2022ರ ಬ್ರೆಜಿಲ್‌ನ ಅಧ್ಯಕ್ಷೀಯ ಚುನಾವಣೆಯಲ್ಲಿ ತೀವ್ರವಾದಿ ಬಲಪಂಥೀಯ ಬೊಲ್ಸೊನಾರೊ ಸರಕಾರಕ್ಕೆ ಕುಸಿದ ಆರ್ಥ ವ್ಯವಸ್ಥೆ, ಕೋವಿಡ್ ಕಾಯಿಲೆಯ ಅಸಮರ್ಥ ನಿರ್ವಹಣೆ ಮತ್ತು ಅಮೆಜಾನ್ ಅರಣ್ಯ ನಾಶದಂತಹ ವೈಫಲ್ಯಗಳ ಕಾರಣ ಆಡಳಿತ ವಿರೋಧಿ ಅಲೆ ಇತ್ತು. ಪತ್ರಕರ್ತ ಶ್ರೀನಿವಾಸ್ ರಮಣಿಯವರು ’ಆದರೆ ಎಡಪಂಥೀಯರ ವಿರುದ್ಧದ ದ್ವೇಷ ಮತ್ತು ಮಿಲಿಟರಿ ಸರ್ವಾಧಿಕಾರ ಪರವಾದ ಒಲವು ಕಾರಣಕ್ಕೆ ಅಲ್ಲಿನ ಬಂಡವಾಳಶಾಹಿಗಳು, ಪ್ರಗತಿಪರ ಸಿದ್ಧಾಂತಗಳನ್ನು ವಿರೋಧಿಸಿದ ಕಾರಣಕ್ಕೆ ಕರ್ಮಠ ಕ್ರಿಶ್ಚಿಯನ್ನರು, ಸಮಾಜವಾದಿ ಶ್ರಮಿಕರ ಪಕ್ಷದ ಲಿಬರಲ್ ಪ್ರಣಾಳಿಕೆಯ ವಿರೋಧಿಗಳು ಬೊಲ್ಸೊನಾರೊ ಪರವಾಗಿದ್ದರು’ ಎಂದು ಬರೆಯುತ್ತಾರೆ. ಮೊದಲ ಸುತ್ತಿನ ಮತದಾನದಲ್ಲಿ ಸ್ಪಷ್ಟ ಬಹುಮತ ಬರದ ಕಾರಣಕ್ಕೆ ಅಕ್ಟೋಬರ್ 30, 2022ರಂದು ಎರಡನೇ ಸುತ್ತಿನ ಮತದಾನ ನಡೆಯಿತು. ಈ ಬಿರುಸಿನ ಚುನಾವಣೆಯಲ್ಲಿ ಎಡಪಂಥೀಯ ಶ್ರಮಿಕರ ಪಕ್ಷದ ಅಭ್ಯರ್ಥಿ, ಪ್ರಜಾಪ್ರಭುತ್ವವಾದಿ ಲೂಲಾ ಡಾ ಸಿಲ್ವ ತಮ್ಮ ವಿರೋಧಿ ಅಭ್ಯರ್ಥಿ ತೀವ್ರವಾದಿ ಬಲಪಂಥೀಯ ಬೊಲ್ಸೊನಾರೋ ಅವರ ವಿರುದ್ಧ ಗೆಲುವು ಸಾಧಿಸಿದ್ದಾರೆ. ಲೂಲಾ ಅವರಿಗೆ ಶೇ.50.9 ಮತಗಳು, ಬೊಲ್ಸೊನಾರೋಗೆ ಶೇ.49.1 ಮತಗಳು ದೊರಕಿದೆ. ಅಂದರೆ ಪ್ರಜಾಪ್ರಭುತ್ವ ಮತ್ತು ಸರ್ವಾಧಿಕಾರದ ನಡುವಿನ ವ್ಯತ್ಯಾಸ ಕೇವಲ ಶೇ.1.8ರಷ್ಟು ಮಾತ್ರ ಎಂಬುದು ಸಹ ಆಶಾದಾಯಕ ಬೆಳವಣಿಗೆಯೇನಲ್ಲ. ಎರಡು ಸುತ್ತಿನ ಮತದಾನಗಳಲ್ಲಿ ಬ್ರೆಜಿಲ್‌ನ ಉತ್ತರ, ದಕ್ಷಿಣ, ಪಶ್ಚಿಮ ರಾಜ್ಯಗಳಲ್ಲಿ ಬೊಲ್ಸೊನಾರೊಗೆ ಮತ ಗಳಿಕೆಯ ಪ್ರಮಾಣ ಹೆಚ್ಚಾಗಿದೆ. ಶೋಷಕನನ್ನೇ ಬೆಂಬಲಿಸುವ ಇಂತಹ ಪ್ರವೃತ್ತಿಯು ಆತಂಕ ಹುಟ್ಟಿಸಿದರೂ ಸಹ ಪ್ರಗತಿಪರ ಚಿಂತನೆಗಳು ಗೆಲುವು ಪಡೆದುಕೊಂಡಿರುವುದು ಸಕಾರಾತ್ಮಕ ಬದಲಾವಣೆ ಎನ್ನಬಹುದು ಹಾಗೂ ಬ್ರೆಜಿಲ್‌ನಲ್ಲಿನ ಎಡಪಂಥೀಯರ ಗೆಲುವಿನ ಮೂಲಕ ದಕ್ಷಿಣ ಅಮೆರಿಕದಲ್ಲಿ ’ಗುಲಾಬಿ ಅಲೆ’ ತನ್ನ ವೇಗ ಪಡೆದುಕೊಳ್ಳುತ್ತಿದೆ.
