ರಾಜ್ಯದಲ್ಲಿ ಕೆರೆಗಳು ಹಾಗೂ ರಾಜಕಾಲುವೆಗಳ ಬಫರ್ ಝೋನ್ (ಸಂರಕ್ಷಿತ ಪ್ರದೇಶ) ಕಡಿಮೆ ಮಾಡಲು ಹೊರಟಿರುವ ರಾಜ್ಯ ಸರ್ಕಾರದ ನಿರ್ಧಾರ ಪರಿಸರಕ್ಕೆ ಅತ್ಯಂತ ಮಾರಕವಾಗಿದ್ದು, ರಿಯಲ್ ಎಸ್ಟೇಟ್ ಮಾಫಿಯಾಗೆ ಮಣೆ ಹಾಕಲು ನಮ್ಮ ಪ್ರಾಕೃತಿಕ ಸಂಪತ್ತನ್ನೇ ನಾಶ ಮಾಡುವ ಹುನ್ನಾರ ಎಂದು ಪರಿಸರ ಕಾರ್ಯಕರ್ತರ ರಾಜ್ಯ ಸಂಘಟನೆ ‘ಪರಿಸರಕ್ಕಾಗಿ ನಾವು’ ಆಕ್ಷೇಪ ವ್ಯಕ್ತಪಡಿಸಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸಂಘಟನೆಯ ರಾಜ್ಯಾಧ್ಯಕ್ಷ ಎ.ಟಿ ರಾಮಸ್ವಾಮಿ, ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ 2014ರ (ಕೆಟಿಸಿಡಿಎ) ಕಾಯ್ದೆಗೆ ತಿದ್ದುಪಡಿ ತಂದು, ಕೆರೆಗಳ ಸಂರಕ್ಷಿತ ಪ್ರದೇಶವನ್ನು ಕಡಿಮೆ ಮಾಡುವುದರಿಂದ, ಈಗಾಗಲೇ ಮಾಲಿನ್ಯದಿಂದ ತುಂಬಿರುವ ಮತ್ತಷ್ಟು ಕೊಳಕನ್ನು ಕೆರೆಗಳಿಗೆ ನೇರವಾಗಿ ಹರಿಸಲು ರಿಯಲ್ ಎಸ್ಟೇಟ್ ಮಾಫಿಯಾದವರಿಗೆ ಅನುವು ಮಾಡಿಕೊಟ್ಟಂತಾಗುತ್ತದೆ ಎಂದಿದ್ದಾರೆ.
ಪರಿಸರ ಹಾಗೂ ಅಭಿವೃದ್ಧಿ ಕಾರ್ಯಗಳಲ್ಲಿ ನೈಸರ್ಗಿಕ ಸಂಪತ್ತು ಉಳಿಸಬೇಕೇಂಬ ಕಾಳಜಿಯುಳ್ಳ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ನೇತೃತ್ವದಲ್ಲಿ ನಡೆದಿರುವ ಸಭೆಯೇ ಇಂತಹ ನಿರ್ಧಾರ ಕೈಗೊಂಡಿದೆ ಎಂದರೆ, ಸಭೆಯ ತೀರ್ಮಾನದ ಹಿಂದಿನ ರಾಜಕೀಯ ಪ್ರಭಾವ ಎಷ್ಟರ ಮಟ್ಟಿಗಿದೆ ಎಂಬುದನ್ನು ಯಾರು ಬೇಕಾದರೂ ಊಹಿಸಿಕೊಳ್ಳಬಹುದು ಎಂದು ಹೇಳಿದ್ದಾರೆ.
ಕೆರೆಗಳು ಹಾಗೂ ಮಳೆನೀರು ಸಾಗಿಸುವ ರಾಜಕಾಲುವೆಗಳು ಸುತ್ತಮುತ್ತಲಿನ ಪ್ರದೇಶ ಸಂರಕ್ಷಿತವಾಗಿರುವುದರಿಂದ ಅವುಗಳ ಒತ್ತುವರಿಗೆ ತಡೆಯಾಗುತ್ತದೆ. ಮಾಲಿನ್ಯ ಹರಿಯುವುದಕ್ಕೂ ತಡೆಯಾಗಿ, ಜೀವವೈವಿಧ್ಯತೆಗೆ ಅನುವಾಗುತ್ತದೆ. ಇಂತಹ ಬಫರ್ ಝೋನ್ ಅನ್ನೇ ಬಹುತೇಕ ಇಲ್ಲವಾಗಿಸಲು ರಾಜ್ಯ ಸರ್ಕಾರ ತೀರ್ಮಾನ ಕೈಗೊಂಡಿರುವುದು ನಿಜಕ್ಕೂ ದುಃಖ ತರುವಂತಹ ವಿಷಯ ಎಂದಿದ್ದಾರೆ.
