Homeದಲಿತ್ ಫೈಲ್ಸ್ಪೆದ್ದನಹಳ್ಳಿ ದಲಿತರ ಹತ್ಯೆ ಪ್ರಕರಣ: ಅನುಮಾನಕ್ಕೆ ಆಸ್ಪದ ನೀಡಿದ ತನಿಖಾಧಿಕಾರಿಗಳ ಜಾತಿ, ಹಿನ್ನೆಲೆ; ಆರೋಪ

ಪೆದ್ದನಹಳ್ಳಿ ದಲಿತರ ಹತ್ಯೆ ಪ್ರಕರಣ: ಅನುಮಾನಕ್ಕೆ ಆಸ್ಪದ ನೀಡಿದ ತನಿಖಾಧಿಕಾರಿಗಳ ಜಾತಿ, ಹಿನ್ನೆಲೆ; ಆರೋಪ

ತನಿಖಾಧಿಕಾರಿಗಳು ಸಂತ್ರಸ್ತ ಕುಟುಂಬದಿಂದ ಖಾಲಿ ಹಾಳೆಯ ಮೇಲೆ ಸಹಿ ಮಾಡಿಸಿಕೊಂಡಿರುವ ವಿಷಯವನ್ನು ಸತ್ಯಶೋಧನ ಸಮಿತಿ ಹೊರಗೆಳೆದಿದೆ.

- Advertisement -
- Advertisement -

ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಪೆದ್ದನಹಳ್ಳಿ ಗ್ರಾಮದಲ್ಲಿ ಇಬ್ಬರು ದಲಿತ ಯುವಕರ ಹತ್ಯೆಗೆ ಸಂಬಂಧಿಸಿದಂತೆ ಹಲವಾರು ಅನುಮಾನಗಳು ವ್ಯಕ್ತವಾಗುತ್ತಿವೆ. ಪೊಲೀಸರು ಪ್ರಕರಣವನ್ನು ಸರಿಯಾದ ರೀತಿಯಲ್ಲಿ ತನಿಖೆ ನಡೆಸುತ್ತಿಲ್ಲ ಎಂಬ ಆರೋಪಗಳು ಬಂದಿವೆ.

ಏಪ್ರಿಲ್‌ 21ರ ರಾತ್ರಿ ಪೆದ್ದನಹಳ್ಳಿ ಗ್ರಾಮದ ಗಿರೀಶ್ (ಮಾದಿಗ ಸಮುದಾಯ), ಮಂಚಲದೊರೆ ಗ್ರಾಮದ ಗಿರೀಶ್‌ (ನಾಯಕ ಸಮುದಾಯ) ಅವರನ್ನು ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ಸವರ್ಣೀಯರನ್ನು ಬಂಧಿಸಲಾಗಿದೆ. ಆದರೆ ತನಿಖೆಯಲ್ಲಿ ಆಗುತ್ತಿರುವ ಲೋಪದೋಷಗಳು ಚರ್ಚೆಯಾಗುತ್ತಿವೆ.

ಪೆದ್ದನಹಳ್ಳಿ ಪ್ರಕರಣದ ಕುರಿತು ಪರ್ಯಾಯ ಕಾನೂನು ವೇದಿಕೆ, ಪಿಯುಸಿಎಲ್ ಕರ್ನಾಟಕ, ಸಫಾಯಿ ಕರ್ಮಚಾರಿ ಕಾವಲು ಸಮಿತಿ ನಡೆಸಿರುವ ಸತ್ಯಶೋಧನೆಯಲ್ಲಿ ಹಲವಾರು ಆತಂಕಕಾರಿ ಅಂಶಗಳು ಹೊರಬಿದ್ದಿವೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಸತ್ಯಶೋಧನೆಯ ಆಧಾರದ ಮೇಲೆ, ಇದುವರೆಗಿನ ತನಿಖೆಯಲ್ಲಿ ಈ ಕೆಳಗಿನ ಗಂಭೀರ ಲೋಪಗಳನ್ನು ಸಂಘಟಕರು ಗುರುತಿಸಿದ್ದಾರೆ.