ಈ ಹಿಂದೆ ಜೂನ್ 2022ರಲ್ಲಿ ಕೊಲಂಬಿಯಾ ದೇಶವು ತನ್ನ ಮೊದಲ ಎಡಪಂಥೀಯ ಅಧ್ಯಕ್ಷ ಗುಸ್ತಾವ್ ಪಟ್ರೋ ಅವರನ್ನು, ಮಾರ್ಚ್ 2022ರಲ್ಲಿ ಚಿಲಿ ದೇಶವು ಪ್ರಗತಿಪರ ಚಿಂತನೆಗಳ ಗೇಬ್ರಿಯಲ್ ಬೋರಿಕ್ ಅವರನ್ನು, 2021ರಲ್ಲಿ ಪೆರು ದೇಶವು ಸಮಾಜವಾದಿ ಪೆಡ್ರೋ ಕ್ಯಾಸ್ಟಿಲ್ಲೋ ಅವರನ್ನು, 2020ರಲ್ಲಿ ಬೊಲಿವಿಯಾ ದೇಶವು ಸಮಾಜವಾದಿ ಲೂಯಿಸ್ ಆರ್ಕೆ ಅವರನ್ನು, 2019ರಲ್ಲಿ ಅರ್ಜೆಂಟೀನಾ ದೇಶವು ಮಧ್ಯ-ಎಡಪಂಥೀಯ ಅಲ್ಬರ್ಟೋ ಫರ್ನಾಂಡಿಸ್ ಅವರನ್ನು, 2018ರಲ್ಲಿ ಮೆಕ್ಸಿಕೋ ದೇಶವು ಮಧ್ಯ-ಎಡಪಂಥೀಯ ಲೊಪೆಜ್ ಒಬ್ರೇಟರ್ ಅವರನ್ನು ಆಯ್ಕೆ ಮಾಡಿತ್ತು. ಮೆಕ್ಸಿಕೋ, ಅರ್ಜೆಂಟೀನಾ, ಚಿಲಿ, ಪೆರು, ಕೊಲಂಬಿಯಾ, ಬೊಲಿವಿಯಾ ಮತ್ತು ಈಗ ಬ್ರೆಜಿಲ್ ದೇಶಗಳಲ್ಲಿನ ಈ ’ಗುಲಾಬಿ ಅಲೆ’ಯನ್ನು ಲೆಬಾನೀಸ್ ಕಮ್ಯುನಿಸ್ಟ್ ಪಕ್ಷದ ಘೋಷಣೆಯಾದ ’ದಕ್ಷಿಣ ಹೊಳೆಯುತ್ತಿದೆ’ ಎಂದು ಕರೆಯಬಹುದೇನೋ. ಕತ್ತಲಿನಲ್ಲಿ ಕೋಲ್ಮಿಂಚಿನಂತೆ ಲ್ಯಾಟಿನ್ ಅಮೆರಿಕದ ಈ ವಿಭಿನ್ನ ಸರಕಾರಗಳು ಪ್ರಜಾಪ್ರಭುತ್ವವನ್ನು ಜೀವಂತವಾಗಿಟ್ಟಿವೆ.

ಮೂಲ ಗುಲಾಬಿ ಅಲೆಯ ಪ್ರವರ್ತಕರಾದ ಬೊಲಿವಿಯಾದ ಮಾಜಿ ಅಧ್ಯಕ್ಷ ಎವೋ ಮೊರೇಲ್ಸ್ ಅವರು ಕೊಲಂಬಿಯಾದ ಪೆಟ್ರೋ ಗೆದ್ದಾಗ ’ಲ್ಯಾಟಿನ್ ಅಮೆರಿಕದ ಮೇಲೆ ಎಡಪಂಥೀಯ ಧ್ವಜವನ್ನು ಹಾರಿಸುವ ಈ ಐಕ್ಯತೆ ಮತ್ತು ಸಾಮಾಜಿಕ ಪ್ರಜ್ಞೆಯ ಬೆಳವಣಿಗೆಯು ಆಶಾದಾಯಕವಾಗಿದೆ’ ಎಂದು ಟ್ವೀಟ್ ಮಾಡಿದ್ದರು. ಈಗ ಬ್ರೆಜಿಲ್‌ನ ಲೂಲಾ ಗೆಲುವಿನ ನಂತರ ಎವೋ ಅವರ ಮಾತಿಗೆ ಮತ್ತಷ್ಟು ಪುಷ್ಟಿ ದೊರಕಿದಂತಾಗಿದೆ. ಪತ್ರಕರ್ತರಾದ ಇಸ್ಬೆಲ್ ವುಡ್‌ಫೋರ್ಡ, ಕಾರ್ಲೋಸ್, ಅರೌಜೋ ಅವರು ’ಈಗಿನ ಈ ಗುಲಾಬಿ ಅಲೆಯನ್ನು ಅದರ ಹಿಂದಿನ ಮೂಲ ಅವತಾರಕ್ಕೆ ಹೋಲಿಸಲು ಸಾಧ್ಯವಿಲ್ಲ. ಆಗಿನ ವೆನಿಜುಲಾದ ಚಾವೇಜ್, ಬೊಲಿವಿಯಾದ ಮೊರೆಲ್ಸ್‌ರಂತಹ ಫೈರ್‌ಬ್ರಾಂಡ್ ಎಡಪಂಥೀಯ ನಾಯಕರ ಮಾದರಿಗಳೇ ಭಿನ್ನವಾಗಿದ್ದವು. ಪೆರು ದೇಶದ ಕ್ಯಾಸ್ಟಿಲ್ಲೋ ಅವರು ಅಧಿಕಾರಕ್ಕೆ ಬಂದ ನಂತರ ಮಧ್ಯ ಪಂಥೀಯತೆಗೆ ಹೊರಳಿದರು. ಚಿಲಿ ದೇಶದ ಬೋರಿಕ್ ಎಡಪಂಥೀಯ ಆರ್ಥಿಕ ನೀತಿಗಳನ್ನು ಟೀಕಿಸುತ್ತಿದ್ದಾರೆ. ಇವರ ಜನಪ್ರಿಯತೆ ಕುಸಿಯುತ್ತಿದೆ. ಅರ್ಜೆಂಟೀನಾದ ಅಲ್ಬರ್ಟೋ 2023ರ ಚುನಾವಣೆಯಲ್ಲಿ ಗೆಲ್ಲುವ ಒತ್ತಡದಲ್ಲಿದ್ದಾರೆ’ ಎಂದು ಬರೆಯುತ್ತಾರೆ. ಎಕನಾಮಿಸ್ಟ್ ಇಂಟಲಿಜೆನ್ಸ್‌ನ ನಿಕೋಲಾಸ್ ಸಲ್ಡಿಯಾಸ್ ಅವರು ’ಈಗ ಚುನಾವಣೆಗಳು ನಡೆದರೆ ಈ ಗುಲಾಬಿ ಸರಕಾರಗಳು ಕಣ್ಮರೆಯಾಗುತ್ತವೆ. ಇಲ್ಲಿ ಭದ್ರವಾದ ಬೆಂಬಲವಿಲ್ಲ’ ಎಂದು ಹೇಳುತ್ತಾರೆ.
