Homeನ್ಯಾಯ ಪಥಪುಸ್ತಕ ವಿಮರ್ಶೆ; ಆತ್ಮಮರುಕದಾಚೆ ಸಿಡಿಯುವ ಕಾರುಣ್ಯದ ಕಿಡಿಯ ರೂಪಕಗಳು

ಪುಸ್ತಕ ವಿಮರ್ಶೆ; ಆತ್ಮಮರುಕದಾಚೆ ಸಿಡಿಯುವ ಕಾರುಣ್ಯದ ಕಿಡಿಯ ರೂಪಕಗಳು

- Advertisement -
- Advertisement -

ಉರಿಪಾದದ ನೆರಳಲ್ಲಿ
ತೊಡೆಯ ತೊಗಲ ಸುಲಿದು
ಮೆಟ್ಟಲೆಂದೇ ಅಟ್ಟೆಕಟ್ಟಿದ್ದ ಮಾದರ
ಕುಡಿ ಮಕ್ಕಳ ಚರ್ಮವ ಸುಲಿದು
ನಟ್ಟ ನಡುಬೀದಿಯಲ್ಲಿ ಕೆಡವಿ
ಕ್ಯಾಕರಿಸುವವರ ಉಘೇ ಉಘೇಯ
ಜೊಲ್ಲು ಸುರಿದು ನಾರುತ್ತಿದೆ ನಾಡು..

ಒಂದು ಕ್ಷಣ ಮೈಕೊಡವಿ ಕಣ್ಣು ಅಗಲಿಸಿ, ಎದೆ ಉರಿಯುವಂತೆ ಮಾಡುವ ಸಾಲುಗಳಿವು. ಅವಡುಗಚ್ಚಿ ಸಹಿಸಿಕೊಳ್ಳುತ್ತಿದ್ದರೂ, ಕಣ್ಣಲ್ಲಿ ಕಣ್ಣೀರ ಜೊತೆ ಕಿಡಿಯೂ ಸಿಡಿಯುತ್ತಿರುವಂತಿವೆ ಈ ಸಾಲುಗಳು. ‘ಕಾರುಣ್ಯದ ಮೋಹಕ ನವಿಲುಗಳೆ’ ಎಂಬ ರಮ್ಯವೆನಿಸುವ ಶೀರ್ಷೀಕೆಯೊಳಗೆ ಸುಡು ಕೆಂಡಗಳನ್ನೇ ಇಟ್ಟಿದ್ದಾರೆ ಕವಿ ಆರನಕಟ್ಟೆ ರಂಗನಾಥ. ಶತಮಾನಗಳ ಶೋಷಣೆಯಲ್ಲಿ ಬೆಂದ ಕತೆಗಳನ್ನು ನಮ್ಮ ಅಂಗೈಯಲ್ಲಿ ಸುಡುಸುಡುವಂತೆಯೇ ಇಟ್ಟ ಹಾಗೆನಿಸುತ್ತದೆ. ಈ ಕವಿತೆಗಳನ್ನು ಓದಿ ಮರುಗಬೇಕೆನಿಸುವಷ್ಟರಲ್ಲಿ, ಬೆಚ್ಚಿ ಬೀಳಿಸಿ ಜೀವದ ಘನತೆಯನ್ನೇ ಮರೆತ ನಮ್ಮ ಸಮಾಜದ ಶತಮಾನಗಳ ಶೋಷಣೆಯ ಚಿತ್ರಗಳನ್ನು ಕಟ್ಟಿಕೊಡುತ್ತಾ ಎಚ್ಚರಿಸುತ್ತದೆ.

