ನಟ ಚೇತನ್ ಬ್ರಾಹ್ಮಣ್ಯದ ಕುರಿತು ಮಾಡಿದ ಟಿಪ್ಪಣಿಗಳಿಂದಾಗಿ ಉಂಟಾಗಿರುವ ವಿವಾದವು ಸಾಮಾಜಿಕ
ತಾಣಗಳಲ್ಲಿ ಬಿರುಸಾಗಿ ಚರ್ಚೆಯಾಗುತ್ತಿದೆ. ಈ ವಿವಾದದ ನೆಪದಲ್ಲಿ ಪ್ರಸ್ತುತವಾದ ಅನೇಕ ಸಮಕಾಲೀನ ವಿದ್ಯಮಾನಗಳನ್ನು ಕುರಿತು ಗಂಭೀರವಾದ ಸಂವಾದವನ್ನು ನಿರೀಕ್ಷಿಸುತ್ತಿದ್ದೇನೆ. ಏಕೆಂದರೆ ಸದ್ಯದ ರಾಜಕೀಯದ ತಂತ್ರಗಾರಿಕೆಯೆಂದರೆ ಉದ್ದೇಶಪೂರ್ವಕವಾಗಿ ಅನವಶ್ಯಕ ವಿವಾದಗಳನ್ನು ಮಾಧ್ಯಮಗಳ ಮೂಲಕ ಮತ್ತು ಈಗಲೂ ಬ್ರಿಟಿಷ್ ವಸಾಹತುಶಾಹಿಯ ಜೀವಂತ ವಾರಸುದಾರರಾಗಿರುವ ಪೊಲೀಸ್ ಮತ್ತು ತಳಮಟ್ಟದ ನ್ಯಾಯಾಲಯಗಳ ಮೂಲಕ ಹುಟ್ಟಿಹಾಕುವುದು; ಇದರ ಮೂಲಕ ಈಗಾಗಲೇ ಧ್ರುವೀಕರಣವಾಗಿರುವ ನಾಗರಿಕ ಸಮುದಾಯವನ್ನು ಇನ್ನಷ್ಟು ಧ್ರುವೀಕರಣಗೊಳಿಸುವುದು. ಅಲ್ಲದೆ ಮೂಲ ಮಾತೃ ಸಂಸ್ಥೆಗೆ ಬೆಂಬಲವಾಗಲು ಹುಟ್ಟಿಕೊಂಡಿರುವ ಸಂಸ್ಥೆಗಳು ತಮ್ಮ ಬಲವನ್ನು ಹೆಚ್ಚಿಸಿಕೊಳ್ಳಲು ಅವಕಾಶವಾಗುತ್ತದೆ.

ಎಲ್ಲಕ್ಕಿಂತ ಮುಖ್ಯ ಉದ್ದೇಶವೆಂದರೆ ಯಾವುದೇ ಟೀಕೆ ಅಥವಾ ಟಿಪ್ಪಣಿಗೆ ಪ್ರಜಾಪ್ರಭುತ್ವವಾದಿ ಅವಕಾಶಗಳಿರಕೂಡದು ಎನ್ನುವ ಫ್ಯಾಸಿಸ್ಟ್ ಸಂಸ್ಥೆ ಮತ್ತು ಅದರ ರಾಜಕೀಯ ಪಕ್ಷ ಹಾಗೂ ಸರಕಾರಗಳ ಒತ್ತಾಸೆಯನ್ನು ಸಮರ್ಥಿಸಿದ ಹಾಗೆ ಆಗುತ್ತದೆ. ಇವುಗಳ ಬೆಂಬಲಿಗರಾದ ಶಿಕ್ಷಿತ ಮಧ್ಯಮವರ್ಗ ಮತ್ತು ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆಗಳ ಸೈದ್ಧಾಂತಿಕ ನಿಲುವುಗಳಿಗೆ ಪರೋಕ್ಷವಾಗಿ ಬೆಂಬಲವೂ ಸಿಕ್ಕುತ್ತದೆ. ಅಂದರೆ ಸಾಮಾಜಿಕ ತಾಣಗಳ ಹುಸಿ ಚರ್ಚೆಯಿಂದ ಭಾರತದ ಹಾಗೂ ವಿದೇಶೀಯ ಸಂಶೋಧನೆ, ಶಿಕ್ಷಣ ಸಂಸ್ಥೆಗಳವರೆಗೆ ಹಬ್ಬಿರುವ ಬಲಪಂಥೀಯ ಜಾಲವೊಂದು ಸದಾ ಉತ್ಸಾಹದಿಂದ ಕೆಲಸ ಮಾಡುತ್ತಿದ್ದು ಅದರ ಒಂದು ಕಾರ್ಯಾಚರಣೆಯಾಗಿ ಈಗಿನ ಈ ವಿವಾದವನ್ನು ನೋಡಬೇಕಾಗಿದೆ. ಇದು ಹೇಗೆ ಕೆಲಸಮಾಡುತ್ತಿದೆಯೆನ್ನುವುದಕ್ಕೆ ಉದಾಹರಣೆ ನೋಡಿ. ಕರ್ನಾಟಕದ ಯುವತಿಯೊಬ್ಬಳು ವಿಶ್ವವಿಖ್ಯಾತ ಆಕ್ಸ್‌ಫರ್ಡ್ ಸ್ಟೂಡೆಂಟ್ ಯೂನಿಯನ್‌ನ ಅಧ್ಯಕ್ಷೆಯಾಗಿ ಆಯ್ಕೆಯಾದ ಸುದ್ದಿ ಬಂದಾಗ ನಾನು ಕೂಡ ಸಾಮಾಜಿಕ ತಾಣದಲ್ಲಿ ಅದನ್ನು ಸಂಭ್ರಮಿಸಿದೆ. ಆದರೆ ಒಂದೆರಡು ದಿನಗಳಲ್ಲಿ, ಆ ಯುವತಿ ಜನಾಂಗೀಯ ನಿಂದನೆಯ (racist) ಪೋಸ್ಟ್‌ಗಳನ್ನು ಈ ಹಿಂದೆ ಹಾಕಿದ್ದು, ಆದರ ಬಗ್ಗೆ ಯಾವುದೇ ವಿಷಾದವನ್ನೂ ವ್ಯಕ್ತಪಡಿಸಿರದಿದ್ದರಿಂದ ಅವರನ್ನು ಈ ಸ್ಥಾನದಿಂದ ತೆಗೆಯಬೇಕೆಂದು ಚರ್ಚೆ ಶುರುವಾಯಿತು.