ತನಿಖೆಯಲ್ಲಿನ ಲೋಪಗಳು

1. ಪ.ಜಾತಿ/ಪ.ಪಂ. ದೌರ್ಜನ್ಯ ತಡೆ ಕಾಯ್ದೆಯ ಅನ್ವಯ ಸೂಕ್ತವಾದ ಸೆಕ್ಷನ್‌ಗಳ ಅಡಿ ದೂರು ದಾಖಲಿಸಲಿಲ್ಲ.

2. ದೌರ್ಜನ್ಯ ತಡೆ ಕಾಯಿದೆಯ ಅಡಿಯಲ್ಲಿ ಕಡ್ಡಾಯವಾಗಿ ದೂರುದಾರರಿಗೆ ಎಫ್‌ಐಆರ್‌ ಪ್ರತಿ ನೀಡಬೇಕು. ದೂರುದಾರ ಶ್ರೀಧರ್‌ (ಪೆದ್ದನಹಳ್ಳಿ ಗಿರೀಶ್ ಅವರ ಸಹೋದರ) ಅವರಿಗೆ ಎಫ್‌ಐಆರ್‌ ಪ್ರತಿಯನ್ನು ನೀಡಲು ನಿರಾಕರಿಸಿದ ಪೊಲೀಸರು.

ಇದನ್ನೂ ಓದಿರಿ: ಪೆದ್ದನಹಳ್ಳಿಯಲ್ಲಿ ದಲಿತರ ಕೊಲೆ: ಮಾಹಿತಿ ಗೊತ್ತಿಲ್ಲ ಎಂದ ಸಚಿವ ಬಿ.ಸಿ.ನಾಗೇಶ್!

3. ಇನ್ಕ್ಯೂಸ್ಟ್ (ಪಂಚನಾಮೆ)ಮಹಜರ್‌ಗೆ ಸಂಬಂಧಿಸಿದಂತೆ ಕೊಲೆಯಾದ ಪೆದ್ದನಹಳ್ಳಿ ಗಿರೀಶ್ ಮತ್ತು ಮಂಚಲದೊರೆ ಗಿರೀಶ್ ಅವರ ಕುಟುಂಬದ ಸದಸ್ಯರಿಂದ ಖಾಲಿ ಹಾಳೆಯ ಮೇಲೆ ಸಹಿ ಹಾಕುವಂತೆ ಒತ್ತಾಯಿಸಿ, ಸಹಿ ಪಡೆದುಕೊಳ್ಳಲಾಗಿದೆ.

4. ಕೊಲೆಯಾದವರ ದೇಹದ ಮೇಲೆ ಸುಟ್ಟ ಗಾಯಗಳನ್ನು ಇನ್ಕ್ಯೂಸ್ಟ್ (ಪಂಚನಾಮೆ) ಮಹಜರ್‌‌ನಲ್ಲಿ ದಾಖಲಿಸುವಲ್ಲಿ ಮತ್ತು ಪೋಸ್ಟ್ ಮಾರ್ಟಮ್ ವರದಿಯ ಪ್ರತಿಯನ್ನು ಮೃತರ ಕುಟುಂಬಗಳಿಗೆ ಒದಗಿಸುವಲ್ಲಿ ನಿರಾಕರಿಸಲಾಗಿದೆ. ಇದು ಮತ್ತೊಂದು ವೈಫಲ್ಯವಾಗಿದೆ.

5. ಕೊಲೆಯಾದ ಸ್ಥಳದಲ್ಲಿ ಮೃತ ಪೆದ್ದನಹಳ್ಳಿ ಗಿರೀಶ್ ಅವರ ಚಪ್ಪಲಿ ಮತ್ತು ರಕ್ತದಿಂದ ನೆನೆಸಿದ ಒಣಗಿದ ತೆಂಗಿನ ಗರಿಗಳು ಮತ್ತು ಕೊಂಬೆಗಳಂತಹ ವಸ್ತುಗಳನ್ನು ಸಂಗ್ರಹಿಸಲಿಲ್ಲ. ಇದು ಮತ್ತೊಂದು ವೈಫಲ್ಯವಾಗಿದೆ.

