Homeಎಕಾನಮಿಬಜೆಟ್: ಐದು ಟ್ರಿಲಿಯನ್ ಡಾಲರ್ ಬುರುಡೆ ಬಿಡಿ! ಆರ್ಥಿಕ ಕುಸಿತ ತಡೆಯಲು ಸಾಧ್ಯವೇ ನೋಡಿ!

ಬಜೆಟ್: ಐದು ಟ್ರಿಲಿಯನ್ ಡಾಲರ್ ಬುರುಡೆ ಬಿಡಿ! ಆರ್ಥಿಕ ಕುಸಿತ ತಡೆಯಲು ಸಾಧ್ಯವೇ ನೋಡಿ!

- Advertisement -

| ರೋಹನ್ ವೆಂಕಟರಾಮಕೃಷ್ಣನ್ |

ಅನುವಾದ: ನಿಖಿಲ್ ಕೋಲ್ಪೆ

ಕೃಪೆ: ಸ್ಕ್ರೋಲ್.ಇನ್

ಪ್ರಧಾನಿ ನರೇಂದ್ರ ಮೋದಿಯ ಕಾಲದಲ್ಲಿ ಯಾವುದೇ ನೆನಪಿನಲ್ಲಿ ಉಳಿಯುವಂತಹ ಬಜೆಟ್ ಬಂದಿರಲಿಲ್ಲ. ಇದೇನೂ ಟೀಕೆಯಲ್ಲ. ಮೋದಿ ಸರಕಾರವು ಸಾಮಾನ್ಯವಾಗಿ ತನ್ನ ಧೋರಣಾತ್ಮಕ ಉದ್ದೇಶಗಳನ್ನು ಮುಂಚಿತವಾಗಿಯೇ ಸ್ಪಷ್ಟಪಡಿಸಲು ಬಯಸುತ್ತದೆ- ಅದು ಮಾಮೂಲಿಯಾಗಿ ಪ್ರಧಾನಿಯವರ ಭಾಷಣಗಳ ಮೂಲಕ. ಯಾವತ್ತೂ ಅವರ ಬಜೆಟುಗಳು ಅವರ ಆ ಅಭಿಪ್ರಾಯಗಳನ್ನು ಘೋಷಿಸಲು ಅಥವಾ ನಿಭಾಯಿಸಲು ಮಾತ್ರ ಬಳಕೆಯಾಗುತ್ತವೆ. ಶುಕ್ರವಾರದ ಬಜೆಟ್-ಮೋದಿಯವರ ಎರಡನೇ ಅವಧಿಯ ಬಜೆಟ್ ಇದಕ್ಕಿಂತ ಬೇರೆಯಾಗಿಲ್ಲ.

ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಅವರ ಚೊಚ್ಚಲ ಬಜೆಟ್ ಭಾಷಣವು ಯಾವುದೇ ದೊಡ್ಡ ಘೋಷಣೆಯನ್ನು ಹೊಂದಿರಲಿಲ್ಲ. ಅದರಲ್ಲಿ ವಿಶ್ಲೇಷಣಕಾರರಿಗೆ ಯಾವುದೇ ಪ್ರಿಯಕರವಾದ ಅಚ್ಚರಿ ಅಥವಾ ಯಾವುದೇ ಆಘಾತಕಾರಿ ವಿಷಯ ಇರಲಿಲ್ಲ. ಈ ಬಜೆಟ್ ಮೋದಿಯವರ ಆರ್ಥಿಕ ಧೋರಣೆಗಳ ಮಾಮೂಲಿ ಮಾತುಗಳಿಗೆ ಅಂಟಿಕೊಂಡಿತ್ತು. ಅವೆಂದರೆ, ಬೃಹದಾರ್ಥಿಕ (macroeconomic) ಸ್ಥಿರತೆಯ ಮೂಲಭೂತ ವಿಚಾರಗಳು (ಇದಕ್ಕೆ ಸ್ವಲ್ಪ ಮಟ್ಟಿಗಾದರೂ ಸೃಜನಶೀಲ ಲೆಕ್ಕಾಚಾರದ ಅಗತ್ಯವಿದೆ), ಕಲ್ಯಾಣ ರಾಜ್ಯದ ಮೇಲೆ ತೀವ್ರ ಒತ್ತು ಮತ್ತು ಸುಧಾರಣೆ ತರಲು ಇಂಟರ್ನೆಟ್ ಬಳಕೆ. ಸಮಸ್ಯೆ ಎಂದರೆ ‘ವ್ಯವಹಾರ ಎಂದಿನಂತೆ ಚಾಲ್ತಿಯಲ್ಲಿದೆ’ ಎಂಬ ನಿಲುವು ಇಲ್ಲಿ ಸರಿಹೊಂದದಿರುವುದು!