ಮೂವತ್ತೆಂಟು ಕವಿತೆಗಳ ಈ ಸಂಕಲನದಲ್ಲಿ ಕವಿ ರಂಗನಾಥ ಒಂದು ಮಹಾಪಯಣದ ಕತೆಯನ್ನು ಬಿಡಿಬಿಡಿಯಾಗಿ ವಿವರಿಸಿದ್ದಾರೆ. ತನ್ನ ಅಜ್ಜ, ಅಜ್ಜಿ, ಅಪ್ಪ, ತಾನು ಬೆಳೆದ ಊರು, ದಲಿತ ಹೆಣ್ಣು ಜೀವಗಳ ಮೇಲೆ ನಡೆದ ದೌರ್ಜನ್ಯ, ಶೋಷಣೆಯ ವಿರುದ್ಧದ ಸೆಡವು ಎಲ್ಲವೂ ತೀವ್ರವಾದ ರೂಪಕಗಳೊಂದಿಗೆ ಬಿಚ್ಚಿಕೊಳ್ಳುತ್ತವೆ. ಹೀಗೆ ಬಿಚ್ಚಿಕೊಳ್ಳುವ ಚಿತ್ರಗಳು ನಮ್ಮೊಳಗೆ ಮರುಕ ಹುಟ್ಟಿಸುವಷ್ಟು ತೀವ್ರವಾಗಿದ್ದರೂ, ಉರಿಯ ರೂಪಕಗಳ ಆ ಮರುಕವನ್ನು ಸುಟ್ಟುಹಾಕುತ್ತಾ, ಪ್ರತಿರೋಧ ಮತ್ತು ಹೊಸ ಕಾಲದ ಎಚ್ಚರದವನ್ನು ದಾಖಲಿಸುತ್ತವೆ.

ಹಕ್ಕು, ಹೋರಾಟ, ಶೋಷಣೆಯ ವಿರುದ್ಧದ ಘೋಷಣೆಯ ಸಾಲುಗಳಾಗಿ ಬಿಡುತ್ತವೇನೊ ಅನ್ನಿಸುವಷ್ಟರಲ್ಲೇ ನಮ್ಮನ್ನು ತನ್ನ ಕಾವ್ಯ ತೀವ್ರತೆಯಲ್ಲಿ ತಲ್ಲಣಿಸುವಂತೆ ಮಾಡಿಬಿಡುತ್ತವೆ ಇಲ್ಲಿರುವ ಕವನಗಳ ಸಾಲುಗಳು. ಶತಮಾನಗಳಿಂದ ಜಾತಿ ಹೆಸರಿನಲ್ಲಿ ಮನುಷ್ಯ ಸಹಜ ಘನತೆ, ಸಂವೇದನೆಗಳನ್ನು ಮೀರಿದ ಶೋಷಣೆಯನ್ನು ಪ್ರತಿಯೊಬ್ಬನಲ್ಲೂ ಪಾಪಪ್ರಜ್ಞೆಯಾಗಿಸುವಂತೆ ಕಾಡುತ್ತವೆ. ಊರಿನ ಎಲ್ಲ ಕೆಲಸಗಳನ್ನು ಮಾಡಿ ಊರಿನಂಚಿಗೆ ಬದುಕುವಂತೆ ಮಾಡುವ ಕ್ರೌರ್ಯವಿದೆಯಲ್ಲ ಅದು ಅರಗಿಸಿಕೊಳ್ಳಲಾಗದ್ದು. ಅದನ್ನೇ ಕವಿ,

ಊರು ಕಟ್ಟಿದವರಿಗೆ ಕೇರಿಯವರೆಂದು
ಕಾಲೋನಿಗಳ ಪಟ್ಟವ ಕಟ್ಟಿದ ಪ್ರತಿಷ್ಠೆಗೆ
ಊರು ಸಾರಿದವರ ಸಾವು ಕೋರಿ
ಸಂತಾನಗಳಿಗೆ ಶವ ಕೂಡಿಟ್ಟು ಉಣಿಸಿದಿರಿ
ಎನ್ನುತ್ತಾರೆ,

ದೂರದ ತಂಜಾವೂರಿನಿಂದು ಬಂದು ಆರನಕಟ್ಟೆಯಲ್ಲಿ ಬದುಕು ಕಟ್ಟಿಕೊಂಡ ಅಜ್ಜ ಸುಬ್ಬನ್, ಬೀಡಿಯ ಉರಿಯಲ್ಲಿ ತನ್ನೆಲ್ಲಾ ಕೋಪವನ್ನು ಸುಟ್ಟ ಅಯ್ಯನ್, ತಂಬೂರಿ ರಾಜಮ್ಮ ಇಲ್ಲಿ ಆತ್ಮಾಭಿಮಾನದ ಸಂಕೇತಗಳಾಗಿ, ಹೆಮ್ಮೆಯಾಗಿ ಮೆರೆಯುತ್ತವೆ. ಶೋಷಣೆಯ ನೋವು, ಸಂಕಟ ಕಣ್ಣೀರು ಉಕ್ಕಿಸಿದರೂ ತಡೆದುಕೊಳ್ಳುವುದನ್ನು ಹೇಳುವ ಇಲ್ಲಿನ ಸಾಲುಗಳು ಎದೆಯ ಉರಿಯನ್ನು ನಂದಿಸದೇ ಇಟ್ಟುಕೊಳ್ಳುವ ಹಠವನ್ನು ಪ್ರತಿಧ್ವನಿಸುತ್ತವೆ.

