Homeಮುಖಪುಟಬ್ರಾಹ್ಮಣ್ಯದ ವಿವಾದ; ಜ್ಞಾನದ ಹೊತ್ತಿಗೆ ಕಾಯಕದ ಸುತ್ತಿಗೆ: ಡಾ. ಟಿ ಆರ್ ಚಂದ್ರಶೇಖರ್

ಬ್ರಾಹ್ಮಣ್ಯದ ವಿವಾದ; ಜ್ಞಾನದ ಹೊತ್ತಿಗೆ ಕಾಯಕದ ಸುತ್ತಿಗೆ: ಡಾ. ಟಿ ಆರ್ ಚಂದ್ರಶೇಖರ್

- Advertisement -
- Advertisement -

ಈ ಪ್ರಬಂಧದಲ್ಲಿ ’ಹೊತ್ತಿಗೆ’ಯನ್ನು ಜ್ಞಾನದ ಗುತ್ತಿಗೆ ಹಿಡಿದ ಬ್ರಾಹ್ಮಣ್ಯಕ್ಕೆ ಸಂಕೇತವಾಗಿ ಮತ್ತು ’ಸುತ್ತಿಗೆ’ಯನ್ನು ಶೂದ್ರರು ಮತ್ತು ಅತಿಶೂದ್ರರನ್ನು ಪ್ರತಿನಿಧಿಸುವ ಪ್ರತೀಕವಾಗಿ ಬಳಸಲಾಗಿದೆ. ಚಾತುರ್ವರ್ಣ ವ್ಯವಸ್ಥೆಯಲ್ಲಿ ಜ್ಞಾನವು ಬ್ರಾಹ್ಮಣ ವರ್ಗದ ಗುತ್ತಿಗೆಯಾದರೆ ದುಡಿಮೆಯು (ಕಾಯಕ: ಕಾಯ=ದೇಹ, ಕ=ಕೆಲಸ) ಶೂದ್ರರ-ಅತಿಶೂದ್ರರ ಕರ್ತವ್ಯವಾಗಿದೆ. ಇದನ್ನು ಇಂದಿಗೂ ಚಾತುರ್ವರ್ಣವಾದಿಗಳು ಪ್ರತಿಪಾದಿಸುತ್ತಿದ್ದಾರೆ. ಉದಾ: ಡಾ. ಸುಬ್ರಮಣ್ಯಸ್ವಾಮಿ ಅವರು ಪ್ರಧಾನಮಂತ್ರಿಗಳ ’ನಾನು ಚೌಕಿದಾರ’ ಎಂಬ ಹೇಳಿಕೆ ಬಗ್ಗೆ ’ನಾನು ಬ್ರಾಹ್ಮಣನಾಗಿರುವುದರಿಂದ ಚೌಕಿದಾರನಾಗಲು ಸಾಧ್ಯವಿಲ್ಲ. ನಾನಿರುವುದು ಚೌಕಿದಾರರಿಗೆ ಆಜ್ಞೆ ನೀಡಲು’ ಎಂದು ವರ್ಣ ವ್ಯವಸ್ಥೆಯ ’ಹೊತ್ತಿಗೆ ಒಂದು ವರ್ಗಕ್ಕೆ, ಸುತ್ತಿಗೆ ಮತ್ತೊಂದು ವರ್ಗಕ್ಕೆ’ ಎನ್ನುವ ಶ್ರೇಣೀಕೃತ ಅಸಮಾನತೆ ಪ್ರಣಾಳಿಕೆಯನ್ನು ಬಹಿರಂಗವಾಗಿಯೇ ಪ್ರತಿಪಾದಿಸಿದ್ದಾರೆ (ಉಲ್ಲೇಖ: ವರ್ಗೀಸ್ ಕೆ. ಜಾರ್ಜ್, ದಿ ಹಿಂದೂ. ಮಾರ್ಚ್ 25, 2019). ಹೊತ್ತಿಗೆಯನ್ನು ಗುತ್ತಿಗೆ ಹಿಡಿದ ತ್ರೈವರ್ಣೀಕರು ಇಂದಿಗೂ ತಮ್ಮ ಬ್ರಾಹ್ಮಣ್ಯದ ಅಹಂಕಾರವನ್ನು ಸಮಾಜದಲ್ಲಿ ಪ್ರದರ್ಶಿಸುತ್ತಲೇ ಬರುತ್ತಿದ್ದಾರೆ.

ಬ್ರಾಹ್ಮಣ್ಯವನ್ನು ಬ್ರಾಹ್ಮಣರಿಗೆ ಸಂವಾದಿಯಾಗಿ ಅವರು ಬಳಸುತ್ತಿದ್ದಾರೆ. ಆದರೆ ಬ್ರಾಹ್ಮಣ್ಯದ ಬಗ್ಗೆ ಟೀಕೆ-ಟಿಪ್ಪಣಿ ಮಾಡುತ್ತಿರುವ ಚೇತನ್ ಅಹಿಂಸ ಅವರಾಗಲಿ ಅವರ ಪರವಾಗಿ ನಿಂತಿರುವ ನಾವಾಗಲಿ ಅದನ್ನು ಬ್ರಾಹ್ಮಣರಿಗೆ ಸಂವಾದಿಯಾಗಿ ಬಳಸುತ್ತಿಲ್ಲ. ಪ್ರಸಿದ್ಧ ರಾಜ್ಯಶಾಸ್ತ್ರಜ್ಞ ಡಾ. ರಾಜೀವ್ ಭಾರ್ಗವ ಅವರು ತಮ್ಮ ಒಂದು ಅಂಕಣದಲ್ಲಿ ’ಯಾರು ಭಾರತೀಯ ಸಂವಿಧಾನದ ತತ್ವಗಳಿಗೆ ಬದ್ಧರಾಗಿರುತ್ತಾರೋ ಅವರು ಸಹಜವಾಗಿ ಬ್ರಾಹ್ಮಣ್ಯದ ವಿರೋಧಿಗಳಾಗಿರುತ್ತಾರೆ’ ಎಂದು ಘೋಷಿಸಿದ್ದಾರೆ (ದಿ ಹಿಂದು. ಜುಲೈ 03, 2019). ಅಂದರೆ ಅವರ ಪ್ರಕಾರ ಯಾರು ಬ್ರಾಹ್ಮಣ್ಯದ ಮೌಲ್ಯಗಳಿಗೆ-ಚಾತುರ್ವರ್ಣ ಪ್ರಣಾಳಿಕೆಗೆ ಬದ್ಧರಾಗಿರುತ್ತಾರೋ ಅವರೆಲ್ಲ ಡಾ. ಬಿ. ಆರ್. ಅಂಬೇಡ್ಕರ್ ಪ್ರಣೀತ ಸಂವಿಧಾನದ ಮೌಲ್ಯಗಳಿಗೆ ವಿರೋಧಿಗಳಾಗಿರುತ್ತಾರೆ. ಹೀಗೆ ಸಂವಿಧಾನದ ಮೌಲ್ಯಗಳನ್ನು ವಿರೋಧಿಸುವವರಲ್ಲಿ ಬ್ರಾಹ್ಮಣರೂ ಇರಬಹುದು-ಅಬ್ರಾಹ್ಮಣರೂ ಇರಬಹುದು.

