ನಕ್ಸಲರನ್ನು ಮುಖ್ಯವಾಹಿನಿಗೆ ಬರಮಾಡಿಕೊಂಡರೆ ಸಾಲದು, ನಕ್ಸಲಿಸಂಗೆ ಕಾರಣವಾದ ಸಾಮಾಜಿಕ, ಆರ್ಥಿಕ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸರ್ಕಾರ ಇಚ್ಛಾಶಕ್ತಿ ತೋರಬೇಕು ಎಂದು ಆರು ನಕ್ಸಲರನ್ನು ಮುಖ್ಯವಾಹಿನಿಗೆ ಕರೆತರುವಲ್ಲಿ ಪ್ರಮುಖ ಪಾತ್ರವಹಿಸಿದ ‘ಶಾಂತಿಗಾಗಿ ನಾಗರಿಕ ವೇದಿಕೆ’ ಆಗ್ರಹಿಸಿತು.
ಬೆಂಗಳೂರು ಶಾಸಕರ ಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಪ್ರಮುಖರಾದ ಬಿ.ಟಿ ಲಲಿತಾ ನಾಯಕ್ “ನಕ್ಸಲ್ ಸಮಸ್ಯೆ ಮುಕ್ತಾಯ, ಮುಕ್ತಾಯ ಎಂಬ ಮಾತುಗಳು ಬಹಳ ಕೇಳುತ್ತಿವೆ. ಈ ವಿದ್ಯಮಾನದಿಂದಾಗಿ ನಕ್ಸಲಿಯ ಮಾದರಿಯ ಹೋರಾಟ ಕರ್ನಾಟಕ, ಕೇರಳ ಮತ್ತು ತಮಿಳುನಾಡಿನಲ್ಲಿ ಒಂದು ರೀತಿಯಲ್ಲಿ ಸಮಾರೋಪಗೊಂಡಿರುವುದು ವಾಸ್ತವ. ಆದರೆ, ನಕ್ಸಲಿಯರ ಸಮಸ್ಯೆಗಳು ಮುಕ್ತಾಯಗೊಂಡಿಲ್ಲ. ನಕ್ಸಲರು ಎತ್ತಿರುವ ಮಲೆನಾಡಿನ ಜನರ ಬದುಕಿನ ಸಮಸ್ಯೆಗಳಾವುವೂ ಪರಿಹಾರ ದಿಕ್ಕಿನತ್ತ ಮುಖಮಾಡಿಲ್ಲ ಎಂದು ಹೇಳಿದರು.

ನಕ್ಸಲಿಯರನ್ನು ಮುಖ್ಯವಾಹಿನಿಗೆ ಬರಮಾಡಿಕೊಳ್ಳುವುದರಲ್ಲಿನ ಮೊದಲ ಘಟ್ಟ ಮಾತ್ರ ಪೂರ್ಣಗೊಂಡಿದೆ. ಅವರನ್ನು ಕಾಡಿನಿಂದ ಹೊರತರಲಾಗಿದೆ. ಆದರೆ, ಅವರಿನ್ನು ನಾಡಿಗೆ ತಲುಪಿಲ್ಲ, ಜೈಲಿಗೆ ಹೋಗಿದ್ದಾರೆ. ಅನೇಕ ಗಂಭೀರ ಆರೋಪಗಳಡಿ ಕೇಸುಗಳನ್ನು ಎದುರಿಸಬೇಕಿದೆ. ಮುಂಡಗಾರು ಲತಾ ಒಬ್ಬರ ಮೇಲೆಯೇ 84 ಪ್ರಕರಣಗಳಿವೆ. ಕರ್ನಾಟಕ ಮಾತ್ರವಲ್ಲದೆ ಕೇರಳದಲ್ಲೂ ದೊಡ್ಡ ಪ್ರಮಾಣದಲ್ಲಿ ಕೇಸುಗಳಿವೆ. ಮೊದಲು ಅವರಿಗೆ ಈ ಎಲ್ಲಾ ಕೇಸುಗಳಲ್ಲಿ ಜಾಮೀನು ಸಿಗಬೇಕು. ಆಮೇಲೆ ಇವೆಲ್ಲವುಗಳ ಕುರಿತು ಕುರಿತು ವಿಚಾರಣೆ ನಡೆದು ಇತ್ಯರ್ಥಗೊಳ್ಳಬೇಕು ಎಂದು ತಿಳಿಸಿದರು.