ಪೂರ್ವಿಕರ ಅನುಭವಗಳೊಂದಿಗೆ ತನ್ನ ಅನುಭವವನ್ನು ಬೆರೆಸಿ ನೋಡುವ ಕವಿ, ಈ ಎರಡೂ ನೆಲೆಗಳ ಅಸ್ಮಿತೆಯ ಹಿನ್ನೆಲೆಯಲ್ಲಿ, ಎರಡೂ ನೆಲೆಗಳ ಪುರಾಣ, ಚರಿತ್ರೆ, ಸಂಸ್ಕೃತಿ ಮತ್ತು ಭಾಷೆಗಳನ್ನು ತಮ್ಮ ಕಾವ್ಯದಲ್ಲಿ ತಂದಿದ್ದಾರೆ. ಹಾಗಾಗಿ ಇಲ್ಲಿನ ಕವಿತೆಗಳಲ್ಲಿ ವಿಭಿನ್ನ ಪ್ರತಿಮೆ-ರೂಪಕಗಳು, ನುಡಿಗಟ್ಟುಗಳು ತೀವ್ರವಾಗಿ ಮೂಡಿ ಬಂದಿವೆ. ವಚನ ಚಳುವಳಿಯ ಪಿತಾಮಹ, ಆದಿ ವಚನಕಾರ ಚನ್ನಯ್ಯ, ಜಾಂಬವಮುನಿ, ಹೆಪ್ಪುಮುನಿ, ಬೆಪ್ಪುಮುನಿ, ನಂದನ, ರವಿದಾಸ, ಗಲ್ಲೇಬಾನಿ, ಚಮ್ಮಾವುಗೆಯಂತಹ ಪ್ರತಿಮಾ ಸಂಕೇತಗಳು ಸಂಕಲನದುದ್ದಕ್ಕೂ ಕಾಣಿಸುತ್ತವೆ. ಮಾದರ ಚನ್ನಯ್ಯನ ವಚನದ ಅಂಕಿತವನ್ನು ಕವಿ ಕವಿತೆಯೊಂದರ ಸಾಲನ್ನಾಗಿಸಿದ್ದಾರೆ. ಇಲ್ಲಿನ ಕವಿತೆಗಳಲ್ಲಿ ಮತ್ತೆ ಮತ್ತೆ ಕಾಣಿಸುವ ಮೆಟ್ಟಿನ ಸಂಕೇತ ಪರಂಪರೆಗೂ ಸಮುದಾಯಕ್ಕೂ ಇರುವ ಅಂತಃಕರಣವನ್ನು ಹೇಳುತ್ತದೆ.

ಕವಿ ತನ್ನ, ತನ್ನವರ ಒಡಲ ಸಂಕಟವನ್ನು ಬಿಚ್ಚಿಡುವ ಈ ಕವಿತೆಗಳು ಅಷ್ಟಕ್ಕೆ ಸೀಮಿತವಾಗಿದ್ದರೆ, ಕಾವ್ಯ ಸಾರ್ಥಕತೆಯೂ ಸೀಮಿತವಾಗುತ್ತಿತ್ತೆನೊ! ಸಮುದಾಯದ ಶತಮಾನಗಳ ಸಂಕಟವನ್ನು ಕಿಡಿಯಾಗಿ ಸಿಡಿಸುವುದಷ್ಟೇ ಅಲ್ಲ, ಅದನ್ನು ಮೀರುವ ಬೆಳಕಿನ ದಾರಿಯ ಬಗ್ಗೆಯೂ ಮಾತಾಡಿದ್ದಾರೆ. ಸಂಕಲನದ ಮೊದಲ ಕವಿತೆಯೇ ಬಹಳ ಆಪ್ತ ಹಾಗೂ ಬುದ್ಧ ಬೆಳಕಿನ ಸ್ಪರ್ಶದ ಅನುಭವ ನೀಡುತ್ತದೆ. ಅವ್ವನೆದೆಯ ಅಜ್ಜನ ಅರಿವು ಶೀರ್ಷಿಕೆಯ ಈ ಕವಿತೆಯಲ್ಲಿ, ಅವ್ವ, ಕವಿಗೆ ಅಂಬೇಡ್ಕರ್ ಅವರನ್ನು ಅಜ್ಜನೆಂದು ಪರಿಚಯಿಸುತ್ತಾರೆ.

