’ವರ್ಣ ವ್ಯವಸ್ಥೆಯಿಂದ ಸಾಮಾಜಿಕ ವಿಘಟನೆಯಾಯಿತು’ ಎಂಬುವುದು ಸೇರಿದಂತೆ ಶಾಲಾ ಪಠ್ಯಪುಸ್ತಕದಲ್ಲಿ ಬ್ರಾಹ್ಮಣ ಸಮುದಾವನ್ನು ಅತ್ಯಂತ ಕೆಟ್ಟ ರೀತಿಯಲ್ಲಿ ಬಿಂಬಿಸುವ ಅಂಶಗಳನ್ನು ತೆಗೆದು ಹಾಕಬೇಕು ಎಂದು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ದಿ ಮಂಡಳಿಯ ನಿಯೋಗ ಮನವಿ ಸಲ್ಲಿಸಿದ ಹಿನ್ನಲೆಯಲ್ಲಿ, ’ಬ್ರಾಹ್ಮಣ ಸಮುದಾಯದ ಕುರಿತು ಅವಹೇಳನಕಾರಿ ಅಂಶಗಳಿದ್ದರೆ ಪರಿಶೀಲಿಸಿ ತಕ್ಷಣ ಕ್ರಮ ತೆಗೆದುಕೊಳ್ಳಬೇಕು’ ಎಂದು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಸೂಚಿಸಿದ್ದಾರೆ.
ನಿನ್ನೆ ಮುಖ್ಯಮಂತ್ರಿಯನ್ನು ಭೇಟಿ ಮಾಡಿದ್ದ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ನಿಯೋಗವು, “ಶಾಲಾ ಪಠ್ಯಪುಸ್ತಕದಲ್ಲಿ ಬ್ರಾಹ್ಮಣರ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುವ ವಿಷಯವನ್ನು ಸೇರಿಸಿರುವುದು ಆಘಾತಕಾರಿ ವಿಷಯ. ಅಲ್ಲದೆ, ಇದು ಬೆಳೆಯುತ್ತಿರುವ ಮಕ್ಕಳ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರಲಿದೆ” ಎಂದು ತನ್ನ ಮನವಿಯಲ್ಲಿ ದೂರಿಕೊಂಡಿತ್ತು.
ಇದನ್ನೂ ಓದಿ: ಬಿಜೆಪಿಯೆಂದರೆ ಬ್ರಾಹ್ಮಣ-ಬನಿಯಾ ಕ್ಲಬ್: ಅವರಿಂದ `ಒಳ’ಮೀಸಲಾತಿ ಸಾಧ್ಯವೇ?
“ವೇದಗಳ ಕಾಲದಲ್ಲಿ ಆಚರಿಸುತ್ತಿದ್ದ ಯಜ್ಞ, ಯಾಗಗಳಲ್ಲಿ ಆಹಾರ ಧಾನ್ಯ, ಹಾಲು, ತುಪ್ಪವನ್ನು ಹವಿಸ್ಸು ಎಂದು ದಹಿಸುತ್ತಿದ್ದುದರಿಂದ ಆಹಾರದ ಅಭಾವ ಸೃಷ್ಟಿಯಾಯಿತು ಎಂದು ಕಪೋಕಲ್ಪಿತವಾಗಿ ಉಲ್ಲೇಖಿಸಿ ಸನಾತನ ಸಂಪ್ರದಾಯ ಆಚರಣೆಗಳಿಗೆ ಅವಮಾನ ಮಾಡಲಾಗಿದೆ. ಇದೆಲ್ಲವನ್ನೂ ಬ್ರಾಹ್ಮಣರು ಮಾಡುತ್ತಿದ್ದರೆಂದು ತಪ್ಪು ಅಭಿಪ್ರಾಯ ಮೂಡುವಂತೆ ನಮೂದಿಸಿಲಾಗಿದೆ. ಇದು ನಮ್ಮ ಸನಾತನ ಧರ್ಮ ಹಾಗೂ ಸಂಪ್ರದಾಯಕ್ಕೆ ಎಸಗಿದ ಅಪಚಾರ” ಎಂದು ತಮ್ಮ ಮನವಿಯಲ್ಲಿ ಉಲ್ಲೇಖಿಸಿತ್ತು.
“ವೈದಿಕೆ ಆಚರಣೆಗಳು ದುಬಾರಿಯಾಗಿದ್ದು, ಸಂಸ್ಕೃತ ಮಂತ್ರದ ಮೂಲಕ ನಡೆಸುತ್ತಿದ್ದುದರಿಂದ ಜನಸಾಮಾನ್ಯರಿಗೆ ಲಭ್ಯವಾಗುತ್ತಿರಲಿಲ್ಲ ಹಾಗೂ ಅರ್ಥ ಆಗುತ್ತಿರಲಿಲ್ಲ. ವರ್ಣ ವ್ಯವಸ್ಥೆಯಿಂದ ಸಾಮಾಜಿಕ ವಿಘಟನೆಯಾಯಿತು ಎಂಬ ಸತ್ಯಕ್ಕೆ ದೂರವಾದ ಅಂಶಗಳನ್ನು ಪಠ್ಯದಲ್ಲಿ ಉಲ್ಲೇಖಿಸಿರುವುದು ವಿಷಾದನೀಯ. ಇದು ಬ್ರಾಹ್ಮಣ ಸಮುದಾವನ್ನು ಅತ್ಯಂತ ಕೆಟ್ಟ ರೀತಿಯಲ್ಲಿ ಬಿಂಬಿಸುವ ಹೇಯ ಕೆಲಸ. ಹೀಗಾಗಿ, ಈ ಅಂಶಗಳನ್ನು ತೆಗೆದು ಹಾಕಬೇಕು” ಎಂದು ಮಂಡಳಿಯ ನಿಯೋಗ ಮನವಿ ಮಾಡಿತ್ತು.
ಈ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ “ಆರನೇ ಮತ್ತು ಒಂಬತ್ತನೇ ತರಗತಿಯ ಶಾಲಾ ಪಠ್ಯಪುಸ್ತಕದಲ್ಲಿ ಬ್ರಾಹ್ಮಣ ಸಮುದಾಯದ ಕುರಿತು ಅವಹೇಳನಕಾರಿ ಅಂಶಗಳಿದ್ದರೆ ಪರಿಶೀಲಿಸಿ, ತಕ್ಷಣ ಕ್ರಮ ತೆಗೆದುಕೊಳ್ಳಬೇಕು” ಎಂದು ಶಿಕ್ಷಣ ಇಲಾಖೆಗೆ ಸೂಚಿಸಿದ್ದಾರೆ.
ಇದನ್ನೂ ಓದಿ: ಬ್ರಾಹ್ಮಣ್ಯದ ವಿರೋಧ ಮತ್ತು ಜಾತಿ ವಾಸ್ತವದ ಪ್ರಶ್ನೆಗೆ ಒಂದು ಉತ್ತರ


