ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯಲ್ಲಿ ರೈತರು ಜಿಯೋ ಸಿಮ್ ಅನ್ನು ತಿರಸ್ಕರಿಸಿರುವುದರ ಹಿಂದೆ ಏರ್‌ಟೆಲ್ ಮತ್ತು ವೊಡಾಫೋನ್ ಕಂಪನಿಗಳ ಕೈವಾಡವಿದೆ ಎಂದು ಆರೋಪಿಸಿರುವ ಅಂಬಾನಿಯ ಜಿಯೋ ಕಂಪನಿ, ಈ ಎರಡು ನೆಟ್‌ವರ್ಕ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಟೆಲಿಕಾಂ ರೆಗ್ಯುಲೇಟರ್ ಅಥಾರಿಟಿ ಆಫ್ ಇಂಡಿಯಾ (TRAI)ಗೆ ಡಿಸಂಬರ್ 10 ರಂದು ದೂರು ನೀಡಿದೆ.
ಜಿಯೋ ಕಂಪನಿ ಸೆಪ್ಟೆಂಬರ್ 28 ರಂದು ಬರೆದಿದ್ದ ಪತ್ರವನ್ನು ಉಲ್ಲೇಖಿಸಿ ಮುಂದುವರೆಸುತ್ತಾ, “ರೈತರ ಪ್ರತಿಭಟನೆಯ ಉಪಯೋಗ ಪಡೆದುಕೊಳ್ಳುತ್ತಿರುವ ಏರ್‌ಟೆಲ್ ಮತ್ತು ವೊಡಾಫೋನ್ ಕಂಪನಿಗಳು, ಅನೈತಿಕ ಮತ್ತು ಸ್ಪರ್ಧಾತ್ಮಕ ವಿರೋಧಿ ರೀತಿಯಲ್ಲಿ ಮೊಬೈಲ್ ಸಂಖ್ಯೆ ಪೋರ್ಟಬಿಲಿಟಿ (MNP) ಅಭಿಯಾನವನ್ನು ನಡೆಸುತ್ತಿದೆ ಎಂದು ಆರೋಪಿಸಿದೆ.
ಇದನ್ನೂ ಓದಿ: ಭಾರತದ ಆರ್ಥಿಕತೆ ಕುಸಿಯುತ್ತಿದ್ದರೂ ಅದಾನಿ ಕಂಪನಿ ಮಾತ್ರ ಬೆಳೆಯುತ್ತಿರುವುದು ಹೇಗೆ?
“ಜಿಯೋ ಮೊಬೈಲ್ ಸಂಖ್ಯೆಗಳನ್ನು ತಮ್ಮ ನೆಟ್‌ವರ್ಕ್‌ಗಳಿಗೆ ಸ್ಥಳಾಂತರಿಸುವುದರಿಂದ ರೈತರ ಪ್ರತಿಭಟನೆಗೆ ಸಹಕಾರಿಯಾಗಲಿದೆ ಎಂದು ಹೇಳಿಕೆಗಳನ್ನು ನೀಡುವ ಮೂಲಕ ಈ ನೆಟ್‌ವರ್ಕ್‌ಗಳು ಸಾರ್ವಜನಿಕರನ್ನು ಪ್ರಚೋದಿಸುತ್ತಿದೆ” ಎಂದು ಡಿಸೆಂಬರ್ 10 ರಂದು ಬರೆದ ಪತ್ರದಲ್ಲಿ ತಿಳಿಸಲಾಗಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಇದನ್ನೂ ಓದಿ: ಏಮ್ಸ್ ನರ್ಸ್‌ಗಳ ಅನಿರ್ದಿಷ್ಟ ಮುಷ್ಕರ: ಕೆಲಸಕ್ಕೆ ಬರುವಂತೆ ಏಮ್ಸ್ ನಿರ್ದೇಶಕರ ಮನವಿ
