ಕಷ್ಟೇ ಸೀಮಿತವಾಗಿದೆ. ಅಷ್ಟಿಷ್ಟು ನಡೆದ ಅಧ್ಯಯನಗಳು ಪ್ರಧಾನವಾಹಿನಿಗೆ ಬರುತ್ತಿಲ್ಲ. ಎಲ್ಲ ವರ್ಗದ ಜನಸಾಮಾನ್ಯರಿಗೆ ಸ್ತ್ರೀವಾದವನ್ನು ಕುರಿತು ಅರಿವನ್ನು ನೀಡುವ ಪುಸ್ತಕಗಳ ಕೊರತೆಯಿದೆ. ಈ ನಿಟ್ಟಿನಲ್ಲಿ ಎಚ್.ಎಸ್. ಶ್ರೀಮತಿಯವರು ಚಿಮಮಾಂಡ ನ್‍ಗೊಜಿ ಅಡಿಚಿಯವರ ‘ವಿ ಆಲ್ ಶುಡ್ ಬಿ ಫೆಮಿನಿಸ್ಟ್’ ಎಂಬ ಉಪನ್ಯಾಸವನ್ನು ಭಾಷಾಂತರಿಸಿ ‘ನಾವೆಲ್ಲರೂ ಸ್ತ್ರೀವಾದಿಗಳಾಗಬೇಕು’ ಎಂಬ ಪುಟ್ಟ ಕೃತಿಯನ್ನು ನೀಡಿದ್ದಾರೆ. ಇದೇ ದಾರಿಯಲ್ಲಿ ಬೆಲ್ ಹುಕ್ಸ್ ಅವರ ಕೃತಿಯು ಸ್ತ್ರೀವಾದಿ ಶಿಕ್ಷಣದ ತರಬೇತಿಯನ್ನು ನೀಡುತ್ತದೆ. ಇಂತಹ ಕೃತಿಗಳು ಹೆಚ್ಚೆಚ್ಚು ಕನ್ನಡದಲ್ಲಿ ಬರಬೇಕಾಗಿದೆ ಹಾಗೂ ಅವು ಸುಲಭವಾಗಿ ಓದುಗರಿಗೆ ಕೈಗೆಟಕುವ ವ್ಯವಸ್ಥೆಯಾಗಬೇಕಿದೆ.

ನಮ್ಮ ಶಾಲಾಕಾಲೇಜುಗಳ ಶೈಕ್ಷಣಿಕ ಪಠ್ಯಗಳು ಅತ್ಯಂತ ಸಾಂಪ್ರದಾಯಿಕ ರೀತಿಯಲ್ಲಿವೆ. ಇನ್ನು ಸ್ತ್ರೀವಾದಿ ಆಲೋಚನೆಗಳು ನಮ್ಮ ಶಿಕ್ಷಣ ವ್ಯವಸ್ಥೆಯ ಅಂಗವಾಗಿಲ್ಲ. ಮನೆಯಿಂದಲೇ ಹೆಣ್ಣುಮಕ್ಕಳನ್ನು ತರತಮ ಭಾವನೆಯಿಂದ ಬೆಳೆಸಲಾಗುತ್ತದೆ. ಶಾಲಾ ಕಾಲೇಜುಗಳು ಇದೇ ಲಿಂಗತಾರತಮ್ಯವನ್ನು ಪೋಷಿಸಿಕೊಂಡು ಹೋಗುತ್ತಿವೆ. ಇದರಿಂದಾಗಿ ಹೆಣ್ಣನ್ನು ಎರಡನೇ ದರ್ಜೆಯಲ್ಲಿಡುವ ಕೀಳು ಪ್ರಜ್ಞೆಯು ಜಾಗೃತವಾಗಿರುತ್ತದೆ. ಪಿತೃಪ್ರಧಾನ ಮೌಲ್ಯಗಳನ್ನು ಎತ್ತಿಹಿಡಿಯುವುದರಿಂದ ಮಹಿಳೆಯರ ಮೇಲಿನ ಯಜಮಾನಿಕೆಯು ಅವ್ಯಾಹತವಾಗಿ ಮುಂದುವರೆಯುತ್ತದೆ. ಅದಕ್ಕಾಗಿಯೇ ಸ್ತ್ರೀವಾದದ ಕನಿಷ್ಟ ಶಿಕ್ಷಣವಾದರು ಗಂಡು ಮಕ್ಕಳಿಗೂ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಪರಸ್ಪರ ಹೆಣ್ಣು-ಗಂಡುಗಳ ನಡುವಿನ ಸಾಮರಸ್ಯದ ಅರಿವಿಗಾಗಿ ‘ಎಲ್ಲರಿಗಾಗಿ ಸ್ತ್ರೀವಾದ’ ಕೃತಿಯು ಒಂದು ಮುಖ್ಯವಾದ ಕೈಪಿಡಿಯಾಗಿದೆ.