ಮೈಸವರಿದ ಅವ್ವ
ಮನಸ್ಸಿಗೆ ಬಸಿದ ಮಾತು
ಕೈತೋರಿ ಸದಾ ಪುಸ್ತಕ ಹೊತ್ತಿರುವ
ನಿನ್ನಜ್ಜ ಅಂಬೇಡ್ಕರ್ ಓದಿದ್ದು
ಬೀದಿ ಬಲ್ಪಿನ ಕೆಳಗೆ ಎಂದು
ಒಂದೊಂದೇ ಪದವ ಎದೆಗಿಟ್ಟು…

ಶಿಕ್ಷಣ ಸ್ವಾಭಿಮಾನ, ಮಾನವೀಯತೆಯ ಮೌಲ್ಯ ಕವಿಯ ಎಳೆಯ ಎದೆಗೆ ಎರೆಯುವ ತಾಯಿಯನ್ನು ಈ ಕವಿತೆ ಕಟ್ಟಿಕೊಡುತ್ತದೆ. ತಮ್ಮೆಲ್ಲ ಸಂಕಟಗಳ ಬಿಡುಗಡೆಯ ಬೆಳಕಾಗಿ ಹೊಮ್ಮುತ್ತದೆ. ಇದೇ ಪರಂಪರೆಯುದ್ದಕ್ಕೂ ಕಾಡಿದ ಶೋಷಣೆಗೆ ಇದೇ ಪರಿಹಾರ ಮಾರ್ಗವೆಂದು ದಾಖಲಿಸುತ್ತದೆ.

ಗಂಡು ಒಂದು ರೀತಿಯ ಶೋಷಣೆಗೆ ಒಳಗಾಗುತ್ತಿದ್ದರೆ, ಹೆಣ್ಣಿನ ಮೇಲೆ ನಡೆವ ದೌರ್ಜನ್ಯದ ಭೀಕರತೆಯನ್ನು ಕವಿ ರೂಪಕಗಳಲ್ಲಿ ಅಲುಗಾಡಿಸಿಬಿಡುತ್ತಾರೆ. ಅಸಹಾಯಕತೆ ಒಂದೆಡೆ, ಅಂತಹ ಸಂದರ್ಭ ಸೃಷ್ಟಿಸಿ ಶೋಷಿಸುವ ಮನಸ್ಸುಗಳನ್ನು ಇನ್ನೊಂದೆಡೆ. ಅನ್ನಕ್ಕಾಗಿ ಅಂಗಲಾಚುವ ಹೆಣ್ಣಿನ ಮುಂದೆ ಕಾಮತೃಷೆ ತೀರಿಸುವ ಕೋರಿಕೆ ಇಡುವುದು, ಬದುಕು ಕಟ್ಟಿಕೊಳ್ಳುವುದಕ್ಕಾಗಿ ತನ್ನ ದೇಹವನ್ನು ಮಾರಿಕೊಳ್ಳಬೇಕಾದ ಸ್ಥಿತಿ ತಲುಪಿದ ಹೆಣ್ಣು ಎದುರಿಸುವ ಕ್ರೌರ್ಯವನ್ನು ಕವಿತೆಗಳು ಮಾತಾಡುತ್ತವೆ. ಅತ್ಯಾಚಾರ, ಕೊಲೆಗೆ ಗುರಿಯಾದ ಮುಗ್ದ ಜೀವಗಳನ್ನು ಕವಿ ನಮಗೆ ಎದುರಾಗಿಸುವ ರೀತಿ ಹೃದಯವನ್ನು ಕರಗಿಸುತ್ತದೆ, ಕೆಲವೊಮ್ಮೆ ನಡುಗಿಸುತ್ತದೆ ಕೂಡ. ಮನುಷ್ಯ ಘನತೆ, ಮಾನವೀಯತೆಯ ಹಂಬಲವನ್ನು ಧ್ಯಾನಿಸುತ್ತಾ ಅದನ್ನು ಕಾಲದ ಎಲ್ಲ ಶೋಷಣೆಗಳಿಗೆ ಮುಖಾಮುಖಿಯಾಗಿಸುತ್ತಾರೆ ಕವಿ ರಂಗನಾಥ್.