ಇದು ಭಾರತೀಯರಿಗೆ ಆದ ಅವಮಾನ, ಜನಾಂಗೀಯ ತಾರತಮ್ಯವೆಂದು ನಾನು ವಿವರಿಸಿದ ಜಾಲದಲ್ಲಿ ವಿವಾದ ಆರಂಭಿಸಲಾಯಿತು. ನಮ್ಮ ವಿದೇಶಾಂಗ ಮಂತ್ರಿ ಜಯಶಂಕರ ಕೂಡ ಆ ಯುವತಿಯ ಪರವಾಗಿ ಸಂಸತ್ತಿನಲ್ಲಿ ಮಾತನಾಡಿದರು. ಆದರೆ ಅಷ್ಟರಲ್ಲಿ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿರುವ Oxford University Hindu Society ಮತ್ತು ಇತರ ಸಂಸ್ಥೆಗಳು ಅವಳು ಮಾಡಿದ್ದು ತಪ್ಪು ಎಂದು ಹೇಳಿಕೆ ನೀಡಿದ ಮೇಲೆ ಮೆಲ್ಲಗೆ ಈ ವಿವಾದವು ಮರೆಯಾಯಿತು. ಈ ವಿವಾದದಲ್ಲಿ ಈ ಸಂಘಟನೆಗಳ ಜಾಲಕ್ಕೆ ಯಾವ ಹಾನಿಯೂ ಆಗಲಿಲ್ಲ. ಲಾಭವೇ ಆಯಿತು. ಏಕೆಂದರೆ ಅರ್ಥಹೀನ ವಿವಾದಗಳನ್ನು ಹುಟ್ಟಿಸುವುದೇ ಒಂದು ಸಾಂಸ್ಕೃತಿಕ ರಾಜಕೀಯವಾಗಿದೆ.

