Homeದಲಿತ್ ಫೈಲ್ಸ್ಪೆದ್ದನಹಳ್ಳಿ ಪ್ರಕರಣ: ಇಬ್ಬರು ದಲಿತ ಯುವಕರ ಹತ್ಯೆಯ ಸುತ್ತ ಎಷ್ಟೊಂದು ಸಂಕಟ!

ಪೆದ್ದನಹಳ್ಳಿ ಪ್ರಕರಣ: ಇಬ್ಬರು ದಲಿತ ಯುವಕರ ಹತ್ಯೆಯ ಸುತ್ತ ಎಷ್ಟೊಂದು ಸಂಕಟ!

- Advertisement -
- Advertisement -

ಪುಟ್ಟ ಹೆಂಚಿನ ಮನೆ. ಮಣ್ಣು ಇಟ್ಟಿಗೆಯ ಗೋಡೆ. ಹೊಸಲು ದಾಟಿದ ಕೂಡಲೇ ಚಿಕ್ಕದಾದ ಹಾಲ್‌ನಲ್ಲಿ ಟಿ.ವಿ. ಷೋಕೇಶ್‌. ಗೋಡೆಗಂಟಿದ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಭಾವಚಿತ್ರದ ಜೊತೆಗೆ ಹಿಂದೂ ದೇವರುಗಳ ಫೋಟೋಗಳು. ಟಿ.ವಿ.ಗೆ ಎದುರಾಗಿ ಇರುವ ಹಳೆಯ ಮಂಚ. ಆ ಮಂಚದತ್ತ ಕೈ ತೋರಿಸಿ ಆ ತಾಯಿ ಮಾತನಾಡತೊಡಗಿದರು. ತುಮಕೂರು ಜಿಲ್ಲೆ, ಗುಬ್ಬಿ ತಾಲ್ಲೂಕಿನ ಪೆದ್ದನಹಳ್ಳಿ ಗ್ರಾಮದಲ್ಲಿ ‘ಗಿರೀಶ್‌’ ಎಂಬ ಹೆಸರಿನ ಇಬ್ಬರು ದಲಿತ ಯುವಕರು ಭೀಕರವಾಗಿ ಹತ್ಯೆಯಾದ ಘಟನೆಯ ಸುತ್ತ ಹಲವು ನೋವಿನ ಸಂಗತಿಗಳು ಬಿಚ್ಚಿಕೊಳ್ಳತೊಡಗಿದವು.

