ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಮಹಿಳೆಯರನ್ನು ಗುರಿಯಾಗಿಸಿಕೊಂಡು ಚಾರಿತ್ರ್ಯ ಹರಣ ಮಾಡಲು ಸೃಷ್ಟಿಸಲಾಗಿದ್ದ “ಬುಲ್ಲಿ ಬಾಯಿ” ಮತ್ತು “ಸುಲ್ಲಿ ಡೀಲ್ಸ್” ಆಪ್‌ಗಳ ಪ್ರಕರಣಗಳಿಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಸುದೀರ್ಘವಾದ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ.
ದೆಹಲಿ ಪೊಲೀಸ್ ವಿಶೇಷ ಕೋಶದ ಇಂಟೆಲಿಜೆನ್ಸ್ ಫ್ಯೂಷನ್ ಮತ್ತು ಸ್ಟ್ರಾಟೆಜಿಕ್ ಆಪರೇಷನ್ಸ್ (IFSO) ಘಟಕವು ಪ್ರಕರಣಗಳ ತನಿಖೆ ಮಾಡುತ್ತಿದೆ.
ಸುಲ್ಲಿ ಡೀಲ್ಸ್ ಮೊಬೈಲ್ ಅಪ್ಲಿಕೇಶನ್ ವಿಕೃತಿಯು ಜುಲೈ 2021ರಲ್ಲಿ ಬೆಳಕಿಗೆ ಬಂದಿತ್ತು. ಮುಸ್ಲಿಂ ಮಹಿಳೆಯರ ಫೋಟೋಗಳನ್ನು ಪೋಸ್ಟ್ ಮಾಡಿ, ಹರಾಜಿಗೆ ಇಡಲಾಗಿತ್ತು. ಆರು ತಿಂಗಳ ಬಳಿಕ ಇಂಥದ್ದೇ ವಿಕೃತಿ ಮೆರೆಯಲಾಗಿತ್ತು.
ಪತ್ರಕರ್ತೆಯೊಬ್ಬರು ದೆಹಲಿ ಪೊಲೀಸರಿಗೆ ದೂರು ನೀಡಿ, “ಮೊಬೈಲ್ ಅಪ್ಲಿಕೇಶನ್‌ನಲ್ಲಿ ಕೆಲವು ಅಪರಿಚಿತ ವ್ಯಕ್ತಿಗಳು ನನ್ನನ್ನು ಗುರಿಯಾಗಿಸಿಕೊಂಡಿದ್ದಾರೆ” ಎಂದು ತಿಳಿಸಿದರು. ಅಲ್ಪಸಂಖ್ಯಾತ ಸಮುದಾಯದ ಮಹಿಳೆಯರಿಗೆ ಕಿರುಕುಳ ನೀಡಲು ಉದ್ದೇಶಿಸಲಾಗಿದ್ದ ಬುಲ್ಲಿ ಬಾಯ್ ಅಪ್ಲಿಕೇಷನ್ ಬೆಳಕಿಗೆ ಬಂತು. ಮತ್ತೊಮ್ಮೆ ಯುಎಸ್ ಮೂಲದ ಗಿಟ್‌ಹಬ್ ಪ್ಲಾಟ್‌ಫಾರ್ಮ್‌ನಲ್ಲಿ ಅಪ್ಲಿಕೇಷನ್ ರಚಿಸಲಾಗಿತ್ತು.
ಇದನ್ನೂ ಓದಿರಿ: ಬುಲ್ಲಿ ಬಾಯ್ ಪ್ರಕರಣದ ಆರೋಪಿಗಳು ಸುಲ್ಲಿ ಡೀಲ್ಸ್‌ನಲ್ಲಿಯೂ ಭಾಗಿಯಾಗಿದ್ದಾರೆ: ಪೊಲೀಸರು
ಬುಲ್ಲಿ ಬಾಯ್ ಅಪ್ಲಿಕೇಶನ್ ರಚಿಸಿದ ನೀರಜ್ ಬಿಷ್ಣೋಯ್ ಎಂಬಾತನನ್ನು ಪ್ರಮುಖ ಆರೋಪಿಯಾಗಿ ಗುರುತಿಸಿ ಜನವರಿ 6ರಂದು ಬಂಧಿಸಲಾಯಿತು. ಸುಲ್ಲಿ ಡೀಲ್ಸ್ ಅಪ್ಲಿಕೇಶನ್‌ನ ಸೃಷ್ಟಿಕರ್ತ ಓಂಕಾರೇಶ್ವರ್ ಠಾಕೂರ್ ಎಂದು ಗುರುತಿಸಿ ಜನವರಿ 8 ರಂದು ದೆಹಲಿ ಪೊಲೀಸರು ಬಂಧಿಸಿದರು.