PC : Times of India

ಹೀಗೆಲ್ಲಾ ಆಗುತ್ತಿರುವುದಕ್ಕೆ ಎರಡು ಕಾರಣಗಳು. ಒಂದು ಬಹುಮತದ ಚುನಾವಣೆ ವಿಜಯವನ್ನು ಏಕವ್ಯಕ್ತಿ ಸರ್ವಾಧಿಕಾರಕ್ಕೆ ದೊರೆತ ಸಮ್ಮತಿಯೆಂದುಕೊಂಡು ಅತ್ಯಂತ ಅವಸರದಲ್ಲಿ ಪ್ರಜಾಪ್ರಭುತ್ವದ ಸಂಸ್ಥೆಗಳನ್ನು ಹಾಗೂ ಅದರ ಮೌಲ್ಯಗಳಾದ ಅಭಿವ್ಯಕ್ತಿ ಸ್ವಾತಂತ್ರ್ಯ, ಪ್ರಭುತ್ವವನ್ನು ಪ್ರಶ್ನಿಸುವ ಹಕ್ಕುಗಳನ್ನು ನಾಶಮಾಡಲಾಗುತ್ತಿದೆ. ಹೀಗೆ ಮಾಡಲು ಬ್ರಿಟಿಷ್ ವಸಾಹತುಶಾಹಿ ಕಾಲದ ಪೊಲೀಸರಿಗಿಂತ ಕ್ರೂರವಾಗಿರುವ ಪೊಲೀಸರನ್ನು ಬಳಸಿಕೊಳ್ಳಲಾಗುತ್ತದೆ. ರಾಷ್ಟ್ರದಲ್ಲಿಯೆ ಅತಿಹೆಚ್ಚು ದೇಶದ್ರೋಹ (Sedition) ಪ್ರಕರಣಗಳನ್ನು ದಾಖಲಿಸಿದ ಕುಖ್ಯಾತಿಯ ಕರ್ನಾಟಕ ರಾಜ್ಯದಲ್ಲಿ ಪೊಲೀಸರು ತಮ್ಮ mobile ವ್ಯಾನ್‌ಗಳಲ್ಲಿ F.I.R. ಅರ್ಜಿಗಳ ಪ್ರತಿಗಳನ್ನು ಹಂಚುತ್ತಾ ಒಡಾಡುತ್ತಿದ್ದಾರೆ! ರಾಜ್ಯ ಸರಕಾರವು ತಿಂಗಳಿಗೆ ಕನಿಷ್ಟ ಇಷ್ಟು F.I.R.ಗಳನ್ನು ದಾಖಲಿಸಿದಿದ್ದರೆ ಕೆಲಸದಲ್ಲಿ ಬಡ್ತಿ ಇಲ್ಲವೆಂದು ಪೊಲೀಸ್ ಇಲಾಖೆಗೆ ನಿರ್ದೇಶನ ಕೊಟ್ಟ ಹಾಗೆ ಕಾಣುತ್ತದೆ.

ಇದಕ್ಕೆ ಪೂರಕವಾಗಿ ಕರ್ನಾಟಕದ ಚರಿತ್ರೆಯಲ್ಲಿ ಕಂಡಿರದಂಥ ಮಹಾಭ್ರಷ್ಟ ಸರಕಾರವು ತನ್ನ ಉಳಿವಿಗಾಗಿ ರಾಜ್ಯದ ಎಲ್ಲಾ ಜಾತಿಸಂಸ್ಥೆಗಳಿಗೆ ಪ್ರಜೆಗಳು ಕೊಟ್ಟ ತೆರಿಗೆಯಿಂದ ಧನಸಹಾಯವನ್ನು ನೀಡಿ, ಅಸ್ತಿತ್ವದಲ್ಲಿ ಇಲ್ಲದಿದ್ದ ಪಕ್ಷದಲ್ಲಿ, ಜಾತಿಗಳಿಗೆ ಕಡ್ಡಾಯವಾಗಿ ಇಂಥ ಜಾತಿಸಂಸ್ಥೆಗಳನ್ನು ಸ್ಥಾಪಿಸಲು ಒತ್ತಾಯಿಸಿ ಧನಸಹಾಯ ನೀಡುತ್ತಿದೆ. ಇದು ಕರ್ನಾಟಕದ ರಾಜಕೀಯದ ಜಾತೀಕರಣದ ಭಾಗವಾಗಿದೆ. ಸೈದ್ಧಾಂತಿಕ ಬದ್ಧತೆ, ಕಾರ್ಯಕ್ಷಮತೆ ಮತ್ತು ಪ್ರಾಮಾಣಿಕತೆಗಳು ಇಲ್ಲದ ಈ ರಾಜಕೀಯವು ಪ್ರತಿಯೊಂದು ಜಾತಿಯನ್ನು ಸಂಘಟಿತವಾಗಿ Vote bank ಆಗುವಂತೆ ಪ್ರೇರೇಪಿಸುತ್ತ ಬಂದಿದೆ. ಇದರ ಜೊತೆಗೆ ಕಳೆದ ಒಂದು ದಶಕದಲ್ಲಿ ಸಾಂಕ್ರಾಮಿಕ ಪಿಡುಗಿನಂತೆ ಸ್ವಾಮಿಗಳು, ಮಠಗಳು ಹಬ್ಬುತ್ತ ಈಗ ಸಾವಿರಾರು ಸಂಖ್ಯೆಗಳಲ್ಲಿವೆ. ಇವುಗಳು ಧಾರ್ಮಿಕ ಸಂಸ್ಥೆಗಳಲ್ಲ; ರಾಜಕೀಯ ಸಂಸ್ಥೆಗಳು. ಹೀಗಾಗಿ ಈ ಎಲ್ಲಾ ಸಂಸ್ಥೆಗಳ ಕಾರ್ಯಸೂಚಿಯೆಂದರೆ ಸರಕಾರದಿಂದ ಆಯಾ ಜಾತಿಗೆ ಮೀಸಲಾತಿ, ಧನಸಹಾಯ ಕೊಡಿಸುವುದು. ತಮ್ಮ ಬಗ್ಗೆ ಅಥವಾ ತಮ್ಮ ಜಾತಿಯ ಬಗ್ಗೆ ಯಾವುದೇ ವಿಮರ್ಶೆ ಬಂದರೆ ಅದು “ಧಾರ್ಮಿಕ ಭಾವನೆಗಳಿಗೆ ನೋವು” ತಂದಿದೆ ಎನ್ನುವುದು. ಇತ್ತೀಚೆಗೆ ಬಲಪಂಥೀಯರ ಮಾದರಿಯಲ್ಲಿ “ಈ ಹೇಳಿಕೆ ರಾಷ್ಟ್ರದ ಭಾವೈಕ್ಯತೆಗೆ ಭಂಗ ತರುತ್ತಿದೆ” ಎನ್ನುವುದು. ಈ ಸಂಸ್ಥೆಗಳಿಗೆ ಯಾವುದೇ ಜಾತಿಯನ್ನು ಪ್ರತಿನಿಧಿಸುವ ಅಧಿಕಾರವನ್ನು ಯಾರು ಯಾವ ಆಧಾರದ ಮೇಲೆ ಕೊಟ್ಟಿದ್ದಾರೆ ಎನ್ನುವುದು ಚಿದಂಬರ ರಹಸ್ಯವಾಗಿದೆ. ಒಂದು ಸಮಾಜವಾದಿ, ಜಾತ್ಯತೀತ ರಾಷ್ಟ್ರವೊಂದರಲ್ಲಿ ಜಾತಿಸಂಸ್ಥೆಗಳಿಗೆ ಸರಕಾರವು ಅಧಿಕೃತ ಮನ್ನಣೆ ಹೇಗೆ ಕೊಡಬಲ್ಲದು ಎನ್ನುವುದನ್ನು ಯಾರೂ ಕೇಳಿಲ್ಲ.

