ರಾಜ್ಯದಾದ್ಯಂತ ಭಾರಿ ವಿರೋಧದ ನಡುವೆಯೆ ಬಳ್ಳಾರಿ ಜಿಲ್ಲೆಯನ್ನು ವಿಭಜನೆ ಮಾಡಿ ವಿಜಯನಗರ (ಹೊಸಪೇಟೆ) ಜಿಲ್ಲೆ ರಚನೆ ಮಾಡುವುದಕ್ಕೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ 31 ನೆ ಜಿಲ್ಲೆಯನ್ನು ರಚನೆ ಮಾಡಲು ತೀರ್ಮಾನ ಮಾಡಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದ್ದಾರೆ.
ಇದನ್ನೂ ಓದಿ: ಕುಣಿಗಲ್ ಶಾಸಕರನ್ನು ’ಫ್ರಾಡ್’ ಎಂದು ಕರೆದ ಸಚಿವ ಜೆ. ಸಿ. ಮಾಧುಸ್ವಾಮಿ
ಹೊಸ ಜಿಲ್ಲೆಯು ಹೊಸಪೇಟೆ, ಹರಪ್ಪನಹಳ್ಳಿ, ಹೂವಿನ ಹಡಗಲಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರು ಹಾಗೂ ಕೂಡ್ಲಿಗಿ ಸೇರಿ ಆರು ತಾಲೂಕುಗಳನ್ನು ಒಳಗೊಂಡಿದೆ. ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ ಒಟ್ಟು 10 ತಾಲೂಕುಗಳು ಹಾಗೂ 11 ವಿಧಾನಸಭಾ ಕ್ಷೇತ್ರಗಳಿದ್ದವು. ಇದೀಗ ಬಳ್ಳಾರಿ, ಸಿರುಗುಪ್ಪ, ಕುರುಗೋಡು, ಕಂಪ್ಲಿ ಹಾಗೂ ಸಂಡೂರು ತಾಲೂಕುಗಳಷ್ಟೇ ಉಳಿಯಲಿವೆ.
ಹೊಸ ಜಿಲ್ಲೆಗೆ ಗುರುತಿಸಿದ ಆರು ತಾಲೂಕುಗಳ ಬಗೆಗಿನ ಆಕ್ಷೇಪಗಳನ್ನು ಆಹ್ವಾನಿಸಿ ಪರಿಶೀಲಿಸಿದ ಬಳಿಕ ಈ ಸಂಬಂಧ ಅಂತಿಮ ಅಧಿಸೂಚನೆ ಹೊರಡಿಸಲಾಗುವುದು ಎಂದು ಮಾಧುಸ್ವಾಮಿ ತಿಳಿಸಿದ್ದು, “ಹೊಸ ಜಿಲ್ಲೆಗೆ ಪ್ರತ್ಯೇಕ ಜಿಲ್ಲಾ ನಕ್ಷೆ ಸಿದ್ದಪಡಿಸಲು ಸೂಚಿಸಲಾಗಿದೆ. ಜೊತೆಗೆ ಜಿಲ್ಲಾಧಿಕಾರಿಗಳ ಕಚೇರಿ, ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ, ಕಂದಾಯ ವಿಭಾಗಗಳು ಹಾಗೂ ಉಪ ವಿಭಾಗಗಳನ್ನು ತರೆಯಲು, ನೂತನ ಜಿಲ್ಲೆ ಅಗತ್ಯ ಅನುದಾನ ಹಾಗೂ ಕಾನೂನಾತ್ಮಕ ವಿಚಾರಗಳಿಗೆ ಸಂಪುಟ ಸಭೆ ಸಮ್ಮತಿಸಿದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ವಿಜಯನಗರ ಜಿಲ್ಲೆ ತಡೆಯಲು ಸೋಮಶೇಖರ್ ರೆಡ್ಡಿ ಮಾಡಿದರೆ ಉಗ್ರ ಭಾಷಣ…?