6. ಇಬ್ಬರು ದಲಿತ ಯುವಕರನ್ನು ಗ್ರಾಮದ ಸವರ್ಣೀಯರು ಬರ್ಬರವಾಗಿ ಹತ್ಯೆ ಮಾಡಿದ್ದರೂ ಗಿರೀಶ್ ಪಿ ಎಂ ಅವರ ಕುಟುಂಬವು ಎದುರಿಸುತ್ತಿರುವ ಭಯ ಮತ್ತು ಬೆದರಿಕೆಯ ವಾತಾವರಣದ ಹೊರತಾಗಿಯೂ, ಸೂಕ್ತವಾದ (ಅಗತ್ಯಕ್ಕಾನುಗುಣವಾಗಿ) ಪೋಲಿಸ್ ಭದ್ರತೆ ಅಥವಾ ರಕ್ಷಣೆಯನ್ನು ನೀಡಿಲ್ಲ.

ಇದನ್ನೂ ಓದಿರಿ: ಪೆದ್ದನಹಳ್ಳಿ ಪ್ರಕರಣ: ಇಬ್ಬರು ದಲಿತ ಯುವಕರ ಹತ್ಯೆಯ ಸುತ್ತ ಎಷ್ಟೊಂದು ಸಂಕಟ!

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಪಿಯುಸಿಎಲ್ ಜಿಲ್ಲಾಧ್ಯಕ್ಷರಾದ ಕೆ.ದೊರೈರಾಜ್, “ಸದರಿ ಕೇಸನ್ನು ನಡೆಸುತ್ತಿರುವ ತನಿಖಾಧಿಕಾರಿಗಳು ಕೃತ್ಯ ನಡೆಸಿರುವವರ ಜಾತಿಗೆ ಸೇರಿದವರಾಗಿದ್ದಾರೆ. ಈಗಾಗಲೇ ಗುಬ್ಬಿ ತಾಲ್ಲೂಕಿನಲ್ಲಿ ನಡೆದಿರುವ ಪ.ಜಾತಿಯ ಮೇಲಿನ ದೌರ್ಜನ್ಯಗಳನ್ನು ಪಾರದರ್ಶಕವಾಗಿ ಮತ್ತು ಹೊಣೆಗಾರಿಕೆಯಿಂದ ತನಿಖೆ ನಡೆಸಿರುವುದಿಲ್ಲ. ಹಾಗಾಗಿ ತನಿಖಾ ಅಧಿಕಾರಿಗಳನ್ನು ಬದಲಾಯಿಸಿ ಈ ಹತ್ಯೆಯ ಹಿಂದಿನ ಉದ್ದೇಶವನ್ನು ಬಹಿರಂಗಗೊಳಿಸಲು ಜಿಲ್ಲಾ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಿ ಸತ್ಯಾಸತ್ಯತೆಗಳನ್ನು ಸರ್ಕಾರ ಬಹಿರಂಗಪಡಿಸಬೇಕು” ಎಂದು ಒತ್ತಾಯಿಸಿದರು.