ಸಾಮಾಜಿಕ ಕಾಳಜಿಯುಳ್ಳ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪರಿಸರದ ಮೇಲೆ ಇಂತಹ ಅಕ್ರಮಣ ಮಾಡುವ ನಿರ್ಧಾರವನ್ನು ತೆಗೆದುಕೊಂಡಿರುವುದು ಬೇಸರ ಮೂಡಿಸಿದೆ. ಅವರ ಸುತ್ತಮುತ್ತಲಿನ ಪಟ್ಟಭದ್ರ ಹಿತಾಸಕ್ತಿಗಳಿಂದ ಇಂತಹ ನಿರ್ಧಾರವಾಗಿದ್ದರೆ ಮುಖ್ಯಮಂತ್ರಿಗಳು ಕೂಡಲೇ ಇದನ್ನು ವಾಪಸ್ ಪಡೆಯಬೇಕು. ಕೆರೆಗಳು ಹಾಗೂ ರಾಜಕಾಲುವೆಗಳ ಬಫರ್ ಝೋನ್ ಅನ್ನು ಹಿಂದಿನಂತೆಯೇ ವಿಸ್ತಾರವಾಗಿಯೇ ಉಳಿಸಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಒಂದು ಕೆರೆಯೂ ಕುಡಿಯುವ ನೀರನ್ನು ಹೊಂದಿಲ್ಲ. ಅಂತಹ ಯೋಗ್ಯತೆಯನ್ನು ಭೂ ಮಾಫಿಯಾದವರು, ರಿಯಲ್ ಎಸ್ಟೇಟ್ ಕುಳಗಳು ಕಳೆದಿದ್ದಾರೆ. ಕೆರೆಗಳ ಸುತ್ತ ಸಾವಿರಾರು ಅಪಾರ್ಟ್ ಮೆಂಟ್ ಗಳಿವೆ. ಎಸ್ ಟಿಪಿ ಅಳವಡಿಸುವುದು ಕಡ್ಡಾಯವಾಗಿದ್ದರೂ ಇವರಲ್ಲಿ ಬಹುತೇಕರು ತ್ಯಾಜ್ಯ ನೀರನ್ನು ಸಂಸ್ಕರಿಸುತ್ತಿಲ್ಲ. ತ್ಯಾಜ್ಯ ನೀರನ್ನೇ ಕೆರೆಗಳಿಗೆ ಹರಿಸುತ್ತಿದ್ದಾರೆ. ಇನ್ನು ಬಫರ್ ಝೋನ್ ಅನ್ನೂ ಕಡಿಮೆ ಮಾಡಿದರೆ ಅವರೆಲ್ಲರೂ ತ್ಯಾಜ್ಯವನ್ನು ನೇರವಾಗಿ ಕೆರೆಗೇ ಬಿಡುವುದಕ್ಕೆ ಅನುವಾಗುತ್ತದೆ. ಇಂತಹ ಕೆರೆಗಳು ರೋಗರುಜಿನಗಳನ್ನು ಹರಡುವ ತಾಣವಾಗುತ್ತವೆ ಎಂದು ರಾಮಸ್ವಾಮಿ ಕಳವಳ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ರಾಜಕಾಲುವೆಗಳ ಬಫರ್ ಝೋನ್ ಅನ್ನು 15 ಮೀಟರ್, 10 ಮೀಟರ್, 5 ಮೀಟರ್‌ಗೆ ನಿಗದಿಪಡಿಸಲು ಸರ್ಕಾರ ಹೊರಟಿದೆ. ಜೊತೆಗೆ ಆ ಬಫರ್ ಝೋನ್‌ನಲ್ಲಿ ಸರ್ವಿಸ್ ರಸ್ತೆ ನಿರ್ಮಿಸಲು ಯೋಜನೆ ರೂಪಿಸಿ ಟೆಂಡರ್ ಅನ್ನೂ ಕರೆಯಲಾಗಿದೆ. ಇದು ಕೂಡ ಬಹಳ ಅಪಾಯಕಾರಿ ಯೋಜನೆಯಾಗಿದ್ದು, ಇದನ್ನು ತಕ್ಷಣ ಕೈಬಿಡಬೇಕು ಎಂದು ಪರಿಸರಕ್ಕಾಗಿ ನಾವು ಸಂಘಟನೆ ಒತ್ತಾಯಿಸಿದೆ.