ಇದೇ ರೀತಿಯಲ್ಲಿ ಸಂವಿಧಾನದ ಮೌಲ್ಯಗಳಿಗೆ ಬದ್ಧರಾಗಿದ್ದು ಬ್ರಾಹ್ಮಣ್ಯವನ್ನು ವಿರೋಧಿಸುವವರಲ್ಲಿ ಬ್ರಾಹ್ಮಣರೂ ಇರಬಹುದು-ಅಬ್ರಾಹ್ಮಣರೂ ಇರಬಹುದು. ಇದರಲ್ಲಿ ಸ್ಪಷ್ಟವಾಗುವ ಸಂಗತಿಯೆಂದರೆ ನಮ್ಮ ಸಂವಿಧಾನದ ಮೌಲ್ಯಗಳಾದ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವಗಳಿಗೆ ಬ್ರಾಹ್ಮಣ್ಯವು ಕಡುವಿರೋಧಿಯಾಗಿದೆ. ಡಾ. ಬಿ. ಆರ್. ಅಂಬೇಡ್ಕರ್ ಅವರು ತಮ್ಮ ’ಅನಿಯಿಲೇಶನ್ ಆಫ್ ಕಾಸ್ಟ್’ನಲ್ಲಿ ಹೇಳಿರುವಂತೆ ನಮ್ಮ ಸಂವಿಧಾನದ ಮೌಲ್ಯಗಳ ನಿರಾಕರಣೆಯೇ ಚಾತುರ್ವರ್ಣ- ಬ್ರಾಹ್ಮಣ್ಯ ವ್ಯವಸ್ಥೆ. ಬ್ರಾಹ್ಮಣ್ಯವನ್ನು ’ಬ್ರಾಹ್ಮಣರಿಗೆ’ ಎಂದು ಪ್ರಜ್ಞಾಪೂರ್ವಕವಾಗಿಯೋ ಅಥವಾ ಅಪ್ರಜ್ಞಾಪೂರ್ವಕವಾಗಿಯೋ ಸಂವಾದಿಯಾಗಿ ಮಾಡಿಕೊಂಡು ವಿಪ್ರೋತ್ತಮರು ಬ್ರಾಹ್ಮಣ್ಯವನ್ನು ಸಮರ್ಥಿಸುತ್ತಿದ್ದಾರೆ. ಇಂದು ಕರ್ನಾಟಕದಲ್ಲಿ ಬ್ರಾಹ್ಮಣ್ಯದ ಬಗ್ಗೆ ನಡೆಯುತ್ತಿರುವ ಪರ-ವಿರೋಧದ ವಾಗ್ವಾದ ಚಾತುರ್ವರ್ಣ ವ್ಯವಸ್ಥೆಗೆ ಸಂಬಂಧಿಸಿದುದೇ ವಿನಾ ಬ್ರಾಹ್ಮಣರಿಗೆ ಸಂಬಂಧಿಸಿದುದಲ್ಲ. ಬ್ರಾಹ್ಮಣ್ಯವು ಒಂದು ’ವ್ಯವಸ್ಥೆ’ – ಒಂದು ಸಂಸ್ಥೆ. ಬ್ರಾಹ್ಮಣರು ಒಂದು ಸಾಮಾಜಿಕ ವರ್ಗ. ಬ್ರಾಹ್ಮಣ್ಯವು ಒಂದು ಸಮಾಜೋ-ಆರ್ಥಿಕ ಸಿದ್ಧಾಂತ. ಬ್ರಾಹ್ಮಣರು ಮತ್ತು ಬ್ರಾಹ್ಮಣ್ಯ ಒಂದೇ ಅಲ್ಲ.

ಇತ್ತೀಚಿಗೆ ಕರ್ನಾಟಕದಲ್ಲಿ ಬ್ರಾಹ್ಮಣ್ಯವನ್ನು ಕುರಿತು ಮತ್ತು ಅದನ್ನು ವಿರೋಧಿಸಿದ ನಟ ಮತ್ತು ಸಾಮಾಜಿಕ ಕಾರ್ಯಕರ್ತ ಚೇತನ್ ಅಹಿಂಸ ಅವರ ವಿಚಾರಗಳ ಬಗ್ಗೆ ಅನೇಕ ಚಾತುರ್ವರ್ಣವಾದಿಗಳು ಸಿಡಿದೆದ್ದಿದ್ದಾರೆ. ಪೊಲೀಸರು ಚೇತನ್ ವಿರುದ್ಧ ಎಫ್‌ಐಆರ್ ಕೂಡ ದಾಖಲಿಸಿದ್ದಾರೆ. ಕಾರ್ಮಿಕ ಮಂತ್ರಿ ಶಿವರಾಮ್ ಹೆಬ್ಬಾರ್, ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷರು ಮತ್ತು ಹಿಂದುತ್ವವಾದಿಗಳು ಚೇತನ್ ವಿರುದ್ಧ ಹರಿಹಾಯ್ದಿದ್ದಾರೆ. ಚೇತನ್ ಅವರ ಬ್ರಾಹ್ಮಣ್ಯದ ವಿಚಾರಗಳಿಗೆ ಅವರ ’ವೈ ಐ ಸ್ಪೀಕ್ ಎಬೌಟ್ ಕಾಸ್ಟ್?’ ಎಂಬ ಡೆಕ್ಕನ್ ಹೆರಾಲ್ಡ್, ಜೂನ್ 11, 2021 ಪತ್ರಿಕೆಯಲ್ಲಿನ ಲೇಖನ ನೋಡಬಹುದು. ಇಂದು ರಾಜ್ಯದಲ್ಲಿ ಚೇತನ್ ಪರವಾಗಿ ಮತ್ತು ಅವರ ವೈಚಾರಿಕ ಪ್ರಣಾಳಿಕೆ ಪರವಾಗಿ ಚರ್ಚೆಗಳು ನಡೆಯುತ್ತಿವೆ.