ಈ ಸಂಸ್ಥೆಗಳಿಗೆ ನಿಜವಾದ ಸಾಮಾಜಿಕ ಬದಲಾವಣೆಗಳನ್ನು ತರುವ ಇಚ್ಛಾಶಕ್ತಿಯೂ ಇಲ್ಲ; ಸಾಮರ್ಥ್ಯವೂ ಇಲ್ಲ. ಹೀಗಾಗಿ soft target ಗಳಾದ ಪಠ್ಯಪುಸ್ತಕಗಳು, ಗ್ರಂಥಗಳು, ಚಲನಚಿತ್ರಗಳು ಇವುಗಳನ್ನು ಆಯ್ದುಕೊಂಡು ತಮ್ಮ ಜಾತಿಯ “ಘನತೆ”ಯನ್ನು ಕಾಪಾಡುವ ಕೆಲಸ ಮಾಡುತ್ತವೆ. ಈ ಕೆಲಸಕ್ಕಾಗಿ ಅವು ಜಾತಿವ್ಯವಸ್ಥೆ, ಶೋಷಣೆ, ಸಾಮಾಜಿಕ ನ್ಯಾಯ ಇವೇ ಮುಂತಾದವುಗಳ ಗಂಭೀರ ಚರ್ಚೆಯನ್ನು ಆಗದಂತೆ ನೋಡಿಕೊಳ್ಳುತ್ತವೆ. ಬ್ರಾಹ್ಮಣ್ಯದ ಬಗೆಗಿನ ವಿವಾದವು ಈ ಚೌಕಟ್ಟಿನಲ್ಲಿ ನಡೆಯುತ್ತಿದೆ. ಬ್ರಾಹ್ಮಣ್ಯ ಎನ್ನುವುದನ್ನು ಉದ್ದೇಶಪೂರ್ವಕವಾಗಿ ಬ್ರಾಹ್ಮಣ ಜಾತಿಗೆ ಅನ್ವಯಿಸಿ ವಿವಾದ ಸೃಷ್ಟಿಸಲಾಗುತ್ತಿದೆ. ಕಾರಣ ಸರಳವಾಗಿದೆ. ಕ್ರಿ.ಪೂ. 6ನೇ ಶತಮಾನದಿಂದ ಭಾರತದಲ್ಲಿ ಬೌದ್ಧ ಧರ್ಮವು ಪುರೋಹಿತಶಾಹಿಯನ್ನು ಪ್ರಶ್ನಿಸಿತು. ವೈದಿಕ ಪರಂಪರೆಯನ್ನು ಪ್ರಶ್ನಿಸಿತು.