ಇದನ್ನೂ ಓದಿ: ಬೊಲ್ಸೊನಾರೊ ಪತನ; ಸರ್ವಾಧಿಕಾರಿ ಆಡಳಿತದ ಕೊನೆ ಭಾರತಕ್ಕೂ ಸ್ಫೂರ್ತಿಯಾಗುವುದೇ?
ಅನೇಕ ವರ್ಷಗಳ ಕಾಲ ಬಲಪಂಥೀಯತೆ ಕಡೆ ಒರಗಿದ್ದ ಲ್ಯಾಟಿನ್ ಅಮೆರಿಕ ದೇಶಗಳು ಕಳೆದ ನಾಲ್ಕು ವರ್ಷಗಳಿಂದ 2018ರ ಮೆಕ್ಸಿಕೋ ಚುನಾವಣೆಯ ಮೂಲಕ ಎಡಪಂಥೀಯ ಸರಕಾರವನ್ನು ಆಯ್ಕೆ ಮಾಡುತ್ತಿದೆ. ಈ ಪರಿವರ್ತನೆಗೆ ಬಡತನ ಮತ್ತು ಅಸಮಾನತೆ ಮುಖ್ಯ ಕಾರಣವೆಂದು ಹೇಳಬಹುದು. ಜೊತೆಗೆ ಕೋವಿಡ್ ಕಾಯಿಲೆಯ ಅಸಮರ್ಥ ನಿರ್ವಹಣೆಯೂ ಸಹ ಬಲಪಂಥೀಯ ಸರ್ವಾಧಿಕಾರಕ್ಕೆ ಮುಳುವಾಗಿದೆ. ಪತ್ರಕರ್ತರಾದ ಜೂಲಿ ಟರ್ಕೆವಿಜ್, ಮಿತ್ರಾ ತಾಜ್ ಮತ್ತು ಜಾನ್ ಬಾರ್ಟಲೆಟ್ ಅವರು ’ಈ ಹೊಸ ನಾಯಕರು ತಮ್ಮ ಕಚೆರಿಗಳಲ್ಲಿ ನೆಲೆಗೊಳ್ಳುವಷ್ಟರಲ್ಲಿಯೇ ಜನತೆಯ ನಿರೀಕ್ಷೆಗಳು ಮತ್ತು ವಾಸ್ತವ ಪರಿಸ್ಥಿತಿಯನ್ನು ಸಮತೋಲನಗೊಳಿಸುವಲ್ಲಿ ಹೈರಾಣಾಗಿದ್ದಾರೆ. ಉಕ್ರೇನ್ ಯುದ್ಧದ ಕಾರಣಕ್ಕೆ ಉಂಟಾದ ಹಣದುಬ್ಬರವನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಮೊದಲ ಗುಲಾಬಿ ಅಲೆಯ ಸಂದರ್ಭದಲ್ಲಿ ಆಗಿನ ನಾಯಕರಿಗೆ ಸಾಮಾಜಿಕ ನೆಲೆಯನ್ನು ವಿಸ್ತರಿಸಲು ವಿಪುಲ ಅವಕಾಶಗಳಿದ್ದವು. ಆದರೆ ಈಗಿನ ಸಂದರ್ಭದಲ್ಲಿ ಕೋವಿಡ್ ಕಾಯಿಲೆಯು ಆ ಸಾಧ್ಯತೆಗಳನ್ನೇ ಕಿತ್ತುಕೊಂಡಿದೆ. ಕಳೆದ ವರ್ಷವಷ್ಟೆ ಆಯ್ಕೆಯಾದ ಚಿಲಿಯ ಅಧ್ಯಕ್ಷ ಬೋರಿಕ್ ಅವರು ಬೆಲೆ ಏರಿಕೆಯನ್ನು ನಿಯಂತ್ರಿಸುವ ಒತ್ತಡದಲ್ಲಿದ್ದಾರೆ. ಅವರ ಜನಪ್ರಿಯತೆ ಕುಗ್ಗುತ್ತಿದೆ’ ಎಂದು ಬರೆಯುತ್ತಾರೆ. ಆದರೆ ಹಿಂದಿನ ಎಡಪಂಥೀಯ ನಾಯಕರಿಗೆ ಹೋಲಿಸಿದರೆ ಈಗಿನ ಮಧ್ಯ-ಎಡಪಂಥೀಯ ಮುಖಂಡರು ಹೆಚ್ಚಿನ ಪ್ರಜಾಪ್ರಭುತ್ವವಾದಿಗಳಾಗಿದ್ದಾರೆ. ಸಾಮಾಜಿಕವಾಗಿ ಪ್ರಗತಿಪರ ಚಿಂತನೆಗಳನ್ನು ಹೊಂದಿದ್ದಾರೆ ಮತ್ತು ತೀವ್ರವಾದಿ ಬಲಪಂಥೀಯತೆಯ ನವ ನಾಜೀವಾದವನ್ನು ನಿಗ್ರಹಿಸುವ ಒತ್ತಡದಲ್ಲಿದ್ದಾರೆ ಮತ್ತು ಹಿಂದಿನವರಿಗೆ ಹೋಲಿಸಿದಾಗ ತಮ್ಮ ವೈಫಲ್ಯಗಳ ನಡುವೆಯೂ ಈಗಿನ ಬಲಪಂಥೀಯರು ಜನಪ್ರಿಯರಾಗಿದ್ದಾರೆ. ಇದು ವೈರುಧ್ಯಗಳ ಕಾಲ.