ಇದಕ್ಕೆ ಒಂದು ಕಾರಣ ಎಂದರೆ, ಇದು 2019ರ ಚುನಾವಣೆಯಲ್ಲಿ ಭಾರೀ ಬಹುಮತದಿಂದ ಗೆದ್ದ ಬಳಿಕದ ಮೋದಿಯವರ ಮೊದಲ ಪೂರ್ಣ ಬಜೆಟ್ ಎಂಬುದಾಗಿದ್ದರೆ, ಇನ್ನೊಂದು ಕಾರಣವೆಂದರೆ, ಹಣಕಾಸು ಇಲಾಖೆಯ ಜವಾಬ್ದಾರಿ ಹೊತ್ತ ನಂತರ ಇದು ನಿರ್ಮಲಾ ಸೀತಾರಾಮನ್ ಅವರ ಮೊದಲ ಬಜೆಟ್ ಭಾಷಣ ಕೂಡಾ ಆಗಿರುವುದು. ಇದರ ಅರ್ಥ ಎಂದರೆ, ಮೋದಿಯವರ ಎರಡನೇ ಅವಧಿಯ ಉದ್ದೇಶಗಳ ಕುರಿತು ನಿರೀಕ್ಷೆಗಳು ಸ್ವಲ್ಪ ಅತಿಯಾಗಿಯೇ ಇದ್ದಿರುವುದು.

ಆರ್ಥಿಕತೆಯ ಗಾಳಿದಿಕ್ಕು

ಇದಕ್ಕಿಂತಲೂ ಮಹತ್ವದ ಕಾರಣವೆಂದರೆ, ಬಹುಶಃ ಇಂದು ಭಾರತದ ಆರ್ಥಿಕತೆಯು ಡೋಲಾಯಮಾನ ಪರಿಸ್ಥಿತಿಯಲ್ಲಿ ಇರುವುದು. ಈ ವರ್ಷದ ಆರಂಭದಲ್ಲಿ ಹಣಕಾಸು ಸಚಿವಾಲಯವು ಆರ್ಥಿಕತೆಯ ಬೆಳವಣಿಗೆ ನಿಧಾನವಾಗುತ್ತಿರುವುದನ್ನು ಮತ್ತು ಭಾರತದ ಬೆಳವಣಿಗೆಗೆ ಪೂರಕವಾಗಿದ್ದ ಕೊಳ್ಳುವ ಶಕ್ತಿಯ ಕೆಂಡ ಆರುತ್ತಿರುವುದನ್ನೂ ಒಪ್ಪಿಕೊಂಡಿತ್ತು.

2019ರ ಚುನಾವಣೆಯ ಹಾದಿಯಲ್ಲಿ ಇರುವಾಗಲೇ ನಾವು ತಿಳಿದುಕೊಂಡ ಒಂದು ವಿಷಯ ಎಂದರೆ, ಗ್ರಾಹಕಶಕ್ತಿ ಏಳು ವರ್ಷಗಳಲ್ಲೇ ಅತ್ಯಂತ ಕೆಳಮಟ್ಟ ತಲುಪಿತ್ತು, ನಿರುದ್ಯೋಗವು ಮಿತಿಮೀರಿತ್ತು ಒಟ್ಟು ದೇಶೀಯ ಉತ್ಪನ್ನವು (ಜಿಡಿಪಿ) ಕಳೆದ ಐದು ವರ್ಷಗಳಲ್ಲೇ ಅತ್ಯಂತ ಕೆಳಗಿಳಿದಿತ್ತು ಮತ್ತು ಕೆಲವು ದಿನಬಳಕೆ ವಸ್ತುಗಳ ಕಂಪನಿಗಳ ಅಧಿಕಾರಿಗಳು ಆರ್ಥಿಕ ಹಿಂಜರಿತದ (recession) ಮಾತನ್ನಾಡುತ್ತಿದ್ದರು.