“ಆ ಜಾಗದಲ್ಲಿ ನನ್ನ ಮಗ ಗಿರೀಶ ಮಲಗಿಕೊಳ್ಳುತ್ತಿದ್ದ. ಕೆಳಗಡೆ ನಾನು ಮಲಗುತ್ತಿದ್ದೆ. ಬೇರೊಂದು ಊರಿನಲ್ಲಿರುವ ಅವರ ಅಣ್ಣ ಕೆಟ್ಟು ಹೋಗಿದ್ದ ಟಿವಿ ರಿಪೇರಿ ಮಾಡಿಸಿ ಕಳಿಸಿದ್ದ. ಅಂದು ಗಿರೀಶ, ‘ಅವ್ವ ಟಿ.ವಿ. ಚೆನ್ನಾಗಿ ಬರುತ್ತ ನೋಡು’ ಅಂದ. ‘ಯಾಕೋ ಕತ್ತಕತ್ತಲಾಗಿ ಬರುತ್ತಲ್ಲೋ, ಏನ್ ರಿಪೇರಿ ಮಾಡಿಸಿದ್ದಾನೋ. ಅಣ್ಣನಿಗೆ ಹೇಳೋದನ್ವೇನೋ….’ ‌ಅಂದೆ. ಜೊತೆಯಲ್ಲಿ ಗಿರೀಶ ಅನ್ನೋನು ಬಂದಿದ್ದನಲ್ಲ, ಅವನಿಗೂ ಊಟ ಇಕ್ಕೊಟ್ಟೆ. ಇಬ್ಬರೂ ಊಟ ಮಾಡಿದ್ರು. ಅವನು (ಮತ್ತೊಬ್ಬ ಗಿರೀಶ) ಕುರ್ಚಿ ಮೇಲೇ ಕೂತುಕೊಂಡ. ಇವನು ಮಂಚದ ಮೇಲೆ ಮಲಗಿ ಟಿವಿ ನೋಡ್ತಾ ಇದ್ದ. ನಂದೀಶ (ಲಿಂಗಾಯತ ಜಾತಿಯವನು) ಮನೆಯ ಬಳಿ ಬಂದು ಗಿರೀಶ್‌ನನ್ನು ಕರೆದ. ಮಲಗಿಕೊಳ್ಳಪ್ಪ ಅಂದರೂ ಕೇಳದೆ ನಂದಿಯನ್ನು ಮಾತನಾಡಿಸಿಕೊಂಡು ಬರಲು ಹೋದ. ಟಿ.ವಿ. ಆಫ್‌ ಮಾಡಿಕೊಂಡು ಹತ್ತು ಹನ್ನೊಂದು ಗಂಟೆತನಕ ಕಾದೆ, ಬರಲಿಲ್ಲ. ಊರಲ್ಲಿ ಕೊಲ್ಲಾಪುರದಮ್ಮನ ಜಾತ್ರೆ ನಡೆಯುತ್ತಿದೆ (ತಿಗಳ ಜಾತಿಯವರು ಹಮ್ಮಿಕೊಂಡಿದ್ದ ಉತ್ಸವ). ಗಿರೀಶ ದೇವ್ರು ನೋಡುತ್ತಿದ್ದಾನೆ ಅಂತ ಮಲಗಿಕೊಂಡು ಬಿಟ್ಟೆ. ಬೆಳಿಗ್ಗೆ ಈ ಇಚಾರ ಗೊತ್ತಾಯ್ತು. ಯಾರು ಏನು ಮಾಡಿದ್ರು ಅಂತಾನೇ ಗೊತ್ತಿಲ್ಲ. ಡೈಲಿ ದೇವ್ರರಿಗೆ, ಅಪ್ಪನ ಫೋಟೋಕ್ಕೆ ಕೈ ಮುಗಿದು ಕೆಲಸಕ್ಕೆ ಹೋದ್ರೆ ಸಂಜೆಗೆ ಮನೆಗೆ ಬಂದು ಬಿಡೋನು. ಅವತ್ತು ಕೂಡ ಬಂದು ಮನೆಯಲ್ಲಿದ್ದ…” ಎನ್ನುತ್ತಾ ಗಿರೀಶ್ ತಾಯಿ ಗೌರಮ್ಮ ಗದ್ಗತಿತರಾದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಏಪ್ರಿಲ್‌ 21ರ ರಾತ್ರಿ ಪೆದ್ದನಹಳ್ಳಿಯ ಲೇಟ್‌ ಮೂಡ್ಲಗಿರಿಯಪ್ಪ, ಗೌರಮ್ಮ ದಂಪತಿಯ ಮಗ, ಮಾದಿಗ ಸಮುದಾಯದ ಪಿ.ಎಂ.ಗಿರೀಶ, ಗುಬ್ಬಿ ತಾಲ್ಲೂಕು ಹಾಗಲವಾಡಿ ಹೋಬಳಿಯ ಮಂಚಲದೊರೆ ಗ್ರಾಮದ ನಾಯಕ ಸಮುದಾಯದ ಗಿರೀಶ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕೊಲೆಯ ಕಾರಣ ಇನ್ನೂ ಹೊರಬಿದ್ದಿಲ್ಲ. ತಿಗಳ ಸಮುದಾಯದ ಕೆಲವರನ್ನು ಬಂಧಿಸಿ ಗ್ರಾಮದಲ್ಲಿ ಮಹಜರನ್ನೂ ನಡೆಸಿದ್ದಾರೆ. ತಲೆಮರೆಸಿಕೊಂಡಿರುವ ಕೆಲವರಿಗೆ ಹುಡುಕಾಟ ನಡೆಸಿದ್ದಾರೆ. ಗ್ರಾಮದಲ್ಲಿ ಬಿಗುವಿನ ವಾತಾವರಣ ಆವರಿಸಿದೆ. ಶಿರಾ- ನೆಲ್ಲಿಗೆರೆ ರಸ್ತೆಯಲ್ಲಿರುವ ಈ ಗ್ರಾಮದಲ್ಲಿ ಸವರ್ಣೀಯರು ಪ್ರಕರಣದ ಕುರಿತು ಮಾತನಾಡಲು ಸಿದ್ದರಿಲ್ಲ. ಸದಾ ಗಿಜಿಗಿಜಿ ಎನ್ನುತ್ತಿದ್ದ ಬಸ್‌ ಸ್ಟ್ಯಾಂಡ್‌ನಲ್ಲಿ ಈಗ ಯಾರೂ ಸೇರುತ್ತಿಲ್ಲ. ಇತ್ತ ಸಂತ್ರಸ್ತ ಕುಟುಂಬಕ್ಕೆ ಗ್ರಾಮದಲ್ಲಿ ನೆರವಿನ ಹಸ್ತವೂ ದೊರಕುತ್ತಿಲ್ಲ. ಗ್ರಾಮಕ್ಕೆ ಭೇಟಿ ನೀಡಿದ ‘ನಾನುಗೌರಿ.ಕಾಂ’ ತಂಡದ ಮುಂದೆ ಹಲವು ಸಂಗತಿಗಳು ತೆರೆದುಕೊಂಡವು.

ಪೆದ್ದನಹಳ್ಳಿ ಗಿರೀಶ್‌ (ಕೊಲೆಯಾದ ಯುವಕ)

ಗಿರೀಶ್‌ ಮೇಲೆ ಕಳ್ಳತನದ ಆರೋಪ ಹೊರಿಸಿರುವ ಕುರಿತು ಮಾತನಾಡಿದ ತಾಯಿ, “ನನ್ನ ಮಗ ಪಿಟ್‌ (ಮಲದ ಗುಂಡಿ) ಕ್ಲೀನ್ ಮಾಡುತ್ತಿದ್ದ. ಯಾವುದೇ ಕೆಲಸ ಇಲ್ಲದಿದ್ದಾಗ ಮಲದ ಗುಂಡಿ ಶುಚಿಗೊಳಿಸುವ ಕೆಲಸಕ್ಕೆ ಹೋಗುತ್ತಿದ್ದ. ಈ ಕೆಲಸ ಮಾಡೋರು, ಕಳ್ಳತನ ಮಾಡುತ್ತಾರಾ ಸ್ವಾಮಿ?” ಎಂದು ಪ್ರಶ್ನಿಸಿದರು.