ಪ್ರೀತಿ, ವಿರಹಗಳನ್ನು ಧ್ಯಾನಿಸುವ ರಂಗನಾಥ್ ರಾಜಕೀಯ ಬೆಳವಣಿಗೆಗಳನ್ನೂ ಕಾವ್ಯದ ವಸ್ತುವಾಗಿಸಿಕೊಂಡಿದ್ದಾರೆ. ಜಲದ ಪಾದುಕೆಯ ಹಾಡು, ಈ ಸುದ್ದಿ ಇಂದಿನ ವರದಿಯಾಗಿಯೇ ಉಳಿಯಬೇಕಿಲ್ಲ, ದಲಿತರಾಗುವುದೆಂದರೆ ಎಷ್ಟು ಸಡಗರ, ಅಲೆದಷ್ಟು ಅನಾಥಗೊಂಡ ಪಾದಗಳು, ಅವ್ವನೆದೆಯ ಅಜ್ಜನ ಅರಿವು, ಕರಿಯಜ್ಜನ ಯಶೋಗಾಥೆ, ಉರಿಪಾದದ ನೆರಳಲ್ಲಿ, ಕರಿ ಮೈಯ್ಯ ಕಸುವು ಬಹಳ ಮುಖ್ಯವಾದ ಕವಿತೆಗಳು.

ಪರಂಪರೆಯ ಎಲ್ಲ ನೆನಪುಗಳನ್ನು ಕೆದಕುತ್ತಾ, ತಮ್ಮ ಅಸ್ಮಿತೆಯನ್ನು ಅನಾವರಣ ಮಾಡುತ್ತಲೇ ಅದನ್ನು ಒಡೆದು ನಿಲ್ಲಲು ಯತ್ನಿಸುವ ಇಲ್ಲಿನ ಕವಿತೆಗಳು, ಈ ಮಹಾಪಯಣದಲ್ಲಿ ಎಂದೂ ಹಂಗಿನಲಿ ಬಾಳದ ಉದಾಹರಣೆಗಳನ್ನು ಧ್ಯಾನಿಸುತ್ತಾ, ತನ್ನ ಕಾಲದ ದನಿಯನ್ನು ತೀಕ್ಷ್ಣವಾಗಿಯೂ ತೀವ್ರವಾಗಿಯೂ ಕವಿ ರಂಗನಾಥ್ ದಾಖಲಿಸಿದ್ದಾರೆ.


ಇದನ್ನೂ ಓದಿ: ಪುಸ್ತಕ ವಿಮರ್ಶೆ; ಬದಿಕಿರುವುದೇ ಕಥೆ ಹೇಳಲಿಕ್ಕೆ ಎಂದು ಬರೆದು ಬದುಕಿದ ಲ್ಯಾಟಿನ್ ಅಮೆರಿಕನ್ ಲೇಖಕ ಮಾರ್ಕ್ವೆಜ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ವಿಮರ್ಶೆ ಅದ್ಬುತ ವಾಗಿದೆ ಸರ್
    ಕವಿಯ ಅಂತರಾಳವ ಹೊಕ್ಕು ಪರಿಚಯಿಸಿದಿರಿ ಸರ್

  2. ಕವಿಯ ಹಿನ್ನೆಲೆಯ ಕ್ಯಾನ್ವಾಸಿನಲ್ಲಿ ಕವನದ ಸೊಗಸಾದ ಚಿತ್ರವನ್ನು ಹೇಗೆ ಕವಿ ಅಭಿವ್ಯಕ್ತಿಸಿದ್ದಾರೆಂದು ಸೊಗಸಿನ ವಿಮರ್ಶೆ ಮಾಡಿರುವುದು ಮುದ ನೀಡಿದೆ. ಪ್ರತಿಮೆಯಾದ ಮೆಟ್ಟು ಮೆಟ್ಟುವ ಜನ ಮೆಟ್ಟಸೃಷ್ಟಿಶಿದವರ ಮುಟ್ಟದಿರುವುದು ಈ ಸಮಾಜದ ಕೊಳೆತ ಮನಸಿನ ಘಾಟು ರಾಚಬೇಕಿತ್ತು‌ ಇನ್ನೂ.

    ವಿಮರ್ಶಕರಿಗೆ ಮತ್ತು ಕವಿವರ್ಯರಿಗೆ ಅಭಿನಂದನೆಗಳು

    ಜಯರಾಮ.ಸಿ.ವಿ. ನಾಗಮಂಗಲ.

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...