ಪ್ರಾಯಶಃ ಅದೇ ಕಾಲದಿಂದ ಜೈನ ಧರ್ಮವು ದೇವರ ಅಸ್ತಿತ್ವ, ವರ್ಣಾಶ್ರಮ ಇವುಗಳನ್ನು ಪ್ರಶ್ನಿಸಿತು. ಮುಂದಿನ ಶತಮಾನಗಳಲ್ಲಿ ಕ್ರಮೇಣವಾಗಿ ಇವೆರಡೂ ಧರ್ಮಗಳು ಅವನತಿ ಹೊಂದಿ ರಾಜಪ್ರಭುತ್ವ, ವರ್ಣಾಶ್ರಮ, ಲಿಂಗ ಅಸಮಾನತೆ, ಮೂರ್ತಿಪೂಜೆ ಇವುಗಳನ್ನು ಸ್ವೀಕರಿಸಿ ಹೊಂದಾಣಿಕೆ ಮಾಡಿಕೊಂಡವು. ಈ ಪ್ರಧಾನ ಧರ್ಮಗಳಲ್ಲದೆ ಅನೇಕ ಶ್ರಮಣ ಪರಂಪರೆಯ, ತಾತ್ವಿಕ ಪರಂಪರೆಯ ಅನುಯಾಯಿಗಳೂ ಪುರೋಹಿತಶಾಹಿಯನ್ನು ತಿರಸ್ಕರಿಸಿದರು. ಚಾರ್ವಾಕರಂತೂ ಪರ್ಯಾಯವಾದ ಜ್ಞಾನಮಾರ್ಗ, ನೀತಿಶಾಸ್ತ್ರಗಳನ್ನು ಕಟ್ಟಿಕೊಂಡರು. ಹನ್ನೆರಡನೇ ಶತಮಾನದ ವಚನಕಾರರು ಭಾರತದ ಅನೇಕ ಭಕ್ತಿಪಂಥದ ಅನುಯಾಯಿಗಳ ಹಾಗೆ ಪುರೋಹಿತಶಾಹಿಯನ್ನು ಅಂದರೆ ಬ್ರಾಹ್ಮಣ್ಯವನ್ನು ಉಗ್ರವಾಗಿ ಟೀಕಿಸಿದರು.

ಭಾರತದಲ್ಲಿ ಭಕ್ತಿ ಪರಂಪರೆಗಳು 16, 17ನೇ ಶತಮಾನದವರೆಗೂ ಸಶಕ್ತವಾಗಿದ್ದವು. ಕಬೀರ್, ಸರ್ವಜ್ಞ, ವೇಮನ ಮತ್ತು ಇಂಥ ನೂರಾರು ಚಿಂತಕರು, ಕವಿಗಳು ಆ ಪರಂಪರೆಯನ್ನು ಮುಂದುವರೆಸಿದರು. ವಸಾಹತುಶಾಹಿಯ ಆಗಮನದೊಂದಿಗೆ ಹುಟ್ಟಿಕೊಂಡ ಸಮಾಜ ಸುಧಾರಣಾ ಚಳವಳಿಗಳು, ಬ್ರಾಹ್ಮಣೇತರ ಚಳವಳಿಗಳು ಪ್ರಬಲವಾಗಿ ಬೆಳೆದವು. ಅಂಬೇಡ್ಕರ್ ಪೂರ್ವದಲ್ಲಿ ಜೋತಿಬಾ ಫುಲೆ ಮಾತ್ರವಲ್ಲ ಅನೇಕ ಮಹಾರ್ ಜನಾಂಗದ ನಾಯಕರು, ಶೂದ್ರ ಜನಾಂಗಗಳ ನಾಯಕರು ಕೂಡ ಮುಕ್ತವಾಗಿ ಬ್ರಾಹ್ಮಣ್ಯ ವಿರೋಧಿ ಚಳವಳಿಗಳನ್ನು ಆರಂಭಿಸಿದರು. ಇವುಗಳಲ್ಲಿ ಅನೇಕ ಬ್ರಾಹ್ಮಣ ವ್ಯಕ್ತಿಗಳು ಭಾಗವಹಿಸಿದರು. ಉದಾಹರಣೆಗೆ ಮಹಾಡ್ ಸತ್ಯಾಗ್ರಹದಲ್ಲಿ ’ಮನುಸ್ಮೃತಿ’ಯನ್ನು ಸುಡುವ ಸೂಚನೆ ಬಂದಿದ್ದು ಸಹಸ್ರಬುದ್ಧೆ ಎನ್ನುವ ಬ್ರಾಹ್ಮಣ ವ್ಯಕ್ತಿಯಿಂದ.

