Homeಚಳವಳಿಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ನಶಿಸಲಿರುವ ಭಾರತೀಯ ಸೋದರತೆ ವೆಲ್ ಕಮ್ ಟು ವೈದಿಕ ರಾಷ್ಟ್ರ!

ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ನಶಿಸಲಿರುವ ಭಾರತೀಯ ಸೋದರತೆ ವೆಲ್ ಕಮ್ ಟು ವೈದಿಕ ರಾಷ್ಟ್ರ!

- Advertisement -
- Advertisement -
ಪೌರತ್ವ ಪ್ರತಿರೋಧ ವಿಶೇಷ

ಸಮಸ್ಯೆ ಬಿಜೆಪಿಯದು ಅಲ್ಲ, ಬಿಜೆಪಿಯ ಎಲ್ಲ ಮತೀಯ ವಾದಗಳಿಗೂ ಸುಲಭಕ್ಕೆ ತಲೆದೂಗುತ್ತಿರುವ ಬಹುಸಂಖ್ಯಾತ ಹಿಂದೂಗಳದು. ಮಹಾತ್ಮ ಗಾಂಧೀಜಿಗೆ ಗುಂಡು ಹೊಡೆದವರನ್ನು ಸಮರ್ಥಿಸುವವರಿಗೆ ಬಿಜೆಪಿಯು ಟಿಕೆಟ್ ನೀಡಿದರೆ, ಹೌದು, ಇಂತಹವರೇ ನಮ್ಮ ಪ್ರತಿನಿಧಿಯಾಗಬೇಕು ಎಂದು ಈ ವರ್ಗ ಅವರನ್ನು ಆರಿಸಿ ಸಂಸದರನ್ನಾಗಿಸುತ್ತದೆ.

ಮೊದಲಿಗೆ, ಒಂದು ವಿಷಯ. ನಮ್ಮ ಜಾತ್ಯತೀತ, ಪ್ರಜಾಪ್ರಭುತ್ವವಾದಿ ಭಾರತ ದೇಶದ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಂವಿಧಾನದ ಭಾಷೆಯ ಪರಿಚಯವೇ ಇಲ್ಲ. ಇನ್ನು ಈ ದೇಶದ ಗೃಹಮಂತ್ರಿ ಅಮಿತ್ ಶಾ ಅವರಿಗಂತೂ ಈ ದೇಶದ ಸ್ವಾತಂತ್ರ್ಯ ಚಳವಳಿಯ ಕನಿಷ್ಟ ಜ್ಞಾನವೂ ಇಲ್ಲ. ಬಹುತ್ವದ ಪರಿಕಲ್ಪನೆಯನ್ನು ಕೇಂದ್ರದಲ್ಲಿರಿಸಿಕೊಂಡು ರೂಪಿಸಲಾದ ಈ ದೇಶದ ಸಂವಿಧಾನದ ಭಾಷೆಯಾಗಲಿ, ಇಲ್ಲಿನ ಜನಪದರಲ್ಲಿ ಹಾಸುಹೊಕ್ಕಾಗಿರುವ ಸಾಮರಸ್ಯದ ಭಾಷೆಯಾಗಲಿ ಇವರಿಗೆ ಯಾವತ್ತಿನಿಂದಲೂ ತಲೆಗೆ ಹೋಗಿಲ್ಲ, ಸ್ಪಷ್ಟವಾಗಿ ಹೇಳಬೇಕೆಂದರೆ ಈ ನೆಲದ ಸಾಮರಸ್ಯದ ಭಾಷೆಯನ್ನಾಗಲಿ, ಸಂವಿಧಾನದ ಭಾಷೆಯನ್ನಾಗಲಿ ಇವರು ಉದ್ದೇಶಪೂರ್ವಕವಾಗಿಯೇ ಕಲಿತಿಲ್ಲ. ಹಾಗಾಗಿಯೇ, ಈ ದೇಶದ ಸಂವಿಧಾನದ ಆಶಯಗಳಿಗೆ ಬದ್ಧರಾಗಿ ಯಾರಾದರೂ ಮಾತನಾಡಿದರೆ ಅಥವಾ ಈ ಮಣ್ಣಿನ ಸಾಮರಸ್ಯದ ವಿವೇಕದಿಂದ ಯಾರಾದರೂ ತಿಳಿವಿನ ನುಡಿಗಳನ್ನು ಹೇಳಿದರೆ ಅವರದನ್ನು ಸಾರಾಸಗಟಾಗಿ ‘ಪಾಕಿಸ್ತಾನದ ಭಾಷೆ’ ಎಂದು ಜರೆಯುತ್ತಾರೆ! ಪಾಕಿಸ್ತಾನದ ಭಾಷೆ ಎಂದಮೇಲೆ ಕೇಳಬೇಕೆ, ಅದು ಖಂಡಿತವಾಗಿಯೂ ರಾಷ್ಟ್ರವಿರೋಧಿ ಭಾಷೆಯೇ ಸರಿ ಎಂದು ಈ ದೇಶದ ಬಹುಸಂಖ್ಯಾತ ಹಿಂದೂಗಳು ನಂಬುತ್ತಾರೆ!!

ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿಸಬೇಕಾದರೆ ಏನು ಮಾಡಬೇಕು? ದೇಶದುದ್ದಗಲಕ್ಕೂ ಏಕರೂಪ ವೈದಿಕ ಹಿಂದೂ ಸಂಸ್ಕೃತಿಯನ್ನು ಹೇಗೆ ನಿರ್ಮಿಸಬೇಕು? ಈ ಎರಡು ಪ್ರಶ್ನೆಗಳನ್ನು ಕೇಂದ್ರದಲ್ಲಿರಿಸಿಕೊಂಡೇ ಸಂಘ ಪರಿವಾರದ ಚಿಂತನೆಗಳು ರೂಪುಗೊಂಡಿವೆ. ಇದನ್ನು ರಾಜಕೀಯ ಅಧಿಕಾರದ ಮೂಲಕ ಶಾಸನಬದ್ಧವಾಗಿ ಅನುಷ್ಠಾನಗೊಳಿಸುವುದು ಹೇಗೆ ಎನ್ನುವ ಪ್ರಶ್ನೆಯನ್ನು ಕೇಂದ್ರದಲ್ಲಿರಿಸಿಕೊಂಡೇ ಭಾರತೀಯ ಜನತಾ ಪಕ್ಷ ರೂಪುತಳೆದಿದೆ. ಸಂಘ ಪರಿವಾರದ ಚಿಂತನೆಗಳು, ಭಾರತೀಯ ಜನತಾ ಪಕ್ಷದ ಉದ್ದೇಶಗಳು ಇವೆರಡನ್ನೂ ತಾವಿಬ್ಬರೇ ಕೂಡಿ ಜಾರಿಗೊಳಿಸುವ ಮೂಲಕ, ಸಂಘ ಹಾಗೂ ಪಕ್ಷಗಳೆರಡನ್ನೂ ಮೀರಿ ಹಿಂದೂ ಹೃದಯ ಸಾಮ್ರಾಟರಾಗಬೇಕು ಎನ್ನುವ ಹಪಹಪಿಯಲ್ಲಿ ಮೋದಿ-ಶಾ ಜೋಡಿ ಇದೆ. ಬಹುಶಃ ಮುಂದೆಂದಾದರೂ ಬರೆಯಬಹುದಾದ ವೈದಿಕ ನವಪುರಾಣಗಳಲ್ಲಿ ವಿಷ್ಣುವಿನ ಹನ್ನೊಂದನೇ, ಹನ್ನೆರಡನೇ ಅವತಾರವೆಂದು ಸ್ಥಾನ ಪಡೆದು, ದೇಶದುದ್ದಗಲಕ್ಕೂ ತಮಗೆ ದೇವಸ್ಥಾನಗಳನ್ನು ಕಟ್ಟಿಸಿಕೊಂಡು ವ್ಯಕ್ತಿ ಆರಾಧನೆಯ ಆತ್ಯಂತಿಕ ಸ್ವರೂಪದಲ್ಲಿ ಪ್ರತಿಷ್ಠಾಪಿತರಾಗುವುದು ಈ ಇಬ್ಬರ ಗುರಿ ಇರಬಹುದೇನೋ. ತಾವು ಕ್ರಮವಾಗಿ ಈ ದೇಶದ ಪ್ರಧಾನಿ ಹಾಗೂ ಗೃಹಮಂತ್ರಿ ಎನ್ನುವ ಕನಿಷ್ಟ ಅರಿವೂ ಇಲ್ಲದೆ ಸದಾಕಾಲ ಮತೀಯ ಧ್ರುವೀಕರಣದ ಮಾತುಗಳನ್ನು, ಸಮಾಜವನ್ನು ಒಡೆಯುವ ಕೆಲಸಗಳನ್ನು ಮಾಡಿಕೊಂಡು ಬರುತ್ತಿರುವ ಇವರು ಇಂದು ಕೇವಲ ವೈದಿಕ ಹಿಂದೂ ಸಮುದಾಯದ (ಬಹುತ್ವದ ಹಿಂದೂ ಧಾರೆಗಳನ್ನೂ ಕೂಡ ಒಳಗೊಳ್ಳದ) ಪ್ರಧಾನಿ ಹಾಗೂ ಗೃಹಸಚಿವರಂತೆ ವರ್ತಿಸುತ್ತಿದ್ದಾರೆ.

ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ವಿಚಾರದಲ್ಲಿ ದೇಶಾದ್ಯಂತ ನಡೆಯುತ್ತಿರುವ ಚರ್ಚೆಗಳು ಈ ದೇಶದ ಪ್ರಧಾನಿಯವರಿಗಾಗಲಿ, ಗೃಹಮಂತ್ರಿಗಳಿಗಾಗಲಿ ಒಂದಿನಿತೂ ತಾಕುತ್ತಿಲ್ಲ. ಇವರ ಉದ್ದೇಶ ಸ್ಪಷ್ಟವಾಗಿದೆ. ‘ತಾವು ಬಂದಿರುವುದೇ ಸಂವಿಧಾನವನ್ನು ಬದಲಾಯಿಸಲು,’ ಎನ್ನುವುದನ್ನು ತಮ್ಮ ಪ್ರತಿ ನಡೆಯ ಮೂಲಕವೂ ಈ ಜೋಡಿ ಖಚಿತವಾಗಿ ಹೇಳುತ್ತಿದೆ. ಸಂಘಪರಿವಾರ ಪ್ರಣೀತ, ಸಾವರ್ಕರ್ ಚಿಂತನೆಗಳ ನೆರಳಿನಲ್ಲಿ ಮೂಲಭೂತವಾದಿ ಭಾರತವೊಂದನ್ನು ನಿರ್ಮಿಸುವುದೇ ತಮ್ಮ ಗುರಿ ಎಂದು ಸಂಘಿಗಳು ಪದೇಪದೇ ಹೇಳುವುದು ಕೇವಲ ಬಾಯಿ ಮಾತಲ್ಲ ಎನ್ನುವುದನ್ನು ಈ ನೆಲದ ಅತ್ಯಂತ ಮಹತ್ವದ ಹುದ್ದೆಗಳನ್ನು ಆಲಂಕರಿಸಿರುವ, ದುರ್ದಿನಗಳಿಗೆಂದೇ ವಾರಸುದಾರರಾಗಿ ಆಗಮಿಸಿರುವ ಈ ಜೋಡಿ ಅಡಿಗಡಿಗೂ ನಿರೂಪಿಸುತ್ತಿದೆ. ಕಳೆದ ಕೆಲ ತಿಂಗಳ ಅವಧಿಯಲ್ಲಿ ದೇಶದಲ್ಲಿ ಶಾಸನಾತ್ಮಕವಾಗಿ ನಡೆದಿರುವ ಘಟನಾವಳಿಗಳು ಈ ಶಂಕೆಯನ್ನು ಕಣ್ಣೆದುರಿನ ಸತ್ಯಗಳನ್ನಾಗಿ ಬದಲಾಯಿಸಿವೆ. ಪ್ರಜಾಪ್ರಭುತ್ವವೆಂದರೆ ಸಂವಿಧಾನಾತ್ಮಕ ಆದರ್ಶಗಳಾಗಲಿ, ಆಶಯಗಳಾಗಲಿ ಅಲ್ಲ, ಬದಲಿಗೆ, ಈ ದೇಶದ ಬಹುಜನರನ್ನು ‘ಹೌದಪ್ಪ’ಗಳನ್ನಾಗಿಸುವ ಕುಟಿಲ ರಾಜನೀತಿ ಮಾತ್ರ ಎಂದು ಈ ಜೋಡಿ ವ್ಯಕ್ತಿಗತವಾಗಿಯೂ ಹಾಗೂ ಜಾತ್ಯತೀತ ಭಾರತದ ಪರಿಕಲ್ಪನೆಯನ್ನು ವಿರೋಧಿಸುವ ಸಾವರ್ಕರ್ ಪ್ರಣೀತ ಸಂಘ ಪರಿವಾರದ ಚಿಂತನೆಯ ಪ್ರತಿನಿಧಿಗಳಾಗಿಯೂ ನಿರೂಪಿಸುತ್ತಿದೆ ಎನ್ನುವುದನ್ನು ಘಂಟಾಘೋಷವಾಗಿ ಹೇಳಲು ಇನ್ನೂ ಹೆಚ್ಚಿನ ಸಾಕ್ಷ್ಯಗಳು ಬೇಕಿಲ್ಲ. ಹಾಗೊಮ್ಮೆ, ಮತ್ತಷ್ಟು ಸಾಕ್ಷ್ಯಗಳು ಬೇಕೆಂದು ಹಠ ಹಿಡಿಯುವವರು ಒಂದೋ ಪ್ರಜಾಪ್ರಭುತ್ವದ ವಿರೋಧಿಗಳು ಇಲ್ಲವೇ ಬಹುತ್ವದ ವಿರೋಧಿಗಳು. ಇಂತಹವರಿಗೆ ಹೆಚ್ಚಿನ ಸಾಕ್ಷ್ಯಗಳನ್ನು ನೀಡುವ ಅಗತ್ಯವೂ ಇಲ್ಲ. ಅವರಿಗೆ ಭಾರತವು ಕೇವಲ ವೈದಿಕ ಹಿಂದೂ ಸಾರ್ವಭೌಮ ರಾಷ್ಟ್ರವಾಗುವುದು ಮಾತ್ರವೇ ಆದ್ಯತೆಯ ವಿಷಯ. ಈ ಬಹುತ್ವದ ವಿರೋಧಿಗಳು ಸಂವಿಧಾನದ ಜಾಗದಲ್ಲಿ ಮನುಸ್ಮೃತಿಯನ್ನೂ, ಧರ್ಮನಿರಪೇಕ್ಷೆಯ ಜಾಗದಲ್ಲಿ ವೈದಿಕಶಾಹಿಯನ್ನೂ, ಪ್ರಜಾಪ್ರಭುತ್ವದ ಜಾಗದಲ್ಲಿ ಹಿಂದೂ ಸಾಮ್ರಾಜ್ಯಶಾಹಿಯನ್ನೂ ಕಾಣಲು ತಹತಹಿಸುತ್ತಿದ್ದಾರೆ. ಇದು ಈಗ ಅವರ ಸುಪ್ತ ಆಸೆಯಾಗಿ ಉಳಿದಿಲ್ಲ, ಬದಲಿಗೆ ಬಹಿರಂಗ ಆಗ್ರಹವಾಗಿದೆ. ಹಾಗೂ ಈ ಆಗ್ರಹ ತ್ವರಿತವಾಗಿ ಈಡೇರುತ್ತಲೂ ಇದೆ. ಹೀಗೆ ಸದಾಕಾಲ ಬಹುತ್ವ ವಿರೋಧಿ ಮನಸ್ಥಿತಿಯಲ್ಲಿ ಸ್ವಇಚ್ಛೆಯಿಂದ ಕೊಳೆಯುತ್ತಿರುವವರೊಂದಿಗೆ ಜೀವಪರವಾದ ಯಾವ ಚರ್ಚೆಗಳೂ ಸಾಧ್ಯವಾಗುವುದಿಲ್ಲ.