ನಕ್ಸಲರನ್ನು ಕಾಡಿನಿಂದ ಹೊರತಂದಿದ್ದಕ್ಕಿಂತಲೂ ಹೆಚ್ಚಿನ ಕಷ್ಟ ಅವರನ್ನು ಜೈಲಿನಿಂದ ಹೊರ ತರುವ ಕೆಲಸದಲ್ಲಿ ಅಡಗಿದೆ. ಕಾಡಿನಿಂದ ಹೊರ ಕರೆತುವಲ್ಲಿ ನಾಗರಿಕ ವೇದಿಕೆ ಪ್ರಧಾನ ಪಾತ್ರವಹಿಸಿತ್ತು. ಆದರೆ, ಅವರನ್ನು ಜೈಲಿನಿಂದ ಹೊರತರುವ ಜವಾಬ್ದಾರಿಯನ್ನು ಸರ್ಕಾರ ನಿರ್ವಹಿಸಬೇಕಿದೆ. ಸರ್ಕಾರ ಕೊಟ್ಟ ಮಾತಿನಂತೆ ಅವರಿಗೆ ಕನಿಷ್ಠ ಜಾಮೀನು ಸಿಗುವಂತೆ ಮಾಡುವುದೇ ಎಂಬ ಪ್ರಶ್ನೆ ಇದೆ. ಅದನ್ನು ಮಾಡಿದಾಗ ಮಾತ್ರವೇ ಈ ಸಮಸ್ಯೆ ಮುಕ್ತಾಯದ ಬೆಳಕು ಮೂಡಿದಂತಾಗುತ್ತದೆ ಎಂದು ಹೇಳಿದರು.

ವೇದಿಕೆಯು ಸರ್ಕಾರದ ಮುಂದೆ ಈ ಕೆಳಗಿನ ಬೇಡಿಕೆಗಳನ್ನು ಇಟ್ಟಿದೆ. ಕೊಟ್ಟ ಮಾತಿನಂತೆ ಇವುಗಳನ್ನು ಈಡೇರಿಸಲು ಆಗ್ರಹಿಸಿದೆ.
- ಈಗ ಪ್ರಜಾತಾಂತ್ರಿಕ ಮುಖ್ಯವಾಹಿನಿಗೆ ಬಂದಿರುವ 6 ಜನ ನಕ್ಸಲಿಯರಿಗೆ ಜಾಮೀನಿನ ಮೇಲೆ ಬಿಡುಗಡೆಯಾಗಲು ಮತ್ತು ವಿಚಾರಣೆಯನ್ನು ಸಮರ್ಥವಾಗಿ ಪೂರೈಸಿಕೊಳ್ಳಲು ಸೂಕ್ತ ಕಾನೂನು ನೆರವಿನ ವ್ಯವಸ್ಥೆ ಆಗಬೇಕು.
- 7-8ವರ್ಷಗಳಿಂದ ಜೈಲಿನಲ್ಲಿ ನರಳುತ್ತಿರುವ ಕನ್ಯಾಕುಮಾರಿ ಮತ್ತು ಇತರರ ಮೊಕದ್ದಮೆಗಳು ಕೂಡಲೇ ಬಗೆಹರಿದು ಹೊರಬರಲು ಸಂಪೂರ್ಣ ಸಹಕಾರ ನೀಡಬೇಕು.
- ಕರ್ನಾಟಕ ಸರ್ಕಾರ ಅಧಿಕೃತವಾಗಿ ಕೇರಳ ಮತ್ತು ತಮಿಳುನಾಡು ಸರ್ಕಾರಗಳಿಗೆ ಪತ್ರ ಬರೆದು ಅವರ ಕಡೆಯಿಂದಲೂ ಮಾಜಿ ನಕ್ಸಲರನ್ನು ಜೈಲಿನಿಂದ ಮುಖ್ಯವಾಹಿನಿಗೆ ತರುವ ಪ್ರಕ್ರಿಯೆಗೆ ಸಹಕಾರ ದೊರಕಿಸಿಕೊಳ್ಳಬೇಕು.
