ಸಂಸತ್ತಿನ ಬಜೆಟ್ ಅಧಿವೇಶನ ಶುಕ್ರವಾರ (ಜ.31) ಆರಂಭಗೊಂಡಿತು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡಿದರು.
ಕಳೆದ ಡಿಸೆಂಬರ್ 24ರಂದು ನಿಧನರಾದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಪ್ರಯಾಗ್‌ರಾಜ್ ಕುಂಭಮೇಳದಲ್ಲಿ ಕಾಲ್ತುಳಿತಕ್ಕೆ ಸಿಲುಕಿ ಸಾವನ್ನಪ್ಪಿದವರಿಗೆ ಗೌರವ ಸಲ್ಲಿಸುವ ಮೂಲಕ ರಾಷ್ಟ್ರಪತಿ ತನ್ನ ಭಾಷಣ ಪ್ರಾರಂಭಿಸಿದರು.
“ಮೂರನೇ ಅವಧಿಯ ಕೇಂದ್ರದ ಎನ್‌ಡಿಎ ಸರ್ಕಾರ “ಹಿಂದಿಗಿಂತ ಮೂರು ಪಟ್ಟು ವೇಗದಲ್ಲಿ ಕೆಲಸ ಮಾಡುತ್ತಿದೆ” ಎಂದು ರಾಷ್ಟ್ರಪತಿ ಕೊಂಡಾಡಿದರು.
ರಾಷ್ಟ್ರಪತಿಗಳ ಭಾಷಣದ ನಂತರ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆರ್ಥಿಕ ಸಮೀಕ್ಷೆಯನ್ನು ಮಂಡಿಸಲಿದ್ದಾರೆ. ಲೋಕಸಭೆಯಲ್ಲಿ ಮಧ್ಯಾಹ್ನ 12 ಗಂಟೆಗೆ ಮತ್ತು ರಾಜ್ಯಸಭೆಯಲ್ಲಿ ಮಧ್ಯಾಹ್ನ 2 ಗಂಟೆಗೆ ಆರ್ಥಿಕ ಸಮೀಕ್ಷೆ ವರದಿ ಮಂಡನೆಯಾಗಲಿದೆ. ಶನಿವಾರ (ಫೆ.1) ವಿತ್ತ ಸಚಿವೆ 2025-26ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ.
ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆಯ ಆರ್ಥಿಕ ವಿಭಾಗವು ಸಿದ್ಧಪಡಿಸಿರುವ ಮತ್ತು ಮುಖ್ಯ ಆರ್ಥಿಕ ಸಲಹೆಗಾರರ ಮೇಲ್ವಿಚಾರಣೆಯಲ್ಲಿ ರೂಪಿಸಲಾದ ಆರ್ಥಿಕ ಸಮೀಕ್ಷೆಯು, 2024–25ರ (ಏಪ್ರಿಲ್–ಮಾರ್ಚ್) ಆರ್ಥಿಕತೆಯ ಸ್ಥಿತಿ ಮತ್ತು ವಿವಿಧ ಸೂಚಕಗಳ ಒಳನೋಟಗಳನ್ನು ಮತ್ತು ಮುಂದಿನ ಹಣಕಾಸು ವರ್ಷದ ಮುನ್ನೋಟವನ್ನು ಒದಗಿಸಲಿದೆ.
ಬಜೆಟ್ ಅಧಿವೇಶನದಲ್ಲಿ, ಬ್ಯಾಂಕಿಂಗ್ ನಿಯಮಗಳು ಮತ್ತು ಮೇಲ್ವಿಚಾರಣೆಯನ್ನು ಬಲಪಡಿಸುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿರುವ ಬ್ಯಾಂಕಿಂಗ್ ಕಾನೂನುಗಳು (ತಿದ್ದುಪಡಿ) ಮಸೂದೆ-2024 ಮತ್ತು ಭಾರತೀಯ ರೈಲ್ವೆಯ ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಸುವತ್ತ ಗಮನಹರಿಸಲಿದೆ ಎನ್ನಲಾದ ರೈಲ್ವೆ (ತಿದ್ದುಪಡಿ) ಮಸೂದೆ-2024 ಸೇರಿದಂತೆ ಹಲವಾರು ಪ್ರಮುಖ ಮಸೂದೆಗಳು ಮಂಡನೆಯಾಗುವ ನಿರೀಕ್ಷೆಯಿದೆ.