ನಮ್ಮಲ್ಲಿ ಬಹುತೇಕರು ಮಾಡುತ್ತಿರುವ ತಪ್ಪೆಂದರೆ, ಮೇಲಿನ ಎಲ್ಲ ಸಂಗತಿಗಳ ಅಸ್ಪಷ್ಟ ಅರಿವಿದ್ದರೂ, ಅವು ನಮ್ಮ ಕಣ್ಣೆದುರಿಗಿನ ಕಟುವಾಸ್ತವವೆಂದು ಇನ್ನೂ ಪೂರ್ಣಪ್ರಮಾಣದಲ್ಲಿ ಒಪ್ಪಿಕೊಳ್ಳದೆ ಹೋಗಿರುವುದು. ನಮ್ಮ ಕಣ್ಣಮುಂದೆಯೇ ಸಂವಿಧಾನದ ಆಶಯವನ್ನೇ ತಿರುಚುವಂತೆ ಶಾಸನಾತ್ಮಕ ಹಾದಿಯ ಮೂಲಕ ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ಜಾರಿಗೊಳಿಸಲಾಗಿದೆ. ನಾವೀಗ ಸುಪ್ರೀಂಕೋರ್ಟಿನತ್ತ ಮುಖಮಾಡಿ ನಿಂತಿದ್ದೇವೆ. ಆದರೆ, ಇದೇ ಸುಪ್ರೀಂಕೋರ್ಟ್ ಬಾಬರಿ ಮಸೀದಿ – ರಾಮ ಜನ್ಮಭೂಮಿ ವಿವಾದದ ವಿಚಾರದಲ್ಲಿ ನೀಡಿರುವ ತೀರ್ಪು ಹೇಗೆ ನ್ಯಾಯಸಮ್ಮತ ಎನ್ನುವುದನ್ನು ವಿವರಿಸಿಕೊಳ್ಳುವುದೇ ನಮಗೆ ಇನ್ನೂ ಸಾಧ್ಯವಾಗಿಲ್ಲ. ಇದಕ್ಕೂ ಮೊದಲು, ಜಮ್ಮು ಕಾಶ್ಮೀರಕ್ಕೆ 370ನೇ ವಿಧಿಯನ್ವಯ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಒಂದು ಚರ್ಚೆಯೂ ಇಲ್ಲದೆ ರದ್ದುಪಡಿಸಲಾಯಿತು. ತಿಂಗಳುಗಟ್ಟಲೆ ಅಲ್ಲಿನ ಜನತೆಯನ್ನು ಹೊರಜಗತ್ತಿನೊಂದಿಗೆ ಸಂಪರ್ಕ ಕಡಿಯಲಾಯಿತು. ಇದೀಗ ಅಲ್ಲಿನ ಜನರೆಲ್ಲರೂ ಖುಷಿಯಿಂದಿದ್ದಾರೆ ಎಂದು ಕೇಂದ್ರ ಸರ್ಕಾರದ ಮಂತ್ರಿಗಳು ಘಂಟಾಘೋಷವಾಗಿ ಹೇಳಿಕೊಂಡು ತಿರುಗುತ್ತಿದ್ದಾರೆ.

ಇನ್ನು, 2013ರ ಸುಪ್ರೀಂಕೋರ್ಟಿನ ಆದೇಶಾನುಸಾರ ಅಸ್ಸಾಂನ ನಿವಾಸಿಗಳಲ್ಲಿ ಮೂಲ ನಿವಾಸಿಗಳು ಯಾರು, ವಲಸಿಗರು ಯಾರು ಎಂದು ಪತ್ತೆ ಹಚ್ಚುವ ಸಲುವಾಗಿ ರಾಷ್ಟ್ರೀಯ ಪೌರತ್ವ ನೋಂದಣಿಯನ್ನು (ಎನ್ ಆರ್ ಸಿ) ಕೇಂದ್ರ ಸರ್ಕಾರ ಲಗುಬಗೆಯಿಂದ ಜಾರಿಗೊಳಿಸಿತು. ಅಂತಿಮವಾಗಿ 19 ಲಕ್ಷ ನಿವಾಸಿಗಳು ತಮ್ಮ ಪೌರತ್ವವನ್ನು ನಿರೂಪಿಸುವಲ್ಲಿ ಸೋತರು. ಅವರಲ್ಲಿ ಬಹುತೇಕರು ಅಕ್ರಮ ಹಿಂದೂ ವಲಸಿಗರು. ಇವರಿಗೆ ಭಾರತೀಯ ಪೌರತ್ವ ನೀಡುವ ಸಲುವಾಗಿ ಇದೀಗ ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ಜಾರಿಯಾಗಿದೆ. ಈ ಕಾಯಿದೆಯ ಮುಖೇನ ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶಗಳಿಂದ ಧಾರ್ಮಿಕ ಶೋಷಣೆಗೆ ಈಡಾಗಿ ವಲಸೆ ಬರುವ ಧಾರ್ಮಿಕ ಅಲ್ಪಸಂಖ್ಯಾತ ವಲಸಿಗರಿಗೆ ಭಾರತೀಯ ಪೌರತ್ವವನ್ನು ಶೀಘ್ರ ನೀಡಲು ಸಾಧ್ಯ. ಬಹುಮುಖ್ಯವಾಗಿ, ಬಾಂಗ್ಲಾದೇಶ ಹಾಗೂ ಪಾಕಿಸ್ತಾನದಿಂದ ವಲಸೆ ಬಂದಿರುವ ಹಿಂದೂಗಳಿಗೆ ಪೌರತ್ವ ನೀಡಲು ಸಾಧ್ಯ. ಹಾಗೆ ಮಾಡಿದರೆ, ಸದ್ಯ ಎನ್ ಆರ್ ಸಿ ಯಿಂದ ಉಂಟಾಗಿರುವ ಬಿಕ್ಕಟ್ಟನ್ನು ನಿವಾರಿಸಿಕೊಳ್ಳಬಹುದು ಎನ್ನುವುದು ಬಿಜೆಪಿಯ ಉಪಾಯ. ಸಿಎಎ ಮುಖೇನ ಅಕ್ರಮ ವಲಸಿಗರಲ್ಲಿರುವ ಹಿಂದೂಗಳು ಹಾಗೂ ಮುಸಲ್ಮಾರನ್ನು ಪ್ರತ್ಯೇಕಿಸಬಹುದು. ಆನಂತರ, ಅಕ್ರಮ ವಲಸಿಗ ಮುಸ್ಲಿಮರಿಗೆ ಪೌರತ್ವವನ್ನು ನಿರಾಕರಿಸಬಹುದು ಎನ್ನುವುದು ಇದರ ಹಿಂದಿನ ತರ್ಕ. ನಿರಾಶ್ರಿತರಿಗೆ ಆಶ್ರಯ ನೀಡುವ ಕಾಯಿದೆಯಲ್ಲಿ ಕೇವಲ ಮುಸ್ಲಿಮರನ್ನು ಮಾತ್ರವೇ ಹೊರಗಿಟ್ಟಿದ್ದೇಕೆ? ಮುಂದಿನ ದಿನಗಳಲ್ಲಿ ಎನ್ ಆರ್ ಸಿ ದೇಶಾದ್ಯಂತ ಜಾರಿಗೊಳಿಸಲು ಮುಂದಾದರೆ ಭಾರತೀಯ ಮುಸ್ಲಿಮರನ್ನೂ ಸಹ ಸರ್ಕಾರವು ನೀವು ಈ ದೇಶದ ಪೌರರು ಎನ್ನಲು ದಾಖಲೆಯನ್ನು ಕೊಡಿ ಎಂದು ಪ್ರಶ್ನಿಸಬಹುದಲ್ಲವೇ? ಎನ್ನುವ ಪ್ರಶ್ನೆಯನ್ನು ಪ್ರಜ್ಞಾವಂತರು ಕೇಳತೊಡಗಿದ್ದಾರೆ. ವೈದಿಕ ಹಿಂದೂ ಸಾಮ್ರಾಜ್ಯವನ್ನು ಕಟ್ಟಲು ಹೊರಟಿರುವವರಿಗೆ ಬೇಕಿರುವುದೂ ಸಹ ಇಂತಹ ಪ್ರಶ್ನೆಗಳೇ. ಮೇಲಿನ ಪ್ರಶ್ನೆಯನ್ನು ಪ್ರಜ್ಞಾವಂತರೆನಿಸಿಕೊಂಡವರು ಕೇಳಿದಷ್ಟೂ ಹಿಂದುತ್ವವಾದಿಗಳ ಪರವಾಗಿರುವ ಈ ದೇಶದ ಬಹಸಂಖ್ಯಾತ ಧರ್ಮದ ಬಹುತೇಕರಿಗೆ ಬಿಜೆಪಿ ಸರ್ಕಾರ ‘ಸರಿಯಾದ ಕೆಲಸವನ್ನೇ ಮಾಡಿದೆ’, ಎನ್ನುವ ಸಂದೇಶ ಹೋಗುತ್ತದೆ. ಒಂದೊಮ್ಮೆ ಅಖಂಡ ಭಾರತದ ಭಾಗವಾಗಿದ್ದು ಈಗ ಪ್ರತ್ಯೇಕವಾಗಿರುವ ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶಗಳು ತಮ್ಮನ್ನು ತಾವು ಇಸ್ಲಾಮಿಕ್ ರಾಷ್ಟ್ರಗಳೆಂದು ಘೋಷಿಸಿಕೊಂಡಿರುವಾಗ ಭಾರತವು ಹಿಂದೂ ರಾಷ್ಟ್ರವೆಂದು ಘೋಷಿಸಿಕೊಂಡರೆ ತಪ್ಪೇನು ಎನ್ನುವ ಭಾವನೆಯನ್ನು ಈ ವರ್ಗದಲ್ಲಿ ಹಲವಾರು ದಶಕಗಳಿಂದ ವ್ಯವಸ್ಥಿತವಾಗಿ ತುಂಬಲಾಗಿದೆ.