ಇದನ್ನೂ ಓದಿರಿ: ದಲಿತ ಇತಿಹಾಸ ತಿಂಗಳು; ಅಂಬೇಡ್ಕರ್ ಮತ್ತು ದಲಿತರ ಬಗ್ಗೆ ಮಿತಿಮೀರಿದ ಅಸಹನೆ; ಸಂವಿಧಾನವೇ ಉತ್ತರ

“ಎಂದೂ ನೋಡದಿದ್ದ ಮತ್ತೊಬ್ಬ ಹುಡುಗ ನಮ್ಮನೆಗೆ ಅಂದು ಬಂದಿದ್ದ. ಅವನ ಮುಖವನ್ನು ನಾನೆಂದೂ ನೋಡಿರಲಿಲ್ಲ. ನಮ್ಮನೆಯ ಅನ್ನದ ಋಣ ಇತ್ತೇನೋ, ನನ್ನ ಕೈಯಲ್ಲಿ ತುತ್ತು ತಿಂದು ಹೋದ ಕಣ್ಣಪ್ಪ. ನಾನು ಊರಲೆಲ್ಲ ತಿರ್‍ಕೊಂಡು ಬಂದು, ರೊಟ್ಟಿಯನ್ನು ಮಡಿಲಲ್ಲಿ ಕಟ್ಟಿಕೊಂಡು ಬಂದು ಮಕ್ಕಳನ್ನು ಸಾಕಿದೆ. ಗ್ರಾಮದಲ್ಲಿ ಅಕ್ಕಿ, ಅಸೀಟು, ಕಾಯಿ ಇಸ್ಕೊಂಡು ಬಂದು ಸಾಕಿದ್ದೀನಿ. ನನ್ನ ಮಗನನ್ನು ನನ್ನ ಗ್ರಾಮದಲ್ಲಿ ಕೊಲೆ ಮಾಡ್ತಾರೆ, ನನ್ನ ಮಕ್ಕಳಿಗೆ ನರಕ ಕೊಡ್ತಾರೆ ಅಂತ ನಾನು ಕಂಡಿರಲಿಲ್ಲ” ಎಂದು ದುಃಖಿಸಿದರು.

“ನನ್ನ ಮಗ ತಪ್ಪು ಮಾಡಿದ್ದರೆ ಕೈಯನ್ನೋ ಕಾಲನ್ನೋ ಕಟ್ ಮಾಡಿಕೊಂಡು ಬಂದು ನನ್ನ ಮನೆ ಬಾಗಿಲಿಗೆ ಎಸೆದು ಹೋಗಿದ್ರೆ ನಾನು ಇರೋತನಕ ತಿರ್‍ಕೊಂಡು ಬಂದು ಅವನನ್ನು ಸಾಕುತ್ತಾ ಇರಲಿಲ್ಲವಾ? ಅಷ್ಟುದ್ದ ಮಗನನ್ನು ನೀವು ಕಳೆದುಕೊಂಡಿದ್ದರೆ ಸುಮ್ಮನೆ ಇರುತ್ತಿದ್ದಿರಾ?” ಎಂದು ಸಂಕಟ ತೋಡಿಕೊಂಡರು ಗೌರಮ್ಮ.

“ನಂದಿ ಬಂದು ಕರೆದಾಗ ಹೋಗಿ ಬರ್ತೀನಿ ಅಂತ ಗಿರೀಶ ಹೊರಗೆ ಹೋದ. ಜೊತೆಯಲ್ಲಿದ್ದ ಇನ್ನೊಬ್ಬನೂ ನಾನು ಬರ್ತೀನಿ ಅಂತ ಹೋದ. ನಾನು ಮತ್ತು ನನ್ನ ಮಗ ಗಿರೀಶ ಇಬ್ಬರೇ ಊರಿನಲ್ಲಿ ವಾಸವಿದ್ದೆವು. ಹಿರಿಯ ಮಗ ಶ್ರೀಧರ ಅಜ್ಜಿ ಮನೆಯಲ್ಲಿದ್ದ. ಇನ್ನು ಮೂರು ಜನ ಹೆಣ್ಣು ಮಕ್ಕಳು ಗಂಡನ ಮನೆಯಲ್ಲಿದ್ದಾರೆ” ಎಂದು ಇಳಿವಯಸ್ಸಿನ ಗೌರಮ್ಮ ವಿವರಿಸಿದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಗಿರೀಶ್ ಪಿಟ್‌ ಕ್ಲೀನಿಂಗ್‌ ಕೆಲಸ ಮಾಡುತ್ತಿದ್ದ ‘ಭಾರತ್‌ ಸೆಫ್ಟಿಕ್‌ ಟ್ಯಾಂಕ್‌’ ಸಂಪರ್ಕ ಸಂಖ್ಯೆಯನ್ನು ಕುಟುಂಬದವರು ನೀಡಿದರು. ಕರೆ ಮಾಡಿದಾಗ ಮಾತನಾಡಿದ ಬಾಬು ಎಂಬವರು, ಗಿರೀಶ್ ಕುರಿತು ಒಳ್ಳೆಯ ಮಾತುಗಳನ್ನಾಡಿದರು. “ಎಂದಿಗೂ ಯಾರೊಂದಿಗೂ ಜಗಳ ಮಾಡಿಕೊಂಡವನಲ್ಲ. ಕೆಲಸ ಇದ್ದಾಗ ಕರೆ ಮಾಡಿದರೆ ತಕ್ಷಣ ಬರುತ್ತಿದ್ದ. ತನ್ನ ಕೆಲಸ ಮುಗಿಸಿ ಹೋಗುತ್ತಿದ್ದ” ಎಂದರು.