ಈ ಹಿನ್ನೆಲೆಯಲ್ಲಿ ಮಧ್ಯಮ ಮಾರ್ಗದ ಈ ಬಜೆಟ್ ತೀರಾ ಅಸಂಗತವೆಂಬಂತೆ ಕಾಣುತ್ತಿದೆ

ನಿಜವಾಗಿಯೂ ನಿರ್ಮಲಾ ಸೀತಾರಾಮನ್ ಅವರ ಭಾಷಣವು ಹಾರಿಕೆಯದ್ದಾಗಿ ಕಾಣುತ್ತಿತ್ತು. ಕಾರಣವೆಂದರೆ ಮಾಹಿತಿಯ ಕೊರತೆ. ಅವರು ಅನುದಾನಗಳು ಮತ್ತಿತರ ನಿರ್ದಿಷ್ಟ ವಿಷಯಗಳ ಕುರಿತು ಮಾಹಿತಿ ಕೊಟ್ಟದ್ದೇ ಅಪರೂಪ. ಉದಾಹರಣೆಗೆ ರಕ್ಷಣಾ ಪಡೆಗಳ ಒಂದೂ ಮಾತನಾಡದ ಕಾಂಗ್ರೆಸ್ ಬಜೆಟ್ಟಿನ ಬಗ್ಗೆ ಭಾರತೀಯ ಜನತಾ ಪಕ್ಷವು ಹೇಗೆಲ್ಲಾ ಮಾತಾಡುತ್ತಿತ್ತು ಎಂಬುದನ್ನು ಯಾರೂ ಸುಲಭವಾಗಿ ಊಹಿಸಬಹುದಿತ್ತು.

ಹಣಕಾಸು ಕೊರತೆಯ ಕುರಿತ ಅಂಕಿಅಂಶ ಕೂಡಾ ಭಾಷಣದಲ್ಲಿ ಕೊನೆಯ ಕ್ಷಣ ಸೇರಿಸಿದಂತಿತ್ತು. ವಿವರಗಳ ಬಗ್ಗೆಯಾಗಲೀ, ದೊಡ್ಡ ವಿಚಾರಗಳ ಬಗ್ಗೆಯಾಗಲೀ ಯಾಕೆ ಈ ಅಸಡ್ಡೆ ಇತ್ತು?

ಇದಕ್ಕೆ ಕಾರಣ ಮೋದಿ ಈಗಾಗಲೇ ತನ್ನದನ್ನು ಮಾಡಿ ಮುಗಿಸಿರುವುದು ಕಾರಣವಿರಬಹುದು. ಏಕೆಂದರೆ, ಇದು ಈ ವರ್ಷದ ಎರಡನೇ ಬಜೆಟ್. ಫೆಬ್ರವರಿಯಲ್ಲಿ ಮಂಡಿಸಲಾದ ಬಜೆಟ್ ತಾಂತ್ರಿಕವಾಗಿ ‘ತಾತ್ಕಾಲಿಕ’ ಬಜೆಟ್ಟೇ ಆಗಿರಬಹುದು- ಇದು ಕುಂಟು ನೆಪ ಹೇಳುವ ಸರಕಾರಗಳು ಚುನಾವಣೆಯ ಕಾಲದಲ್ಲಿ ಮಾಡುವ ಸಾಮಾನ್ಯ ವಿಷಯ- ಮೋದಿ ಸರಕಾರವು ಅದನ್ನೊಂದು ಎಂದಿನ ಬಜೆಟ್ ಎಂಬಂತೆ ಬಿಂಬಿಸಿತ್ತು ಮಾತ್ರವಲ್ಲ, ಅದೇ ತಾತ್ಕಾಲಿಕ ಬಜೆಟಿನಲ್ಲಿ ಎರಡು ಹೆಕ್ಟೇರ್‌ಗಳಿಗೂ ಕಡಿಮೆ ಜಮೀನಿರುವ ರೈತರಿಗೆ ಆದಾಯ ಬೆಂಬಲವಾಗಿ ವಾರ್ಷಿಕ 6,000 ರೂ. ನೀಡುವ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಅಥವಾ ಪಿಎಂ-ಕಿಸಾನ್ ಎಂದು ಕರೆಯಲ್ಪಡುವ ಮಹತ್ವದ ಯೋಜನೆಯನ್ನೂ ಘೋಷಿಸಿತ್ತು.

ಎಷ್ಟು ಟ್ರಿಲಿಯನ್ ಸ್ವಾಮಿ?