ಬಿಜೆಪಿಯ ಮುಂದೆ ಯಾವುದೇ ವಿಷಯವನ್ನಿಟ್ಟರೂ ಅದು ಅದನ್ನು ಸುಲಭದಲ್ಲಿ ಧಾರ್ಮಿಕ ವಿಷಯವಾಗಿ ಪರಿವರ್ತಿಸುತ್ತದೆ. ಯಾವುದೇ ಸಮಸ್ಯೆಯನ್ನೂ ಸಹ ಹಿಂದೂ-ಮುಸ್ಲಿಂ ಎನ್ನುವ ಕಲ್ಪಿತ ವೈರುಧ್ಯಗಳಲ್ಲಿ ಕಟ್ಟಿಹಾಕುತ್ತದೆ. ಕುಸಿದು ಕೂತಿರುವ ಆರ್ಥಿಕತೆ, ಹೆಚ್ಚುತ್ತಿರುವ ನಿರುದ್ಯೋಗ, ದಿನಬಳಕೆ ವಸ್ತುಗಳ ನಿರಂತರ ಬೆಲೆ ಏರಿಕೆಯಿಂದಾಗಿ ದುರ್ಭರವಾಗುತ್ತಿರುವ ಜನಜೀವನ, ಹೀಗೆ ದೇಶವನ್ನು ಕಾಡುತ್ತಿರುವ ಯಾವುದೇ ಸಮಸ್ಯೆಗಳ ಬಗ್ಗೆ ಕೇಳಿದರೂ ಸಹ ಅದು ಪರೋಕ್ಷವಾಗಿ ತಾನು ಹೇಗೆ ಈ ದೇಶದ ಮುಸಲ್ಮಾನರಿಗೆ ಬುದ್ಧಿ ಕಲಿಸುತ್ತಿದ್ದೇನೆ, ಕಾಶ್ಮೀರಿಗರಿಗೆ ಇದಾಗಲೇ ಹೇಗೆ ತಕ್ಕ ಪಾಠ ಕಲಿಸಿದ್ದೇನೆ, ಪಾಕಿಸ್ತಾನವನ್ನು ಹೇಗೆ ದಿನೇದಿನೇ ಹಡೆಮುರಿ ಕಟ್ಟುತ್ತಿದ್ದೇನೆ, ರಾಮಮಂದಿರ ನಿರ್ಮಾಣವನ್ನು ಎಷ್ಟು ಬೇಗನೆ ಮಾಡಿ ಮುಗಿಸಲಿದ್ದೇನೆ ಎನ್ನುವುದನ್ನೇ ಹೇಳುತ್ತದೆ. ಇದರ ಹೊರತಾಗಿಯೂ ನೀವೇನಾದರೂ ಮತ್ತೆ ಮತ್ತೆ ಆರ್ಥಿಕತೆಯ ಕುಸಿತ, ನಿರುದ್ಯೋಗ, ಬೆಲೆ ಏರಿಕೆ ಎಂದೆಲ್ಲಾ ಮಾತನಾಡಿದರೆ ನಿಮಗೆ ರಾಷ್ಟ್ರದ್ರೋಹಿ ಎನ್ನುವ ಪಟ್ಟ ಕಟ್ಟುತ್ತದೆ. ಬಾಯಿ ತೆರೆದರೆ ಪ್ರಜಾಪ್ರಭುತ್ವವನ್ನು ಅಣಕಿಸುವಂತೆ, ಕಾಲ ಕಸದಂತೆ ಮಾತನಾಡುವ ಕೇಂದ್ರದ ಬಿಜೆಪಿ ಮಂತ್ರಿಗಳು ಮಾತನಾಡುತ್ತಾರೆ. ಇವರ ವ್ಯಂಗ್ಯದ ಮಾತುಗಳಿಗೆ ಮತ್ತದೇ ಹಿಂದುತ್ವವಾದದ ಸಮರ್ಥಕರು ಚಪ್ಪಾಳೆ ತಟ್ಟುತ್ತಾರೆ, ಅವರಿಗೆ ಧರ್ಮದ ಅಮಲು ಮತ್ತಷ್ಟು ತಲೆಗೇರುತ್ತದೆ. ಪ್ರಜಾಪ್ರಭುತ್ವದ ಹೆಸರಿನಲ್ಲಿ ಇವರೆಲ್ಲ ಸೇರಿ ನಡೆಸುತ್ತಿರುವ ಈ ನಾಟಕವನ್ನು ನೋಡುತ್ತಾ ಈ ದೇಶದ ಪ್ರಜ್ಞಾವಂತರು ಅಸಹಾಯಕರಾಗಿ ಕೂತಿದ್ದಾರೆ.

