ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆಯಾದಾಗಿನಿಂದ ಬಿಜೆಪಿಯ ಒಳಗೆ ಬಿರುಕು ಆರಂಭವಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪನವರ ಮೇಲೆ ಸಚಿವಾಕಾಂಕ್ಷಿಗಳೆಲ್ಲರೂ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕರ್ನಾಟಕ ಪ್ರವಾಸದಲ್ಲಿರುವ ಗೃಹ ಮಂತ್ರಿ ಅಮಿತ್ ಶಾ ಪಕ್ಷದ ನಾಯಕತ್ವದ ವಿರುದ್ಧ ಹೇಳಿಕೆ ನೀಡುತ್ತಿರುವವರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. “ಸಾರ್ವಜನಿಕವಾಗಿ ಮಾಡುತ್ತಿರುವ ವಿವೇಚನೆಯಿಲ್ಲದ ಟೀಕೆಗಳನ್ನು ನಿಲ್ಲಿಸಬೇಕು” ಎಂದು ಎಚ್ಚರಿಸಿದ್ದಾರೆ.
ಶನಿವಾರ ಸಂಜೆ ನಡೆದ ಬಿಜೆಪಿಯ ಉನ್ನತ ಮಟ್ಟದ ಸಭೆಯಲ್ಲಿ ಪಕ್ಷದ ಮುಖಂಡರಿಗೆ ಸಂದೇಶ ನೀಡಿದ ಅಮಿತ್ ಶಾ, “ನೆನಪಿಡಿ ಪಕ್ಷ ಮೊದಲು. ವಿವೇಚನೆಯಿಲ್ಲದ ಕೃತ್ಯಗಳಲ್ಲಿ ಭಾಗಿಯಾಗಬಾರದು. ಪಕ್ಷಕ್ಕಾಗಿ ದುಡಿಯಬೇಕು” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸಂಪುಟ ವಿಸ್ತರಣೆ-ಸ್ಫೋಟಗೊಂಡ ಭಿನ್ನಮತ: ನಮ್ಮ ಭಿಕ್ಷೆಯಿಂದಲೇ ಯಡಿಯೂರಪ್ಪ ಸಿಎಂ ಆಗಿದ್ದು..!
ಈ ಸಭೆಯಲ್ಲಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಕರ್ನಾಟಕ ಉಸ್ತುವಾರಿಯಾದ ಅರುಣ್ ಸಿಂಗ್, ಮುಖ್ಯಮಂತ್ರಿ ಯಡಿಯೂರಪ್ಪ, ಉಪಮುಖ್ಯಮಂತ್ರಿ ಗೋವಿಂದ್ ಕಾರಜೋಳ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಮತ್ತು ಕೇಂದ್ರ ಸಚಿವ ಸದಾನಂದ ಗೌಡ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ರಾಜ್ಯ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್, ಸಚಿವರಾದ ಆರ್.ಅಶೋಕ್, ಕೆ.ಎಸ್.ಈಶ್ವರಪ್ಪ ಮತ್ತು ಅರವಿಂದ್ ಲಿಂಬಾವಳಿ ಉಪಸ್ಥಿತರಿದ್ದರು ಎಂದು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ರಾಜ್ಯದ ನಾಯಕತ್ವವನ್ನು ಪ್ರಶ್ನಿಸುತ್ತಿರುವವರ ಹೆಸರನ್ನು ಉಲ್ಲೇಖಿಸದಿದ್ದರೂ, ಯಡಿಯೂರಪ್ಪನವರ ವಿರುದ್ಧ ವೈಯಕ್ತಿಕವಾಗಿ ಆರೋಪಗಳನ್ನು ಮಾಡುತ್ತಾ ಮಾಧ್ಯಮಗಳ ಮುಂದೆ ಹೇಳಿಕೆ ನೀಡುತ್ತಿರುವವರನ್ನು ಗುರಿಯಾಗಿಸಿಕೊಂಡಿದ್ದಾರೆ.
ಇದನ್ನೂ ಓದಿ: ಸಂಕ್ರಾಂತಿ ನಂತರ ಯಡಿಯೂರಪ್ಪ ಅಧಃಪತನ ಆರಂಭ: ಯತ್ನಾಳ್
ಸಚಿವ ಸಂಪುಟ ವಿಸ್ತರಣೆಯಲ್ಲಿ ತಮಗೆ ಸ್ಥಾನ ಸಿಕ್ಕಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ವಿಶ್ವನಾಥ್, ಶಾಸಕ ಯತ್ನಾಳ್, ಶಾಸಕ ರೇಣುಕಾಚಾರ್ಯ ಸೇರಿದಂತೆ ಹತ್ತಾರು ನಾಯಕರು ಯಡಿಯೂರಪ್ಪನವರ ವಿರುದ್ಧ ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿದ್ದರು. ಲಾಬಿ ಮಾಡಿದವರಿಗೆ ಸಚಿವ ಸ್ಥಾನ ಸಿಕ್ಕಿದೆ ಎಂದು ಆರೋಪಿಸಿದ್ದರು. ಸಿ.ಡಿ ಇಟ್ಟುಕೊಂಡು ಬ್ಲಾಕ್‌ಮೇಲ್ ಮಾಡಿದವರಿಗೆ ಸಚಿವ ಸ್ಥಾನ ನೀಡಲಾಗಿದೆ ಎಂದು ಮತ್ತೆ ಕೆಲವರು ಕಿಡಿ ಕಾರಿದ್ದರು.
ಇವುಗಳನ್ನು ಗಮನಿಸಿದ ಯಡಿಯೂರಪ್ಪ, ನಿಮಗೆ ಅಸಮಾಧಾನವಿದ್ದರೆ ದೆಹಲಿಗೆ ಹೋಗಿ ದೂರು ನೀಡಿ ಎಂದು ಸಚಿವಾಕಾಂಕ್ಷಿಗಳಿಗೆ ಖಡಕ್ ಆಗಿ ಹೇಳಿದ್ದರು. ಈ ಬೆನ್ನಲ್ಲೇ ಅಮಿತ್ ಶಾ ನೀಡಿರುವ ಈ ಹೇಳಿಕೆ ಸಚಿವಾಕಾಂಕ್ಷಿಗಳಿಗೆ ಆಘಾತ ನೀಡಿದಂತಾಗಿದೆ. ಈಗ ಇವರ ಮುಂದಿನ ನಡೆ ಏನೆಂಬುದನ್ನು ಕಾದುನೋಡಬೇಕಿದೆ.
ಇದನ್ನೂ ಓದಿ: ಬಿಜೆಪಿಗೆ ಸೇರಿದ ಕೆಲವರು ಬಾಯಿ ಬಡ್ಕೊತಿದ್ದಾರೆ: ವಿಪಕ್ಷ ನಾಯಕ ಸಿದ್ದರಾಮಯ್ಯ