ಮಧ್ಯಂತರ ಅಥವಾ ತಾತ್ಕಾಲಿಕ ಬಜೆಟ್ ಮತ್ತು ಆದಾಯ ಸಂಗ್ರಹಣೆಯಲ್ಲಿ ಕೊರತೆಯು ಸರಕಾರ ಆರ್ಥಿಕ ಅಡಚಣೆಯಲ್ಲಿರುವಂತೆ ಮಾಡಿರುವುದರಿಂದ ಯಾವುದೇ ಭಾರೀ ಯೋಜನೆಯನ್ನು ಘೋಷಿಸುವ ಸ್ಥಿತಿಯಲ್ಲಿ ಇರಲಿಲ್ಲ! ಅದಕ್ಕೆ ಬದಲಾಗಿ ‘ಮೋದಿ ಸರ್ಕಾರ್’ ಭಾರೀ ಎಂಬಂತೆ ಕಾಣುವ, ಆದರೆ ನಿಜವಾಗಿ ತನ್ನಿಂದ ತಾನೇ ಸಾಮಾನ್ಯ ಜನರಿಗೆ ಯಾವುದೇ ಲಾಭ ಇಲ್ಲದ ಎರಡು ಗುರಿಗಳಿಗೆ ಅಂಟಿಕೊಂಡಿದೆ. ಅವೆಂದರೆ, ಭಾರತದ ಆರ್ಥಿಕತೆಯನ್ನು ಈಗಿರುವ 2.7 ಟ್ರಿಲಿಯನ್ ಡಾಲರ್‌ಗಳಿಂದ ಇದೇ ಹಣಕಾಸು ವರ್ಷದಲ್ಲಿ ಮೂರು ಟ್ರಿಲಿಯನ್ ಡಾಲರ್ ಮಟ್ಟಕ್ಕೆ ಮತ್ತು 2024ರಲ್ಲಿ ಐದು ಟ್ರಿಲಿಯನ್ ಡಾಲರ್ ಮಟ್ಟಕ್ಕೆ ತಲಪಿಸುವುದು.

ಇವೆರಡೂ ಮಹತ್ವದ ಗುರಿಗಳಾಗಿರುವಾಗಲೇ, ಅವು ಹೇಗೆ ಜನರಿಗೆ ಮಹತ್ವದ್ದಾಗಬಹುದೆಂದು ಲೆಕ್ಕ ಹಾಕಲು ಯಾವುದೇ ದಾರಿಗಳಿಲ್ಲ. ಎಲ್ಲಾ ಬೆಳವಣಿಗೆಗಳ ಲಾಭವು ಕೆಲವೇ ಅತಿ ಶ್ರೀಮಂತರ ಪಾಲಾಗಿ ಬಹುತೇಕ ಜನರಿಗೆ ಎಳ್ಳಷ್ಟೂ ಲಾಭವಿಲ್ಲದಿದ್ದರೆ, ಬೃಹತ್ ಅರ್ಥಿಕತೆಯಿಂದ ಏನು ಪ್ರಯೋಜನ? ರೈತರು ಇನ್ನೂ ಕೃಷಿ ಬಿಕ್ಕಟ್ಟು ಎದುರಿಸುವುದೇ ಆದಲ್ಲಿ, ಯುನೈಟೆಡ್ ಕಿಂಗ್‌ಡಂನಂತೆ ಬರೇ ಆರ್ಥಿಕತೆಯ ಭಾರೀ ಗಾತ್ರದ ವಿಷಯದಲ್ಲಿ ಕಪ್ಪೆ ನೆಗೆತ ಮಾಡಿದರೆ ಅದಕ್ಕೇನು ಬೆಲೆಯಿದೆ? ಏನಿದ್ದರೂ, ಸರಕಾರವು ಎರಡು ನಿರ್ದಿಷ್ಟ ಸಂಖ್ಯೆಗಳನ್ನೊಳಗೊಂಡ ಗುರಿಗಳಿಗೆ ಅಂಟಿಕೊಂಡಿದೆ. ಇದು ಮುಂದಾಲೋಚನೆ ರಹಿತ ಅನಾಣ್ಯೀಕರಣ ಮತ್ತು 2022ರ ಒಳಗೆ ರೈತರ ಆದಾಯ ದ್ವಿಗುಣಗೊಳಿಸುವ ಅಸ್ಪಷ್ಟ ಭರವಸೆಗಳಿಗೆ ವ್ಯತಿರಿಕ್ತವಾಗಿದೆ.

ಆದರೆ, ಆರ್ಥಿಕ ಸಮೀಕ್ಷೆಯು ಇದು ಸುಲಭದಲ್ಲಿ ಸಾಧಿಸಬಹುದಾದ ಗುರಿಯಲ್ಲ ಎಂದು ಸ್ಪಷ್ಟಪಡಿಸಿದೆ. ಗುರುವಾರ ಮಂಡಿಸಲಾದ ಈ ಸಮೀಕ್ಷೆಯು ಈ ವರ್ಷದಲ್ಲಿ ಭಾರತವು ಏಳು ಶೇಕಡಾ ಬೆಳವಣಿಗೆ ಸಾಧಿಸಬಹುದು ಮತ್ತು ನಂತರ ಮುಂದಿನ ಐದು ವರ್ಷಗಳಲ್ಲಿ ಐದು ಟ್ರಿಲಿಯನ್ ಗುರಿ ಸಾಧಿಸಲು ಎಂಟು ಶೇಕಡಾದಷ್ಟು ವೇಗವನ್ನು ಸಾಧಿಸಬಹುದು ಎಂದು ನಿರೀಕ್ಷಿಸಿದೆ.