ಅಂಬೇಡ್ಕರ್ ಮತ್ತು ಪೆರಿಯಾರ್ ಜಾತಿವ್ಯವಸ್ಥೆಯನ್ನು ಕುರಿತು ತಾತ್ವಿಕ ಚೌಕಟ್ಟುಗಳನ್ನು ರಚಿಸಿದರು. ವಾದ, ವಿವಾದಗಳು, ತೀವ್ರ ಮುಖಾಮುಖಿಗಳು ಮತ್ತು ಹಿಂಸೆ ಇವುಗಳು ಭಾರತದ ಚರಿತ್ರೆಯ sectarian ಜಗಳಗಳ ಭಾಗವಾಗಿವೆ. ಅದೇ ಹೊತ್ತಿಗೆ ಪುರೋಹಿತಶಾಹಿ, ಬ್ರಾಹ್ಮಣಶಾಹಿಯ ವಿರೋಧವನ್ನು ಕೇವಲ ಒಂದು ಜಾತಿಯ ವಿರೋಧವಾಗಿ ಪರಿಕಲ್ಪಿಸಲಾಗಲಿಲ್ಲ. ಇಲ್ಲದಿದ್ದರೆ ಸ್ವಾಮಿ ವಿವೇಕಾನಂದರು ಇಷ್ಟು ಉಗ್ರವಾಗಿ ಪುರೋಹಿತಶಾಹಿಯನ್ನು ಟೀಕಿಸುವುದು ಸಾಧ್ಯವಾಗುತ್ತಿರಲಿಲ್ಲ. ಅಲ್ಲದೆ ಸೈದ್ಧಾಂತಿಕ ಜಗಳಗಳು ನಿತ್ಯ ಜೀವನದಲ್ಲಿಯ ಸಾಮರಸ್ಯಕ್ಕೆ ಅಡ್ಡಿಯಾಗಲಿಲ್ಲ. ಅಂಬೇಡ್ಕರ್, ಕುವೆಂಪು, ಚನ್ನಣ್ಣ ವಾಲೀಕಾರ್ ಹೀಗೆ ಎಲ್ಲ ತಲೆಮಾರುಗಳಲ್ಲಿ ವಿದ್ಯಾಗುರುಗಳಾಗಿ, ಪ್ರೇರಣೆಯಾಗಿ ಪ್ರಭಾವಿಸಿದವರು ಹುಟ್ಟಿನಿಂದ ಬ್ರಾಹ್ಮಣರೆ. ಹೀಗೆ ಹೇಳುವುದು ಕೂಡ ಅಸಹಜ ಮತ್ತು ಕೃತ್ರಿಮ. ಏಕೆಂದರೆ ಹುಟ್ಟಿನಿಂದ ಬಂದ ಜಾತಿ ಸೂತಕವನ್ನು ಮೀರಿದವರ ಸಂಖ್ಯೆಯೂ ಅಪಾರವಾಗಿದೆ. ಹೀಗಾಗಿ ಬ್ರಾಹ್ಮಣ್ಯ ಅಂದರೆ ಬ್ರಾಹ್ಮಣರಲ್ಲವೆ ಎನ್ನುವ ಚರ್ಚೆಯೇ ಅತಾರ್ಕಿಕ ಹಾಗೂ ಅನವಶ್ಯಕ.

ಅಂಬೇಡ್ಕರ್‌ರು ಹೇಳಿದ ಹಾಗೆ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ವಿರೋಧಿಸುವ ಶಕ್ತಿಯೇ ಬ್ರಾಹ್ಮಣ್ಯ. ಇದಕ್ಕೆ ಜಾತಿಯಿಲ್ಲ. ಜಗತ್ತಿನ ಶ್ರೇಷ್ಠ ನಾಗರೀಕತೆಯಾಗಬಹುದಾಗಿದ್ದ ಭಾರತೀಯ ನಾಗರೀಕತೆಯು ಅಸ್ಪೃಶ್ಯತೆ ಮತ್ತು ಬ್ರಾಹ್ಮಣ್ಯದಿಂದಾಗಿ ತನ್ನ ಜೀವಶಕ್ತಿಯನ್ನು ಕಳೆದುಕೊಂಡಿತು. ದುರಂತವೆಂದರೆ ಬಲಪಂಥೀಯ ರಾಜಕೀಯ ಹಾಗೂ ಸಾಂಸ್ಕೃತಿಕ ರಾಜಕೀಯದಿಂದಾಗಿ ಭಾರತೀಯ ಧರ್ಮ ಹಾಗೂ ಸಂಸ್ಕೃತಿಗಳನ್ನು ವೈದಿಕ ಧರ್ಮ ಹಾಗೂ ಸಂಸ್ಕೃತಿಗಳೊಂದಿಗೆ ಸಮೀಕರಿಸಲಾಗುತ್ತಿದೆ. ಇದನ್ನು ಒಂದು ಮಾತೃ ಸಂಸ್ಥೆ ಮತ್ತು ಅದರ ರಾಜಕೀಯ ಪಕ್ಷಗಳು ಅದೆಷ್ಟು ಪ್ರಬಲವಾಗಿ, ಫ್ಯಾಸಿಸ್ಟ್ ಮಾದರಿಯಲ್ಲಿ ಮಾಡುತ್ತಿವೆಯೆಂದರೆ ಅಷ್ಟೇ ತೀವ್ರವಾಗಿ ಬ್ರಾಹ್ಮಣ ವಿರೋಧವು ಬೆಳೆಯುತ್ತಿದೆ.