ಶ್ರೇಣೀಕೃತ ಅಸಮಾನತೆಯ ವ್ಯವಸ್ಥೆ

ಚಾತುರ್ವರ್ಣ ವ್ಯವಸ್ಥೆಯಲ್ಲಿ ಜ್ಞಾನದ ಗುತ್ತಿಗೆಯನ್ನು ಬ್ರಾಹ್ಮಣ ವರ್ಣಕ್ಕೆ, ಆಳುವ ಅಧಿಕಾರವನ್ನು ಕ್ಷತ್ರಿಯರಿಗೆ ಮತ್ತು ಕೃಷಿ-ವ್ಯಾಪಾರ ಚಟುವಟಿಕೆ ನಡೆಸುವ ಹಕ್ಕನ್ನು ವೈಶ್ಯರಿಗೆ ನೀಡಿದ್ದರೆ ಕೊನೆಯ ಶೂದ್ರ ವರ್ಣಕ್ಕೆ ಮೇಲಿನ ಮೂರು ದ್ವಿಜ ವರ್ಣಗಳ ಸೇವೆಯನ್ನು ಮಾಡುವ ಕರ್ತವ್ಯವನ್ನು ನಿಯಮಿಸಲಾಗಿದೆ (ಇದನ್ನೇ ಡಾ. ಸುಬ್ರಮಣ್ಯಸ್ವಾಮಿ ಅವರು ಚೌಕಿದಾರರ ಬಗ್ಗೆ ಹೇಳಿರುವ ಸತ್ಯ). ಹೀಗೆ ಜ್ಞಾನದ ಹೊತ್ತಿಗೆಯನ್ನು ಬ್ರಾಹ್ಮಣ್ಯವು ಗುತ್ತಿಗೆ ಹಿಡಿದಿದ್ದರಿಂದ ಮೈಸೂರು ಸಂಸ್ಥಾನದಲ್ಲಿ ಬ್ರಾಹ್ಮಣರ ಒಟ್ಟು ಸಾಕ್ಷರತೆ 1941ರಲ್ಲಿ ಶೇ. 87.1 ರಷ್ಟಿತ್ತು. ಇದನ್ನು ಕರ್ನಾಟಕ ರಾಜ್ಯದ 2011ರ ಒಟ್ಟು ಸಾಕ್ಷರತೆ ಪ್ರಮಾಣವಾದ ಶೇ. 75.36ಕ್ಕೆ ಹೋಲಿಸಿದರೆ ಜ್ಞಾನದ ಗುತ್ತಿಗೆಯ ಸಮಾಜದಲ್ಲಿ ಯಾವ ಬಗೆಯ ಬೃಹತ್ ಅಸಮಾನತೆಯನ್ನು ಚಾರಿತ್ರಿಕವಾಗಿ ಸೃಷ್ಟಿಸಿತ್ತು ಎಂಬುದು ತಿಳಿಯುತ್ತದೆ. (1941ರ ಸಾಕ್ಷರತೆ ವಿವರಗಳಿಗೆ ನೋಡಿ: ಜೇಮ್ಸ್ ಮೇನರ್, 1977, ’ಪೊಲಿಟಿಕಲ್ ಚೇಂಚ್ ಇನ್ ಅನ್ ಇಂಡಿಯನ್ ಸ್ಟೇಟ್: 1917-1955’, ಮನೋಹರ್, ನವದೆಹಲಿ, ಪುಟ 32). ಬ್ರಾಹ್ಮಣರು 1941ರಲ್ಲಿ ಸಾಧಿಸಿಕೊಂಡಿದ್ದ ಸಾಕ್ಷರತೆಯ ಪ್ರಮಾಣವನ್ನು ಕರ್ನಾಟಕಸ್ಥರಿಗೆ ಒಂಭತ್ತು ದಶಕಗಳ ನಂತರವೂ ಸಾಧಿಸಿಕೊಳ್ಳುವುದಕ್ಕೆ ಸಾಧ್ಯವಾಗಿಲ್ಲ.

ಜ್ಞಾನ ಶ್ರೇಷ್ಠ: ದುಡಿಮೆ ಕನಿಷ್ಟ

ಜ್ಞಾನವು ಬ್ರಾಹ್ಮಣ್ಯದ ಗುತ್ತಿಗೆ ಮಾತ್ರವಾಗಿರಲಿಲ್ಲ. ಜ್ಞಾನವು ಶ್ರೇಷ್ಠವೆಂದು, ಕೆಲಸ/ದುಡಿಮೆ ಕನಿಷ್ಟವೆಂಬ ಶ್ರೇಣೀಕರಣವನ್ನು ಚಾತುರ್ವರ್ಣವು ಸೃಷ್ಟಿಸಿತ್ತು. ಈ ಬಗ್ಗೆ ಪ್ರಸಿದ್ಧ ಚಿಂತಕ ಡಾ. ಜಿ. ರಾಮಕೃಷ್ಣ (2018). ಹೀಗೆ ಬರೆಯುತ್ತಾರೆ. ’…… ದುಡಿಮೆಯು ಹಂಚಿಕೆಯಾಗಿ ಬೌದ್ಧಿಕ ದುಡಿಮೆಯು ಶ್ರೇಷ್ಠವೂ, ದೈಹಿಕ ದುಡಿಮೆಯು ಅದಕ್ಕಿಂತಲೂ ಕಡಿಮೆಯ ಸ್ಥಾನದ್ದೂ ಆಗುತ್ತದೆ. ಅಂದರೆ ಚಿಂತಿಸುವ ಮನಸ್ಸು ಮೇಲುಗೈ ಪಡೆಯುತ್ತದೆ ಮತ್ತು ದುಡಿಯುವ ಕೈ ಹಿಂದಕ್ಕೆ ಸರಿಯುತ್ತದೆ’ (ಭಗವದ್ಗೀತೆ: ಒಂದು ಅವಲೋಕನ, ಪುಟ 57). ಜ್ಞಾನ-ದುಡಿಮೆಗಳ ನಡುವಿನ ಶ್ರೇಣೀಕರಣವನ್ನು 12ನೆಯ ಶತಮಾನದಲ್ಲಿ ಬಸವ ಸಂವಿಧಾನವು ಪ್ರಶ್ನೆ ಮಾಡಿತು. ಇವೆರಡರಲ್ಲಿ ಒಂದನ್ನು ಬಿಟ್ಟು ಮತ್ತೊಂದಿರಲು ಸಾಧ್ಯವಿಲ್ಲ ಎಂಬ ಸತ್ಯವನ್ನು ವಚನಕಾರರು ಪ್ರತಿಪಾದಿಸಿದ್ದಾರೆ. ಉದಾ: ಅಮುಗೆ ದೇವಯ್ಯ ಎನ್ನುವ ಶರಣ ಇದನ್ನು ಸೋದಾಹರಣವಾಗಿ ಹೀಗೆ ಸೂತ್ರೀಕರಿಸಿದ್ದಾನೆ.