ಬಜೆಟ್ ನಿರ್ದಿಷ್ಟವಾಗಿ ಹೇಳುವುದೇನು?

* ಶ್ರೀಮಂತರಿಗೆ ತೆರಿಗೆ: ಮೊದಲಾಗಿ, ಸರಕಾರವು ಶ್ರೀಮಂತರಿಂದ ಹೆಚ್ಚು ಹಣ ಬಾಚಲು ನಿರ್ಧರಿಸಿದೆ. ಅತ್ಯಂತ ಮೇಲ್ವರ್ಗದಲ್ಲಿ ಮೇಲ್ತೆರಿಗೆಯನ್ನು ಏರಿಸಲು ನಿರ್ಧರಿಸಿದೆ. ಅದರ ಅರ್ಥ ಐದು ಕೋಟಿಗೂ ಹೆಚ್ಚು ಆದಾಯ ಹೊಂದಿರುವವರು ಈಗಿರುವ 30 ಶೇಕಡಾ ಮಾರ್ಜಿನಲ್ ತೆರಿಗೆಗೆ ಬದಲಾಗಿ ಹೆಚ್ಚುಕಡಿಮೆ 42 ಶೇಕಡಾದಷ್ಟು ತೆರಿಗೆ ಕಟ್ಟಬೇಕಾಗುತ್ತದೆ.

* ಆದರೆ, ಕಾರ್ಪೊರೇಟ್ ಹೊರೆಯಲ್ಲಿ ಇಳಿಕೆ: ಹಿಂದೆ 250 ಕೋಟಿ ರೂ.ಗಳಷ್ಟು ವಾರ್ಷಿಕ ವ್ಯವಹಾರವಿದ್ದ ಕಂಪನಿಗಳಿಗೆ ಕಾರ್ಪೊರೇಟ್ ತೆರಿಗೆ ದರ 25 ಶೇಕಡಾದಷ್ಟಿತ್ತು. ಅದನ್ನು ಮೀರಿದ್ದಲ್ಲಿ 30 ಶೇಕಡಾದಷ್ಟಿತ್ತು. ಈಗ ಈ ಮಿತಿಯನ್ನು 400 ಕೋಟಿ ರೂ.ಗಳ ವರೆಗೆ ಏರಿಸಲಾಗಿದೆ. ಅದರ ಅರ್ಥ ಇನ್ನು ಮುಂದೆ ಕೇವಲ 0.07 ಶೇಕಡಾ ಕಂಪನಿಗಳಷ್ಟೇ 30 ಶೇಕಡಾ ತೆರಿಗೆಯ ವ್ಯಾಪ್ತಿಯಲ್ಲಿ ಉಳಿಯಲಿವೆ. ಸ್ಟಾರ್ಟ್ ಅಪ್ ಕಂಪೆನಿಗಳು ತಮ್ಮನ್ನು ತಾವೇ ಅತಿಮೌಲ್ಯಮಾಪನ ಮಾಡುತ್ತಿವೆಯೇ ಎಂದು ಪರಿಶೀಲಿಸುವ ‘ಏಂಜೆಲ್ ಟ್ಯಾಕ್ಸ್’ ಎಂದು ಕರೆಯಲಾಗುತ್ತಿರುವ ವ್ಯವಸ್ಥೆಯ ನಿಯಮಗಳನ್ನು ಸಡಿಲಗೊಳಿಸಲಾಗಿದೆ. ಇದು ಹೊಸ ಕಂಪೆನಿಗಳ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ ಎಂದು ಹಲವಾರು ಉದ್ಯಮಿಗಳು ವಾದಿಸುತ್ತಿದ್ದಾರೆ.

* ಪೆಟ್ರೋಲ್ ಬೆಲೆ ಏರಿಕೆ: ಸಂಸತ್ತಿನಲ್ಲಿ  ನಿರ್ಮಲಾ ಸೀತಾರಾಮನ್ ಭಾಷಣದ ವೇಳೆ ಗೊಣಗುವಿಕೆ ಕೇಳಿಬಂದದ್ದೆಂದರೆ ಅವರು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ತೆರಿಗೆ ಮತ್ತು ಮೇಲ್ತೆರಿಗೆ ಮೂಲಕ ಎರಡು ರೂಪಾಯಿಗಳ ಏರಿಕೆಯನ್ನು ಘೋಷಿಸಿದಾಗ ಮಾತ್ರ.