‘ಎಲ್ಲರಿಗಾಗಿ ಸ್ತ್ರೀವಾದ’ವು ಬರಿ ಅಮೆರಿಕನ್ ಸ್ತ್ರೀವಾದಿ ಚಳವಳಿಯನ್ನಷ್ಟೆ ಗಮನದಲ್ಲಿಟ್ಟುಕೊಂಡು ರಚನೆಯಾದ ಕೃತಿಯಲ್ಲ. ಜಾಗತಿಕ ಸ್ತ್ರೀವಾದವನ್ನು ವಿಮರ್ಶಿಸುತ್ತಲೇ ಆಯಾ ಕಾಲಘಟ್ಟದ ಚಳವಳಿಯ ಮಿತಿಗಳನ್ನು ಕಾಣಿಸಲಾಗಿದೆ. ಸಾಮಾಜೀಕರಣದ ಭಾಗವಾಗಿ ಹೆಣ್ಣನ್ನು ಪಳಗಿಸಿ ಅಧೀನವಾಗಿಸಿಕೊಳ್ಳುವ ಲೈಂಗಿಕತಾವಾದದಿಂದ ಹೊರಬರುವುದರ ಬಗ್ಗೆ ಸಾಕಷ್ಟು ಒಳನೋಟಗಳಿವೆ. ಪುರುಷರ ಕಣ್ಣಳತೆಯಲ್ಲಿ ತಮ್ಮ ದೇಹ ಮತ್ತು ಸೌಂದರ್ಯವನ್ನು ಪರಿಭಾವಿಸಿಕೊಳ್ಳುವ ಮಹಿಳೆಯು ಪಿತೃಪ್ರಧಾನತೆಯನ್ನು ಒಪ್ಪಿಕೊಂಡವರೇ ಆಗಿರುತ್ತಾರೆ. ಸಮೂಹ ಮಾಧ್ಯಮಗಳು ಹಾಗೂ ಜಾಹಿರಾತುಗಳು ಹೆಣ್ಣಿನ ಬಳಕುವ ದೇಹವನ್ನೇ ಬಂಡವಾಳವಾಗಿಸಿಕೊಂಡು ಅವರಿಗೆ ಸೌಂದರ್ಯವರ್ಧಕ ಸಾಧನಗಳನ್ನು ಮಾರಾಟ ಮಾಡುವ ಜಾಲವನ್ನು ಸೃಷ್ಟಿಸಿಕೊಂಡಿವೆ. ಹೆಣ್ಣಿಗೆ ತನ್ನ ದೇಹ ಹಾಗೂ ಲೈಂಗಿಕತೆಯ ಮೇಲೆ ಅವಳದ್ದೇ ಹಕ್ಕುಗಳಿರಬೇಕು ಎಂಬುದನ್ನು ಎಲ್ಲ ಸ್ತ್ರೀವಾದಿಗಳು ಹೇಳುವ ಮಾತಾಗಿದೆ. ಆದರೆ ಅನೇಕ ಮಹಿಳೆಯರು ಕೂಡ ಪಿತೃಪ್ರಧಾನತೆಯ ಮೌಲ್ಯಗಳನ್ನು ಹಾಗೂ ಯಜಮಾನಿಕೆಯನ್ನು ಬೆಂಬಲಿಸುವವರಾಗಿರುತ್ತಾರೆ. ಇಂತಹ ಪುರುಷನಿಷ್ಠ ನಂಬಿಕೆಗಳನ್ನು ಮುಂದಿನ ಪೀಳಿಗೆಗೆ ದಾಟಿಸುವ ಮಹಿಳೆಯರನ್ನು ಸ್ತ್ರೀವಾದಿಗಳೆಂದು ಕರೆಯಲಾಗದು. ಮಹಿಳೆಯರ ಮೂಲಕ ಮುಂದುವರೆಯುವ ಪುರುಷ ಪ್ರಧಾನತೆಯನ್ನು ಬೆಲ್ ಹುಕ್ಸ್ ತಮ್ಮ ಕೃತಿಯಲ್ಲಿ ಸಾಕಷ್ಟು ಕಟುವಾಗಿ ಮಿಮರ್ಶಿಸಿದ್ದಾರೆ.