ಬ್ರೆಜಿಲ್‌ನ ಪರಿಸ್ಥಿತಿಯು ಇದಕ್ಕಿಂತ ಭಿನ್ನವಾಗಿಲ್ಲ. ಹಿಂದೆ 2003 ಮತ್ತು 2010ರಲ್ಲಿ ಎರಡು ಬಾರಿ ಅಧ್ಯಕ್ಷರಾಗಿದ್ದ ಶ್ರಮಿಕರ ಪಕ್ಷದ ಲೂಲಾ ಮುಂದೆ ಅನೇಕ ಸವಾಲುಗಳಿವೆ. ನಾಲ್ಕು ವರ್ಷಗಳ ಹಿಂದೆ ಬ್ರೆಜಿಲ್ ಜನತೆ ತೀವ್ರವಾದಿ ಬಲಪಂಥೀಯ ಬೋಲ್ಸೊನಾರೊರನ್ನು ಆಯ್ಕೆ ಮಾಡಿದಾಗ ಅವರಿಗೆ ತಾವು ಎಂತಹ ಅಪಾಯಕಾರಿ ನಿರ್ಧಾರ ತೆಗೆದುಕೊಂಡಿದ್ದೇವೆ ಎನ್ನುವುದರ ಅರಿವಿರಲಿಲ್ಲ. ಅಥವಾ ಗ್ರಹಿಸಿರಲಿಲ್ಲ. ಸೇನೆಯ ಮಾಜಿ ಕ್ಯಾಪ್ಟನ್ ಆಗಿದ್ದ ಬೊಲ್ಸೊನಾರೊ ವೈಜ್ಞಾನಿಕತೆಯ ವಿರೋಧಿಯಾಗಿದ್ದರು, ಮೂಲ ನಿವಾಸಿಗಳ ಹಕ್ಕುಗಳನ್ನು ದಮನ ಮಾಡುವ ಪ್ರವೃತ್ತಿ ಹೊಂದಿದ್ದರು ಮತ್ತು ಪ್ರತಿಯೊಂದು ಬಿಕ್ಕಟ್ಟಿಗೆ ಬಂದೂಕು ಮಾತ್ರ ಪರಿಹಾರ ಎಂದು ಸರ್ವಾಧಿಕಾರಿ ಮನೋಧರ್ಮ ಪ್ರದರ್ಶಿಸಿದ್ದರು. ಆವರ ನಾಲ್ಕು ವರ್ಷಗಳ ಆಡಳಿತವು ಬ್ರೆಜಿಲ್‌ನ ಪಾಲಿಗೆ ದುಸ್ವಪ್ನದಂತಿತ್ತು. ಕೋವಿಡ್ ಕಾಯಿಲೆ ಸಂದರ್ಭದಲ್ಲಿ ಬೋಲ್ಸನಾರೋ ಅವರ ನಿರ್ವಹಣೆ ತುಂಬಾ ಕಳಪೆಯಾಗಿತ್ತು. ಅವೈಜ್ಞಾನಿಕವಾಗಿತ್ತು. ವೈದ್ಯರ, ತಜ್ಞರ ಸಲಹೆಗಳನ್ನು ಉಲ್ಲಂಘಿಸಿದರು ಎನ್ನುವ ಆರೋಪವೂ ಇದೆ. ಆಗ 6.85 ಲಕ್ಷ ಜನ ಸಾವನ್ನಪ್ಪಿದರು. ವಿಶ್ವದ ಬಹು ದೊಡ್ಡ ಮಳೆಕಾಡನ್ನು ಹೊಂದಿರುವ ಅಮೇಜಾನ್‌ನ ಬಹು ಭಾಗ ಬ್ರೆಜಿಲ್‌ನಲ್ಲಿದೆ. ಬೊಲ್ಸೊನಾರೊ ಅಧಿಕಾರ ವಹಿಸಿಕೊಂಡ ನಂತರ 2018ರಿಂದ ಅರಣ್ಯ ನಾಶವು ಹೆಚ್ಚಾಗಿದೆ. ಮಾನವ ಹಕ್ಕುಗಳ ಕಣ್ಗಾವಲು ಸಂಸ್ಥೆಯು ’ಬೊಲ್ಸೊನಾರೋ ನ್ಯಾಯಾಂಗದ ವಿರುದ್ಧ ವೃಥಾರೋಪ ಮಾಡುವುದರ ಮೂಲಕ ಬ್ರೆಜಿಲ್‌ನ ಪ್ರಜಾಪ್ರಭುತ್ವದ ಅಡಿಪಾಯವನ್ನೇ ಶಿಥಿಲಗೊಳಿಸುತ್ತಿದ್ದಾರೆ’ ಎಂದು ಆತಂಕ ವ್ಯಕ್ತಪಡಿಸಿದೆ. ಇಂತಹ ಗಂಭೀರ ಆರೋಪಗಳು, ಇಷ್ಟೆಲ್ಲಾ ಸೋಲುಗಳಿದ್ದರೂ ಸಹ ಬೊಲ್ಸನೋರೊ ಜನಪ್ರಿಯತೆ ಕುಗ್ಗಲಿಲ್ಲ. ಆವರ ಚುನಾವಣಾ ಸಮಾವೇಶಗಳಲ್ಲಿ ಲಕ್ಷಾಂತರ ಜನ ಸೇರುತ್ತಿದ್ದರು. ಇದು ಎಂತಹ ವೈರುಧ್ಯಗಳ ಕಾಲದಲ್ಲಿದ್ದೇವೆ ಎಂಬುದನ್ನು ಸಾಬೀತುಪಡಿಸುತ್ತದೆ.