ಜ್ಞಾನದಲಿರದಡೇನಯ್ಯಾ? ಕ್ರೀಯನಾಚರಿಸದನ್ನಕ್ಕ
ನೆನೆದ ಮಾತ್ರದಲ್ಲಿ ಅಹುದೆ? ಕಾರ್ಯದಲ್ಲಲ್ಲದೆ?
ಕುರುಡ ಕಾಣ ಪಥವ, ಹೆಳವ ನಡೆಯಲರಿಯ
ಒಂದಿಲ್ಲದಿರ್ದಡೊಂದಾಗದು,
ಜ್ಞಾನವಿಲ್ಲದಿರ್ದ ಕ್ರೀ ಜಡನು; ಕ್ರೀಯಿಲ್ಲದ ಜ್ಞಾನ ವಾಗ್ಜಾಲ ಭ್ರಾಂತು
ಇದು ಕಾರಣ
ಸಿದ್ಧಸೋಮನಾಥ ಲಿಂಗನ ಕೂಡುವ ಶರಣಂಗೆ ಎರಡೂ ಬೇಕು
(ಬಸವಯುಗದ ವಚನ ಮಹಾಸಂಪುಟ 1, ಸಂಕೀರ್ಣ ವಚನ ಸಂಪುಟ 1, ವಚನ ಸಂಖ್ಯೆ 331)

ಚಾತುರ್ವರ್ಣವು ಜ್ಞಾನ ಮತ್ತು ದುಡಿಮೆಗಳ ನಡುವೆ ಶ್ರೇಣೀಕರಣವನ್ನು ರೂಪಿಸಿದ್ದರೆ ಬಸವ ಸಂವಿಧಾನವು ಜ್ಞಾನ ಮತ್ತು ಕ್ರೀ (ದುಡಿಮೆ) ಎರಡೂ ಸಮಾನ ಎಂಬ ಸತ್ಯವನ್ನು ಪ್ರತಿಪಾದಿಸುತ್ತದೆ. ಜ್ಞಾನ ಮತ್ತು ಕ್ರೀಗಳ (ದುಡಿಮೆ) ನಡುವಿನ ಪರಸ್ಪಾರವಲಂಬನೆಯನ್ನು ಹೇಳಿ, ಕುರುಡ-ಹೆಳವರ ಪ್ರತೀಕಗಳ ಮೂಲಕ ದೇವಯ್ಯನವರು ಚಾತುರ್ವರ್ಣ ವ್ಯವಸ್ಥೆಯ ಶ್ರೇಣೀಕರಣ ನಿಯಮವನ್ನು ತಿರಸ್ಕರಿಸುತ್ತಾರೆ. ’ಕ್ರೀಯಿಲ್ಲದ ಜ್ಞಾನ ವಾಗ್ಜಾಲ ಭ್ರಾಂತು’ ಎಂಬ ವಿವರಣೆಯ ಮೂಲಕ ಬ್ರಹ್ಮವಿದ್ಯಾ ಪಾರಂಗತರ ಪೊಳ್ಳುತನವನ್ನು ವ್ಯಂಗ್ಯ ಮಾಡುತ್ತಿದ್ದಾರೆ. ನೆನದ ಮಾತ್ರದಲ್ಲಿ ಅಹುದೆ? ಕಾರ್ಯದಲ್ಲಲ್ಲದೆ? ಎಂಬ ದೇವಯ್ಯನವರ ಪ್ರಶ್ನೆಯ ಗುರಿ ಯಾರು? ವೇದಾಗಮ ಶಾಸ್ತ್ರಪುರಾಣಗಳನ್ನು ನೆನಪಿನಲ್ಲಿಟ್ಟುಕೊಂಡು ಪಠಿಸಿದರೆ ಏನಾಗುತ್ತದೆ ಎಂದು ಇಲ್ಲಿ ವಚನಕಾರ ವ್ಯಂಗ್ಯ ಮಾಡುತ್ತಿದ್ದಾರೆ.

ಶೂದ್ರ ಮತ್ತು ಅತಿಶೂದ್ರರಿಗೆ (ದಲಿತರು ಮತ್ತು ಆದಿವಾಸಿಗಳಿಗೆ) ಅಕ್ಷರವಿದ್ಯೆಯನ್ನು ಚಾತುರ್ವರ್ಣ ನಿರಾಕರಿಸಿತ್ತು. ಜ್ಞಾನದ ಗುತ್ತಿಗೆ ಹಿಡಿದಿರುವ ಚಾತುರ್ವರ್ಣ ಪ್ರಣೀತ ಬ್ರಾಹ್ಮಣ್ಯವು ಇಂದಿಗೂ ತನ್ನ ಅಸಮಾನತೆ ಪ್ರಣಾಳಿಕೆಯನ್ನು ಪ್ರತಿಪಾದಿಸುತ್ತಲೇ ಬಂದಿದೆ. ಸಮಾಜದ ಶೇ. 90ರಷ್ಟು ಜನರಿಗೆ ಅಕ್ಷರವಿದ್ಯೆಯನ್ನು ನಿರಾಕರಿಸಿದ ಸಮಾಜ ಹೇಗೆ ತಾನೆ ಸಮೃದ್ಧತೆಯನ್ನು ಸಾಧಿಸಿಕೊಳ್ಳಲು ಸಾಧ್ಯ? ಇದರಿಂದಾಗಿ ಸಮಾಜವು ವಿಕಲಾಂಗವಾಗಿದೆ. ಚಾತುರ್ವರ್ಣ ವ್ಯವಸ್ಥೆಯು ಜ್ಞಾನವನ್ನು ಶ್ರೇಷ್ಠವೆಂದು, ಇದು ದುಡಿಮೆಗಿಂತ ಉತ್ತಮವೆಂದು ಹೇಳಿದರೆ ಬಸವ ಸಂವಿಧಾನವು ಶ್ರೇಷ್ಠ-ಕನಿಷ್ಟ ಎಂಬ ತಾರತಮ್ಯವನ್ನು ತಿರಸ್ಕರಿಸಿ ಎರಡನ್ನೂ ಸಮಾನ ನೆಲೆಯಲ್ಲಿ ಪರಿಭಾವಿಸಿಕೊಂಡಿದೆ. ವಚನ ಸಿದ್ಧಾಂತದಲ್ಲಿ ಕಾಯಕವು ಕೇವಲ ಕೆಲಸವಲ್ಲ. ಇದೇ ಆಧ್ಯಾತ್ಮ. ಅದೇ ಜೀವನ.