* ವಿದೇಶಿ ಹೂಡಿಕೆಗೆ ಸ್ವಾಗತ: ನಿರ್ಮಲಾ ಸೀತಾರಾಮನ್ ಅವರು ನೇರ ವಿದೇಶಿ ಹೂಡಿಕೆಯನ್ನು ಸುಲಭಗೊಳಿಸುವ ಹಲವಾರು ಕ್ರಮಗಳನ್ನು ಘೋಷಿಸಿದ್ದಾರೆ. ಅದರಲ್ಲೂ ಮುಖ್ಯವಾಗಿ ಮಾಧ್ಯಮ ಮತ್ತು ವೈಮಾನಿಕ ಕ್ಷೇತ್ರಗಳಲ್ಲಿ. ಈ ಕ್ಷೇತ್ರಗಳು ಹಿಂದೆಯೂ ಭರವಸೆಯನ್ನು ಮೂಡಿಸಿದ್ದವಾದರೂ, ಫಲಿತಾಂಶ ನಗಣ್ಯವಾಗಿತ್ತು.

*ಡಾಲರ್ ಸಾಲದ ಆರಂಭ: ಬಹುಶಃ ಇದು ಈ ಬಜೆಟಿನಲ್ಲಿ ಘೋಷಿಸಲಾದ ಅತ್ಯಂತ ದೊಡ್ಡ ಬದಲಾವಣೆ. ಸರಕಾರವು ವಿದೇಶಿ ಮಾರುಕಟ್ಟೆಗಳಿಂದ ಡಾಲರ್‌ಗಳಲ್ಲಿ ಹಣವನ್ನು ಸಾಲ ಪಡೆಯಲು ಆರಂಭಿಸಲಿದೆ ಎಂದು ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಈ ತನಕ ಭಾರತವು ಕೇವಲ ರೂಪಾಯಿ ಆಧರಿತ ಸಾಲವನ್ನಷ್ಟೇ ಪಡೆಯುವ ಪರಿಪಾಠವಿತ್ತು. ಇದಕ್ಕೆ ಕಾರಣವೆಂದರೆ ಒಂದು ವೇಳೆ ರೂಪಾಯಿ ಮೌಲ್ಯ ದಿಢೀರನೇ ಕುಸಿದರೆ, ಡಾಲರ್ ಬಾಂಡ್ ಭಾರೀ ದುಬಾರಿಯಾಗುತ್ತದೆ. ಆದರೆ, ರೂಪಾಯಿ ಮೌಲ್ಯವು ಈಗ ಸ್ಥಿರವಾಗಿರುವುದರಿಂದ ಸರಕಾರ ಪರಿಸ್ಥಿತಿಯ ಲಾಭ ಎತ್ತುವ ಆಶಾವಾದ ಹೊಂದಿದೆ.

ಬ್ಯಾಂಕುಗಳಿಗೆ ಬಂಡವಾಳ: ದುಡಿಯದ ಆಸ್ತಿ (ವಸೂಲಾಗದ ಸಾಲ) ಬಿಕ್ಕಟ್ಟು ಶಮನವಾಗದೇ ಇದ್ದರೂ, ಸರಕಾರವು ಬ್ಯಾಂಕುಗಳಿಗೆ 70,000 ಕೋಟಿ ರೂ. ಬಂಡವಾಳ ಒದಗಿಸುವುದಾಗಿ ಹೇಳಿದೆ. ಇಲ್ಲಿ ಹಣಕಾಸು ಕೊರತೆಯ ಅಂಕಿಅಂಶಗಳು ಕೆಟ್ಟದಾಗಿ ಕಾಣದಂತೆ ಲೆಕ್ಕಾಚಾರದ ಚಮತ್ಕಾರವೊಂದನ್ನು ಬಳಸಲಾಗಿದೆ.

ಗ್ರಾಮೀಣ ಮೂಲ ಸೌಕರ್ಯಗಳಿಗೆ ಒತ್ತು: ಸುಮಾರು 80,000 ಕೋಟಿ ರೂ.ಗಳಿಗೂ ಮೀರಿದ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ ಜಾಲವನ್ನು ಬಲಪಡಿಸುವ ಉದ್ದೇಶದಿಂದ 1.25 ಲಕ್ಷ ಕಿ.ಮೀ ಗ್ರಾಮೀಣ ರಸ್ತೆಗಳನ್ನು ಅಭಿವೃದ್ಧಿಪಡಿಸುವ ಪ್ರಸ್ತಾವನೆಯನ್ನು ನಿರ್ಮಲಾ ಸೀತಾರಾಮನ್ ಮುಂದಿಟ್ಟಿದ್ದಾರೆ.