ತನ್ನ ಮಗ ಗಿರೀಶ್‌ ಕೆಲಸ ಮಾಡುತ್ತಿದ್ದ ಪಿಟ್‌ ಕ್ಲೀನಿಂಗ್‌ ಸಂಸ್ಥೆಯ ವಿಸಿಟಿಂಗ್‌ ಕಾರ್ಡ್ ತೋರಿಸುತ್ತಿರುವ ಗೌರಮ್ಮ

ಸ್ಥಳ ವೀಕ್ಷಣೆ: ಒಂದು ಕಿ.ಮೀ. ದೂರದವರೆಗೂ ಗುರುತು ಪತ್ತೆ

ಮನೆಯಿಂದ ಸುಮಾರು ಇನ್ನೂರು ಮೀಟರ್‌ ದೂರದಲ್ಲಿರುವ ಹೊಂಡ ಒಂದರಲ್ಲಿ ಗಿರೀಶ್ ಶವ ದೊರೆತ್ತಿತ್ತು. ಗ್ರಾಮಕ್ಕೆ ಭೇಟಿ ನೀಡಿದ ಶ್ವಾನ ದಳವು ತಿಗಳರ ಕೆಲವು ಮನೆಗಳ ಬಳಿ ಹೋಗಿತ್ತು. ಆದರೆ ಅಷ್ಟರಲ್ಲಾಗಲೇ ಆ ಮನೆಗಳವರು ಬೀಗ ಹಾಕಿಕೊಂಡು ಎಲ್ಲಿಗೋ ಹೋಗಿದ್ದರು ಎನ್ನುತ್ತಾರೆ ಗಿರೀಶ್ ಸಹೋದರ ಪಿ.ಎಂ.ಶ್ರೀಧರ್‌.

ಪೆದ್ದನಹಳ್ಳಿಯ ಗಿರೀಶ್‌ ಶವವಿದ್ದ ಹೊಂಡದಿಂದ ಸುಮಾರು ನೂರ ಐವತ್ತು ಅಡಿ ದೂರದಲ್ಲಿ, ಕಾಲುವೆಯ ದಂಡೆಯಲ್ಲಿನ ದಾರಿಯಲ್ಲಿ ಮಂಚಲದೊರೆ ಗಿರೀಶ್‌ ಶವ ಪತ್ತೆಯಾಗಿತ್ತು. ಅಲ್ಲಿ ಇನ್ನೂ ಆರದ ರಕ್ತದ ಕಲೆಗಳು ಹಾಗೆಯೇ ಇದ್ದವು. ಸ್ಥಳದಲ್ಲಿದ್ದ ಯುವಕರು ಆ ಗುರುತುಗಳನ್ನು ತೋರಿಸಿದರು. ಕಾಲುವೆ ದಂಡೆಯ ಸುಮಾರು ಒಂದು ಕಿಮೀ ದೂರದವರೆಗೂ ಶ್ವಾನ ದಳ ಹೋಗಿತ್ತು. ದಾರಿಯುದ್ಧಕ್ಕೂ ಅಲ್ಲಲ್ಲಿ ಘಟನೆಯ ಗುರುತುಗಳನ್ನು ಕಾಣಬಹುದಿತ್ತು.

ಪೆದ್ದನಹಳ್ಳಿ ಗಿರೀಶ್ ಅವರ ಅಣ್ಣ ಪಿ.ಎಂ.ಶ್ರೀಧರ್‌

“ನೋಡಿ ಅಲ್ಲೊಂದು ಬಿದಿರಿನ ಗಳ ಬಿದ್ದಿದೆ” ಎಂದು ತೋರಿಸಿದಾಗ ಅದರ ಮೇಲೆ ರಕ್ತದ ಕಲೆಗಳು ಸಿಕ್ಕವು. (ಅದೇ ಸಂದರ್ಭದಲ್ಲಿ ಇಬ್ಬರು ಆರೋಪಿಗಳನ್ನು ಕರೆತಂದ ಪೊಲೀಸರು ಆ ಗಳವನ್ನು ತೆಗೆದುಕೊಂಡು ಹೋದರು).

ಬಿದಿರಿನ ಗಳದ ಮೇಲೆ ರಕ್ತದ ಕಲೆಗಳು…

ಶವಗಳು ಪತ್ತೆಯಾಗಿದ್ದ ಸ್ಥಳದಿಂದ ಸುಮಾರು ಒಂದು ಕಿಮೀ ದೂರದವರೆಗೂ ನಡೆದು ಹೋದೆವು. ಪೊಲೀಸರು ಮಹಜರು ಮಾಡಿದ್ದ ಸ್ಥಳದಲ್ಲಿ ಸೂಡಾಡಿದ ತೆಂಗಿನ ಗರಿಯ ಗುರುತುಗಳು ಇನ್ನೂ ಇದ್ದವು. “ಜೀವಂತವಾಗಿಯೇ ಇಬ್ಬರಿಗೂ ಬೆಂಕಿ ಹಚ್ಚಿರುವ ಗರಿಗಳಿವು. ಭೀಕರವಾಗಿ ಥಳಿಸಿದ ಬಳಿಕ ಮುರಿದುಬಿದ್ದ ಮರದ ಪೀಸುಗಳಿವು” ಎಂದರು ಶ್ರೀಧರ್‌.