ಪರಿಸರಕ್ಕೆ ಮಾರಕವಾಗುವ ಬಫರ್ ಝೋನ್ ಕಡಿಮೆ ಮಾಡುವುದನ್ನು ಸರ್ಕಾರಕ್ಕೆ ಸಲಹೆ ನೀಡಿರುವವರಿಗೆ, ಹಿರಿಯರೂ ಹಾಗೂ ಪ್ರಪಂಚವನ್ನು ಹಲವು ದಶಕಗಳಿಂದ ಕಂಡಿರುವ ರಾಜಕಾರಿಣಿಯೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಣೆ ಹಾಕಬಾರದು. ರಿಯಲ್ ಎಸ್ಟೇಟ್ ಕುಳಗಳಿಗೆ ಹಣಮಾಡಲು ಸಾಕಷ್ಟು ಜಾಗವಿದೆ. ಕೆರೆ ಮತ್ತು ರಾಜಕಾಲುವೆಗಳು ಹಾಗೂ ಬಫರ್ ಝೋನ್ ಅನ್ನು ಅವರಿಂದ ಉಳಿಸಬೇಕು. ಈ ಬಗ್ಗೆ ಕಠಿಣ ಕ್ರಮವನ್ನು ಮುಖ್ಯಮಂತ್ರಿಯವರು ತೆಗೆದುಕೊಳ್ಳಲೇಬೇಕಿದೆ ಎಂದಿದೆ.
‘ಬ್ರಾಂಡ್ ಬೆಂಗಳೂರು’ ಮಾಡಲು ಹೊರಡಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಎಲ್ಲವನ್ನೂ ಯೋಜನೆಗಳಿಂದಲೇ ಅಳೆಯಬಾರದು. ಮೂಲಸೌಕರ್ಯಕ್ಕೆ ಬೃಹತ್ ಯೋಜನೆಗಳು ಬೇಕು. ಹಾಗೆಂದು ಪರಿಸರವನ್ನು ಹಾಳು ಮಾಡುವ ಮಾಫಿಯಾಗೆ ಸರ್ಕಾರ ಮಣಿಯಬಾರದು. ಲಕ್ಷಾಂತರ ಸಸಿಗಳನ್ನು ನೆಟ್ಟರೆ, ಸಾವಿರಾರು ವಿದ್ಯಾರ್ಥಿಗಳಿಗೆ ಸಸಿಗಳನ್ನು ಬೆಳಸುವ ಜವಾಬ್ದಾರಿಯನ್ನು ನೀಡಿದರಷ್ಟೇ ಪರಿಸರ ಉಳಿಯುವುದಿಲ್ಲ. ಜಲಮೂಲಗಳಾದ ಕೆರೆಗಳಿಗೆ ಕಿಂಚಿತ್ತೂ ಅಡಚಣೆಯಾಗಬಾರದು. ರಾಜಕಾಲುವೆಯ ಸುತ್ತಮುತ್ತ ಜೀವವೈವಿಧ್ಯತೆಗೆ ಅವಕಾಶ ಮಾಡಲು ಬಫರ್ ಝೋನ್ ಅಗತ್ಯವಿದೆ. ಹೀಗಾಗಿ, ಕೆರೆಗಳು, ರಾಜಕಾಲುವೆಗಳು, ಬಫರ್ ಝೋನ್ ಅನ್ನು ಉಳಿಸಿಕೊಳ್ಳಲು ಡಿ.ಕೆ. ಶಿವಕುಮಾರ್ ಅವರು ಕಠಿಣ ಕ್ರಮಕೈಗೊಳ್ಳಬೇಕು ಎಂದು ಸಂಘಟನೆ ಆಗ್ರಹಿಸಿದೆ.
ಯಾವುದೇ ಕಾರಣಕ್ಕೂ ಕೆರೆಗಳು ಹಾಗೂ ರಾಜಕಾಲುವೆಗಳ ಬಫರ್ ಝೋನ್ ಅನ್ನು ಕಡಿಮೆ ಮಾಡಬಾರದು. ಇದರ ಪ್ರಸ್ತಾವವನ್ನು ಕೂಡಲೇ ಕೈಬಿಡಬೇಕು. ಇಲ್ಲದಿದ್ದರೆ ರಾಜ್ಯದಾದ್ಯಂತ ಹೋರಾಟ ನಡೆಸಲಾಗುವುದು ಎಂದು ಸಂಘಟನೆ ಸಿಎಂ ಮತ್ತು ಡಿಸಿಎಂಗೆ ಎಚ್ಚರಿಕೆ ನೀಡಿದೆ.