PC : DNA India

ಇದಕ್ಕೆ ಪರಿಹಾರವೆಂದರೆ ಜಾತಿವಿನಾಶವೇ ನಮ್ಮ ಉದ್ದೇಶ ಮತ್ತು ಮೌಲ್ಯವಾಗಬೇಕು. ಇದು ಎಷ್ಟೇ Utopian ಆಗಿ, ಅಪ್ರಾಯೋಗಿಕವಾಗಿ ಕಂಡರೂ ನಿರ್ವಾಹವಿಲ್ಲ. ಇಲ್ಲದಿದ್ದರೆ ಜಾತಿಗಳು ಜಾಗತೀಕರಣದ ಕಾಲದಲ್ಲಿ ಗಟ್ಟಿಗೊಳ್ಳುತ್ತವೆ. ತೀವ್ರ ಅಸಹನೆಯ majoritarian ಧರ್ಮ ಮತ್ತು ರಾಜಕೀಯಗಳು ಅಪಾರ ಹಿಂಸೆಯನ್ನು ತರುತ್ತವೆ. ಬಹುತ್ವ ಮತ್ತು ಪ್ರಜಾಪ್ರಭುತ್ವಗಳು ನಾಶವಾಗುತ್ತವೆ. ಒಂದು ಮಹಾನ್ ನಾಗರಿಕತೆಯು ಫ್ಯಾಸಿಸ್ಟ್ ರಾಜಕೀಯದಿಂದಾಗಿ ಮರಣಶಯ್ಯೆಯನ್ನು ತಲುಪುತ್ತದೆ. ಬ್ರಾಹ್ಮಣ್ಯದ ಚರ್ಚೆ ಮುನ್ನೆಲೆಗೆ ಬಂದಿರುವುದಕ್ಕೆ ಕಾರಣವೆಂದರೆ ಬಲಪಂಥೀಯ ಸಾಂಸ್ಕೃತಿಕ ರಾಜಕೀಯ ಭಾರತೀಯ ಧರ್ಮ ಹಾಗೂ ಸಂಸ್ಕೃತಿಗಳನ್ನು ಬ್ರಾಹ್ಮಣೀಕರಣಗೊಳಿಸುತ್ತಿರುವುದು. ಇದನ್ನು ಮೊದಲಿನಿಂದ ಮಾಡುತ್ತ ಬಂದಿರುವ ಸಂಸ್ಥೆಗಳು ಈಗಂತೂ ಅದನ್ನೇ ಪ್ರಧಾನ ಕಾರ್ಯಸೂಚಿಯನ್ನಾಗಿಸಿಕೊಂಡಿವೆ.

ಭಾರತದ ಇತಿಹಾಸದ ಪುನರ್‌ರಚನೆ, ಅದಕ್ಕೆ ಅನುಗುಣವಾಗಿ ಪಠ್ಯಗಳ ರಚನೆ, ಮಾರ್ಕ್ಸ್‌ವಾದಿ ಇತಿಹಾಸಕಾರರು ಬರೆದ ಇತಿಹಾಸಗಳನ್ನು ಸಂಪೂರ್ಣ ತಿರಸ್ಕರಿಸುವುದು, ಜಾತಿವ್ಯವಸ್ಥೆ ದಲಿತರ ಶೋಷಣೆಗಳನ್ನು ವಿಶೇಷವಾಗಿ ಅಮೆರಿಕದ ಅನೇಕ ರಾಜ್ಯಗಳ ಪಠ್ಯಗಳಿಂದ ಕೈಬಿಡುವಂತೆ ಒತ್ತಾಯ ಮಾಡುವುದು, ಅಲ್ಲಿಯ ಪ್ರಗತಿಪರ ಚಿಂತಕರನ್ನು ಸತತವಾಗಿ ಕಿರಿಕಿರಿಗೆ ಒಳಪಡಿಸುವುದು, ಬ್ರಾಹ್ಮಣಪರವಾದ ಸಂಶೋಧಕರನ್ನು ಎಲ್ಲಾ ಮಾಧ್ಯಮಗಳ ಮೂಲಕ ಸಮರ್ಥಿಸುವುದು, ಖ್ಯಾತ ವಿಶ್ವವಿದ್ಯಾಲಯಗಳಲ್ಲಿ ಹಿಂದೂ ವಿದ್ಯಾರ್ಥಿ ಸಂಘಟನೆಗಳ ಮೂಲಕ ಏಕಮಾದರಿಯ ಭಾರತೀಯ ಚರಿತ್ರೆಯ ಪ್ರಚಾರಕ್ಕೆ ಒತ್ತಾಯಿಸುವುದು ಇವೆಲ್ಲ ಈ ಕಾರ್ಯಸೂಚಿಯ
ಭಾಗಗಳಾಗಿವೆ. ಭಾರತದಲ್ಲಿ ಅಂಬೇಡ್ಕರ್ ಚಿಂತನೆಯ ಬಹುಮುಖ್ಯ ಪ್ರತಿನಿಧಿಯಾದ ಆನಂದ ತೇಲ್ತುಂಬ್ಡೆ ಅವರನ್ನು ಹಾಸ್ಯಾಸ್ಪದ ಆರೋಪದ ಮೇಲೆ ಜೈಲಿನಲ್ಲಿಡಲಾಗಿದೆ.