“ಯಾರು ಕೊಲೆ ಮಾಡಿದ್ದಾರೆ, ಯಾವ ಕಾರಣಕ್ಕೆ ಕೊಲೆ ಮಾಡಿದ್ದಾರೆಂದು ಗೊತ್ತಿಲ್ಲ. ಪೋಸ್ಟ್‌ಮಾಟಂ ಮಾಡಿದ ಮೇಲೆ ಬಾಡಿ ನೋಡಿದೆ. ಬೆನ್ನ ಮೇಲೆ ತೆಂಗಿನ ಗರಿ ಹಾಕಿ ಸುಟ್ಟುಬಿಟ್ಟಿದ್ದಾರೆ. ಮೈಮೇಲೆ ಒಂದು ಇಂಚೂ ಜಾಗವಿಲ್ಲದಂತೆ ಹೊಡೆದಿದ್ದಾರೆ. ಕಣ್ಣು ಮೂಗು, ಮುಖ ಮೂತಿ ಏನು ನೋಡಿಲ್ಲ. ಬರ್ಬರವಾಗಿ ಸಾಯಿಸಿ ಕಟ್ಟೆಯಲ್ಲಿ ಎಸೆದಿದ್ದಾರೆ. ನನ್ನ ತಮ್ಮನ ಸ್ನೇಹಿತ ಗಿರೀಶ್‌ನನ್ನೂ ಹೀಗೆಯೇ ಕೊಂದಿದ್ದಾರೆ. ನನ್ನ ತಮ್ಮ ಕೂಲಿಗೀಲಿ ಮಾಡಿಕೊಂಡು ಆಟೋ ಗಿಟೋ ಓಡಿಸಿಕೊಂಡು ಇದ್ದ. ಯಾರ ಸಹವಾಸಕ್ಕೂ ಹೋಗುತ್ತಿರಲಿಲ್ಲ. ನನ್ನ ತಮ್ಮನ ಸಾವಿಗೆ ನ್ಯಾಯ ದೊರಕಬೇಕಷ್ಟೇ. ನನ್ನ ತಂದೆ, ತಮ್ಮ, ನಾನು ಊರಿನಲ್ಲಿ ಒಳ್ಳೆಯ ಹೆಸರು ಸಂಪಾದನೆ ಮಾಡಿದ್ದೇವೆ. ಯಾವುದೇ ಕೆಟ್ಟ ಹೆಸರು ಇಲ್ಲ. ಏನಕ್ಕೆ ಕೊಲೆಯಾದ ಅಂತ ಗೊತ್ತಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.

“ನನ್ನ ತಮ್ಮ ಹಾಗೂ ಮಂಚಲದೊರೆಯ ಗಿರೀಶ್ ಕೆಲಸಕ್ಕೆ ಹೋಗುತ್ತಿದ್ದರಂತೆ. ಇಬ್ಬರೂ ಮನೆಗೆ ಬಂದಿದ್ದಾರೆ. ಇಟ್ಟಿಗೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು. ನಾನು ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದೇನೆ. ಮೊದಲು ಅಕ್ಟ್ರೆಸ್ಟ್ರಾ ನಡೆಸುತ್ತಿದ್ದೆ. ಕೊರೊನಾ ಬಂದ ಮೇಲೆ ಅದೂ ನಿಂತು ಹೋಗಿದೆ. ಕೊಲೆಯಾದ ದಿನ ನಾನು ಅದಲಗೆರೆಯಲ್ಲಿರುವ ನನ್ನ ಅಜ್ಜಿಯ ಮನೆಯಲ್ಲಿದ್ದೆ. ನಮ್ಮ ತಾಯಿ ತಮ್ಮ ಮಾತ್ರ ಊರಿನಲ್ಲಿ ವಾಸವಿದ್ದರು. ಈ ಒಂದೂವರೆ ವರ್ಷದಲ್ಲಿ ನಮ್ಮ ಮನೆಯಲ್ಲಿ ಮೂರು ಹೆಣ ಬಿದ್ದಿವೆ. ನಮ್ಮ ತಂದೆ ಸತ್ತು ಒಂದು ವರ್ಷದ ಮೇಲೆ ಐದು ತಿಂಗಳಾಯಿತು. ನಮ್ಮ ಅಜ್ಜಿ ಸತ್ತು ಐದು ತಿಂಗಳಾಯಿತು. ಈಗ ನನ್ನ ತಮ್ಮ ಸತ್ತಿದ್ದಾನೆ. ನಾನೀಗ ಏಕಾಂಗಿ ಆಗಿದ್ದೇನೆ. ಯಾರೂ ಮಾತನಾಡಿಸುತ್ತಿಲ್ಲ. ಎಲ್ಲ ಹೆದರಿಕೊಂಡಿದ್ದಾರೆ. ಇಡೀ ಊರನ್ನೇ ಎದುರು ಹಾಕಿಕೊಂಡೆವಾ ಅಂತ ನಮಗೂ ಭಯ ಆಗುತ್ತಿದೆ. ನಾನು ಒಬ್ಬೊಂಟಿಗ. ನನ್ನ ಮಾವ, ಅಣ್ಣತಮ್ಮಂದಿರನ್ನು ಬಿಟ್ಟರೆ ನನ್ನೊಂದಿಗೆ ಯಾರೂ ಇಲ್ಲ. ಜೀವನ ಮಾಡೋಕೆ ಭಯ ಆಗುತ್ತಿದೆ” ಎಂದು ನೋವು ತೋಡಿಕೊಂಡರು.

ತಮ್ಮನ ಶವ ಪತ್ತೆಯಾದ ಸ್ಥಳವನ್ನು ತೋರಿಸುತ್ತಿರುವ ಶ್ರೀಧರ್‌

ಇದನ್ನೂ ಓದಿರಿ: ಪೆದ್ದನಹಳ್ಳಿಯಲ್ಲಿ ದಲಿತರ ಕೊಲೆ: ಲಿಂಗಾಯತ ಜಾತಿಯ ಆರೋಪಿ ಸೇರಿ ಕೆಲವರ ಬಂಧನ

“ಊರಿನಲ್ಲಿ ಮಾದಿಗ ಜನಾಂಗದವರ 30 ಮನೆಗಳಿವೆ. ಲಿಂಗಾಯತ ಸಮುದಾಯದವರ 90 ಮನೆಗಳಿವೆ. ತಿಗಳರ ಮನೆಗಳು ಸುಮಾರು 200ಕ್ಕೂ ಹೆಚ್ಚಿವೆ. ಹಂದಿ ಜೋಗರ ಮನೆಗಳು ಹತ್ತು ಇವೆ. ಆಚಾರಿ ಸಮುದಾಯದ ಮೂರು ಮನೆಗಳಿವೆ. ಪ್ರಕರಣದ ಬಳಿಕ ದಲಿತರನ್ನೂ ಪೊಲೀಸರು ಎಳೆದುಕೊಂಡು ಹೋಗಿದ್ದಾರೆ. ಲಿಂಗಾಯತ, ತಿಗಳ ಸಮುದಾಯದವರನ್ನೂ ಕರೆದುಕೊಂಡು ಹೋಗಿದ್ದಾರೆ” ಎಂದು ಮಾಹಿತಿ ನೀಡಿದರು.