ಬ್ರಾಹ್ಮಣ್ಯವು ಶೂದ್ರರಿಂದ ದಾನವನ್ನು ನಿರೀಕ್ಷಿಸಿದರೆ ಬಸವ ಸಂವಿಧಾನವು ದಾಸೋಹವನ್ನು ಪ್ರತಿಪಾದಿಸಿದೆ. ದಾನವು ಉಳ್ಳವರು ಉಳಿದವರಿಗೆ ನೀಡುವ ಪುಣ್ಯ ಸಂಪಾದನೆಯ-ಪಾಪ ಕಳೆದುಕೊಳ್ಳುವ ಸಾಧನವಾಗಿದ್ದರೆ ದಾಸೋಹದಲ್ಲಿ ಉಳ್ಳವರಿರಲಿ ಅಥವಾ ಉಳಿದವರಿರಲಿ ಪ್ರತಿಯೊಬ್ಬರು ದುಡಿಮೆಯಿಂದ ಗಳಿಸಿದುದರಲ್ಲಿ ಒಂದು ಭಾಗವನ್ನು ಸಮಾಜದೊಂದಿಗೆ ಹಂಚಿಕೊಳ್ಳಬೇಕು. ಬ್ರಾಹ್ಮಣ್ಯದಲ್ಲಿ ದಾನ ಸ್ವೀಕರಿಸುವ ಕ್ರಮವಿದೆಯೇ ವಿನಾ ಹಂಚಿಕೊಳ್ಳುವ ತತ್ವ ಅಲ್ಲಿಲ್ಲ. ಏಕೆಂದರೆ ಚಾತುರ್ವರ್ಣದ ಪ್ರಕಾರ ಆಸ್ತಿಯನ್ನು ಹೊಂದುವ ಹಕ್ಕು ತ್ರೈವರ್ಣೀಕರಿಗೆ ಮಾತ್ರವಿದೆ. ಶೂದ್ರರಿಗೆ ಮತ್ತು ಅತಿಶೂದ್ರರಿಗೆ ಆಸ್ತಿಯನ್ನು ಹೊಂದುವ ಹಕ್ಕಿಲ್ಲ. ಇದನ್ನು ದಿವಂಗತ ನ್ಯಾಯಮೂರ್ತಿ ಡಾ. ಎಂ. ರಾಮಾಜೋಯಿಸರು ಹೀಗೆ ಹೇಳಿದ್ದಾರೆ. ’ಆದ್ದರಿಂದ ಹಕ್ಕುಗಳನ್ನು ಆಧಾರ ಮಾಡಿಕೊಂಡ ಸಾಮಾಜಿಕ ವ್ಯವಸ್ಥೆಯನ್ನು ಪ್ರತಿಪಾದಿಸುವುದಕ್ಕೆ ಬದಲಾಗಿ ನಮ್ಮ ಪ್ರಾಚೀನ ತತ್ವವೇತ್ತರು ಪ್ರತಿಪಾದಿಸಿದ ಕರ್ತವ್ಯ ಪ್ರಣೀತ ಸಮಾಜವನ್ನು ಪ್ರತಿಪಾದಿಸಬೇಕಾಗಿತ್ತು. ಅಲ್ಲಿ ಕರ್ತವ್ಯವನ್ನು ಮಾಡುವುದು ವ್ಯಕ್ತಿಯ ಹಕ್ಕು’ ಎನ್ನುವ ಅವರು ಮುಂದುವರಿದು ’ನಮ್ಮ ದೇಶದ ಅನನ್ಯತೆಯನ್ನು, ವಿಶಿಷ್ಟತೆಯನ್ನು ಪ್ರತಿಪಾದಿಸುವ ಮೂಲ ಮೌಲ್ಯಗಳನ್ನು ಇಲ್ಲಿ ಕಡೆಗಣಿಸಲಾಗಿದೆ. ಇದರ ಪರಿಣಾಮವಾಗಿ ಮೂಲಭೂತ ಹಕ್ಕುಗಳನ್ನು ಸಂವಿಧಾನದ ಭಾಗ 3ರಲ್ಲಿ ಸೇರಿಸಲಾಯಿತು. ಆದರೆ ಮೂಲಭೂತ ಕರ್ತವ್ಯಗಳನ್ನು ಸೇರಿಸಲಿಲ್ಲ. ಕರ್ತವ್ಯದ ಪ್ರಜ್ಞೆಯನ್ನು ಪಲ್ಲಟಗೊಳಿಸಿ ಹಕ್ಕುಗಳ ಪ್ರಜ್ಞೆಯನ್ನು ಪ್ರತಿಪಾದಿಸಿದ್ದರಿಂದ ಇಂದು ನಾವು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ’ ಎಂದು ಡಾ. ಬಿ. ಆರ್. ಅಂಬೇಡ್ಕರ್ ಪ್ರಣೀತ ಸಂವಿಧಾನವನ್ನು ಟೀಕಿಸುತ್ತಾರೆ (ಹತ್ತನೆಯ ದುರ್ಗಾದಾಸ್ ಬಸು ಸ್ಮಾರಕ ಉಪನ್ಯಾಸ, 11 ನೆಯ ಫೆಬ್ರವರಿ 2017). ಬ್ರಾಹ್ಮಣ್ಯವು ಆರಂಭದಿಂದಲೂ ನಮ್ಮ ಸಂವಿಧಾನವನ್ನು ಟೀಕಿಸುತ್ತಲೇ ಬಂದಿದೆ.

ಫಲಾಶೆ-ಸಹಿತ ಕಾಯಕ: ಫಲಾಶೆ-ರಹಿತ ಕರ್ಮ

ಚಾತುರ್ವರ್ಣ ವ್ಯವಸ್ಥೆಯು ಪ್ರತಿಪಾದಿಸಿರುವ ಕರ್ಮ ಸಿದ್ಧಾಂತವು ಮೂಲತಃ ಪ್ರತಿಫಲಾಪೇಕ್ಷೆ ರಹಿತವಾದ ಪ್ರಣಾಳಿಕೆಯಾಗಿದೆ. ಈ ಪ್ರತಿಫಲರಹಿತ ಕರ್ಮದ ನಿಯಮವನ್ನು ಶೂದ್ರರಿಗೆ ಅನ್ವಯಮಾಡಲಾಗಿದೆಯೇ ವಿನಾ ತ್ರೈವರ್ಣೀಕರಿಗಲ್ಲ. ಡಾ. ಜಿ. ರಾಮಕೃಷ್ಣ ಅವರು ಕರ್ಮಯೋಗದ ಬಗ್ಗೆ ಬರೆಯುತ್ತಾ ’ಇನ್ನೊಂದು ಅಂಶವನ್ನೂ ಗಣನೆಗೆ ತೆಗೆದುಕೊಳ್ಳಬೇಕು: ಬೌದ್ಧಿಕ ದುಡಿಮೆಯನ್ನು ಕೂಡ ಫಲಾಪೇಕ್ಷೆ ಇಲ್ಲದೆ ಮಾಡಬೇಕೆಂದು ಗೀತೆಯು ಬೋಧಿಸಿದೆಯೇ? ಇಲ್ಲವಾದರೆ ಏಕೆ? ದೈಹಿಕ ದುಡಿಮೆಯನ್ನು ನಾಲ್ಕನೆಯ ವರ್ಣದವರಿಗೆ ಕೊಟ್ಟುಬಿಟ್ಟಿರುವುದರಿಂದ ಅದನ್ನು ಮಾತ್ರ ಫಲಾಪೇಕ್ಷೆಯಿಲ್ಲದೆ ಮಾಡಬೇಕೆಂಬ ಸೂಚನೆ ಇದ್ದಂತೆ ತೋರುತ್ತದೆ.