ಗಮನಾರ್ಹವಗಿ, ದೇಶದಾದ್ಯಂತ ವಿಪತ್ತು ಪ್ರತಿಕ್ರಿಯೆ ಕಾರ್ಯವಿಧಾನಗಳನ್ನು ಸುಧಾರಿಸುತ್ತದೆ ಎನ್ನಲಾದ ವಿಪತ್ತು ನಿರ್ವಹಣೆ (ತಿದ್ದುಪಡಿ) ಮಸೂದೆ 2024, ಧಾರ್ಮಿಕ ದತ್ತಿಗಳ ನಿರ್ವಹಣೆಯನ್ನು ಸುಧಾರಿಸುತ್ತೆ ಎನ್ನಲಾದ ವಕ್ಫ್ (ತಿದ್ದುಪಡಿ) ಮಸೂದೆ-2024 ಮತ್ತು ಮುಸಲ್ಮಾನ್ ವಕ್ಫ್ (ರದ್ದತಿ) ಮಸೂದೆ-2024 ಕೂಡ ಮಂಡಿಸುವ ಸಾಧ್ಯತೆಯಿದೆ.
ಸರ್ಕಾರದ ಶಾಸಕಾಂಗ ಕಾರ್ಯಸೂಚಿಯಲ್ಲಿ ಬ್ಯಾಂಕಿಂಗ್ ಕಾನೂನುಗಳು (ತಿದ್ದುಪಡಿ) ಮಸೂದೆ- 2024, ರೈಲ್ವೆ (ತಿದ್ದುಪಡಿ) ಮಸೂದೆ- 2024, ವಿಪತ್ತು ನಿರ್ವಹಣೆ (ತಿದ್ದುಪಡಿ) ಮಸೂದೆ-2024, ತೈಲಕ್ಷೇತ್ರಗಳು (ನಿಯಂತ್ರಣ ಮತ್ತು ಅಭಿವೃದ್ಧಿ) ತಿದ್ದುಪಡಿ ಮಸೂದೆ-2024, ಬಾಯ್ಲರ್ ಮಸೂದೆ-2024, ವಕ್ಫ್ (ತಿದ್ದುಪಡಿ) ಮಸೂದೆ- 2024, ಕರಾವಳಿ ಸಾಗಣೆ ಮಸೂದೆ-2024, ವ್ಯಾಪಾರಿ ಸಾಗಣೆ ಮಸೂದೆ-2024 ಮತ್ತು ಹಣಕಾಸು ಮಸೂದೆ- 2025 ಸೇರಿವೆ.
ಬಜೆಟ್ ಅಧಿವೇಶನದ ಮೊದಲ ಭಾಗವು ಫೆಬ್ರವರಿ 13 ರವರೆಗೆ ಮುಂದುವರಿಯಲಿದೆ. ವಿರಾಮದ ನಂತರ, ಎರಡೂ ಸದನಗಳು ಮಾರ್ಚ್ 10 ರಂದು ಮತ್ತೆ ಪ್ರಾರಂಭಗೊಳ್ಳಲಿವೆ. ಏಪ್ರಿಲ್ 4 ರಂದು ಬಜೆಟ್ ಅಧಿವೇಶನ ಮುಕ್ತಾಯಗೊಳ್ಳಲಿದೆ.
90ರ ದಶಕದ ನಂತರ ಕಾಂಗ್ರೆಸ್ ದಲಿತ-ಒಬಿಸಿ ವಿಶ್ವಾಸ ಕಳೆದುಕೊಂಡಿತು: ರಾಹುಲ್ ಗಾಂಧಿ