ಶ್ವಾನ ದಳದವರು ಮಹಜರು ನಡೆಸಿದಾಗ ತಿಗಳ ಸಮುದಾಯಕ್ಕೆ ಸೇರಿದ್ದ ಕೆಲವರ ಮನೆಗಳತ್ತ ನಾಯಿಗಳು ಓಡಿ ಹೋಗಿದ್ದರ ಕುರಿತು ಮಾತನಾಡಿದ ಶ್ರೀಧರ್‌, “ಅದನ್ನು ಮೇಕೆರಂಗಯ್ಯನವರ ಮನೆ ಪೋಕಿ (ಓಣಿ) ಅಂತಾರೆ. ಅಲ್ಲಿ ಕುಂಬಳಯ್ಯ ಮತ್ತು ಹುಚ್ಚಯ್ಯ ಅವರ ಮನೆಯ ಬಳಿ ನಾಯಿಗಳು ಹೋಗಿದ್ದವು. ಆದರೆ ಆ ಮನೆಗಳಿಗೆ ಬೀಗ ಹಾಕಲಾಗಿತ್ತು” ಎಂದು ತಿಳಿಸಿದರು.

ಮಂಚಲದೊರೆ ಗಿರೀಶ್‌ ಕುಟುಂಬದ ಕಥೆ ಇನ್ನೂ ಶೋಚನೀಯ

ನಾಯಕ ಸಮುದಾಯದ ಮಂಚಲದೊರೆ ಗಿರೀಶ್‌ ಕುಟುಂಬದ ಸ್ಥಿತಿ ಮತ್ತಷ್ಟೂ ಶೋಚನೀಯವಾಗಿದೆ. ಸತತ ಸಾವುಗಳಿಂದ ಗಿರೀಶ್‌ ಕುಟುಂಬ ಕಂಗಾಲಾಗಿದೆ.

‘ನಾನುಗೌರಿ.ಕಾಂ’ ಜೊತೆ ದೂರವಾಣಿ ಮೂಲಕ ಮಾತನಾಡಿದ ಗಿರೀಶ್‌ ಸಹೋದರಿ ಲೋಕಮ್ಮ (ಈಶ್ವರಿ), “ನನ್ನ ತಮ್ಮ ಆ ಊರಿಗೆ ಏಕೆ ಹೋದ ಅಂತ ಯಾರಿಗೂ ಗೊತ್ತಿಲ್ಲವಂತೆ. ಈ ಪಾಪದವನು ಇಲ್ಲಿಯೇ ಬಂದು ಸಾಯಬೇಕಿತ್ತಾ ಎಂದು ಊರಿನ ಜನ ಮಾತನಾಡಿಕೊಳ್ಳುವಂತಾಗಿದೆ” ಎಂದು ಅತ್ತರು.

ಮಂಚಲದೊರೆಯ ಗಿರೀಶ್‌‌ (ಕೊಲೆಯಾದ ಮತ್ತೊಬ್ಬ ವ್ಯಕ್ತಿ)

“ನಮ್ಮ ತಂದೆ ಕೆಂಪಯ್ಯ, ತಾಯಿ ಚಿಕ್ಕತಾಯಮ್ಮ. ತಂದೆ 2005ರಲ್ಲಿ ತೀರಿಕೊಂಡರು. ನಾವು ಮೂವರು ಮಕ್ಕಳು. ಇಬ್ಬರು ಅಕ್ಕಂದಿರು. ಈತನೇ ಕಿರಿಯವನು. ನಾವು ಗಂಡನ ಮನೆಯಲ್ಲಿ ಬೆಂಗಳೂರಿನಲ್ಲಿ ವಾಸವಿದ್ದೇವೆ. ಅಕ್ಕ- ತಂಗಿಯರ ಇಬ್ಬರು ಗಂಡಂದಿರು ತೀರಿಕೊಂಡಿದ್ದಾರೆ. ನನ್ನ ಗಂಡ 2010ರಲ್ಲಿ ಆತ್ಮಹತ್ಯೆ ಮಾಡಿಕೊಂಡ. ತಾಯಿ-ಮಗ ಜಗಳದಿಂದಾಗಿ ಈ ದುರ್ಘಟನೆ ನಡೆಯಿತು. ಅಪಘಾತದಲ್ಲಿ ನೀರಿನ ಟ್ಯಾಂಕರ್‌ ಹರಿದು ನನ್ನ ಸಹೋದರಿಯ ಗಂಡ ತೀರಿಕೊಂಡ. ಈಗ ನಮ್ಮ ಕುಟುಂಬಕ್ಕೆ ಗಂಡು ದಿಕ್ಕಿಲ್ಲ” ಎಂದು ಕಣ್ಣೀರಾದರು.

“ನನ್ನ ತಮ್ಮನ ಬಳಿ ಫೋನ್‌ ಇರಲಿಲ್ಲ. ಇಟ್ಟಿಗೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದಾಗ ಓನರ್‌ ನಂಬರ್‌ನಿಂದ ನಮಗೆ ಕರೆ ಮಾಡುತ್ತಿದ್ದ. ನಾಲ್ಕು ತಿಂಗಳ ಹಿಂದೆ ಫೋನ್‌ ಮಾಡಿದ್ದನಷ್ಟೇ. ನಮ್ಮ ತಾಯಿ ಮಂಚಲದೊರೆಯಲ್ಲೇ ಕುಟುಂಬದೊಂದಿಗೆ ಇದ್ದರು. ಅವರಿಗೂ ಆರೋಗ್ಯ ಸರಿ ಇಲ್ಲ. ಆಗಾಗ್ಗೆ ಹೆಣ್ಣು ಮಕ್ಕಳ ಮನೆಗೆ ಬಂದು ಹೋಗುತ್ತಾರೆ” ಎಂದರು.