ಎರಡು ದಶಕಗಳ ಹಿಂದೆ ಎಡಪಂಥೀಯ ಶ್ರಮಿಕರ ಪಕ್ಷ ಅಧಿಕಾರದಲ್ಲಿದ್ದಾಗ ಪರಿಸ್ಥಿತಿ ಭಿನ್ನವಾಗಿತ್ತು. ಆಗ ಲೂಲಾ ನೇತೃತ್ವದ ಸರಕಾರವು ವಿಜ್ಞಾನ, ಸಂಶೋದನೆಯಲ್ಲಿ ದೊಡ್ಡ ಮೊತ್ತದ ಬಂಡವಾಳ ಹೂಡಿಕೆ ಮಾಡಿತ್ತು. ಪರಿಸರ ರಕ್ಷಣೆಗೆ ಕಟಿಬದ್ಧರಾಗಿದ್ದರು. ’ದ ನೇಚರ್.ಕಾಂ.’ನ ಸಂಪಾದಕೀಯದಲ್ಲಿ ’ಲೂಲಾ ಕಾಲದಲ್ಲಿ ಬಡ ಕುಟುಂಬಗಳಿಗೆ ’ಬೋಲ್ಸಾ ಫೆಮಿಲಿಯಾ’ ಎನ್ನುವ ಹಣ ವರ್ಗಾವಣೆಯ ಯೋಜನೆಯು ಜನಪ್ರಿಯವಾಗಿತ್ತು. ಈ ಯೋಜನೆಯಿಂದ ಕಡಿಮೆ ಆದಾಯವಿರುವ ಕುಟುಂಬಗಳ ಪರಿಸ್ಥಿತಿ ಸುಧಾರಿಸಿತ್ತು. 2004-2012ರ ಅವಧಿಯಲ್ಲಿ ಅಮೆಜಾನ್ ಅರಣ್ಯ ನಾಶದಲ್ಲಿ ಶೇ.80ರಷ್ಟು ಕಡಿತ ಉಂಟಾಗಿತ್ತು. ಬ್ರೆಜಿಲ್ ಪರಿಸರ ಆದ್ಯತೆಯ ದೇಶ ಎಂದು ಖ್ಯಾತಿಯಾಗಿತ್ತು. ಬೀಫ್ ಮತ್ತು ಸೋಯಾ ಬೀನ್‌ನ ಉತ್ಪಾದನೆಗೂ ಮತ್ತು ಅರಣ್ಯ ನಾಶಕ್ಕೂ ಇರುವ ಕೊಂಡಿಯನ್ನು ತುಂಡರಿಸಲಾಯಿತು. ಲೂಲಾ ವಿಜ್ಞಾನಿಗಳಿಗೆ ಸಂಪೂರ್ಣ ಬೆಂಬಲ ನೀಡಿದರು. ಸುಸ್ಥಿರ ಅಭಿವೃದ್ಧಿಯು ಲೂಲಾ ಸರಕಾರದ ಧ್ಯೇಯವಾಗಿತ್ತು’ ಎಂದು ಬರೆಯುತ್ತಾರೆ. ಬೊಲ್ಸೊನಾರೊ ಬಂದ ನಂತರ ಈ ಎಲ್ಲಾ ಬೆಳವಣಿಗೆಗಳಿಗೆ ಹಿನ್ನಡೆಯಾಯಿತು. ಆದರೂ ಸಹ ಶೇ.48ರಷ್ಟು ಜನಸಂಖ್ಯೆ ಈ ಸರ್ವಾಧಿಕಾರಿಯನ್ನು ಬೆಂಬಲಿಸುತ್ತಾರೆ ಎಂಬುದೇ ಇಂದಿಗೂ ಸೋಜಿಗ. ಇವರಲ್ಲಿ ಮತ್ತೆ ಮಿಲಿಟರಿ ಆಡಳಿತ ಬರಬೇಕು ಎಂದು ಬಯಸಿದ್ದಾರೆ. ಹೀಗಾಗಿ ಬ್ರೆಜಿಲ್ ತಾತ್ಕಾಲಿಕವಾಗಿ ಬೆಂಕಿಯಿಂದ ಹೊರಬಂದಿರುವುದು ನಿಜವಾದರೂ ಸ್ವಲ್ಪ ಆಯ ತಪ್ಪಿದರೂ ಬಾಣಲೆಗೆ ಬೀಳುವ ಅಪಾಯವೂ ಇದೆ. ಲೂಲಾ ಅವರಿಗೆ ಇದರ ಗ್ರಹಿಕೆ ಇದೆ. ಅವರ ಬೆಂಬಲಿಗರು ಹೇಳುವಂತೆ ಲೂಲಾ ಸದಾಕಾಲ ಸಂಭಾಷಣೆ ಮತ್ತು ಸಂಧಾನದಲ್ಲಿ ನಂಬಿಕೆ ಇಟ್ಟಿದ್ದಾರೆ. ತಮ್ಮ ವಿರೋಧಿಗಳೊಂದಿಗೂ ಸಂವಾದ ನಡೆಸುತ್ತಾರೆ. ಬೊಲ್ಸೊನಾರೊ ಪ್ರತಿಪಾದಿಸಿದ ಸೈದ್ಧಾಂತಿಕ ಧ್ರುವೀಕರಣವನ್ನು ತಿರಸ್ಕರಿಸುತ್ತಾರೆ. ಲೂಲಾ ಅವರ ನಿಭಾಯಿಸುವ ಸಾಮರ್ಥ್ಯವನ್ನು ಅನುಮಾನಿಸುವಂತಿಲ್ಲವಾದರು ಸಹ ಎಲ್ಲವೂ ಸರಳವಾಗಿಲ್ಲ. ಸುಗುಮವಾಗಿಲ್ಲ.
ಇದನ್ನೂ ಓದಿ: ಇಂಟರ್‌ನ್ಯಾಷನಲ್ ಫೋಕಸ್; ಇದು ಬ್ರೆಜಿಲ್‌ನ ಕೊನೆಯ ಚುನಾವಣೆಯಾಗಲಿದೆಯೇ?
