Homeಮುಖಪುಟಸಮಕಾಲೀನ ಸಮಾಜದ ಪ್ರಮುಖ ಸಿನಿಮಾ ನಿರ್ಮಾತೃ Andrey Zvyagintsev

ಸಮಕಾಲೀನ ಸಮಾಜದ ಪ್ರಮುಖ ಸಿನಿಮಾ ನಿರ್ಮಾತೃ Andrey Zvyagintsev

- Advertisement -
- Advertisement -

ಆಂಡ್ರಿ ಜ್ಯಾಗಿಂಟ್ಸೆವ್‌ನ ‘The Return’ (2003) ಸಿನಿಮಾ ನೋಡಿದ್ದು ನಾನು 2006ರಲ್ಲಿ. ಈ ಸಿನಿಮಾ ನೋಡಲು ನನಗೆ ಯಾರ ಶಿಫಾರಸ್ಸು ಇರಲಿಲ್ಲ. ಬೆಂಗಳೂರು ಗಾಂಧಿನಗರದಲ್ಲಿದ್ದ ನ್ಯಾಷನಲ್ ಮಾರ್ಕೆಟ್‌ಗೆ ಹೋಗಿ ಈಗಾಗಲೆ ಪರಿಚಿತವಿದ್ದ ನಿರ್ದೇಶಕರ ಒಂದೆರಡು ಸಿನಿಮಾಗಳ ಡಿವಿಡಿ ಜೊತೆ ಇದನ್ನ ರ್‍ಯಾಂಡಮ್ ಆಗಿ ಸೆಲೆಕ್ಟ್ ಮಾಡಿ ತಂದು ನೋಡಿದ್ದೆ. ಇದು ನೋಡಿದ ಕಾಲಕ್ಕೆ ಒಂದು ಸಿನಿಮಾವನ್ನು ಕಾಲ-ದೇಶ, ಅಲ್ಲಿನ ಸಾಮಾಜಿಕ, ರಾಜಕೀಯ, ಧರ್ಮ, ಸಂಸ್ಕೃತಿಗಳ ಹಿನ್ನೆಲೆಯಲ್ಲಿ ಗ್ರಹಿಸುವ ತಿಳಿವಳಿಕೆ ಕೂಡ ಇರಲಿಲ್ಲ. ‘The Return’ ಅನ್ನು ಒಂದು ಕೌಟುಂಬಿಕ ಸಿನಿಮಾವಾಗಿ ಮಾತ್ರ ನೋಡಿ ಇಷ್ಟಪಟ್ಟಿದ್ದೆ. ಅದು ಇತ್ತೀಚಿಗೆ ನೆನಪಾಗಿ ಇಡೀ ಸಿನಿಮಾ ನಮ್ಮ ದೇಶದ ರಾಜಕೀಯ ಸನ್ನಿವೇಶದೊಂದಿಗೆ ತಳಕು ಹಾಕಿಕೊಂಡುಬಿಡ್ತು.

ಆಂಡ್ರಿ ಜ್ಯಾಗಿಂಟ್ಸೆವ್‌ನ ಕುರಿತ ನನ್ನ ಅನುಭವ ಸ್ವಲ್ಪ ಸ್ವಾರಸ್ಯಕರ. ಹಿಂದೆಲ್ಲಾ ಸಿನಿಮಾ ಅಂದ್ರೆ ಅದರಲ್ಲಿ ನಟಿಸಿದ ನಟ-ನಟಿಯರು ಮಾತ್ರ. ಆ ಸಿನಿಮಾದ ನಿರ್ದೇಶಕ ಯಾರು ಎಂಬ ಕೂತೂಹಲ ಇರಲಿಲ್ಲ. ತಿಳಿವಳಿಕೆ ಬಂದ ಹಾಗೆ ನಿರ್ದೇಶಕ ಯಾರು ಅಂತ ತಿಳ್ಕೊಂಡು ಸಿನಿಮಾ ನೋಡುವ ಅಭ್ಯಾಸ ರೂಢಿ ಆಯ್ತು. The Return, The Banishment (2007), Elena (2011) ನೋಡಿದಾಗ, ಅದರಲ್ಲೂ The Banishment (2007) ಸಿನಿಮಾ ಎಷ್ಟು ಇಷ್ಟವಾಗಿತ್ತು ಅಂದ್ರೆ ಎರಡೆರಡು ಸಲ ನೋಡಿಬಿಟ್ಟಿದ್ದೆ. ಆಗಲೂ ಈ ಸಿನಿಮಾಗಳ ನಿರ್ದೇಶಕ ಆಂಡ್ರಿ ಜ್ಯಾಗಿಂಟ್ಸೆವ್ ಎಂದು ತಿಳಿದಿರಲಿಲ್ಲ. 2014ರ ಅವನ Leviathan ಸಿನಿಮಾಗೆ ಕಾನ್‌ನ ಪ್ರತಿಷ್ಠಿತ ಪ್ರಶಸ್ತಿ Palme d’Or ಸಿಕ್ಕಾಗ, ಈ ನಿರ್ದೇಶಕ ಯಾರು? ಇವನ ಹಿಂದಿನ ಸಿನಿಮಾಗಳು ಯಾವುವು? ಎಂದು ಹುಡುಕಿದಾಗ ಆಶ್ಚರ್ಯದ ಜೊತೆ ಸಂತೋಷವಾಯಿತು.