ಗೀತೆಯು ರಚನೆಯಾದ ಕಾಲಕ್ಕೆ ಇದು ಪ್ರಭಾವಿ ಆಯುಧವಾಗಿದ್ದಿರಬಹುದು. ಇಂದು ಗೀತೆಯ ನಿಷ್ಕಾಮಕರ್ಮ ಬೋಧೆಗೆ ಅಷ್ಟಾಗಿ ತುಡಿತ ಇರಲಾರದು. ಏಕೆಂದರೆ ಪ್ರತಿಯೊಂದು ಕ್ರಿಯೆಯ ಸಂಬಂಧದಲ್ಲೂ ಪ್ರತಿಫಲವೇನೆಂಬ ಅಪ್ರಕಟಿತ ಪ್ರಶ್ನೆ ಇದ್ದೇ ಇದೆ. ಬೋಧನೆಯನ್ನು ನೀಡುವವರು ಸಹ ಇದೇ ಗುಂಪಿಗೆ ಸೇರಿರುತ್ತಾರೆ’ (ನೋಡಿ: ಭಗವದ್ಗೀತೆ ಒಂದು ಅವಲೋಕನ, 2018, ಅಧ್ಯಾಯ 7, ಕರ್ಮಯೋಗ, ಪುಟ 54). ಇದನ್ನು ಇಷ್ಟೊಂದು ದೀರ್ಘವಾಗಿ ನೀಡಿರುವುದಕ್ಕೆ ಒಂದು ಕಾರಣವೇನೆಂದರೆ ಡಾ. ಜಿ. ರಾಮಕೃಷ್ಣ ಅವರು ಭಗವದ್ಗೀತಾ-ಪ್ರಣೀತ ಬ್ರಾಹ್ಮಣ್ಯದ ಮಿತಿಯನ್ನು ಹೇಳುತ್ತಲೇ ಅದು ಇಂದು ಎಷ್ಟು ಅಪ್ರಸ್ತುತ ಎನ್ನುವುದನ್ನೂ ಹೇಳುತ್ತಿದ್ದಾರೆ.

’ಸ್ವ-ಧರ್ಮೇ ನಿಧನಂ ಶ್ರೇಯಃ’

ಚಾತುರ್ವರ್ಣ ಪ್ರಣೀತ ಬ್ರಾಹ್ಮಣ್ಯ ಪ್ರಣಾಳಿಕೆಯ ಅಸಮಾನತೆಯು ಸಮಾಜದಲ್ಲಿ ಇಂದಿಗೂ ಮುಂದುವರಿದಿದ್ದರೆ ಅದರ ಮೂಲವು ವರ್ಣ ನಿರ್ದಿಷ್ಟ ಕರ್ಮಗಳನ್ನು ಪ್ರತಿಪಾದಿಸಿದ್ದುದರಲ್ಲಿದೆ.

ಡಾ. ಜಿ. ರಾಮಕೃಷ್ಣರ ಪ್ರಕಾರ ಚಾತುರ್ವರ್ಣ ಪ್ರಣೀತ ಸಮಾಜವು ’ಸ್ಥಗಿತಗೊಂಡ’ ಸಮಾಜವಾಗಿದೆ. ’ಶ್ರೇಷ್ಠರು ಶ್ರೇಷ್ಠರಾಗಿಯೇ ಉಳಿಯಬೇಕು, ಕೂಲಿ ಮಾಡುವವರು ಕೂಲಿ ಮಾಡುತ್ತಿರಬೇಕು. ಅದು ಭಗವಂತನ ಆದೇಶ.
ಮೀರಲಾಗದ ನಿಯಮ. ಶೋಷಣೆಯಿಂದ ಮುಕ್ತನಾಗಲು ಶೂದ್ರನು ಆಶಿಸಕೂಡದು. ಇದೇ ಪರಮ ತತ್ವ. ಬಾಹ್ಮಣ್ಯ-ಅಬ್ರಾಹ್ಮಣ್ಯಗಳ ನಡುವಿನ ಸಾಮಾಜಿಕ ಶ್ರೇಣಿಕರಣಕ್ಕೆ ಗೀತೆಯು ಶಾಶ್ವತವಾದ ನೀತಿಯನ್ನು ಮಂಡಿಸಿತು’ (ಡಾ. ಜಿ. ರಾಮಕೃಷ್ಣ, 2018, ಪುಟ 156). ಸ್ವ-ಧರ್ಮವನ್ನು ಬಿಡುವುದು ಅಧರ್ಮ. ಸ್ವ-ಧರ್ಮದಲ್ಲಿ ಸಾಯುವುದು ಶ್ರೇಷ್ಠವಾದ ಕ್ರಮವಾಗಿದೆ. ಹೀಗೆ ಚಾತುರ್ವರ್ಣವು ವೃತ್ತಿಗಳನ್ನು ಜಾತಿಗಳನ್ನಾಗಿ ಮಾಡಿ ಸಮಾಜವನ್ನು ಯಥಾಸ್ಥಿತಿಯ ಕೂಪಕ್ಕೆ ತಳ್ಳಿಬಿಟ್ಟಿತ್ತು. ಇದನ್ನು ಪ್ರಶ್ನೆ ಮಾಡಿ ತಿರಸ್ಕರಿಸಿದ ಬಸವ ಸಂವಿಧಾನವು ಯಶಸ್ವಿಯಾಗಲು ’ಬ್ರಾಹ್ಮಣ್ಯ ವ್ಯವಸ್ಥೆ’ಯು ಬಿಡಲಿಲ್ಲ. ಆದರೆ ಡಾ. ಬಿ. ಆರ್. ಅಂಬೇಡ್ಕರ್ ಪ್ರಣೀತ ಸಂವಿಧಾನವು 1950ರಲ್ಲಿ ಇದಕ್ಕೆ ದೊಡ್ಡ ಪೆಟ್ಟು ನೀಡಿತು. ಈ ಕಾರಣಕ್ಕೆ ’ಸಂವಿಧಾನವನ್ನು ಬದಲಾಯಿಸಲು ನಾವು ಸರ್ಕಾರ ರಚಿಸಿದ್ದೇವೆ’ ಎಂದು ಒಬ್ಬರು ಆಳುವ ವರ್ಗದ ಪ್ರತಿನಿಧಿ ಘೋಷಿಸಿದರೆ ಮತ್ತೊಬ್ಬರು ’ನಮ್ಮ ಸರ್ಕಾರವು 1950ರಲ್ಲಿ ಇದ್ದಿದ್ದರೆ ಈ ಸಂವಿಧಾನವೇ ಇರುತ್ತಿರಲಿಲ್ಲ’ ಎಂದು ಹೇಳಿದ್ದಾರೆ.