- ಈಗಾಗಲೇ ಮುಖ್ಯವಾಹಿನಿಗೆ ಬಂದಿರುವ ಮಾಜಿ ನಕ್ಸಲಿಯರನ್ನು ಕರೆಸಿ ಅವರ ಸಮಸ್ಯೆಗಳನ್ನು ಆಲಿಸಿ ಸೂಕ್ತ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಬೇಕು.
- ಈಗ ಬಡಜನರ ಬದುಕಿಗೆ ಸಂಬಂಧಪಟ್ಟ 18 ಹಕೊತ್ತಾಯಗಳನ್ನು ಸವಿಸ್ತಾರವಾಗಿ ಚರ್ಚೆಮಾಡಿ ಅದನ್ನು ಬಗೆಹರಿಸುವ ನಿಟ್ಟಿನಲ್ಲಿ ರಚನಾತ್ಮಕ ಕೆಲಸಗಳಿಗೆ ಚಾಲನೆ ಪಡೆಯಬೇಕು. ಇದಕ್ಕಾಗಿ ಚಿಕ್ಕಮಗಳೂರು, ಉಡುಪಿ, ಶಿವಮೊಗ್ಗ ಮತ್ತು ಬೆಂಗಳೂರಿನಲ್ಲಿ ವಿಶೇಷ ಸಭೆಗಳನ್ನು ಕರೆದು, ಚರ್ಚಿಸಿ, ಅಗತ್ಯ ಕ್ರಮಗಳ ಪ್ರಕ್ರಿಯೆ ಪ್ರಾರಂಭಿಸಬೇಕು.
- ವಿಕ್ರಂ ಗೌಡ ಹತ್ಯಾ ಪ್ರಕರಣದ ಕುರಿತು ನ್ಯಾಯಾಂಗ ತನಿಖೆಗೆ ಆದೇಶಿಸಬೇಕು.
ಜನವರಿ 10ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಎಲ್ಲಾ ಸವಾಲುಗಳನ್ನು ಮತ್ತು ಪರಿಹಾರ ಕ್ರಮಗಳನ್ನು ಅವರ ಗಮನಕ್ಕೆ ತರಲಾಗಿದೆ. ಮುಖ್ಯಮಂತ್ರಿ ಕೂಡ ಅಗತ್ಯ ಕ್ರಮಗಳನ್ನು ಪ್ರಾರಂಭಿಸಲು ಸೂಚನೆ ನೀಡುವುದಾಗಿ ಭರವಸೆ ಕೊಟ್ಟಿದ್ದಾರೆ. ಮುಖ್ಯಮಂತ್ರಿ ಈ ಎಲ್ಲಾ ವಿಚಾರಗಳ ಸುತ್ತ ಚುರುಕು ತೀರ್ಮಾನಗಳನ್ನು ತೆಗೆದುಕೊಳ್ಳುತ್ತಾರೆ ಎಂಬ ನಿರೀಕ್ಷೆಯನ್ನೂ ಇಟ್ಟುಕೊಂಡಿದ್ದೇವೆ. ಆದರೆ, ಆಳವಾದ ಆತಂಕವಂತೂ ಇದ್ದೇ ಇದೆ ಎಂದು ವೇದಿಕೆ ಹೇಳಿದೆ.
ಸುದ್ದಿಗೋಷ್ಠಿಯಲ್ಲಿ ಶಾಂತಿಗಾಗಿ ನಾಗರಿಕ ವೇದಿಕೆಯ ಪ್ರಮುಖರಾದ ವಿ.ಎಸ್.ಶ್ರೀಧರ್, ನಗರಗೆರೆ ರಮೇಶ್, ಎನ್.ವೆಂಕಟೇಶ್, ವಿಜಯಮ್ಮ, ನೂರ್ ಶ್ರೀಧರ್ ಮತ್ತು ತಾರಾ ರಾವ್ ಇದ್ದರು.