ಆಂಡ್ರಿ ಜ್ಯಾಗಿಂಟ್ಸೆವ್ ಸಿನಿಮಾಗಳು ಮತ್ತು ಅವುಗಳ ಹಿಂದಿನ ತಾತ್ವಿಕತೆ.

ಪ್ರಪಂಚದ ಹಲವಾರು ಸಿನಿಮಾ ನಿರ್ದೇಶಕರಿಗೆ ಅವರದೇ ನೆಲದಲ್ಲಿ ಬಹಳ ವಿರೋಧವಿದೆ. ಅವರ ಕಲೆಯನ್ನ ಆರಾಧಿಸುತ್ತಲೆ ಆ ಕಲೆಯ ಮುಖಾಂತರ ಪ್ರಸ್ತುತ ಪಡಿಸುವ ಸಂಗತಿಗಳ ಬಗ್ಗೆ ಇರುವ ತಕರಾರು ಅದು. ಇರಾನಿನ ಜಫಾರ್ ಫನ್ಹಾಹಿ, ಅಬ್ಬಾಸ್ ಕಿರೊಸ್ತಾಮಿ, ಮಕ್ಬುಲ್ ಬಫ್ ಮುಂತಾದವರಿಗೆ ಅವರದೇ ದೇಶದಲ್ಲಿ ತೀವ್ರ ವಿರೋಧ ಇದೆ. ಆಂಡ್ರಿಗೂ ಕೂಡ. ಆಂಡ್ರಿ ಪಶ್ಚಿಮ ದೇಶದ ಕಲೆ ಮತ್ತು ಸಂಸ್ಕೃತಿಯಿಂದ ಪ್ರಭಾವಿತನಾಗಿದ್ದಾರೆ. ಅವರಿಗೆ ರಷ್ಯಾದ ಕುರಿತು ಒಳ್ಳೆಯ ಅಭಿಪ್ರಾಯಗಳಿಲ್ಲ ಮತ್ತು ರಷ್ಯಾ ಪರಿಸ್ಥಿತಿಯನ್ನು ಬಹಳ ಕೆಟ್ಟದಾಗಿ ತಮ್ಮ ಸಿನಿಮಾಗಳಲ್ಲಿ ಪ್ರಸ್ತುತಪಡಿಸುತ್ತಾರೆ ಎಂಬುದು ಅಲ್ಲಿನವರ ತಕರಾರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಆಂಡ್ರಿ ತನ್ನ ವೃತ್ತಿ ಜೀವನದ ಇಪ್ಪತ್ತು ವರ್ಷಗಳಲ್ಲಿ ಇದುವರೆಗೂ ಮಾಡಿರುವುದು ಕೇವಲ ಐದು ಸಿನಿಮಾಗಳು ಮಾತ್ರ. ಪ್ರತಿ ಸಿನಿಮಾಗೂ ಕನಿಷ್ಠ ಮೂರರಿಂದ ನಾಲ್ಕು ವರ್ಷಗಳ ಅಂತರವಿದೆ. ಆಂಡ್ರಿಯ ಬಹುತೇಕ ಎಲ್ಲಾ ಸಿನಿಮಾಗಳ ಕೇಂದ್ರ ವಸ್ತು ಕುಟುಂಬ ಮತ್ತು ಕುಟುಂಬ ಸದಸ್ಯರ ಸಾವು ಅಥವಾ ಅವರಲ್ಲಿ ಯಾರಾದರೂ ಅದೃಶ್ಯವಾಗುವುದು. ಈ ಕುಟುಂಬಗಳು ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿವೆ. ಈ ಬಿಕ್ಕಟ್ಟಿನ ಪರಿಸ್ಥಿತಿಯಿಂದ ಕುಟುಂಬದ ಮಕ್ಕಳು ಅನಾಥರಾಗುತ್ತಿದ್ದಾರೆ ಇಲ್ಲಾ ಕಾಣೆಯಾಗುತ್ತಿದ್ದಾರೆ. ಈ ಕುಟುಂಬಗಳಲ್ಲಿ ಮಾನಸಿಕ ಕ್ಷೋಭೆ ನೆಲೆಯೂರಿದೆ. ಇದು ಕೇವಲ ಒಂದು ಕುಟುಂಬದ ಸಮಸ್ಯೆ ಅಲ್ಲ, ಇದು ಸಮಕಾಲೀನ ರಷ್ಯಾದ ಬಿಕ್ಕಟ್ಟು ಮತ್ತು ಮಾನಸಿಕ ಕ್ಷೋಭೆಯೂ ಹೌದು. ಒಂದು ಕುಟುಂಬದ ಕಥೆಯ ಜೊತೆಜೊತೆಯಲ್ಲೆ ತನ್ನ ದೇಶದ ಸಮಕಾಲೀನ ವಾಸ್ತವಗಳನ್ನ ಬಹಳ ಸೂಕ್ಷ್ಮವಾಗಿ ದಾಟಿಸುವುದು ಅಂಡ್ರಿ ಸಿನಿಮಾಗಳ ಹೆಚ್ಚುಗಾರಿಕೆ. The Return, The Banishment, Elena ಸಿನಿಮಾಗಳಲ್ಲಿ ಕುಟುಂಬದ ಕಥೆಯೊಂದಿಗೆ ಸಮಕಾಲೀನ ರಷ್ಯಾದ ಪರಿಸ್ಥಿತಿ ಬಹಳ subtle ಆಗಿ ಕಾಣಿಸಿಕೊಂಡರೆ Leviathan ಮತ್ತು Loveless ಸಿನಿಮಾಗಳಲ್ಲಿ ಬಹಳ Loud ಆಗಿ ಕೇಳಿಸುತ್ತದೆ.

