ಸರ್ಕಾರವು ತನ್ನ ಪರಿಶೀಲನೆಯನ್ನು ಪೂರ್ಣಗೊಳಿಸುವವರೆಗೆ ದೇಶದ್ರೋಹದ ಕಾನೂನನ್ನು ತಡೆಹಿಡಿಯಲಾಗುವುದು ಎಂದು ಸುಪ್ರೀಂ ಕೋರ್ಟ್ ಬುಧವಾರ ಮಹತ್ವದ ಆದೇಶದಲ್ಲಿ ಹೇಳಿದ್ದು, ಈಗಾಗಲೇ ದೇಶದ್ರೋಹದ ಆರೋಪ ಎದುರಿಸುತ್ತಿರುವವರು ಜಾಮೀನಿಗಾಗಿ ನ್ಯಾಯಾಲಯವನ್ನು ಸಂಪರ್ಕಿಸಬಹುದು ಎಂದು ತಿಳಿಸಿದೆ.
ವಿವಾದಾತ್ಮಕ ದೇಶದ್ರೋಹ ಕಾನೂನನ್ನು ಬ್ರಿಟೀಷ್ ವಸಾಹತುಶಾಹಿ ಯುಗದ ಆಳ್ವಿಕೆಯ ಅಡಿಯಲ್ಲಿ ಸ್ವಾತಂತ್ಯ್ರ ಹೋರಾಟಗಾರರನ್ನು ಹಣಿಯಲು ಬೇಕಾಗಿ ರಚಿಸಲಾಗಿತ್ತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ದೇಶದ್ರೋಹ ಕಾನೂನಿನ ಸಾಂವಿಧಾನಿಕ ಮಾನ್ಯತೆಯನ್ನು ಪರಿಶೀಲಿಸುವಂತೆ ಮತ್ತು ಅದನ್ನು ರದ್ದುಗೊಳಿಸುವಂತೆ ಸಲ್ಲಿಸಲಾಗಿರುವ ಹಲವು ಅರ್ಜಿಗಳನ್ನು ಸುಪ್ರೀಂಕೋರ್ಟ್ ವಿಚಾರಣೆ ನಡೆಸುತ್ತಿದೆ. ಇಂದು ನೀಡಿದ ಮಹತ್ವದ ಆದೇಶದ ಕುರಿತು ಕೆಲವು ಅಂಶಗಳು ಇಲ್ಲಿದೆ:
- ಸರ್ಕಾರವು ದೇಶದ್ರೋಹ ಕಾನೂನನ್ನು ಮರುಪರಿಶೀಲಿಸುತ್ತಿರುವಾಗ ಬಾಕಿ ಉಳಿದಿರುವ ಎಲ್ಲಾ ಪ್ರಕರಣಗಳನ್ನು ತಡೆಹಿಡಿಯಲಾಗುವುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಮಹಾರಾಷ್ಟ್ರದ ಹನುಮಾನ್ ಚಾಲೀಸಾ ಪಠಣದ ಮೇಲೆ ದೇಶದ್ರೋಹ ಕಾನೂನನ್ನು ಅನ್ವಯಿಸಿದ ಪ್ರಕರಣಗಳಲ್ಲಿ ಅದರ ದುರುಪಯೋಗವನ್ನು ಆಪಾದಿಸಿ ಕಾನೂನನ್ನು ಪ್ರಶ್ನಿಸಿದ ಅರ್ಜಿಗಳನ್ನು ಉಲ್ಲೇಖಿಸಿ ಸುಪ್ರೀಂ ಕೋರ್ಟ್ ಮೇಲಿನಂತೆ ಹೇಳಿದೆ.
ಇದನ್ನೂ ಓದಿ: ದೇಶದ್ರೋಹ ಕಾನೂನಿಗೆ ತಡೆ; ಬಂಧಿತರು ಜಾಮೀನು ಪಡೆಯಬಹುದು: ಸುಪ್ರೀಂ ಕೋರ್ಟ್ ಮಹತ್ವದ ಆದೇಶ
- “ಮುಂದಿನ ಮರು ಪರಿಶೀಲನೆ ಮುಗಿಯುವವರೆಗೆ ದೇಶದ್ರೋಹ ಕಾನೂನನ್ನು ಬಳಸದಿರುವುದು ಸೂಕ್ತವಾಗಿರುತ್ತದೆ. ರಾಜ್ಯ ಮತ್ತು ಒಕ್ಕೂಟ ಸರ್ಕಾರಗಳು 124 ಎ (ದೇಶದ್ರೋಹದ ಕಾನೂನು) ಅಡಿಯಲ್ಲಿ ಯಾವುದೇ ಎಫ್‌ಐಆರ್ ಅನ್ನು ನೋಂದಾಯಿಸುವುದನ್ನು ನಿಲ್ಲಿಸುತ್ತವೆ ಎಂದು ನಾವು ಭಾವಿಸುತ್ತೇವೆ ಮತ್ತು ನಿರೀಕ್ಷಿಸುತ್ತೇವೆ’’ ಎಂದು ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಹೇಳಿದ್ದಾರೆ.