ಮಹಿಳೆಯನ್ನು ‘ಅನ್ಯ’ಳನ್ನಾಗಿಸಿ ನೋಡುವ ಪರಿಪಾಠವನ್ನು ಭಂಜನ ಮಾಡಬೇಕಿದೆ ಎನ್ನುವ ಬೆಲ್ ಹುಕ್ಸ್ ಪುರುಷವಾದಿ ಧೋರಣೆಗಳನ್ನು ಹೇಗೆಲ್ಲ ನಿರಾಕರಿಸುವ ಅಗತ್ಯವಿದೆ ಎಂಬುದನ್ನು ಚರ್ಚಿಸಿದ್ದಾರೆ. ಮಹಿಳೆಯನ್ನು ನೋಡುವ ದೃಷ್ಟಿಕೋನದಲ್ಲಿ ಬದಲಾಗಬೇಕಾದರೆ ಗಂಡು ಪ್ರಧಾನ ನಿಲುವುಗಳಲ್ಲಿ ಪಲ್ಲಟವನ್ನು ತರಬೇಕಾಗುತ್ತದೆ. ಇದಕ್ಕಾಗಿ ವ್ಯಾಪಕವಾಗಿ ಸ್ತ್ರೀವಾದಿ ಪ್ರಜ್ಞಾ ತರಬೇತಿಯು ಬೇಕಾಗುತ್ತದೆ. ಸ್ತ್ರೀವಾದಿ ಚಿಂತನೆಗಳು ಎಲ್ಲರಿಗೂ ದಕ್ಕುವ ಹಾಗೆ ಮಾಡಬೇಕೆನ್ನುವ ಸಾಮಾಜಿಕ ಕಾಳಜಿಯು ಬೆಲ್ ಹುಕ್ಸ್‌ರವರ ಕೃತಿಯಲ್ಲಿ ಹರಡಿಕೊಂಡಿದೆ. ಬೆಲ್ ಹುಕ್ಸ್‌ರವರ ಸ್ತ್ರೀವಾದಿ ಆಲೋಚನೆಗಳನ್ನು ನಮ್ಮ ಪರಿಸರಕ್ಕೆ ಒಗ್ಗಿಸಿಕೊಂಡು ಚರ್ಚಿಸುವ ಅಗತ್ಯವಿದೆ. ಸದರಿ ಕೃತಿಯ ಅನುವಾದದಲ್ಲಿ ಬಳಕೆಯಾಗಿರುವ ಸ್ತ್ರೀವಾದಿ ಲೇಖಕಿಯರ ಬಗ್ಗೆ ಹಾಗೂ ಕೆಲವು ಪರಿಭಾಷೆಗಳ ಕುರಿತು ಅನುಬಂಧದಲ್ಲಿ ವಿವರಣೆಯನ್ನು ನೀಡಿದ್ದರೆ ಸಾಮಾನ್ಯ ಓದುಗರಿಗೆ ಹೆಚ್ಚು ಉಪಯುಕ್ತವಾಗುತ್ತಿತ್ತು.