ಈ ಹಿಂದೆ ಲೂಲಾ ಸಹ ಆರೋಪಕ್ಕೆ ಒಳಗಾಗಿದ್ದರು. ಅವರು ಕಾರ್ ವಾಶ್ ಭ್ರಷ್ಟಾಚಾರದ ಹಗರಣದಲ್ಲಿ ಅಪಾದಿತರಾಗಿ 19 ತಿಂಗಳುಗಳ ಕಾಲ ಜೈಲಿನಲ್ಲಿದ್ದರು. ಇದು ಇಂದಿಗೂ ಲೂಲಾ ಮೇಲಿನ ಕಪ್ಪು ಚುಕ್ಕೆಯಾಗಿದೆ. ಬೊಲ್ಸೊನಾರೊ ಬೆಂಬಲಿಗರು ಲೂಲಾ ಅವರನ್ನು “ಭ್ರಷ್ಟ” ಎನ್ನುವ ಕಾರಣಕ್ಕೆ ವಿರೋಧಿಸುತ್ತಾರೆ. ಆದರೆ ಬ್ರೆಜಿಲ್‌ನ ಸುಪ್ರೀಂಕೋರ್ಟ ಲೂಲಾ ಮತ್ತು ಅವರ ಶ್ರಮಿಕರ ಪಕ್ಷದ ಮುಖಂಡರ ಮೇಲೆ ಸುಳ್ಳು ಆರೋಪ ಹೊರಿಸಲಾಗಿದೆ ಎಂದು ಅವರನ್ನು ಖುಲಾಸೆಗೊಳಿಸಿದೆ. ದಶಕಗಳ ಕಾಲ ದುಡಿಯುವ ವರ್ಗಗಳ ಮುಖಂಡರಾಗಿ ಸಂಘಟನೆಯ ಅನುಭವ ಮತ್ತು ಬಡವರ ಪರವಾದ ನಿಷ್ಠೆ ಕಾರಣಕ್ಕೆ ಪ್ರಗತಿಪರರು, ಕೆಳ ಮಧ್ಯಮವರ್ಗಗಳು, ಬಡ ಕುಟುಂಬಗಳು ಲೂಲಾ ಅವರನ್ನು ಬೆಂಬಲಿಸಿದ್ದಾರೆ. ಅಧ್ಯಕ್ಷರಾಗಿ ಆಯ್ಕೆಯಾಗಿರುವ ಲೂಲಾ ಅವರಿಗೆ ಇದು ರಕ್ಷಣೆಯಾಗಿ ಒದಗಿಬಂದರೂ ಸಹ ಅವರ ಮುಂದಿರುವ ಸವಾಲುಗಳನ್ನು ಹೇಗೆ ನಿಭಾಯಿಸುತ್ತಾರೆ ಎನ್ನುವ ಪ್ರಶ್ನೆಯಿದೆ. ಚುನಾವಣಾ ಫಲಿತಾಂಶದ ನಂತರ ಮಾತನಾಡುತ್ತಾ ಲೂಲಾ ’ನನಗೆ ಮತ ಹಾಕಿದವರ ಪರ ಮಾತ್ರವಲ್ಲ, ಎಲ್ಲಾ ಬ್ರೆಜಿಲ್ ಪ್ರಜೆಗಳ ಪರವಾಗಿ ಕೆಲಸ ಮಾಡುತ್ತೇನೆ. ಶಾಂತಿ ಮತ್ತು ಐಕ್ಯತೆಗೆ ಜನ ಮತ ನೀಡಿದ್ದಾರೆ. ನಮ್ಮ ಮುಂದೆ ಅಮೆಜಾನ್‌ನ್ನು ಉಳಿಸುವ ಅಗತ್ಯವಿದೆ, ಎಲ್ಲಾ ಜೀವವೈವಿಧ್ಯವನ್ನು ರಕ್ಷಿಸುತ್ತೇವೆ. ಲಿಂಗ ಸಮಾನತೆ, ಹಸಿವಿನ ಬಿಕ್ಕಟ್ಟನ್ನು ನಿರ್ಮೂಲನೆ ಮಾಡುವುದು ನಮ್ಮ ಆದ್ಯತೆ. ನಿರುದ್ಯೋಗ ಸಮಸ್ಯೆಯನ್ನು ಬಗೆಹರಿಸುತ್ತೇವೆ. ಬ್ರೆಜಿಲ್ ಮರಳಿ ಬಂದಿದೆ ಎಂದು ಜಗತ್ತಿಗೆ ತೋರಿಸುತ್ತೇವೆ’ ಎಂದು ಹೇಳಿದ್ದಾರೆ. ಬಡವರ ನಡುವೆ ಜನಪ್ರಿಯ ನಾಯಕರಾಗಿದ್ದ 76 ವರ್ಷದ ಲೂಲಾ ರೈತರ ಮಗನಾಗಿದ್ದರು. 2003ರಲ್ಲಿ ಮೊದಲ ದುಡಿಯುವ ವರ್ಗದ ಅಧ್ಯಕ್ಷರಾಗಿದ್ದರು. ಹಿಂದೊಮ್ಮೆ ಬರಾಕ್ ಒಬಾಮ ಅವರು ಲೂಲಾ ಅವರನ್ನು ಜಿ-20 ಸಮಾವೇಶದಲ್ಲಿ ’ದ ಮ್ಯಾನ್’ ಎಂದು ಬಣ್ಣಿಸಿದ್ದರು. ಈ ಬಾರಿ ಅಧ್ಯಕ್ಷರಾಗಿ ಆಯ್ಕೆಯಾದ ಲೂಲಾ ’ಸಾರ್ವಜನಿಕ ಕಂಪನಿಗಳನ್ನು ನಿಯಂತ್ರಿಸುತ್ತೇವೆ ಮತ್ತು ಬಲಪಡಿಸುತ್ತೇವೆ. ಶ್ರಮಿಕರ ಕನಿಷ್ಠ ವೇತನವನ್ನು ಹೆಚ್ಚಿಸುತ್ತೇವೆ ಮತ್ತು ಶ್ರೀಮಂತರ ಮೇಲಿನ ತೆರಿಗೆಯನ್ನು ಸಹ ಹೆಚ್ಚಿಸುತ್ತೇವೆ’ ಎಂದು ಆಶ್ವಾಸನೆ ನೀಡಿದ್ದಾರೆ.