ಸಫಾಯಿ ಕರ್ಮಚಾರಿಗಳ ಕಾವಲು ಸಮಿತಿಯ ಸಂಚಾಲಕರಾದ ಡಾ.ಕೆ.ಬಿ.ಓಬಲೇಶ್ ‘ನಾನುಗೌರಿ.ಕಾಂ’ಗೆ ಪ್ರತಿಕ್ರಿಯೆ ನೀಡಿ, “ತನಿಖೆ ನಡೆಸುತ್ತಿರುವ ಸಬ್‌ ಇನ್‌ಸ್ಪೆಕ್ಟರ್‌, ಡಿವೈಎಸ್‌ಪಿಯವರು ಕ್ರಮವಾಗಿ ತಿಗಳು ಹಾಗೂ ಲಿಂಗಾಯತ ಜಾತಿಗೆ ಸೇರಿದ್ದಾರೆ. ಈ ಪ್ರಕರಣದಲ್ಲಿರುವ ಆರೋಪಿಗಳೂ ಈ ಎರಡು ಜಾತಿಗೆ ಸೇರಿದ್ದು ಅನುಮಾನಕ್ಕೆ ಆಸ್ಪದ ನೀಡಿದೆ. ಹಲವು ವರ್ಷಗಳಿಂದ ಸ್ಥಳೀಯವಾಗಿಯೇ ಈ ಅಧಿಕಾರಿಗಳು ಆಡಳಿತ ನಡೆಸುತ್ತಿದ್ದಾರೆ. ಕಳೆದ ಎರಡು ಮೂರು ವರ್ಷಗಳಲ್ಲಿ ಇಂಥದ್ದೇ ಕೊಲೆಗಳಾಗಿವೆ. ಆದರೆ ಅವುಗಳನ್ನು ಮುಚ್ಚಿ ಹಾಕಿರುವುದು ಕಂಡು ಬರುತ್ತಿದೆ. ಹೀಗಾಗಿ ಪೆದ್ದನಹಳ್ಳಿ ಪ್ರಕರಣದಲ್ಲಿ ನ್ಯಾಯ ಸಿಗುತ್ತದೆ ಎಂಬ ಯಾವುದೇ ಭರವಸೆ ಇಲ್ಲ” ಎಂದು ತಿಳಿಸಿದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ನಾವು ಗ್ರಾಮಕ್ಕೆ ಭೇಟಿ ನೀಡಿ ಆರೋಪಿಗಳು ಹಾಗೂ ಸಂತ್ರಸ್ತರೊಂದಿಗೆ ಮಾತನಾಡಿದ್ದೇವೆ. ಇದೊಂದು ಪೂರ್ವಯೋಜಿತ ಕೊಲೆಯಾಗಿದೆ. ಅಕಸ್ಮಾತ್‌ ಆಗಿ ನಡೆದಿರುವುದಲ್ಲ. ಕೊಲೆ ನಡೆದಿರುವುದನ್ನು ಊರಿನಲ್ಲಿರುವ ಪ್ರಮುಖರೆಲ್ಲ ನೋಡಿದ್ದಾರೆ. ನಾವು ಗ್ರಾಮಕ್ಕೆ ಭೇಟಿ ನೀಡಿದ ದಿನ ಮಾಹಿತಿಯನ್ನು ನೀಡಲು ಜನ ಹಿಂಜರೆದರು. ಭಯ ಬಿದ್ದಿದ್ದರು.  ಮೂರು ನಾಲ್ಕು ಗಂಟೆಗಳ ಚರ್ಚೆ ನಡೆಸಿದಾಗ ಹಲವಾರು ವಿಷಯಗಳು ಹೊರಬಂದವು” ಎಂದಿದ್ದಾರೆ ಓಬಳೇಶ್.

“ಕೊಲೆಯಾಗಿರುವ ಇಬ್ಬರು ಗಿರೀಶರು ಸ್ನೇಹಿತರಾಗಿದ್ದರು. ಕೂಲಿ ಕೆಲಸ ಮಾಡುತ್ತಿದ್ದರು. ಪಿಟ್‌ ಗುಂಡಿಯ ಕ್ಲೀನಿಂಗ್ ಕೆಲಸವನ್ನು ಪೆದ್ದನಹಳ್ಳಿಯ ಗಿರೀಶ್ ಮಾಡುತ್ತಿದ್ದರು. ಕೂಲಿ ಕೆಲಸಕ್ಕೂ ಹೋಗುತ್ತಿದ್ದರು. ಪೆದ್ದನಹಳ್ಳಿಯ ಗಿರೀಶ್ ಅವರು ಗ್ರಾಮದಲ್ಲಿ ಅನ್ಯಾಯವನ್ನು ಖಂಡಿಸುವ, ಗಲಾಟೆಗಳಾದರೆ ಹೋಗಿ ನಿಲ್ಲುವ, ನ್ಯಾಯಪಂಚಾಯಿತಿ ಮಾಡುವ ಕೆಲಸಗಳನ್ನು ಮಾಡುತ್ತಿದ್ದರು. ಈ ಉದ್ದೇಶವನ್ನು ಇಟ್ಟುಕೊಂಡು ಈತನನ್ನು ಹೊಡೆಯಬೇಕೆಂದು ಸಂಚು ರೂಪಿಸಲಾಗಿತ್ತು. ಈತನದ್ದು ಜಾಸ್ತಿಯಾಗಿದೆ ಎಂದು ಸವರ್ಣೀಯರು ನಿರ್ಧರಿಸಿದ್ದರು. ಯಾರೂ ಮಾತನಾಡದೆ ಇರುವಾಗ ಈತನ್ಯಾಕೆ ಇಷ್ಟೊಂದು ಮಾತನಾಡುತ್ತಾನೆ ಎಂದು ವೈಷಮ್ಯ ಹೊಂದಿದ್ದರು. ಮೂರ್ನಾಲ್ಕು ವರ್ಷಗಳಿಂದ ಈ ವೈಷಮ್ಯ ಬೆಳೆಸಿಕೊಂಡಿದ್ದರು” ಎಂದು ಆರೋಪಿಸಿದ್ದಾರೆ.