ಆಂಡ್ರಿ ಸಿನಿಮಾಗಳ ಮೂಲ ತಂತು ’ಮನುಷ್ಯತ್ವ’. ತಮ್ಮ ಸಿನಿಮಾಗಳು ಜಾರ್ಜಿಯಾ ಮೂಲದ ಸೋವಿಯತ್ ಫಿಲಾಸಫರ್ ಮೆರಬ್ ಮಮರ್ದಾಶವಿಲಿಯ ಆಲೋಚನೆಯಿಂದ ಪ್ರಭಾವಿತವಾಗಿವೆ ಎಂದು ಆಂಡ್ರಿ ಕೂಡ ಕೆಲವು ಕಡೆ ಇದನ್ನ ಪ್ರಸ್ತಾಪ ಮಾಡಿದ್ದಾರೆ. Alyssa Deblasio ತನ್ನ ‘The Filmmaker’s Philosopher’ ಎಂಬ ಪುಸ್ತಕದಲ್ಲಿ ಹೇಗೆ ಮಮರ್ದಾಶವಿಲಿ ಆಲೋಚನೆಗಳು ರಷ್ಯಾದ ಕೆಲವು ನಿರ್ದೇಶಕರ ಸಿನಿಮಾಗಳ ಮೇಲೆ ಪ್ರಭಾವ ಬೀರಿವೆ ಎಂದು ಚರ್ಚಿಸುತ್ತಾರೆ.

