ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ( ಬಿಎಸ್ಎನ್ಎಲ್)ನ್ನು ಯಾವುದೇ ಕಾರಣಕ್ಕೂ ಬಂದ್ ಮಾಡುವುದಿಲ್ಲ. ಮಹಾನಗರ ಟೆಲಿಫೋನ್ ನಿಗಮ್ ಲಿಮಿಟೆಡ್ ( ಎಂಟಿಎನ್ಎಲ್) ಹಾಗೂ ಬಿಎಸ್ಎನ್ಎಲ್ನ್ನು ವಿಲೀನಗೊಳಿಸುವ ಪ್ರಸ್ತಾವಣೆಗೆ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ ಅನುಮತಿ ನೀಡಿದೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, ಬಿಎಸ್ಎನ್ಎಲ್ ಹಾಗೂ ಎಂಟಿಎನ್ಎಲ್ಗಳನ್ನು ವಿಲೀನಗೊಳಿಸುವ ಬಗ್ಗೆ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಯಿತು. ಎರಡೂ ಸಂಸ್ಥೆಗಳನ್ನು ಮುಚ್ಚುವುದಿಲ್ಲ. ಬದಲಿಗೆ ಎರಡರ ಪುನಶ್ಚೇತನಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಟೆಲಿಕಾಂ ಸೇವಾ ಕ್ಷೇತ್ರದಲ್ಲಿ ತೀವ್ರ ಸ್ಪರ್ಧೆಯಿದೆ. ಈ ಮಧ್ಯೆ ಕಳೆದ ಹಲವು ವರ್ಷಗಳಿಂದ ಸಾರ್ವಜನಿಕ ವಲಯದ ಕಂಪನಿಗಳಾದ ಎಂಟಿಎನ್ಎಲ್ ಮತ್ತು ಬಿಎಸ್ಎನ್ಎಲ್ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿವೆ. ಎರಡೂ ದೇಶದ ಮಹತ್ವದ ಸ್ವತ್ತು. ಭಾರತೀಯ ಸೇನೆಯ ಮೂರೂ ಪಡೆಗಳ ದೂರಸಂಪರ್ಕ ವ್ಯವಸ್ಥೆಯನ್ನು ಬಿಎಸ್ಎನ್ಎಲ್ ನಿರ್ವಹಿಸುತ್ತಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ಸಂಸ್ಥೆಗಳನ್ನು ಮುಚ್ಚುವ ಪ್ರಶ್ನೆಯಿಲ್ಲ. ಇದರಲ್ಲಿ ಸರ್ಕಾರದ ನಿರ್ಧಾರ ಸ್ಪಷ್ಟವಾಗಿದೆ ಎಂದು ಹೇಳಿದರು.
ಇನ್ನು ಬಿಎಸ್ಎನ್ಎಲ್ ನೌಕರರ ಸ್ವಯಂ ನಿವೃತ್ತಿ ಯೋಜನೆಯನ್ನೂ ರೂಪಿಸಲಾಗಿದೆ. ಬಿಎಸ್ಎನ್ಎಲ್ನ ಆದಾಯದ ಶೇ. ೮೫ರಷ್ಟು ಮೊತ್ತವನ್ನು ನೌಕರರ ವೆಚ್ಚಕ್ಕೆ ವಿನಿಯೋಗಿಸಲಾಗುತ್ತಿದೆ. ಇದನ್ನು ಶೇ.೨೫ಕ್ಕೆ ಇಳಿಕೆ ಮಾಡಿದರೆ, ಶೇ.೫೦ರಷ್ಟು ನೌಕರರು ವಿಆರ್ಎಸ್ ಯೋಜನೆಯ ಲಾಭ ಪಡೆಯಲಿದ್ದಾರೆ ಎಂದು ಮಾಹಿತಿ ನೀಡಿದರು.