ಸಮಸ್ಯೆ ಬಿಜೆಪಿಯದು ಅಲ್ಲ, ಬಿಜೆಪಿಯ ಎಲ್ಲ ಮತೀಯ ವಾದಗಳಿಗೂ ಸುಲಭಕ್ಕೆ ತಲೆದೂಗುತ್ತಿರುವ ಬಹುಸಂಖ್ಯಾತ ಹಿಂದೂಗಳದು. ಮಹಾತ್ಮ ಗಾಂಧೀಜಿಗೆ ಗುಂಡು ಹೊಡೆದವರನ್ನು ಸಮರ್ಥಿಸುವವರಿಗೆ ಬಿಜೆಪಿಯು ಟಿಕೆಟ್ ನೀಡಿದರೆ, ಹೌದು, ಇಂತಹವರೇ ನಮ್ಮ ಪ್ರತಿನಿಧಿಯಾಗಬೇಕು ಎಂದು ಈ ವರ್ಗ ಅವರನ್ನು ಆರಿಸಿ ಸಂಸದರನ್ನಾಗಿಸುತ್ತದೆ. ನಾವು ಬಂದಿರುವುದೇ ಸಂವಿಧಾನವನ್ನು ಬದಲಿಸಲು ಎಂದು ಹೇಳಿದರೆ ಚಪ್ಪಾಳೆ ತಟ್ಟಿ ಸ್ವಾಗತಿಸುತ್ತದೆ. ಇಂದು ಹಿಂದೂ ಬಹುಸಂಖ್ಯಾತರಲ್ಲಿ ಬಹುತೇಕರಿಗೆ ಬಹುತ್ವದ ಅಗತ್ಯತೆಯಾಗಲಿ, ಅರಿವಾಗಲಿ ಇಲ್ಲ. ಈ ವರ್ಗ ತಾವು ದುಡಿಯಲು ಹೋಗುವ ಅಮೆರಿಕ, ಬ್ರಿಟನ್, ಐರೋಪ್ಯ ರಾಷ್ಟ್ರಗಳು ಮಾತ್ರ ಜಾತ್ಯತೀತವಾಗಿರಬೇಕು ಎಂದು ಬಯಸುತ್ತದೆ. ಆದರೆ, ಭಾರತ ಮಾತ್ರ ತನ್ನ ನೆರೆಹೊರೆಯ ದೇಶಗಳಂತೆಯೇ ಧರ್ಮಾಧಾರಿತ ದೇಶವಾಗಬೇಕೆಂದು ತುದಿಗಾಲಲ್ಲಿ ನಿಲ್ಲುತ್ತದೆ. ವಿದ್ಯಾಭ್ಯಾಸದ ಹೆಸರಲ್ಲಿ ಹೊಟ್ಟೆಹೊರೆಯಲು ಬೇಕಿರುವ ಕೌಶಲಗಳನ್ನು ಮಾತ್ರವೇ ಕಲಿತಂತಿರುವ ಈ ವರ್ಗ ಆಲೋಚನಾ ಶಕ್ತಿ, ವೈಚಾರಿಕತೆಯಿಂದ ದೂರ ಉಳಿದಿದೆ. ಇವರಿಗೆ ಸಂವಿಧಾನದ ಬಗ್ಗೆ ಗೌರವವೂ ಉಳಿದಿಲ್ಲ. ಇತಿಹಾಸದ ಅರಿವೂ ಇಲ್ಲ, ದೇಶವನ್ನು ಕಟ್ಟಿದ ಹಿರಿಯ ಚೇತನಗಳ ಬಗ್ಗೆ ವಾಟ್ಸಪ್ಗಳಲ್ಲಿ ಬರುವ ಹೊಲಸು ಮಾಹಿತಿಯ ಆಚೆಗೆ ಸತ್ಯವನ್ನು ತಿಳಿಯಬೇಕೆನ್ನುವ ಹಂಬಲವೂ ಇಲ್ಲ.