ಆದರೆ 2016ರ ಆರ್ಥಿಕ ಹಿಂಜರಿತದಿಂದ ಬ್ರೆಜಿಲ್ ಇನ್ನೂ ಚೇತರಿಸಿಕೊಂಡಿಲ್ಲ. ಸಾಲದ ಪ್ರಮಾಣ ಜಿಡಿಪಿಯ ಶೇ.90ರಷ್ಟಿದೆ. ಜೂನ್ 2022ರ ವೇಳೆಗೆ ನಿರುದ್ಯೋಗದ ಪ್ರಮಾಣ ಶೇ.15ರಷ್ಟಿತ್ತು ಮತ್ತು ಹಣದುಬ್ಬರವು ಎರಡಂಕಿಗೆ ಜಿಗಿತ ಕಂಡಿತ್ತು. ಬ್ರೆಜಿಲ್‌ನ ಸಂಶೋಧನಾ ಸಂಸ್ಥೆ ಪೆನ್ಸಾನ್‌ನ ಪ್ರಕಾರ 2020ರಲ್ಲಿ 1.9 ಕೋಟಿ ಜನಸಂಖ್ಯೆ ಬಡತನದಲ್ಲಿದ್ದರೆ 2022ರ ವೇಳೆಗೆ 3.3 ಕೋಟಿ ಜನಸಂಖ್ಯೆ ಹಸಿವಿನಿಂದ ನರಳುತ್ತಿದ್ದಾರೆ. ದ ವಾಲ್ ಸ್ಟ್ರೀಟ್ ಜರ್ನಲ್‌ನಲ್ಲಿ ’ಬ್ರೆಜಿಲ್‌ನಲ್ಲಿ ಮಾಂಸಾಹಾರವು ಶ್ರೀಮಂತರಿಗೆ ಮಾತ್ರ ಕೈಗೆಟುಕುತ್ತದೆ. ಬಡವರಿಗೆ ಅದರ ಸೌಲಭ್ಯವಿಲ್ಲ. ವಿಶ್ವಸಂಸ್ಥೆಯು ಕಳೆದ ಎರಡು ವರ್ಷಗಳಿಂದ ಬ್ರೆಜಿಲ್ ದೇಶವು ಮಾನವ ಹಕ್ಕುಗಳ ಕುರಿತಾಗಿ ಸಮಸ್ಯೆಗಳಿರುವ 40 ದೇಶಗಳಲ್ಲಿ ಒಂದಾಗಿದೆ’ ಎಂದು ವರದಿಯಾಗಿದೆ. ಬ್ರೆಜಿಲ್‌ನ ಅತಿ ದೊಡ್ಡ ಸ್ಲಂ ನಿವಾಸಿಗಳಾಗಿರುವ ಫವೇಲಾ ಸಮುದಾಯವು ’ನಮಗೆ ಭ್ರಷ್ಟಾಚಾರದ ವಿರುದ್ಧ ಹೊರಾಡುವುದು ಆರನೆಯ ಆದ್ಯತೆಯಾಗಿದೆ. ಮೊದಲಿಗೆ ಉದ್ಯೋಗ, ಎರಡನೆಯದು ಆರೋಗ್ಯ ಸೌಲಭ್ಯ, ಹಣದುಬ್ಬರ ಕಡಿತ, ಹಸಿವಿನ ನಿಯಂತ್ರಣ ಮತ್ತು ಶಿಕ್ಷಣ ಆರಂಭದ ಐದು ಆದ್ಯತೆಗಳಾಗಿದೆ’ ಎಂದು ಹೇಳುತ್ತಾರೆ. ಬಡವರ ಪಕ್ಷದ ಲೂಲಾಗೂ ಸಹ ಇದರ ಗ್ರಹಿಕೆಯಿದೆ. ಅವರ ಅಭಿಮಾನಿಗಳು
’ಇದು ಲೂಲಾ ಅವರಿಗೆ ಅತ್ಯಂತ ಕಠಿಣವಾದ ಸವಾಲಾಗಿದೆ. ಇದನ್ನು ನಿಭಾಯಿಸುವುದು ಕಷ್ಟದ ಬಾಬತ್ತು. ಆದರೂ ನಿಭಾಯಿಸುತ್ತಾರೆ ಎನ್ನುವ ಭರವಸೆಯಿದೆ. ಏಕೆಂದರೆ ನಮ್ಮ ಜೀವಮಾನದಲ್ಲಿ ಅತಿ ಹೆಚ್ಚು ಪ್ರಮಾಣದ ಜನಸಂಖ್ಯೆ ಬೀದಿಬದಿಯಲ್ಲಿ ಮಲಗಿರುವುದನ್ನು ಕಾಣುತ್ತಿದ್ದೇವೆ. ಹಸಿವಿನ ವಿರುದ್ಧ ಲೂಲಾ ಒಂದು ಆಶಾಕಿರಣ’ ಎಂದು ಹೇಳುತ್ತಾರೆ. ’ರೊಟ್ಟಿ, ಬಟ್ಟೆ, ಮನೆ’ ಜೊತೆಗೆ ’ಆರೋಗ್ಯ, ಉದ್ಯೋಗ ಹಾಗೂ ಶಿಕ್ಷಣ’ ಲೂಲಾ ಸರಕಾರದ ಮುಂದಿರುವ ಜವಾಬ್ದಾರಿಗಳು. ಜೊತೆಗೆ ಬೊಲ್ಸೊನಾರೊ ಆಡಳಿತದಲ್ಲಿ ಮಾನವ ಹಕ್ಕುಗಳ ಹೋರಾಟಗಾರರು, ಪ್ರಾಧ್ಯಾಪಕರ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಹಲ್ಲೆಯಾಗುತ್ತಿತ್ತು. ಈಗ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಮರಳಿ ಸ್ಥಾಪಿಸಬೇಕಾದ ಗುರುತರವಾದ ಹೊಣೆಗಾರಿಕೆ ಲೂಲಾ ಸರ್ಕಾರದ ಮೇಲಿದೆ. ಎರಡನೇ ’ಗುಲಾಬಿ ಅಲೆ’ಯಲ್ಲಿ ತೇಲಿಬಂದಿರುವ ಲೂಲಾ ಮತ್ತು ಅವರ ಸಮಾಜವಾದಿ ಶ್ರಮಿಕರ ಪಕ್ಷದ ಮುಂದಿನ ಐದು ವರ್ಷಗಳ ಆಡಳಿತದಲ್ಲಿ ಸ್ವಲ್ಪ ಆಯ ತಪ್ಪಿದರೂ ಕೆಳಗೆ ಬೀಳುವುದು ಮಾತ್ರವಲ್ಲ, ನೇಪಥ್ಯದಲ್ಲಿ ತೋಳದಂತೆ ಕಾಯುತ್ತಿರುವ ಬೊಲ್ಸೊನಾರೊ ಮತ್ತೊಮ್ಮೆ ಆಕ್ರಮಿಸಿಕೊಳ್ಳುತ್ತಾರೆ. ಇದು ಕತ್ತಿಯಂಚಿನ ನಡಿಗೆಯಾಗಿದೆ.