ಸಾರ್ವಜನಿಕ ಉದ್ದಿಮೆಗಳ ಹೂಡಿಕೆ ಹಿಂತೆಗೆತ: ಸರಕಾರವು ಸಾರ್ವಜನಿಕ ಉದ್ದಿಮೆಗಳಿಂದ ಬಂಡವಾಳ ಹಿಂತೆಗೆದುಕೊಂಡು ಖಾಸಗಿ ರಂಗಕ್ಕೆ ಅವಕಾಶ ಮಾಡಿಕೊಡುವ ತನ್ನ ಗುರಿಯನ್ನು ಏರಿಸಿದೆ. ಅದು ವಿವಿಧ ಸಾರ್ವಜನಿಕ ರಂಗದ ಉದ್ದಿಮೆಗಳಿಂದ ಈ ಹಣಕಾಸು ವರ್ಷದಲ್ಲಿ 1,05,000 ಕೋಟಿ ರೂ.ಗಳಷ್ಟು ತನ್ನ ಪಾಲು ಬಂಡವಾಳವನ್ನು ಹಿಂತೆದುಕೊಳ್ಳಲಿದ್ದು, ಇದು ಮಧ್ಯಂತರ ಬಜೆಟಿನಲ್ಲಿ ಹೇಳಿದ ಮೊತ್ತಕ್ಕಿಂತ 16 ಶೇಕಡಾದಷ್ಟು ಹೆಚ್ಚಾಗಿದೆ. ಕೆಲವು ಉದ್ದಿಮೆಗಳಲ್ಲಿ 51 ಶೇಕಡಾ ನಿಯಂತ್ರಕ ಮಿತಿಯಿಂದ ಕೆಳಗಿಳಿಯಲು ಸರಕಾರ ನಿರ್ಧರಿಸಿರುವುದು ಗಮನಾರ್ಹ.

ಹೊಸ ಕಾರ್ಮಿಕ ನೀತಿಗಳು: ಕಾರ್ಮಿಕ ನೀತಿಗಳನ್ನು ನಾಲ್ಕು ನಿಯಮಗಳಿಗೆ ಒಳಪಡಿಸಿ ಭಾರತದಲ್ಲಿ ವ್ಯಾಪಾರ ನಡೆಸುವುದನ್ನು ‘ಸುಲಭ’ಗೊಳಿಸುವ ಉದ್ದೇಶ ಸರಕಾರಕ್ಕಿದೆಯೆಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಆದರೆ, ಈ ಕುರಿತು ಯಾವುದೇ ಸ್ಪಷ್ಟ ಚಿತ್ರಣ ನೀಡಿಲ್ಲ.

ಪಾನ್ ಕಾರ್ಡ್ ಬದಲು ಆಧಾರ್ ಕಾರ್ಡ್: ಇದು ದೇಶದ ಆರ್ಥಿಕತೆಯ ಮೇಲೆ ಯಾವುದೇ ಪರಿಣಾಮ ಬೀರದೇ ಇದ್ದರೂ, ಪಾನ್ ಕಾರ್ಡ್ ಇಲ್ಲದವರು ಆಧಾರ್ ಕಾರ್ಡ್ ಉಪಯೋಗಿಸಲು ಅನುಮತಿ ನೀಡುವುದಾಗಿ ಸರಕಾರ ಹೇಳಿರುವುದು ಕುತೂಹಲಕಾರಿಯಾಗಿದೆ. ಜನರು ತಮ್ಮ ಪಾನ್ ಕಾರ್ಡನ್ನು ಆಧಾರ್ ಕಾರ್ಡಿಗೆ ಲಿಂಕ್ ಮಾಡುವಂತೆ ಮಾಡಲು ಸರಕಾರ ಮಾಡಿದ ವರ್ಷಗಳ ಪ್ರಯತ್ನದ ನಂತರ ಈ ನಡೆ ಬಂದಿದೆ.