ಎಲ್ಲರಿಗಾಗಿ ಸ್ತ್ರೀವಾದ: ಆಪ್ತತೆಯ ರಾಜಕಾರಣ
ಮೂಲ: ಬೆಲ್ ಹುಕ್ಸ್
ಕನ್ನಡಕ್ಕೆ: ಎಚ್.ಎಸ್. ಶ್ರೀಮತಿ
ಪ್ರಕಾಶಕರು: ಆಕೃತಿ ಪುಸ್ತಕ, ರಾಜಾಜಿನಗರ
ಪುಟ: 208 ಬೆಲೆ: 150 ರೂಪಾಯಿ

* ಡಾ. ಸುಭಾಷ್ ರಾಜಮಾನೆ

ಯಲಹಂಕ ಪದವಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರು. ಕನ್ನಡ ಇಂಗ್ಲಿಷ್ ಮರಾಠಿ, ಭಾಷೆಗಳನ್ನು ಬಲ್ಲ ಇವರು ಸಿನೆಮಾ ವಿಮರ್ಶೆಗಳನ್ನು ಬರೆದಿದ್ದಾರೆ. ಇಮೇಲ್ ವಿಳಾಸ [email protected]


ಇದನ್ನೂ ಓದಿ: ಸಾರಾ ಶಗುಫ್ತಾ: ‘ನೋವಿನ ಗಾಯಗಳಿಗೆ ಸಾಕ್ಷಿಯಾದ ಕಾವ್ಯ’
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. It’s an interesting reading but one may have his or her differences. It’s neither easy nor difficult to reject the feminist perspective unless we seriously discuss alternate explanations to define the relationship between a male and a female

LEAVE A REPLY

Please enter your comment!
Please enter your name here

- Advertisment -

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...

ಮಧುರಾಂತಕಂ ಬಳಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಪೋಕ್ಸೋ ಪ್ರಕರಣದಡಿ ಓರ್ವ ರೌಡಿ ಶೀಟರ್ ಬಂಧನ

ಚೆನ್ನೈ (ಚೆಂಗಲ್ಪಟ್ಟು): ಸೋಮವಾರ ರಾತ್ರಿ ಮಧುರಾಂಟಕಂ ಬಳಿಯ ಜಲಮೂಲದ ದಡದಲ್ಲಿ 14 ವರ್ಷದ ಬಾಲಕಿಯ ಮೇಲೆ ರೌಡಿ ಶೀಟರ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪೋಕ್ಸೋ...

ಮುಸ್ಲಿಂ ಮಹಿಳೆಯರ ವಿರುದ್ಧದ ಷರಿಯಾ ಕಾನೂನಿಗೆ ಏಕರೂಪ ನಾಗರಿಕ ಸಂಹಿತೆ ಪರಿಹಾರ: ಸುಪ್ರೀಂ ಕೋರ್ಟ್

"ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ತಾರತಮ್ಯದ ಆನುವಂಶಿಕ ನಿಬಂಧನೆಗಳನ್ನು ಪರಿಹರಿಸಲು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅತ್ಯಂತ ಪರಿಣಾಮಕಾರಿ ಪರಿಹಾರ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಮಾ.20) ಹೇಳಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ...

ಮುಂಬೈ: ಬಜೆಟ್ ಅಧಿವೇಶನದ ನಡುವೆ ವಿಧಾನ ಭವನದ ಬಳಿ ವ್ಯಕ್ತಿಯೊಬ್ಬನಿಂದ ಆತ್ಮಹತ್ಯೆಗೆ ಯತ್ನ: ವಶಕ್ಕೆ ಪಡೆದ ಪೊಲೀಸರು

ಮುಂಬೈ: ಮಾರ್ಚ್ 11, ಬುಧವಾರ ಮಹಾರಾಷ್ಟ್ರ ವಿಧಾನ ಭವನದ ಹೊರಗೆ ವ್ಯಕ್ತಿಯೊಬ್ಬರು ಆತ್ಮಾಹುತಿ ಮಾಡಿಕೊಳ್ಳಲು ಯತ್ನಿಸಿರುವುದಾಗಿ ವರದಿಯಾಗಿದೆ. ತಕ್ಷಣವೇ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದಾರೆ.  2026 ರ ಮಹಾರಾಷ್ಟ್ರ ಬಜೆಟ್ ಅಧಿವೇಶನ ವಿಧಾನ ಭವನದಲ್ಲಿ...