’ಮನುಷ್ಯ ಅಂದರೆ ಅದು ಮನುಷ್ಯತ್ವದ ಕಡೆ ಚಲಿಸುವ ಪ್ರಯತ್ನ’; ಮಮರ್ದಾಶವಿಲಿಯ ಈ ಒಂದು ಮಾತನ್ನು ಪ್ರಸ್ತಾಪಿಸುವ ಆಂಡ್ರಿ ’ಈ ಮನುಷ್ಯತ್ವದ ಮಾನದಂಡವನ್ನು ಅರ್ಥೈಸುವುದು ಕೇವಲ ನಮ್ಮೊಳಗಿನ ಮನುಷ್ಯ ಪ್ರಯತ್ನದಿಂದ ಮಾತ್ರವೆ ಹೊರತು ಯಾವುದೇ ಹೊರಗಿನ ಒತ್ತಡ, ವ್ಯಕ್ತಿ, ಪ್ರಾಧಿಕಾರ ಅಥವಾ ಷರತ್ತುಗಳಿಂದ ಅಲ್ಲ’ ಎಂದು ಹೇಳುತ್ತಾರೆ. ಪ್ರಸ್ತುತ ರಷ್ಯಾದ ರಾಜಕೀಯ, ಐತಿಹಾಸಿಕ ಸಂಗತಿಗಳು ಮತ್ತು ಆಧುನಿಕತೆಯ ಸಂಕೀರ್ಣ ಬದುಕು ಇವೆಲ್ಲಾ ಮನುಷ್ಯ ಮನುಷ್ಯನ ನಡುವಿನ ಸಂಪರ್ಕ-ಸಂವಹನವನ್ನು ಹೇಗೆ ದುರ್ಬಲಗೊಳಿಸಿವೆ; ಈ ದುರ್ಬಲಗೊಂಡ ಸಂವಹನದಿಂದ ಮನುಷ್ಯ ಮನುಷ್ಯತ್ವದ ಕಡೆ ಚಲಿಸುವ ಪ್ರಯತ್ನದಲ್ಲಿ ಹೇಗೆ ಸೋಲುತ್ತಿದ್ದಾನೆ; ಈ ದುರ್ಬಲದ ಸಂವಹನ ಪೀಳಿಗೆಯಿಂದ ಪೀಳಿಗೆಗೆ ಹೇಗೆ ವರ್ಗಾವಣೆಯಾಗುತ್ತಿರುತ್ತದೆ ಎಂಬುದನ್ನು ತನ್ನ ಸಿನಿಮಾದ ಪಾತ್ರಗಳ ಮೂಲಕ ಆಂಡ್ರಿ ಚರ್ಚಿಸುತ್ತಾನೆ.

The Return ಸಿನಿಮಾದಲ್ಲಿ 12 ವರ್ಷದಿಂದ ಕಾಣೆಯಾಗಿದ್ದ ತಂದೆ ಒಂದು ದಿನ ದಿಢೀರ್ ಎಂದು ಪ್ರತ್ಯಕ್ಷನಾಗುತ್ತಾನೆ. ಈ ಹನ್ನೆರಡು ವರ್ಷ ತಂದೆ ಮಕ್ಕಳ ನಡುವೆ ಯಾವುದೇ ಸಂವಹನ ಇಲ್ಲ. ತಂದೆ ತನ್ನ ಮಕ್ಕಳ ಯಾವ ಜವಾಬ್ದಾರಿಯನ್ನು ನಿರ್ವಹಿಸಿಲ್ಲ. ಆದರೆ ಆ ತಂದೆಗೆ ತನ್ನ ಪಿತೃತ್ವದ ಅಧಿಕಾರ ಮಾತ್ರ ಚಲಾಯಿಸಬೇಕು. Loveless ಸಿನಿಮಾದಲ್ಲಿ ಝೆನಿಯಾಗೆ ತನ್ನ ಮಗನ ಬಗ್ಗೆ ಎಳ್ಳಷ್ಟೂ ಕಾಳಜಿಯಿಲ್ಲ. ಮಕ್ಕಳನ್ನು ಹೆರೋದು ಮತ್ತು ಸಾಕುವುದು, ಒಂದು ರೀತಿಯ ದುಡಿಮೆ ಎಂಬುದು ಅವಳ ಭಾವನೆ. ಈ ತರಹದ ಭಾವನೆ ತಾನಾಗಿ ಬಂದದ್ದಲ್ಲ. ಝೆನಿಯಾಳ ಬಾಲ್ಯದಲ್ಲಿ ಅವಳ ತಾಯಿ ಆ ರೀತಿ ನಡೆದುಕೊಂಡಿರುತ್ತಾಳೆ. ಈ ರೀತಿ ಸಂಬಂಧಗಳ ನಡುವಿನ ಸಂವಹನದ ಸೋಲುಗಳು ಪೀಳಿಗೆಯಿಂದ ಪೀಳಿಗೆಗೆ ವರ್ಗಾವಣೆ ಆಗುತ್ತಿರುತ್ತವೆ.