“ಪೆದ್ದನಹಳ್ಳಿಯಲ್ಲಿ ಆಗಾಗ್ಗೆ ಸಣ್ಣಪುಟ್ಟ ಕಳ್ಳತನಗಳು ನಡೆಯುತ್ತಿರುತ್ತವೆ. ಯಾವುದೇ ಠಾಣೆಯಲ್ಲಿಯೂ ಗಿರೀಶ್ ಕಳ್ಳತನ ಮಾಡಿದ್ದಾರೆಂಬ ಅಧಿಕೃತ ದಾಖಲೆಗಳಿಲ್ಲ. ಆದರೂ ಗಿರೀಶ್ ಕಳ್ಳತನ ಮಾಡಿದ್ದಾನೆ, ಮಾಡಿರಬಹುದು ಎಂಬ ಗುಮಾನಿಗಳನ್ನು ಹೊರಿಸಲಾಗಿದೆ. ಅದರಲ್ಲೂ ಈ ಗುಮಾನಿಗಳು ಕೊಲೆಯಾದ ಬಳಿಕ ಬಂದಿವೆ. ಕೊಲೆಗಿಂತ ಮುಂಚೆ ಗಿರೀಶ್ ಮೇಲೆ ಯಾರೂ ಕಂಪ್ಲೇಟ್ ಕೊಟ್ಟಿಲ್ಲ. ಮೊದಲೇ ಕಳ್ಳತನ ಮಾಡಿದ್ದರೆ ಎಫ್‌ಐಆರ್ ಆಗಿರಬೇಕಿತ್ತು, ದೂರು ನೀಡಿರಬೇಕಿತ್ತು” ಎಂದು ವಿವರಣೆ ನೀಡಿದ್ದಾರೆ.

ಇದನ್ನೂ ಓದಿರಿ: ತುಮಕೂರು: ದೇವರ ಮೆರವಣಿಗೆ ಕಳುಹಿಸಿ ಎಂದ ದಲಿತರ ಮೇಲೆ ದೌರ್ಜನ್ಯ; ಜೀವ ಬೆದರಿಕೆ