ಕೋವಿಡ್ ಲಸಿಕೆ ಕೆಲ ಸಾವುಗಳಿಗೆ ಕಾರಣವಾಗಿದೆ ಎಂದು ಅಧಿಕೃತ ದತ್ತಾಂಶ ತೋರಿಸಿದೆ, ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಸರ್ಕಾರದ ಅಧೀನದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲಕ ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ. ಕೋವಿಡ್ ಲಸಿಕೆ ಪಡೆದ ಬಳಿಕ ಕೆಲ ಸಾವುಗಳು ಸಂಭವಿಸಿರುವುದನ್ನು ಅಧಿಕೃತ ದತ್ತಾಂಶಗಳೇ ದೃಢಪಡಿಸಿವೆ. ಹೀಗಿರುವಾಗ, ಲಸಿಕೆ ಹಾಕಿಸಿಕೊಂಡ ನಂತರ ಸಾವು...

ತಮಿಳುನಾಡು| ಪೊಲೀಸ್ ದೌರ್ಜನ್ಯದಿಂದ ಎರಡು ತಿಂಗಳಲ್ಲಿ ನಾಲ್ವರು ದಲಿತರು ಸಾವು

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದನ್ನು ಪ್ರತಿಬಿಂಬಿಸುವ ಆತಂಕಕಾರಿ ವಿಚಾರವೊಂದು ಮುನ್ನಲೆಗೆ ಬಂದಿದ್ದು, ಪೊಲೀಸ್ ಹಿಂಸಾಚಾರದಿಂದಾಗಿ ಎರಡು ತಿಂಗಳ ಅವಧಿಯಲ್ಲಿ ನಾಲ್ವರು ದಲಿತರು ಸಾವನ್ನಪ್ಪಿದ್ದಾರೆ. ಈ ಸಾವುಗಳಲ್ಲಿ, ಎರಡು ಪ್ರಕರಣಗಳನ್ನು...

ಪಶ್ಚಿಮ ಏಷ್ಯಾ ಸಂಘರ್ಷ| ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿದ್ದಾಗಿ ವಿಡಿಯೋ ಹಂಚಿಕೊಂಡ ಅಮೆರಿಕ ಸೇನೆ

ಪಶ್ಚಿಮ ಏಷ್ಯಾದಿಂದ ತೈಲ ರಫ್ತನ್ನು ತಡೆಯಲು ಇರಾನ್ ಪ್ರಯತ್ನಿಸುತ್ತಿರುವುದರಿಂದ ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿರುವುದಾಗಿ ಅಮೆರಿಕ ಸೇನೆ ಹೇಳಿಕೊಂಡಿದೆ.  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಇರಾನ್ ಜಲಸಂಧಿಯಲ್ಲಿ ಗಣಿಗಳನ್ನು...

13 ವರ್ಷಗಳಿಂದ ಕೋಮಾದಲ್ಲಿರುವ ಯುವಕನ ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅನುಮತಿ

ಕಳೆದ 13 ವರ್ಷಗಳಿಂದ ಕೋಮಾದಲ್ಲಿರುವ 32 ವರ್ಷದ ಹರೀಶ್ ರಾಣಾ ಎಂಬ ಯುವಕನ ಪರೋಕ್ಷ (ನಿಷ್ಕ್ರಿಯ) ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಬುಧವಾರ (ಮಾ.11) ಅನುಮತಿ ನೀಡಿದೆ ಎಂದು livelaw.in ವರದಿ ಮಾಡಿದೆ. ದೆಹಲಿ ಮೂಲದ ಹರೀಶ್...