ಜಿಯೋ ಮಾಡಿದ ಆರೋಪಗಳಿಗೆ ಪ್ರತಿಕ್ರಿಯಿಸಿದ ಭಾರತೀಯ ಏರ್‌ಟೆಲ್, “ಏರ್‌ಟೆಲ್ ಟೆಲಿಕಾಂ ಉದ್ಯಮದಲ್ಲಿ 25 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಈ ಅವಧಿಯಲ್ಲಿ, ನಾವು ಮಾರುಕಟ್ಟೆಯಲ್ಲಿ ತೀವ್ರವಾಗಿ ಸ್ಪರ್ಧಿಸಿದ್ದೇವೆ ಮತ್ತು ನಮ್ಮ ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡಲು ಶ್ರಮಿಸಿದ್ದೇವೆ. ಅದೇ ಸಮಯದಲ್ಲಿ ನಮ್ಮ ಸ್ಪರ್ಧಿಗಳು ಮತ್ತು ಪಾಲುದಾರರನ್ನು ಗೌರವದಿಂದ ನಡೆಸಿಕೊಂಡಿದ್ದೇವೆ. ನಾವು ನಮ್ಮ ವ್ಯವಹಾರವನ್ನು ಪಾರದರ್ಶಕವಾಗಿ ನಡೆಸಿದ್ದೇವೆ. ಇದಕ್ಕೆ ನಮಗೆ ಬಹಳ ಹೆಮ್ಮೆಯಿದೆ” ಎಂದು ಹೇಳಿದೆ.
ಅಂಬಾನಿ ಮತ್ತು ಅವರ ಕಂಪನಿಗಳ ಉತ್ಪನ್ನಗಳಾದ ಪೆಟ್ರೋಲ್ ಪಂಪ್, ಜಿಯೋ ಸಿಮ್, ರಿಲಯನ್ಸ್ ಸೇರಿದಂತೆ ಇತರೆ ಉತ್ಪನ್ನಗಳನ್ನು ಬಾಯ್ಕಾಟ್ ಮಾಡುವಂತೆ ಪ್ರತಿಭಟನಾ ನಿರತ ರೈತರು ಇತ್ತೀಚೆಗೆ ಕರೆ ನೀಡಿದ್ದರು. ಕರ್ನಾಟಕದಲ್ಲಿಯೂ ಯುವಕರು ಜಿಯೋ ಸಿಮ್ ಇಂದ ಪೋರ್ಟಿಂಗ್ ಅಭಿಯಾನವನ್ನು ಕೈಗೊಂಡಿದ್ದರು.
ಕೇಂದ್ರ ಸರ್ಕಾರ ತನ್ನ ಕೃಷಿ ಕಾನೂನುಗಳನ್ನು ಹಿಂಪಡೆಯಲಿ ಎಂದು ಒತ್ತಾಯಿಸಿ ಲಕ್ಷಾಂತರ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಕೃಷಿ ಕಾನೂನುಗಳು ಪರೋಕ್ಷವಾಗಿ ಅಂಬಾನಿಗೆ ಸಹಕಾರಿಯಾಗುತ್ತದೆ ಎಂಬ ಕಾರಣಕ್ಕೆ ಅಂಬಾನಿ ಕಂಪನಿಯ ಉತ್ಪನ್ನಗಳನ್ನು ಬಾಯ್ಕಾಟ್ ಮಾಡಬೇಕು ಎಂದು ಕರೆ ನೀಡಲಾಗಿತ್ತು.
ಇದನ್ನೂ ಓದಿ: ಬಾಹ್ಯಾಕಾಶ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಖಾಸಗಿ ವಲಯಕ್ಕೆ ಮುಕ್ತ ಅವಕಾಶ: ಪ್ರಧಾನಿ ಮೋದಿ



ನೀವು ಜಿಯೋಮಾರ್ಟ್ ಪ್ರಚಾರಮಾಡುತ್ತಿದ್ದೀರ?
ನಾನು ಗೌರಿ ಪೇಜ್ ತೆರೆದಕೂಡಲೇ ಜಿಯೋಮಾರ್ಟ್ ಬರುತ್ತದೆ ನಡುವಿನಲ್ಲಿ ಯಾಕೆ?