“ಪೆದ್ದನಹಳ್ಳಿಯ ದಿವಂಗತ ಗಿರೀಶ್ ಮತ್ತು ಮಂಚಲದೊರೆಯ ಗಿರೀಶ್ ಅವರ ಮೃತದೇಹವನ್ನು ಮತ್ತೊಮ್ಮೆ ಪೋಸ್ಟ್ ಮಾರ್ಟಮ್ ನಡೆಸಬೇಕು. ಪ್ರಮಾಣಿಕವಾಗಿ ಮೃತದೇಹಗಳನ್ನು ಮಹಜರು ಮಾಡಬೇಕು ಮತ್ತು ಈಗಿರುವ ಪೋಸ್ಟ್ ಮಾರ್ಟಮ್ ವರದಿಯ ಪ್ರತಿಯನ್ನು ಕುಟುಂಬಕ್ಕೆ ನೀಡಬೇಕು. ತನಿಖೆಗೆ ದಲಿತ ಅಧಿಕಾರಿಗಳನ್ನೇ ನೇಮಿಸಿ ಎಂದು ಹೇಳುತ್ತಿಲ್ಲ. ಜಾತಿ ಯಾವುದಾದರೂ ಪ್ರಾಮಾಣಿಕರು ತನಿಖೆ ನಡೆಸಬೇಕಿದೆ” ಎಂದು ಒತ್ತಾಯಿಸಿರುವ ಓಬಳೇಶ್‌, “ಘಟನೆಗೆ ಸಾಕ್ಷಿಯಾಗಿದ್ದ ಕೆಲವು ದಲಿತರನ್ನೂ ಬಂಧಿಸಿ ಪ್ರಕರಣದ ದಿಕ್ಕು ತಪ್ಪಿಸಲಾಗುತ್ತಿದೆ” ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಪೆದ್ದನಹಳ್ಳಿ ಗಿರೀಶ್ ಸಹೋದರ ಪಿ.ಎಂ.ಶ್ರೀಧರ್‌ ಮತ್ತು ಮೃತ ಮಂಚಲದೊರೆ ಗಿರೀಶ್ ಅವರ ಸಹೋದರಿ ಲೋಕಮ್ಮ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ. “ಮೃತ ದೇಹಗಳ ಮಹಜರು ಮಾಡುವ ಸಂದರ್ಭದಲ್ಲಿ ಕುಟುಂಬಸ್ಥರಿಂದ ಖಾಲಿ ಹಾಳೆಯ ಮೇಲೆ ಸಹಿ ಪಡೆದುಕೊಂಡಿದ್ದಾರೆ. ಮೃತ ದೇಹ ಶವಪರೀಕ್ಷೆ ನಡೆಯುವ ಸಂದರ್ಭದಲ್ಲಿ ಸಂಬಂಧಿಕರಿಗೆ ಸೂಕ್ತವಾಗಿ ಮಾಹಿತಿ ನೀಡಿಲ್ಲ. ಕನಿಷ್ಠ ಮೃತ ದೇಹವನ್ನು ಮತ್ತು ಮಾರಕಾಸ್ತ್ರಗಳಿಂದ ಹತ್ಯೆ ಮಾಡಿರುವ ಚಿತ್ರಣವನ್ನು ನೋಡಲು ಸಹ ಅವಕಾಶ ನೀಡಿಲ್ಲ. ಮಂಚಲದೊರೆ ಗಿರೀಶ ಅವರ ಅವಲಂಬಿತರಿಗೆ ಇದುವರೆಗೂ ಯಾವುದೇ ಮಾಹಿತಿಯಾಗಲಿ ಸಿಕ್ಕಿಲ್ಲ. ಕುಟುಂಬದಿಂದ ಹೇಳಿಕೆಯನ್ನೂ ಪಡೆದುಕೊಂಡಿಲ್ಲ. ಮಂಚಲದೊರೆ ಗಿರೀಶ ಅವರ ಅವಲಂಬಿತರಿಗೆ ಪಿಟೇಶನ್ ಪ್ರತಿ ನೀಡಿಲ್ಲ” ಎಂದು ಸಂತ್ರಸ್ತರು ತಿಳಿಸಿದ್ದಾರೆ. ಅಧಿಕಾರಿಗಳ ವರ್ತನೆಯಿಂದ ನೊಂದಿರುವ ಲೋಕಮ್ಮ ಸುದ್ದಿಗೋಷ್ಠಿಯಲ್ಲಿ ಕಣ್ಣೀರು ಹಾಕಿದ್ದಾರೆ.

ಶಿಫಾರಸ್ಸುಗಳನ್ನು ಜಿಲ್ಲಾಡಳಿತ ಮತ್ತು ಪೋಲಿಸ್ ಇಲಾಖೆ ಗಂಭೀರವಾಗಿ ಪರಿಗಣಿಸಬೇಕೆಂದು ವಕೀಲರಾದ ಬಸವಪ್ರಸಾದ್ ಕುನಾಲೆ ಮತ್ತು ಸ್ಲಂ ಜನಾಂದೋಲನದ ಎ.ನರಸಿಂಹಮೂರ್ತಿ ಹಾಗೂ ಡಾ.ಸಿದ್ಧಾರ್ಥ್ ಕೆ.ಜಿ ಆಗ್ರಹಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಸಂದರ್ಭದಲ್ಲಿ ದಸಂಸ ಮುಖಂಡರಾದ ಪಿ.ಎನ್ ರಾಮಯ್ಯ, ತುಮಕೂರು ಸ್ಲಂ ಸಮಿತಿಯ ಅರುಣ್, ತಿರುಮಲಯ್ಯ , ರಂಜನ್, ಆಟೋ ಶಿವರಾಜ್, ಸಂವಿಧಾನ ಸ್ನೇಹಿಬಳಗದ ತೇಜಸ್ ಕುಮಾರ್ ಹಾಜರಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...