ಬಾಯಲ್ಲಿ ಸಂವಿಧಾನವನ್ನು ನೆಪಮಾತ್ರಕ್ಕೆ ಪಠಿಸುತ್ತಾ, ಬಗಲಲ್ಲಿ ದೊಣ್ಣೆಯನ್ನು ಇರಿಸಿಕೊಂಡು ಸಂವಿಧಾನದ ಬೆನ್ನಮೂಳೆಯನ್ನೇ ಮುರಿಯುತ್ತಿರುವ ಕೇಂದ್ರದಲ್ಲಿನ ಬಿಜೆಪಿ ಸರ್ಕಾರದ ಬಲವಿರುವುದು ಹಿಂದುತ್ವವಾದವನ್ನು ಬಲವಾಗಿ ಸಮರ್ಥಿಸುತ್ತಿರುವ, ಬೆಂಬಲಿಸುತ್ತಿರುವ ಈ ದೇಶದ ಬಹುಸಂಖ್ಯಾತರಲ್ಲಿ. ಒಮ್ಮೆ ಮುಸ್ಲಿಮರನ್ನು ಈ ದೇಶದ ದ್ವಿತೀಯ ನಾಗರಿಕರನ್ನಾಗಿ ಮಾಡಿದ ಮೇಲೆ, ಇವರು ಈ ದೇಶದ ಆದಿವಾಸಿಗಳು ಹಾಗೂ ದಲಿತರನ್ನು ಸಹ ಅದೇ ದರ್ಜೆಗೆ ದೂಡಲಿದ್ದಾರೆ. ಆನಂತರ ವರ್ಣಾಶ್ರಮವನ್ನು ಪುನರ್ ಪ್ರತಿಷ್ಠಾಪಿಸಿ, ಜಾತಿ ಆಧರಿತ ಕರ್ಮಗಳಿಗನುಗುಣವಾಗಿ ದೇಶದ ಜನರೆಲ್ಲರೂ ನಡೆದುಕೊಳ್ಳುವಂತೆ ತಿಳಿಸಲಿದ್ದಾರೆ. ಹೇಗಿದ್ದರೂ, ಅಷ್ಟು ಹೊತ್ತಿಗೆ ಗೋಮಾತೆ ಹಿಂದುತ್ವವಾದದ ಉಗ್ರ ಕುರುಹಾಗಿ ನಮ್ಮೆಲ್ಲರ ಕೊಟ್ಟಿಗೆಯಲ್ಲಿರಲಿದೆ. ಸೆಗಣಿ ಬಾಚುವುದಂತೂ ನಮಗೆಲ್ಲರಿಗೂ ತಿಳಿದೇ ಇದೆ. ನಮ್ಮ ನಮ್ಮ ಜಾತಿಗಳಿಗೆ ಅನುಗುಣವಾಗಿ ಕಾಯಕ ಸೇವೆ ಮಾಡಲು ಸಿದ್ಧರಾಗಿರೋಣ.

“ಪ್ರಜಾಪ್ರಭುತ್ವ ಅಮರ್ ರಹೇ!
ಸಂವಿಧಾನ ಅಮರ್ ರಹೇ!!”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಸ್ವಕ್ಷೇತ್ರ ತಿರುವನಂತಪುರದಲ್ಲಿ ಬಿಜೆಪಿ ಭರ್ಜರಿ ಗೆಲುವು : ‘ಪ್ರಜಾಪ್ರಭುತ್ವದ ಸೌಂದರ್ಯ’ ಎಂದ ಕಾಂಗ್ರೆಸ್ ಸಂಸದ ಶಶಿ ತರೂರ್

ಕೇರಳದ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಇಂದು (ಡಿ.13) ಪ್ರಕಟಗೊಂಡಿದ್ದು, ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ 45 ವರ್ಷಗಳ ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್‌...

ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ : ಯುಡಿಎಫ್‌ ಸ್ಪಷ್ಟ ಮೇಲುಗೈ

ಇಂದು (2025 ಡಿಸೆಂಬರ್ 13, ಶನಿವಾರ) ಪ್ರಕಟಗೊಂಡ ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದಲ್ಲಿ ವಿರೋಧ ಪಕ್ಷಗಳ ಒಕ್ಕೂಟವಾದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಸ್ಪಷ್ಟ ಮೇಲುಗೈ ಸಾಧಿಸಿದೆ. ಈ ಮೂಲಕ ರಾಜ್ಯ...

ಕೋಲ್ಕತ್ತಾ ಮೆಸ್ಸಿ ಕಾರ್ಯಕ್ರಮದಲ್ಲಿ ಗಲಾಟೆ | ಕ್ಷಮೆ ಯಾಚಿಸಿದ ಸಿಎಂ ಮಮತಾ ಬ್ಯಾನರ್ಜಿ, ತನಿಖೆಗೆ ಸಮಿತಿ ರಚನೆ; ಆಯೋಜಕನ ಬಂಧನ

ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಭೇಟಿಯ ವೇಳೆ ಶನಿವಾರ (ಡಿಸೆಂಬರ್ 13) ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಉಂಟಾದ ಗಲಾಟೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕ್ಷಮೆಯಾಚಿಸಿದ್ದು, ನಿವೃತ್ತ ನ್ಯಾಯಮೂರ್ತಿ...

ಮೆಸ್ಸಿ ನೋಡಲು 25 ಸಾವಿರ ರೂ. ಪಾವತಿಸಿದವರಿಗೆ ನಿರಾಶೆ; ಕೋಪಗೊಂಡ ಅಭಿಮಾನಿಗಳಿಂದ ಕ್ರೀಡಾಂಗಣದಲ್ಲಿ ದಾಂಧಲೆ

ಶನಿವಾರ ನಡೆದ ಲಿಯೋನೆಲ್ ಮೆಸ್ಸಿ ಅವರ ಬಹು ನಿರೀಕ್ಷಿತ "ಗೋಟ್ ಇಂಡಿಯಾ ಟೂರ್" ಕೋಲ್ಕತ್ತಾದಲ್ಲಿ ಅಸ್ತವ್ಯಸ್ತವಾಯಿತು. ಯುವ ಭಾರತಿ ಕ್ರಿರಂಗನ್‌ನಲ್ಲಿ ರೊಚ್ಚಿಗೆದ್ದ ಅಭಿಮಾನಿಗಳ ದಾಂಧಲೆಯಿಂದ ಕ್ರೀಡಾಂಗಣ ಅವ್ಯವಸ್ಥೆಗೆ ಒಳಗಾಯಿತು. ಸಾವಿರಾರು ಅಭಿಮಾನಿಗಳು ಅರ್ಜೆಂಟೀನಾದ...