ಖಂಡಿತವಾಗಿಯೂ ಬಜೆಟ್ ಭಾಷಣದಲ್ಲಿ ಹೆಚ್ಚು ವಿವರಗಳಿವೆ ಮತ್ತು ಇನ್ನೂ ಹಲವು ದಾಖಲೆಗಳಲ್ಲಿ ಹುದುಗಿಹೋಗಿವೆ.  ಸರಕಾರ ಏನು ಲೆಕ್ಕಾಚಾರಗಳನ್ನು ಹಾಕಿದೆ ಎಂದು ತಿಳಿದುಕೊಳ್ಳಲು ಮತ್ತು ಅವು ಸರಿಹೊಂದುತ್ತವೆಯೋ ಎಂಬುದನ್ನು ತಿಳಿದುಕೊಳ್ಳಲು ಸ್ವಲ್ಪ ಸಮಯ ಬೇಕು. ಯಾಕೆಂದರೆ, ಕಂಪ್ಟ್ರೋಲರ್ ಎಂಡ್ ಅಡಿಟರ್ ಜನರಲ್ (ಸಿಎಜಿ) ಅವರು ಹಿಂದೆಯೂ ಚಾಣಾಕ್ಷ್ಯತನದ ಲೆಕ್ಕಾಚಾರಕ್ಕಾಗಿ ಬಿಜೆಪಿ ನಾಯಕತ್ವವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಆದರೆ, ದೊಡ್ಡ ಪ್ರಶ್ನೆಯೊಂದು ಅಪಶ್ರುತಿಯಾಗಿಯೇ ಉಳಿದಿದೆ. ಸರಕಾರವು ಆರ್ಥಿಕತೆಯು ಕಾಣುತ್ತಿರುವುದಕ್ಕಿಂತ ಕೆಟ್ಟದಾಗಿದೆ ಎಂಬ ತನ್ನ ಸ್ವಂತ ಮಾಜಿ ಸಲಹೆಗಾರ ಅರವಿಂದ ಸುಬ್ರಹ್ಮಣ್ಯನ್ ಅವರ ಎಚ್ಚರಿಕೆಯನ್ನು ಬಹುವಾಗಿ ಕಡೆಗಣಿಸಿದೆ. ಆದರೆ, ವಿಶ್ಲೇಷಕರು ಬಹುತೇಕ ಮುಂದೇನಾಗಬಹುದು ಎಂಬ ಬಗ್ಗೆ ಭಯ ವ್ಯಕ್ತಪಡಿಸಿದ್ದಾರೆ. ಜೊತೆಗೆ, ಆರ್ಥಿಕ ಸಮೀಕ್ಷೆಯಲ್ಲಿ ಉಲ್ಲೇಖಿಸಿರುವಂತೆ ಜಾಗತಿಕ ಪರಿಸ್ಥಿತಿಯು ಮಂಕಾಗಿದೆ.

ಭಾರತದ ಆರ್ಥಿಕತೆಯು ಎತ್ತ ಸಾಗುತ್ತಿದೆ ಎಂಬ ಕುರಿತ ಭಯವನ್ನು ನಿವಾರಿಸಲು ಈ ಬಜೆಟ್ ಸಾಕಷ್ಟನ್ನು ಮಾಡಿದೆಯೆ ಎಂಬುದು ದೊಡ್ಡ ಪ್ರಶ್ನೆ.

 

+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. Very good site you have here but I was wanting to know if you knew of any user discussion forums that cover the same topics discussed in this
    article? I’d really like to be a part of group where I can get advice from other knowledgeable
    people that share the same interest. If you have any
    suggestions, please let me know. Bless you!

LEAVE A REPLY

Please enter your comment!
Please enter your name here

- Advertisment -

Must Read

ಆಸ್ಪತ್ರೆ ಸಿಬ್ಬಂದಿಗೆ ಲಂಚ ನೀಡಲು ಸಾಧ್ಯವಾಗದೆ ರಸ್ತೆಯಲ್ಲೆ 6 ತಿಂಗಳ ಶಿಶುವಿಗೆ ಜನ್ಮ ನೀಡಿದ ಮಹಿಳೆ | Naanu Gauri

ಆಸ್ಪತ್ರೆ ಸಿಬ್ಬಂದಿಗೆ ಲಂಚ ನೀಡಲು ಸಾಧ್ಯವಾಗದೆ ರಸ್ತೆಯಲ್ಲೆ 6 ತಿಂಗಳ ಶಿಶುವಿಗೆ ಜನ್ಮ ನೀಡಿದ...

0
ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆ ನಿರಾಕರಿಸಿದ ಕಾರಣಕ್ಕೆ ಮಹಿಳೆಯೊಬ್ಬರು ರಸ್ತೆಯಲ್ಲೇ ಆರು ತಿಂಗಳ ಶಿಶುವಿಗೆ ಜನ್ಮ ನೀಡಿರುವ ಅಘಾತಕಾರಿ ಘಟನೆ ಮಧ್ಯಪ್ರದೇಶದ ಭಿಂಡ್ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ. ಆರು ತಿಂಗಳ ಗರ್ಭಿಣಿಯಾಗಿದ್ದ ಕಲ್ಲೋ ಬಾಯಿಯನ್ನು...
Wordpress Social Share Plugin powered by Ultimatelysocial