ವಿ. ಡಿ. ಸಾವರ್ಕರ್ ಅವರು ನಮ್ಮ ಸಂವಿಧಾನದ ಮಿತಿಯ ಬಗ್ಗೆ ಮಾತನಾಡುತ್ತಾ ಮನುಸ್ಮೃತಿಯು ನಮ್ಮ ಸಂವಿಧಾನವಾಗಬೇಕಿತ್ತು ಎನ್ನುತ್ತಾರೆ. ಬ್ರಾಹ್ಮಣ್ಯದ ಬಗ್ಗೆ ಇದಕ್ಕಿಂತ ಬೇರೆ ಪ್ರತಿಪಾದನೆ ಬೇಕೆ? ಒಕ್ಕೂಟ ಸರ್ಕಾರದಲ್ಲಿನ ಮಂತ್ರಿ ರವಿಶಂಕರ ಪ್ರಸಾದ್ ಅವರು 2019ರ ನವೆಂಬರ್ 26ರ ’ಸಂವಿಧಾನ ದಿವಸ್’ನಂದು ಹೀಗೆ ಬರೆಯುತ್ತಾರೆ. ’ಪ್ರಾಚೀನ ಗಣರಾಜ್ಯಗಳಾದ ವೈಶಾಲಿ, ಮೈಥಿಲಿ, ಕಪಿಲವಸ್ತು ಮತ್ತು ಅವುಗಳ ಸಂವಿಧಾನಗಳ ಚರಿತ್ರೆಯ ಕ್ರಿ. ಪೂ. 60 ವರ್ಷಕ್ಕೆ ಹೋಗುತ್ತದೆ. ಇವು ಇಂದು ಭಾರತದ ಸಂವಿಧಾನಾತ್ಮಕ ಜನತಂತ್ರದ ಅಡಿಪಾಯವಾಗಿವೆ…’ (ರವಿಶಂಕರ್ ಪ್ರಸಾದ್, ಕೇಂದ್ರ ಸಚಿವ, ’ಇಂಫಾರ್‌ಟೆನ್ಸ್ ಆಫ್ ಸಿಟಿಜನ್ಸ್‌ಸ್ ಡ್ಯೂಟೀಸ್’, ದಿ ಇಂಡಿಯನ್ ಎಕ್ಸ್‌ಪ್ರೆಸ್, 26.11.2019). ಇಂತಹ ಸುಳ್ಳನ್ನು ಹೇಳುತ್ತಲೇ ಬ್ರಾಹ್ಮಣ್ಯವನ್ನು ನಮ್ಮಲ್ಲಿ ಗಟ್ಟಿಮಾಡಲಾಗುತ್ತಿದೆ. ನಮ್ಮ ಸಂವಿಧಾನದ ಮೂಲದಲ್ಲಿರುವುದು ಚಾತುರ್ವರ್ಣ ವಿರೋಧಿ ಪ್ರಣಾಳಿಕೆಯೆ ವಿನಾ ಮನುಸ್ಮೃತಿ ಪ್ರಣೀತ ಮೌಲ್ಯಗಳಲ್ಲ.

ದೇವರು-ಭಕ್ತರ ನಡುವೆ ಅರ್ಚಕರೆಂಬ ದಲ್ಲಾಳಿ ವ್ಯವಸ್ಥೆ

ಬಸವಾದಿ ಶರಣರು ದೇವರು ಮತ್ತು ಭಕ್ತರ ನಡುವೆ ಪುರೋಹಿತರ ಅಗತ್ಯವನ್ನು ನಿರಾಕರಿಸಿ ಪ್ರತಿಯೊಬ್ಬರಿಗೂ ತಮ್ಮದೇ ಆದ ಇಷ್ಟಲಿಂಗವನ್ನು ನೀಡಿತು. ಗುಡಿ ಸಂಸ್ಕೃತಿಯನ್ನು ತಿರಸ್ಕರಿಸಿತು. ಆದರೆ ಇಂದು ಸರ್ಕಾರವೇ ಮುಂದೆ ನಿಂತು ಗುಡಿ ಕಟ್ಟುವ, ಅರ್ಚಕ ವ್ಯವಸ್ಥೆಯನ್ನು ಊರ್ಜಿತಗೊಳಿಸುವ ಬ್ರಾಹ್ಮಣ್ಯದಲ್ಲಿ ನಿರತವಾಗಿದೆ. ಬ್ರಾಹ್ಮಣ್ಯವು ಸ್ಥಾವರ ರೂಪಿ ಗುಡಿ ಸಂಸ್ಕೃತಿಯ ಆರಾಧನೆ ಮಾಡಿದರೆ ಬಸವ ಸಂವಿಧಾನವು ಜಂಗಮಶೀಲ-ಚಲನಶೀಲ ಸಮಾಜೋ-ಆರ್ಥಿಕ-ರಾಜಕೀಯ ವ್ಯವಸ್ಥೆಯನ್ನು ಪ್ರತಿಪಾದಿಸಿತು. ದೇವರು-ಭಕ್ತರ ನಡುವಿನ ಅರ್ಚಕ ವ್ಯವಸ್ಥೆಯಲ್ಲಿ ದುಡಿದುಣ್ಣದ ಕರ್ಮವಿದ್ದರೆ ಇಷ್ಠಲಿಂಗ ವ್ಯವಸ್ಥೆಯಲ್ಲಿ ದುಡಿದುಣ್ಣುವ ಸಂಸ್ಕೃತಿಯಿದೆ. ಪರಾವಲಂಬನೆಯನ್ನು ವಚನಕಾರರು ತಿರಸ್ಕರಿಸಿದರು. ಗುಡಿ ಸಂಸ್ಕೃತಿಯಲ್ಲಿ ಅಸಮಾನತೆಯು ಅಂತರ್ಗತಗೊಂಡಿದೆ. ದೇವಸ್ಥಾನದ ಗರ್ಭಗುಡಿಯ ಭಾಗಕ್ಕೆ ಕೆಲವರಿಗೆ ಪ್ರವೇಶ, ಮಂಟಪದವರೆಗೆ ಮತ್ತೆ ಹಲವರಿಗೆ ಪ್ರವೇಶ ಮತ್ತು ಪ್ರಾಂಗಣದವರೆಗೆ ಉಳಿದವರಿಗೆ ಪ್ರವೇಶ ಎಂಬ ಶ್ರೇಣೀಕರಣವನ್ನು ಅದು ಒಳಗೊಂಡಿದೆ.