ಈ ರೀತಿಯ ಸಂವಹನದ ಬಿರುಕು ಹೆಚ್ಚಿಸಲು ಆಧುನಿಕ ತಂತ್ರಜ್ಞಾನ ಹೇಗೆ ಪ್ರಮುಖವಾದ ಪಾತ್ರ ವಹಿಸಿದೆ ಎಂಬುದನ್ನು ಆಂಡ್ರಿ ತನ್ನ ಸಿನಿಮಾದಲ್ಲಿ ಬಹಳ ಸೂಚ್ಯವಾಗಿ ತೋರಿಸುತ್ತಾರೆ. Elena ಮತ್ತು Loveless ಸಿನಿಮಾಗಳಲ್ಲಿ ಬರುವ ಪಾತ್ರಗಳು ತನ್ನೊಳಗಿನ ಸಹಜ ಆಲೋಚನೆಯಿಂದ ನೈತಿಕವಾಗಿ ಸುಧಾರಿಸಲು ಸಾಧ್ಯವಿದ್ದರೂ, ಅವರ ಏಕಾಗ್ರತೆಯನ್ನ ಹೇಗೆ ಟಿ.ವಿಯ ಕೆಟ್ಟ-ಭ್ರಷ್ಟ ಕಾರ್ಯಕ್ರಮಗಳು ಮತ್ತು ಇಂಟರ್ನೆಟ್‌ನಲ್ಲಿ ಸಂಗತಿಗಳು ದಿಕ್ಕು ತಪ್ಪಿಸುತ್ತಿವೆ ಮತ್ತು ಇವು ಮನುಷ್ಯನ ಸಹಜ ಮಾನಸಿಕ ಬೆಳವಣಿಗೆ ಮತ್ತು ಸಾಮರ್ಥ್ಯವನ್ನ ಕುಂಠಿತಗೊಳಿಸಿವೆ ಎಂಬುದನ್ನು ಹಿಡಿದಿಡುತ್ತಾರೆ.

ಆಂಡ್ರಿ ಸಿನಿಮಾಗಳಲ್ಲಿ ಕಲಾವಂತಿಕೆ ಅದ್ಭುತವಾಗಿರುತ್ತದೆ. ಪ್ರತಿ ಸಿನಿಮಾದ ಪ್ರಾರಂಭದಲ್ಲಿನ Long ಮತ್ತು Wide ಸಂಯೋಜಿತ ಸ್ಥಿರ ದೃಶ್ಯಗಳ Montageಗಳು ಸಿನಿಮಾದಲ್ಲಿ ಮುಂದೆ ಬರುವ ಕಥೆಗೆ ಸಿದ್ಧತೆಯನ್ನು ಒದಗಿಸಿ, ಪ್ರೇಕ್ಷಕನನ್ನು ಆಂಡ್ರಿ ತನ್ನ ಜಗತ್ತಿಗೆ ಸೆಳೆದುಬಿಡುತ್ತಾರೆ ಆಂಡ್ರಿ ಮೂಲತಃ ರಂಗಕರ್ಮಿಯಾಗಿದ್ದರಿಂದಲೋ ಏನೋ ಪ್ರತಿ ದೃಶ್ಯ, mise-en-scene ಬಹಳ ಕಲಾವಂತಿಕೆಯಿಂದ ಕೂಡಿರುತ್ತವೆ. ಸಿನಿಮಾದಲ್ಲಿ ಬರುವ ರಷ್ಯಾದ ಹಳೆಯ ಕಟ್ಟಡಗಳಾಗಲೀ, ಭೂದೃಶ್ಯ, ಋತುಮಾನ, ಮನೆಯೊಳಗಿನ ದೃಶ್ಯಗಳಾಗಲೀ, ಇವೆಲ್ಲಾ ಕಥೆಗೆ ಪೂರಕವಾಗಿ ಸಂಯೋಜಿತಗೊಂಡಿರುತ್ತವೆ. ಈ ಕಾರಣದಿಂದಲೇ ಇರಬಹುದು, ರಷ್ಯಾ ರಾಜಕೀಯ ಮತ್ತು ಸಮಾಜದ ಬಗ್ಗೆ ಆಂಡ್ರಿಯ ಕಟು ವಿಮರ್ಶೆಗೆ ತಕರಾರುಗಳನ್ನು ಇಟ್ಟುಕೊಂಡೇ ಆ ದೇಶದ ವಿಮರ್ಶಕರು ಆಂಡ್ರಿ ಕಲಾವಂತಿಕೆಯನ್ನು ಆರಾಧಿಸುತ್ತಾರೆ.