ಉಪಸಂಹಾರ
ಮೇಲಿನ ವಿವರಣೆಗಳನ್ನು ಓದಿದಾಗ ಸಮಕಾಲೀನ ಸಂದರ್ಭದ ಸಾಮಾಜಿಕ-ರಾಜಕೀಯ-ಆರ್ಥಿಕತೆಯಲ್ಲಿ ನಮ್ಮ ದೇಶಕ್ಕೂ ಮತ್ತು ಬ್ರೆಜಿಲ್ ನಡುವೆ ಅಂತಹ ವ್ಯತ್ಯಾಸಗಳಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಬೊಲ್ಸೊನಾರೊ ಅವರ ತೀವ್ರ ಬಲಪಂಥೀಯತೆಗೂ ಇಲ್ಲಿ ಮೋದಿ-ಆರ್‌ಎಸ್‌ಎಸ್-ಬಿಜೆಪಿ ಜಾರಿಗೊಳಿಸುತ್ತಿರುವ ಸಿದ್ಧಾಂತಗಳಿಗೂ ಅಂತಹ ವ್ಯತ್ಯಾಸಗಳಿಲ್ಲ. ಬ್ರೆಜಿಲ್‌ನಂತೆ ಇಲ್ಲಿಯೂ ಬಿಜೆಪಿ ಪಕ್ಷವು ಆಡಳಿತಾತ್ಮಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ ಸೋತಿದ್ದರೂ ಸಹ ಸಂಘ ಪರಿವಾರಕ್ಕೆ ಇಲ್ಲಿನ ಮಧ್ಯಮ, ಮೇಲ್ವರ್ಗ ಮತ್ತು ಬಂಡವಾಳಶಾಹಿಗಳ ಬೆಂಬಲವಿದೆ. ಅಲ್ಲಿನಂತೆ ಇಲ್ಲಿಯೂ ತೀವ್ರ ಬಲಪಂಥೀಯ ಟ್ರಾಡ್ಸ್ (ನವ ನಾಜೀವಾದ) ಮತ್ತು ಬಲಪಂಥೀಯ ರಾಯತಾಸ್ (ಆರ್‌ಎಸ್‌ಎಸ್‌ವಾದ) ಸಕ್ರಿಯವಾಗಿದ್ದಾರೆ. ಮೇಲ್ನೋಟಕ್ಕೆ ಇವರ ಸಿದ್ಧಾಂತಗಳ ಅನುಷ್ಠಾನದಲ್ಲಿ ಭಿನ್ನಾಭಿಪ್ರಾಯಗಳಿದ್ದರೂ ಸಹ ಎರಡೂ ಪಂಥೀಯರು ಈ ದೇಶದ ಸಾಮರಸ್ಯ, ಸೌಹಾರ್ದತೆ, ಬಹುತ್ವವನ್ನು ನಾಶಮಾಡುವ ಗುರಿಯನ್ನೇ ಹೊಂದಿದ್ದಾರೆ. ಆದರೆ ದಕ್ಷಿಣ ಅಮೆರಿಕದಂತೆ ನಮ್ಮ ದಕ್ಷಿಣ ಏಶ್ಯಾದಲ್ಲಿ ಅದರಲ್ಲಿಯೂ ಭಾರತದಲ್ಲಿ ’ಗುಲಾಬಿ ಅಲೆ’ ಅಪ್ಪಳಿಸಲಿಲ್ಲ. ಅದು ಹುಟ್ಟಲೇ ಇಲ್ಲ. ಹೀಗಾಗಿ ಅಲ್ಲಿಗಿಂತಲೂ ನಮ್ಮಲ್ಲಿ ಪರಿವರ್ತನೆಯ ಹಾದಿ ಮತ್ತಷ್ಟು ಕಠಿಣವಿದೆ. ದುರ್ಗಮವಾಗಿದೆ.
ನಮಗೆ ಈ ಗಂಟೆಯ ಸದ್ದು ಕೇಳಿಸುತ್ತಿದೆಯೇ?

ಬಿ. ಶ್ರೀಪಾದ ಭಟ್
ವೃತ್ತಿಯಲ್ಲಿ ಇಂಜಿನಿಯರ್ ಆದ ಬಿ.ಶ್ರೀಪಾದ್ ಭಟ್ ಹಿರಿಯ ಚಿಂತಕ, ಬರಹಗಾರ. ಹಲವು ಸಾಮಾಜಿಕ ಚಳವಳಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಸಮಾಜದ ಆಗುಹೋಗುಗಳಿಗೆ ನಿರಂತರ ಸ್ಪಂದಿಸುವ ಇವರು ಸಮಾನ ಶಿಕ್ಷಣಕ್ಕಾಗಿ ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ.