ಬ್ರಾಹ್ಮಣ್ಯವು ಮಹಿಳೆಯರನ್ನು ಎಲ್ಲ ಹಕ್ಕುಗಳಿಂದ ವಂಚಿಸಿದೆ. ಅವಳಿಗೆ ಜನಿವಾರದ ಹಕ್ಕಿಲ್ಲ. ಆದ್ದರಿಂದ ವೇದಗಳನ್ನು ಪಠಿಸುವ ಅಧಿಕಾರವಿಲ್ಲ. ಅವಳು ಮೋಕ್ಷಕ್ಕೆ ಅರ್ಹಳಲ್ಲ. ಅವಳನ್ನು ಒಂದು ’ಒಡವೆ’ ರೀತಿಯಲ್ಲಿ ನಡಸಿಕೊಂಡು ಬಂದಿದೆ. ಇದನ್ನು ಗೊಗ್ಗವ್ವೆ ಎಂಬ ವಚನಕಾರ್ತಿ ಹೀಗೆ ವಿಡಂಬಿಸುತ್ತಾಳೆ.

ಗಂಡು ಮೋಹಿಸಿ ಹೆಣ್ಣ ಹಿಡಿದರೆ, ಅದು ಒಬ್ಬರ ಒಡವೆಯೆಂದರಿಯಬೇಕು.
ಹೆಣ್ಣು ಮೋಹಿಸಿ ಗಂಡ ಹಿಡಿದರೆ ಉತ್ತರವಾವುದೆಂದರಿಯಬೇಕು
ಈ ಎರಡರ ಉಭಯವ ಕಳೆದು ಸುಖಿ ತಾನಾಗ ಬಲ್ಲಡೆನಾಸ್ತಿನಾಥ ಪರಿಪೂರ್ಣನೆಂಬೆ
(ಬಸವಯುಗದ ವಚನ ಮಹಾ ಸಂಪುಟ 1, ಶಿವಶರಣೆಯರ ಸಂಪುಟ, ವಚನ ಸಂಖ್ಯೆ 775).

ವಚನದ ಮೊದಲ ಎರಡು ಸಾಲುಗಳು ಬ್ರಾಹ್ಮಣ್ಯದ ಒಡವೆ ಸಂಸ್ಕೃತಿಯ ಮೌಲ್ಯವನ್ನು ಪ್ರತಿಪಾದಿಸುತ್ತಿದ್ದರೆ ಮೂರನೆಯ ಸಾಲಿನಲ್ಲಿ ಇದನ್ನು ಪ್ರಶ್ನೆ ಮಾಡಲಾಗುತ್ತಿದೆ. ಕೊನೆಯಲ್ಲಿ ಗೊಗ್ಗವ್ವೆಯು ಯಾರು ಯಾರಿಗೂ ಒಡವೆಯಲ್ಲ ಎಂಬ ಮೌಲ್ಯವನ್ನು ಮಂಡಿಸುತ್ತಿದ್ದಾಳೆ. ಹೀಗೆ ಯಾವುದೇ ದೃಷ್ಟಿಯಿಂದ ನೋಡಿದರೂ ಬ್ರಾಹ್ಮಣ್ಯವು ’ಸಾಮಾಜಿಕ ಶ್ರೇಣೀಕೃತ ಅಸಮಾನತೆ’ಯ ಪ್ರಣಾಳಿಕೆಯಾಗಿರುವುದು ಸ್ಪಷ್ಟವಾಗುತ್ತದೆ. ಬುದ್ಧ, ಬಸವ, ಡಾ. ಬಿ. ಆರ್. ಅಂಬೇಡ್ಕರ್, ಪೆರಿಯಾರ್, ನಾರಾಯಣಗುರುಗಳು, ಪುಲೆ ದಂಪತಿಗಳು ಇಂತಹ ಅಸಮಾನತೆಯನ್ನು ಅಂತರ್ಗತ ಮಾಡಿಕೊಂಡಿರುವ ಬ್ರಾಹ್ಮಣ್ಯವನ್ನು ತಿರಸ್ಕರಿಸಿದರು. ಇಲ್ಲಿ ತಿರಸ್ಕಾರಕ್ಕೆ ಒಳಗಾಗಿದ್ದು ಬ್ರಾಹ್ಮಣ್ಯವೆಂಬ ಸಮಾಜೋ-ಆರ್ಥಿಕ ಪ್ರಣಾಳಿಕೆಯೇ ವಿನಾ ಬ್ರಾಹ್ಮಣರಲ್ಲ. ಚೇತನ್ ಅವರು ಇದೇ ಅಂಬೇಡ್ಕರ್ ಪ್ರಣೀತ ಸಾವಿತ್ರಿಬಾಯಿ ಪ್ರಣೀತ ಮೌಲ್ಯಗಳನ್ನು ವಿರೋಧಿಸಿದ ಬ್ರಾಹ್ಮಣ್ಯವನ್ನು ಟೀಕಿಸುತ್ತಿದ್ದಾರೆ ವಿನಾ ಬ್ರಾಹ್ಮಣರನ್ನಲ್ಲ ಎಂಬುದನ್ನು ಸಮಾಜ ಅಥ ಮಾಡಿಕೊಳ್ಳಬೇಕು.

ಡಾ. ಟಿ. ಆರ್. ಚಂದ್ರಶೇಖರ್

ಡಾ. ಟಿ. ಆರ್. ಚಂದ್ರಶೇಖರ್
ಅಭಿವೃದ್ಧಿ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿ ಹಂಪಿ ವಿ.ವಿಯಲ್ಲಿ ಸೇವೆ ಸಲ್ಲಿಸಿರುವ ಚಂದ್ರಶೇಖರ್ ಅವರು ಅರ್ಥಶಾಸ್ತ್ರದ ವಿಷಯದಲ್ಲಿ ಹಲವು ಪುಸ್ತಕಗಳನ್ನು ರಚಿಸಿದ್ದಾರೆ. ಇತಿಹಾಸ-ಸಂಸ್ಕೃತಿಗಳ ಬಗ್ಗೆಯೂ ತಮ್ಮ ವಿಶಿಷ್ಟ ಚಿಂತನೆಗಳನ್ನು ಪ್ರಸ್ತುತ ಪಡಿಸುತ್ತಿರುವ ಮುಂಚೂಣಿ ಚಿಂತಕರು


ಇದನ್ನೂ ಓದಿ: ಬಲಪಂಥೀಯ ಸಾಂಸ್ಕೃತಿಕ ರಾಜಕಾರಣದಲ್ಲಿ ಗಟ್ಟಿಗೊಳ್ಳುತ್ತಿರುವ ಜಾತಿಗಳು ಮತ್ತು ಬ್ರಾಹ್ಮಣ್ಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...