ಮೂಲಗಳ ಪ್ರಕಾರ, ಮಾರ್ಚ್ 4ರಂದು ದೆಹಲಿಯ ಸ್ಥಳೀಯ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಕೆಯಾಗಿದೆ. ಬುಲ್ಲಿ ಬಾಯ್ ಪ್ರಕರಣದಲ್ಲಿ 2,000 ಪುಟ, ಸುಲ್ಲಿ ಡೀಲ್ಸ್ ಪ್ರಕರಣದಲ್ಲಿ 700 ಪುಟ ಚಾರ್ಜ್‌ಶೀಟ್ ಬರೆಯಲಾಗಿದೆ.
ಸುಲ್ಲಿ ಡೀಲ್ಸ್ ಪ್ರಕರಣದಲ್ಲಿ ದೆಹಲಿ ಪೊಲೀಸರ ಸೈಬರ್ ಕ್ರೈಂ ಘಟಕವು ಜುಲೈ 8 ರಂದು ಐಪಿಸಿ ಸೆಕ್ಷನ್ 354-ಎ (ಲೈಂಗಿಕ ಕಿರುಕುಳ ಮತ್ತು ಲೈಂಗಿಕ ಕಿರುಕುಳಕ್ಕೆ ಶಿಕ್ಷೆ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದೆ.
ಅದಾಗ್ಯೂ ಸೆಕ್ಷನ್ 153ಎ (ಧರ್ಮ, ಜನಾಂಗ, ಹುಟ್ಟಿದ ಸ್ಥಳ, ವಾಸಸ್ಥಳ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು, ಸಾಮರಸ್ಯ ಕಾಪಾಡುವಲ್ಲಿ ಪೂರ್ವಗ್ರಹ ಹೊಂದಿರುವುದು), 153 ಬಿ (ರಾಷ್ಟ್ರೀಯ ಏಕತೆಗೆ ಸಂಬಂಧಿಸಿದ ಪೂರ್ವಗ್ರಹಗಳು, ಆರೋಪಗಳು, ಸಮರ್ಥನೆಗಳು), 354ಎ(3) (ಲೈಂಗಿಕ ಕಿರುಕುಳ ಮತ್ತು ಲೈಂಗಿಕ ಕಿರುಕುಳಕ್ಕಾಗಿ ಶಿಕ್ಷೆ) ಐಟಿ ಕಾಯ್ದೆಯ ಸೆಕ್ಷನ್ 66, 67 ಅಡಿ ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ.
ಪತ್ರಕರ್ತರು, ಸಮಾಜ ಸೇವಕರು, ವಿದ್ಯಾರ್ಥಿಗಳು, ಪ್ರಸಿದ್ಧ ವ್ಯಕ್ತಿಗಳು ಸೇರಿದಂತೆ ಹಲವಾರು ಮಹಿಳೆಯರ ಚಿತ್ರಗಳನ್ನು ಬುಲ್ಲಿ ಬಾಯ್ ಅಪ್ಲಿಕೇಷನ್‌ನಲ್ಲಿ ಪೋಸ್ಟ್ ಮಾಡಿ ಅವಹೇಳನಕಾರಿ ಬರೆದು ಹರಾಜಿಗಿಡಲಾಗಿತ್ತು.
ಆರೋಪಿ ನೀರಜ್ ಬಿಷ್ಣೋಯ್ ವಿರುದ್ಧ 153ಎ, 153ಬಿ, 354ಎ, 509 ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. ಬಿಷ್ಣೋಯ್ ಅಸ್ಸಾಂನ ಜೋರ್ಹತ್ ಗ್ರಾಮದ ನಿವಾಸಿಯಾಗಿದ್ದು, ಬಿ.ಟೆಕ್, ಕಂಪ್ಯೂಟರ್ ಸೈನ್ಸ್ ವ್ಯಾಸಂಗ ಮಾಡುತ್ತಿದ್ದನು. ಬಿಷ್ಣೋಯ್ ಬಂಧನದ ಎರಡು ದಿನಗಳ ನಂತರ, 25 ವರ್ಷದ ಓಂಕಾರೇಶ್ವರ್ ಠಾಕೂರ್‌ನನ್ನು ಮಧ್ಯಪ್ರದೇಶದ ಇಂದೋರ್‌ನಿಂದ ಬಂಧಿಸಲಾಯಿತು.
ಇದನ್ನೂ ಓದಿರಿ: ಬುಲ್ಲಿ ಬಾಯ್ ಪ್ರಕರಣ ಬಿಚ್ಚಿಟ್ಟ ‘ಟ್ರ್ಯಾಡ್ಸ್’ ‘ರಾಯ್ತಾಸ್’ ಬಲಪಂಥೀಯ ಗುಂಪುಗಳ ಘರ್ಷಣೆ: ಏನಿದು ವಿವಾದ?