ಈ ಎಲ್ಲಾ ಚಟುವಟಿಕೆಗಳಲ್ಲಿ ಬಹುದೊಡ್ಡ ಪ್ರಮಾಣದಲ್ಲಿ ಬ್ರಾಹ್ಮಣ್ಯವನ್ನು ಪುನರ್ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಹಾಗೆಯೆ ಮುಸ್ಲಿಮ್‌ರನ್ನು ಮತ್ತು ದಲಿತರನ್ನು ಅಮಾನವೀಯ ಹಿಂಸೆಗೆ ಗುರಿಪಡಿಸಲಾಗುತ್ತಿದೆ. ಈ ಕಾರ್ಯಸೂಚಿಯಿಂದಾಗಿ ಅತ್ಯಂತ ಉತ್ತೇಜಿತರಾದ ಅನೇಕ ಬ್ರಾಹ್ಮಣರು ತಮ್ಮ ಶ್ರೇಷ್ಠತೆ, ಪಾರಮ್ಯದ ಬಗ್ಗೆ ಮಾತನಾಡುವುದು ಮಾತ್ರವಲ್ಲ ಸಾವಿರಾರು ವರ್ಷಗಳಿಂದ ನಿರಂತರವಾಗಿ ನಡೆಯುತ್ತ ಬಂದಿರುವ ಬ್ರಾಹ್ಮಣ್ಯದ ವಿಮರ್ಶೆಯು ಈಗ ನಿಲ್ಲಬೇಕೆಂದು ಸರ್ವಪ್ರಯತ್ನವನ್ನು ಮಾಡುತ್ತಿದ್ದಾರೆ. ಇದು ಅಸಾಧ್ಯದ ಮಾತು. ಏಕೆಂದರೆ ಹಾಗೆ ಮಾಡಬೇಕೆಂದರೆ ಭಾರತದ ಇತಿಹಾಸವನ್ನೇ ತಿರಸ್ಕರಿಸಬೇಕು. ಇಲ್ಲಿಯ ತಾತ್ವಿಕ ಪರಂಪರೆಗಳನ್ನು ತಿರಸ್ಕರಿಸಬೇಕು. ವ್ಯರ್ಥ ಪ್ರಯತ್ನದಿಂದಾಗಿ ಅನಾವಶ್ಯಕವಾದ ವಿವಾದವು ನಡೆಯುತ್ತಿದೆ.

ಪ್ರೊ. ರಾಜೇಂದ್ರ ಚೆನ್ನಿ

ಪ್ರೊ. ರಾಜೇಂದ್ರ ಚೆನ್ನಿ
ಕುವೆಂಪು ವಿಶ್ವವಿದ್ಯಾಲಯದ ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕರು, ಕಥೆಗಾರರು, ವಿಮರ್ಶಕರು ಮತ್ತು ಸಂಸ್ಕೃತಿ ಚಿಂತಕರು. ಪ್ರಜಾಪ್ರಭುತ್ವದ ಮೌಲ್ಯಗಳ ಉಳಿವಿಗಾಗಿ ನಡೆಯುತ್ತಿರುವ ದಕ್ಷಿಣಾಯನ ಅಭಿಯಾನದ ಸಂಚಾಲಕರು


ಇದನ್ನೂ ಓದಿ: ಬ್ರಾಹ್ಮಣ ಮತ್ತು ಬ್ರಾಹ್ಮಣ್ಯ; ಬ್ರಾಹ್ಮಣ್ಯ ಎಂದರೆ ಜಾತಿ ಆಧಾರಿತ ತಾರತಮ್ಯಗಳನ್ನು ಜೀವಂತವಾಗಿಡುವುದು..

ಇದನ್ನೂ ಓದಿ: ಸಂಪಾದಕೀಯ; ಮೈಮನಸ್ಸುಗಳಲ್ಲಿ ನಾಟಿರುವ ಜಾತಿಯೆಂಬ ಅಪಾಯಕಾರಿ ಸುಳಿಯಲ್ಲಿ ಬ್ರಾಹ್ಮಣ್ಯದ ಪಾಳೆಗಾರಿಕೆ

ಇದನ್ನೂ ಓದಿ: ಹಂತಹಂತವಾಗಿ ತೊರೆಯಬೇಕಾದ ಜಾಡ್ಯ ಬ್ರಾಹ್ಮಣ್ಯದ ಗರ್ಭದೊಳಗೆ ಒಂದಿಷ್ಟು ಹೊತ್ತು

LEAVE A REPLY

Please enter your comment!
Please enter your name here