- ಯಾವುದೇ ಹೊಸ ಪ್ರಕರಣಗಳು ದಾಖಲಾದರೆ, ಆರೋಪಿಗಳು ನ್ಯಾಯಾಲಯವನ್ನು ಸಂಪರ್ಕಿಸಬಹುದು ಎಂದು ಸುಪ್ರಿಂಕೋರ್ಟ್ ಹೇಳಿದೆ.
- “ಕಾನೂನಿನ ದುರುಪಯೋಗವನ್ನು ತಡೆಗಟ್ಟಲು ರಾಜ್ಯಗಳಿಗೆ ನಿರ್ದೇಶನಗಳನ್ನು ರವಾನಿಸಲು ಒಕ್ಕೂಟ ಸರ್ಕಾರದ ಅಡಿಯಲ್ಲಿದೆ” ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದ್ದಾರೆ.
- ದೇಶದ್ರೋಹ ಕಾನೂನನ್ನು ಪರಿಶೀಲಿಸುವ ನಿರ್ಧಾರವನ್ನು ಪ್ರಕಟಿಸಿದ್ದ ಒಕ್ಕೂಟ ಸರ್ಕಾರವು ಕಾನೂನನ್ನು ತಡೆಹಿಡಿಯುವುದರ ಪರವಾಗಿಲ್ಲ ಎಂದು ವಾದಿಸಿತ್ತು. ಸದ್ಯಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಮಾತ್ರ ದೇಶದ್ರೋಹದ ಪ್ರಕರಣಗಳನ್ನು ದಾಖಲಿಸಬೇಕು ಎಂದು ಶಿಫಾರಸು ಮಾಡಿತ್ತು.
- “ಮುಂಬರುವ ಎಫ್‌ಐಆರ್‌ಗಳಲ್ಲಿ ದೇಶದ್ರೋಹದ ಆರೋಪವನ್ನು ದಾಖಲಿಸಬೇಕೇ ಎಂಬುದರ ಕುರಿತು ಸದ್ಯಕ್ಕೆ ಸೂಪರಿಂಟೆಂಡೆಂಟ್ ಅಥವಾ ಅದಕ್ಕಿಂತ ಹೆಚ್ಚಿನ ಹಂತದ ಪೊಲೀಸ್ ಅಧಿಕಾರಿ ನಿರ್ಧರಿಸಬೇಕು ಎಂದು ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಪ್ರಸ್ತಾಪಿಸಿದೆ” ಎಂದು ಒಕ್ಕೂಟ ಸರ್ಕಾರದ ಪರ ವಕೀಲ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಸುಪ್ರೀಂಕೋರ್ಟ್‌ಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಸುಪ್ರೀಂಕೋರ್ಟ್‌ನಲ್ಲಿ ‘ದೇಶದ್ರೋಹ’ ಕಾನೂನನ್ನು ಸಮರ್ಥಿಸಿಕೊಂಡ ಮೋದಿ ನೇತೃತ್ವದ ಬಿಜೆಪಿ ಸರ್ಕಾರ
- ಬಾಕಿ ಇರುವ ಪ್ರಕರಣಗಳು ಈಗಾಗಲೇ ನ್ಯಾಯಾಲಯದ ಮುಂದೆ ಇವೆ ಎಂದು ಸರ್ಕಾರ ಹೇಳಿದೆ.
- “ಭಾರತದಾದ್ಯಂತ ದಾಖಲಾದ ದೇಶದ್ರೋಹ ಪ್ರಕರಣಗಳಲ್ಲಿನ ಅಪರಾಧಗಳ ಗಂಭೀರತೆ ನಮಗೆ ತಿಳಿದಿಲ್ಲ. ಈ ಪ್ರಕರಣಗಳಲ್ಲಿ ಇತರ ಭಯೋತ್ಪಾದನೆ ಆರೋಪಗಳೂ ಇರಬಹುದು. ಬಾಕಿ ಇರುವ ಪ್ರಕರಣಗಳು ಪೊಲೀಸ್ ಅಥವಾ ಸರ್ಕಾರದ ಮುಂದೆ ಇರುವುದಲ್ಲ, ಅವು ನ್ಯಾಯಾಲಯದ ಮುಂದೆ ಇವೆ. ಹಾಗಾಗಿ, ನ್ಯಾಯಾಲಯಗಳ ವಿವೇಕವನ್ನು ನಾವು ಊಹಿಸಬಾರದು” ಎಂದು ಮೆಹ್ತಾ ಹೇಳಿದ್ದಾರೆ.
- ಆದರೆ ಅರ್ಜಿದಾರರು ಸರ್ಕಾರದ ನಿಲುವನ್ನು ವಿರೋಧಿಸಿ, ವಸಾಹತುಶಾಹಿ ಯುಗದ ಕಾನೂನನ್ನು ಸರ್ಕಾರವು ಪರಿಶೀಲಿಸುವವರೆಗೆ ದೇಶದ್ರೋಹ ಕಾನೂನನ್ನು ತಡೆಹಿಡಿಯುವಂತೆ ನ್ಯಾಯಾಲಯವನ್ನು ಒತ್ತಾಯಿಸಿದರು.