“ನನ್ನ ತಮ್ಮನ ದೇಹ ನೋಡಿ ಆತಂಕವಾಯಿತು. ಅಷ್ಟೊಂದು ಕ್ರೂರವಾಗಿ ಕೊಲ್ಲಲಾಗಿತ್ತು. ಅವನು ತಪ್ಪು ಮಾಡಿದ್ದರೆ ಕಾನೂನಿನಲ್ಲಿ ಶಿಕ್ಷೆ ಇತ್ತು. ಈ ರೀತಿ ನೋವು ಯಾರಿಗೆ ನೀಡಬಾರದು” ಎಂದು ಪ್ರತಿಕ್ರಿಯಿಸಿದರು.

ಮಂಚಲದೊರೆಯ ಗಿರೀಶ್ ಅವರ ತಾಯಿ ಚಿಕ್ಕತಾಯಮ್ಮ

ಇದನ್ನೂ ಓದಿರಿ: ಬೆಳ್ತಂಗಡಿ: ಆದಿವಾಸಿ ಮಹಿಳೆಯ ಮೇಲೆ ಹಲ್ಲೆ, ಅರೆಬೆತ್ತಲೆ ಮಾಡಿ ಚಿತ್ರೀಕರಣ; ದುಷ್ಕರ್ಮಿಗಳ ಕೃತ್ಯಕ್ಕೆ ಬಿಜೆಪಿ ಮುಖಂಡನೇ ನೇತೃತ್ವ?

25 ಲಕ್ಷ ಪರಿಹಾರ ನೀಡಲಿ: ವೈ.ಎಚ್‌.ಹುಚ್ಚಯ್ಯ

ಪೆದ್ದನಹಳ್ಳಿಗೆ ಭೇಟಿ ನೀಡಿ ಸಂತ್ರಸ್ತ ಕುಟುಂಬಕ್ಕೆ ಸಂತ್ವಾನ ತುಂಬಿದ ಜಿಪಂ ಮಾಜಿ ಸದಸ್ಯ ವೈ.ಎಚ್.ಹುಚ್ಚಯ್ಯ ಮಾತನಾಡಿ, “‘ತಾಲ್ಲೂಕಿನ ಜನಪ್ರತಿನಿಧಿಗಳು ಸ್ಥಳಕ್ಕೆ ಬಂದಿಲ್ಲ. ಕ್ಷೇತ್ರದ ಬಿಜೆಪಿ ಶಾಸಕ ಮಸಾಲೆ ಜಯರಾಂ ಗ್ರಾಮಕ್ಕೆ ಭೇಟಿ ಮಾಡಿ ಸಂತ್ರಸ್ತರಿಗೆ ಸಂತ್ವಾನ ಹೇಳಿಲ್ಲ. ಇದು ಜಾತಿ ಆಧಾರಿತ ಕೊಲೆ. ಬೇರೆ ಜಾತಿಯವರಾಗಿದ್ದರೆ ಇಷ್ಟೊಂದು ನಿರ್ಧಯವಾಗಿ ಕೊಲೆ ಮಾಡುತ್ತಿಲಿಲ್ಲ. ಗಲಾಟೆ ಆಗಿರುತ್ತಿತ್ತೇನೋ ಅಷ್ಟೇ. ಈ ಕೊಲೆಯನ್ನು ನೋಡಿದರೆ- ಈ ದಲಿತರು ಏನು ಮಾಡಿಯಾರು? ಕಡಿದು ಬಿಸಾಕೋಣ ಎಂದು ಕೃತ್ಯ ಎಸಗಿದಂತಿದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕೆಲಸ ಮಾಡಬೇಕು. ಸಂತ್ರಸ್ತ ಕುಟುಂಬಗಳಿಗೆ 25 ಲಕ್ಷ ರೂ. ಪರಿಹಾರವನ್ನು ಸರ್ಕಾರ ನೀಡಬೇಕು. ಗಿರೀಶ್ ಸಹೋದರರಾದ ಶ್ರೀಧರ್‌ ಅವರಿಗೆ ಸರ್ಕಾರಿ ಕೆಲಸವನ್ನು ಕೊಡಬೇಕು. ಊರಿನಲ್ಲಿ ಬಿಗುವಿನ ವಾತಾವರಣ ಇದೆ. ಕಾನೂನಿನ ರಕ್ಷಣೆಯನ್ನು ಕುಟುಂಬಕ್ಕೆ ಒದಗಿಸಬೇಕು” ಎಂದು ಆಗ್ರಹಿಸಿದರು.

“ಸ್ವಾತಂತ್ರ್ಯ ಬಂದು 75 ವರ್ಷಗಳಾಗಿವೆ. ಸಂವಿಧಾನ, ಕಾನೂನು ಇದೆ. ಆದರೂ ಕುರಿ, ಕೋಳಿಯ ರೀತಿ ಮನುಷ್ಯರನ್ನು ಕೊಲ್ಲುತ್ತಿದ್ದಾರೆ ಎಂದರೆ ಇಲ್ಲಿ ಪ್ರಜಾಪ್ರಭುತ್ವ ಇದೆಯಾ? ಬಿಹಾರ, ಉತ್ತರ ಪ್ರದೇಶದಲ್ಲೂ ನಡೆಯದಂತಹ ಕಗ್ಗೊಲೆಗಳು ಇಲ್ಲಿ ನಡೆದಿದೆ” ಎಂದು ವಿವಾದಿಸಿದರು.