ಡ್ರಗ್‌ ಪೆಡ್ಲರ್‌ಗಳ ಮನೆ ಒಡೆದು ಹಾಕುವ ಹೇಳಿಕೆ : ಪರಮೇಶ್ವರ್ ಮಾತಿಗೆ ಆತಂಕ ವ್ಯಕ್ತಪಡಿಸಿದ ಕಾಂಗ್ರೆಸ್ ಹಿರಿಯ ನಾಯಕ ಚಿದಂಬರಂ

"ಡ್ರಗ್‌ ಪೆಡ್ಲರ್‌ಗಳ ಬಾಡಿಗೆ ಮನೆಗಳನ್ನು ಒಡೆದು ಹಾಕುವ ಹಂತಕ್ಕೆ ಹೋಗಿದ್ದೇವೆ" ಎಂಬ ಗೃಹ ಸಚಿವ ಜಿ.ಪರಮೇಶ್ವರ್ ಹೇಳಿಕೆಗೆ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಆತಂಕ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ...

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ: ಶಶಿ ತರೂರ್ ಕ್ಷೇತ್ರ ತಿರುವನಂತಪುರಂನಲ್ಲಿ ಬಿಜೆಪಿ ಮುನ್ನಡೆ

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ, ವಿಶೇಷವಾಗಿ ತಿರುವನಂತಪುರಂನಲ್ಲಿ ಭಾರತೀಯ ಜನತಾ ಪಕ್ಷದ ಸಾಧನೆಯನ್ನು ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಶನಿವಾರ ಅಭಿನಂದಿಸಿದ್ದಾರೆ. ಜನರ ತೀರ್ಪನ್ನು ಗೌರವಿಸಬೇಕು ಎಂದು ಹೇಳಿದ್ದಾರೆ. ಎಕ್ಸ್‌ನಲ್ಲಿ ದೀರ್ಘ...

ಆಳಂದ ಮತಗಳ್ಳತನ | ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಸೇರಿ 7 ಮಂದಿ ವಿರುದ್ಧ ಎಸ್‌ಐಟಿ ಚಾರ್ಜ್‌ಶೀಟ್‌

ಕಲಬುರಗಿಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮತಗಳ್ಳತನ (ಚುನಾವಣಾ ಆಕ್ರಮ) ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದು, ಆಳಂದದ ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್...

ಉತ್ತರ ಪ್ರದೇಶ| ಗಸ್ತು ವಾಹನ ಹಳ್ಳಕ್ಕೆ ಉರುಳಿಸಿದ ಪಾನಮತ್ತ ಪೊಲೀಸರು; ಕ್ರೇನ್ ಚಾಲಕನ ಮೇಲೆ ಹಲ್ಲೆ

ಶುಕ್ರವಾರ (ಡಿಸೆಂಬರ್ 12) ರಾತ್ರಿ ಪೊಲೀಸರೊಬ್ಬರು ಕಾರಿನ ನಿಯಂತ್ರಣ ಕಳೆದುಕೊಂಡ ಬಳಿಕ '112' ಪೊಲೀಸ್ ಪ್ರತಿಕ್ರಿಯೆ ವಾಹನ (ಪಿಆರ್‌ವಿ) ಹಳ್ಳಕ್ಕೆ ಉರುಳಿದೆ. ವರದಿಗಳ ಪ್ರಕಾರ, ಘಟನೆಯ ಸಮಯದಲ್ಲಿ ಪೊಲೀಸರು ಪಾನಮತ್ತರಾಗಿದ್ದರು. ಕಾರ್ ಕಂದಕಕ್ಕೆ...

ಲಿಯೋನೆಲ್ ಮೆಸ್ಸಿ ಇಂಡಿಯಾ ಪ್ರವಾಸ; ಅಭೂತಪೂರ್ವ ಸ್ವಾಗತ ಕೋರಿದ ಕೋಲ್ಕತ್ತಾ ಅಭಿಮಾನಿಗಳು

ಇಂಡಿಯಾ ಪ್ರವಾಸ ಪ್ರಾರಂಭಿಸಿರುವ ಅರ್ಜೆಂಟೀನಾದ ಪುಟ್‌ಬಾಲ್‌ ತಾರೆ ಲಿಯೋನೆಲ್ ಮೆಸ್ಸಿ ಕೋಲ್ಕತ್ತಾಗೆ ಬಂದಿಳಿದಿದ್ದಾರೆ. ಶನಿವಾರ ಬೆಳಗಿನ ಜಾವ ವಿಮಾನ ನಿಲ್ದಾಣದಲ್ಲಿ ನೆರೆದಿದ್ದ ಸಾವಿರಾರು ಅಭಿಮಾನಿಗಳಿಂದ ಅವರಿಗೆ ಅಭೂತಪೂರ್ವ ಸ್ವಾಗತ ಕೋರಿದರು. ಅರ್ಜೆಂಟೀನಾದ ಸೂಪರ್‌ಸ್ಟಾರ್ ದುಬೈ...

ನಟಿಯ ಅಪಹರಣ, ಅತ್ಯಾಚಾರ ಪ್ರಕರಣ : ಆರು ಅಪರಾಧಿಗಳಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ

ಮಲಯಾಳಂ ಮೂಲದ ಬಹುಭಾಷಾ ನಟಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದ (2017ರ ಪ್ರಕರಣ) ಆರು ಅಪರಾಧಿಗಳಿಗೆ ಇಪ್ಪತ್ತು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಶುಕ್ರವಾರ (ಡಿಸೆಂಬರ್ 12) ಕೇರಳ ನ್ಯಾಯಾಲಯ ಆದೇಶಿಸಿದೆ. ಡಿಸೆಂಬರ್...