ಮನುಷ್ಯತ್ವವನ್ನೆ ತಮ್ಮ ಸಿನಿಮಾದ ಮೂಲ ಆಶಯವಾಗಿಟ್ಟುಕೊಂಡು ತಮ್ಮ ಸುತ್ತಲಿನ ಸಮಾಜವನ್ನು ಬಹಳ ಆಳವಾಗಿ ನೋಡುವ-ವಿಶ್ಲೇಷಿಸುವ, ಸಮಾಜದ ನಡುವಿರುವ ಅಮಾನುಷತೆಯನ್ನು ಯಾವುದೇ ಉತ್ಪ್ರೇಕ್ಷೆ ಇಲ್ಲದೆ ಪ್ರಸ್ತುತಪಡಿಸುವ, ಅಧಿಕಾರ ಕೇಂದ್ರಗಳಾದ ಪ್ರಭುತ್ವ ಮತ್ತು ಧರ್ಮವನ್ನು ಕಟು ವಿಮರ್ಶೆಗೆ ಒಳಪಡಿಸುವ, ಮನುಷ್ಯ ಮತ್ತು ಸಮಾಜದ ಪ್ರಸ್ತುತದ ಸ್ಥಿತಿಗೆ ಪ್ರಾಮಾಣಿಕವಾದ ಕಾರಣಗಳನ್ನು ತಮ್ಮ ಸಿನಿಮಾಗಳ ಮೂಲಕ ಹುಡುಕುವ ಮತ್ತು ಸಿನಿಮಾ ಎಂಬ ಕಲಾ ಮಾಧ್ಯಮವನ್ನು ಅದರ ಎಲ್ಲಾ ಸಾಧ್ಯತೆಗಳೊಂದಿಗೆ ಅಷ್ಟೆ ಅದ್ಭುತವಾಗಿ ಬಳಸಿಕೊಳ್ಳುವ ಸಮಕಾಲೀನದ ಕೆಲವೇ ಕೆಲವು ಸಿನಿಮಾ ನಿರ್ಮಾತೃಗಳಲ್ಲಿ ಆಂಡ್ರಿ ಜ್ಯಾಗಿಂಟ್ಸೆವ್ ಪ್ರಮುಖರು.

ಯದುನಂದನ್ ಕೀಲಾರ

ಯದುನಂದನ್ ಕೀಲಾರ
ಜಗತ್ತಿನ ಸಿನಿಮಾಗಳ ವೀಕ್ಷಣೆ ಮತ್ತು ಅವುಗಳು ಬೀರುವ ಸಾಮಾಜಿಕ ಪ್ರಭಾವದ ಸಾಧ್ಯತೆಗಳ ಬಗ್ಗೆ ಅಪಾರ ಉತ್ಸಾಹ ಇರುವ ಯದುನಂದನ್ ಸಿನಿಮಾಗಳ ರಾಜಕೀಯ ನಿಲುವುಗಳನ್ನು ತೀಕ್ಷ್ಣವಾಗಿ ಶೋಧಿಸುತ್ತಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others


ಇದನ್ನೂ ಓದಿ: Film Review| ಜನ ಗಣ ಮನ: ಸಮೂಹ ಸನ್ನಿಗೊಂದು ಮದ್ದು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದೆಹಲಿ: ಆತ್ಮಹತ್ಯೆ ಮಾಡಿಕೊಂಡ ರೈತರ ತಲೆಬುರುಡೆ ಹಿಡಿದು ತಮಿಳುನಾಡಿನ ರೈತರಿಂದ ಪ್ರತಿಭಟನೆ

0
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೇಂದ್ರ ಸರ್ಕಾರದ ವಿರುದ್ಧ ತಮಿಳುನಾಡಿನ ಸುಮಾರು 200ರೈತರು ನವದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಆತ್ಮಹತ್ಯೆ ಮಾಡಿಕೊಂಡ ರೈತರ ತಲೆಬುರುಡೆ ಮತ್ತು ಮೂಳೆಗಳನ್ನು ತಮಿಳುನಾಡಿನಿಂದ ದೆಹಲಿಗೆ ಹೊತ್ತೊಯ್ದಿದ್ದಾರೆ. ಕೃಷಿಯಲ್ಲಿ...