ಜಿಪಂ ಮಾಜಿ ಸದಸ್ಯ ವೈ.ಎಚ್.ಹುಚ್ಚಯ್ಯ

ಸುಳ್ಳಿನ ಪಟ್ಟ ಕಟ್ಟುತ್ತಿದ್ದಾರೆ: ಗಿರಿಯಪ್ಪ

ದಸಂಸ (ಅಂಬೇಡ್ಕರ್‌ ವಾದ) ಜಿಲ್ಲಾ ಸಂಘಟನಾ ಸಂಚಾಲಕರಾದ ಗಿರಿಯಪ್ಪ ಮಾತನಾಡಿ, “ಪೊಲೀಸರ ಜೊತೆ ಮಾತನಾಡಿದ್ದೇವೆ. ಇದು ದಲಿತರ ಕಗ್ಗೊಲೆ. ಮೇಲ್ಜಾತಿಯ ಗೂಂಡಾಗಳ ಕ್ರೌರ್ಯವಿದು. ಸತ್ತ ಮೇಲೆ ಗಿರೀಶ್ ಮೇಲೆ ಸುಳ್ಳಿನ ಪಟ್ಟ ಕಟ್ಟುತ್ತಿದ್ದಾರೆ. ಕಳ್ಳತನ ಮಾಡುತ್ತಿದ್ದ ಎಂದು ಮಾನಹಾನಿ ಮಾಡುತ್ತಿದ್ದಾರೆ. ಪ್ರಕರಣವನ್ನು ತಿರುಚಲು ಮಾಧ್ಯಮಗಳು ಸುಳ್ಳು ಹಬ್ಬಿಸಿವೆ. ಎಂ.ಪಿ., ಎಂ.ಎಲ್‌.ಎ., ಡಿ.ಸಿ ಸ್ಥಳಕ್ಕೆ ಬರಬೇಕಿತ್ತು. ಯಾರೂ ಬಂದಿಲ್ಲ. ಕಳ್ಳತನ ಮಾಡಿದ್ದಕ್ಕೆ ಕೊಲೆ ಮಾಡಿದ್ದಾರೆ ಅಂತ ಹೇಳುತ್ತಿದ್ದಾರಲ್ಲ; ಗಣಿದಣಿಗಳು ಈ ದೇಶದ ಸಂಪತ್ತನ್ನು ಲೂಟಿ ಮಾಡಿ ತಿಂದು ತೇಗಿದ್ದಾರೆ. ಅವರನ್ನು ಯಾರೂ ಕೊಂದೇ ಇಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ದಸಂಸ (ಅಂಬೇಡ್ಕರ್‌ ವಾದ) ಜಿಲ್ಲಾ ಸಂಘಟನಾ ಸಂಚಾಲಕರಾದ ಗಿರಿಯಪ್ಪ

ಪೊಲೀಸರ ಪ್ರತಿಕ್ರಿಯೆ: ಪ್ರಕರಣವನ್ನು ಬಹಳ ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಪ್ರಾಮಾಣಿಕವಾಗಿ ತನಿಖೆ ನಡೆಯುತ್ತಿದೆ. ಶೀಘ್ರವೇ ಸತ್ಯವನ್ನು ಹೊರಗೆಳೆಯುತ್ತೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಫೋಟೋಗಳು: ಅಂಕುಶ್‌ ನಿರ್ಮಲ್ಕರ್‌, ನಿರುಪಾದಿ ಬ್ಯಾಡಗಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. “ಶಿಕ್ಷಣ, ಸಂಘಟನೆ, ಹೋರಾಟ” ಎಂಬ ಡಾ. ಬಿ.ಆರ್.ಅಂಬೇಡ್ಕರ್ ಅವರ ಬೀಜಮಂತ್ರಗಳನ್ನು ಮರೆತು, ಕರ್ನಾಟಕದ ದಲಿತ ಸಂಘಟನೆಗಳ ನಾಯಕರು, ಸ್ವಾರ್ಥ, ಸ್ವಪ್ರತಿಶ್ಟೆ, ಒಳಜಗಳಗಳಲ್ಲಿ ಮುಳುಗಿರುವುದರಿಂದ, ಇಂತಹ “ಅಮಾಯಕ ದಲಿತರ ಮಾರಣಹೋಮ” ನಡೆಯುತ್ತಿದೆ.

LEAVE A REPLY

Please enter your comment!
Please enter your name here

- Advertisment -

Must Read

ಚರ್ಚ್‌ಗಳಲ್ಲಿ ‘ದಿ ಕೇರಳ ಸ್ಟೋರಿ’ ಪ್ರದರ್ಶನ: ಕೋಮು ಅಜೆಂಡಾ ಬಗ್ಗೆ ಎಚ್ಚರಿಸಿದ ತಲಶ್ಶೇರಿ ಬಿಷಪ್

0
ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಕೇರಳದ ಕೆಲ ಚರ್ಚ್‌ಗಳಲ್ಲಿ ವಿವಾದಿತ 'ದಿ ಕೇರಳ ಸ್ಟೋರಿ' ಸಿನಿಮಾ ಪ್ರದರ್ಶನ ಮಾಡಲಾಗಿತ್ತು. ಮುಸ್ಲಿಮರ ಬಗ್ಗೆ ಸುಳ್ಳು ಪ್ರತಿಪಾದಿತ ಈ ಸಿನಿಮಾ ಪ್ರದರ್ಶನದ ಮೂಲಕ ಮುಸ್ಲಿಮರ ಬಗ್ಗೆ ಕ್ರಿಶ್ಚಿಯನ್ನರಲ್ಲಿ...